ನಂಜನಗೂಡು ಹುಚ್ಚಗಣಿ ಮಹದೇವಮ್ಮ ದೇಗುಲ ತೆರವು: ಗ್ರಾಮಸ್ಥರ ಪ್ರತಿಭಟನೆ, ಕಾಂಗ್ರೆಸ್ ಆಕ್ರೋಶ

ದೇವಾಲಯ ಕಟ್ಟುವುದರಲ್ಲಿ ಮಾತ್ರವಲ್ಲ ಕೆಡವುದರಲ್ಲಿಯೂ ಬಿಜೆಪಿ ರಾಜಕಾರಣ ಮಾಡುತ್ತಿದೆ. ಗ್ರಾಮಸ್ಥರ ಸಭೆ ಮಾಡಿ, ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ತೆರವು ಮಾಡಬೇಕಿತ್ತು ಎಂಬ ಆಕ್ಷೇಪಗಳು ಕೇಳಿಬಂದಿವೆ.

ನಂಜನಗೂಡು ಹುಚ್ಚಗಣಿ ಮಹದೇವಮ್ಮ ದೇಗುಲ ತೆರವು: ಗ್ರಾಮಸ್ಥರ ಪ್ರತಿಭಟನೆ, ಕಾಂಗ್ರೆಸ್ ಆಕ್ರೋಶ
ಹುಚ್ಚಗಣಿ ಮಹದೇವಮ್ಮ ದೇಗುಲ ತೆರವುಗೊಳಿಸಿ ಮೈಸೂರಿನಲ್ಲಿ ಬುಧವಾರ ಪ್ರತಿಭಟನೆ ನಡೆಯಿತು.


ಮೈಸೂರು: ನಂಜನಗೂಡು ತಾಲೂಕಿನ ಹುಲ್ಲಹಳ್ಳಿ-ಹೊಮ್ಮರಗಳ್ಳಿ ರಸ್ತೆಯಲ್ಲಿರುವ ಹುಚ್ಚಗಣಿ ಮಹದೇವಮ್ಮ ದೇಗುಲ ತೆರವುಗೊಳಿಸುವಾಗ ಗ್ರಾಮಸ್ಥರಿಗೆ ಮಾಹಿತಿ ನೀಡಿರಲಿಲ್ಲ. ಸೂಕ್ತ ರೀತಿಯಲ್ಲಿ ಪರಾಮರ್ಶಿಸಿಲ್ಲ ಎಂಬ ವಿಚಾರ ಜಿಲ್ಲೆಯಲ್ಲಿ ವ್ಯಾಪಕ ಪ್ರತಿಭಟನೆಗಳಿಗೆ ಕಾರಣವಾಗಿದೆ.

ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್ ಬುಧವಾರ ಹುಲ್ಲಹಳ್ಳಿದಲ್ಲಿರುವ ದೇಗುಲಕ್ಕೆ ಭೇಟಿ ನೀಡಿ ಸ್ಥಳೀಯರೊಂದಿಗೆ ಮಾತನಾಡಿದರು. ಗ್ರಾಮಸ್ಥರಿಗೆ ಮಾಹಿತಿ ನೀಡದೆ ದೇಗುಲ ಕೆಡವಲಾಗಿದೆ ಎಂದು ಆರೋಪಿಸಿದ ಅವರು, ಜನರನ್ನು ವಿಶ್ವಾಸಕ್ಕೆ‌ ತೆಗೆದುಕೊಂಡು ತೆರವು ಕಾರ್ಯಾಚರಣೆ ನಡೆಸಬೇಕಿತ್ತು ಎಂದರು.

ದೇವಾಲಯ ಕಟ್ಟುವುದರಲ್ಲಿ ಮಾತ್ರವಲ್ಲ ಕೆಡವುದರಲ್ಲಿಯೂ ಬಿಜೆಪಿ ರಾಜಕಾರಣ ಮಾಡುತ್ತಿದೆ. ಗ್ರಾಮಸ್ಥರ ಸಭೆ ಮಾಡಿ, ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ತೆರವು ಮಾಡಬೇಕಿತ್ತು. ರಸ್ತೆ ಬದಿಯಲ್ಲಿರುವ ಹಲವು ದೇವಾಲಯಗಳನ್ನು ಈ ಹಿಂದೆಯೂ ತೆರವು ಮಾಡಲಾಗಿದೆ. ನಾನು ಸಂಸದನಾಗಿದ್ದಾಗಲೂ ದೇಗುಲಗಳನ್ನು ತೆರವು ಮಾಡಿಸಿದ್ದೇನೆ. ಆದರೆ ಈ ಬಾರಿ ಗ್ರಾಮಸ್ಥರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿರುವುದು ಸಮಸ್ಯೆಗೆ ಕಾರಣವಾಗಿದೆ. ಹಳೇ ದೇಗುಲ ಪಕ್ಕದಲ್ಲಿಯೇ ಮತ್ತೊಂದು ದೇಗುಲ ನಿರ್ಮಿಸಲು ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.

ಜಮೀನು ನೀಡಲು ಭಕ್ತರ ಒಪ್ಪಿಗೆ
ನೂತನ‌ ದೇಗುಲ ನಿರ್ಮಾಣಕ್ಕೆ ಜಾಗ ನೀಡಲು ಗ್ರಾಮಸ್ಥರಾದ ನಾಗಣ್ಣ ಮತ್ತು ಭಾಗ್ಯಮ್ಮ ಒಪ್ಪಿಗೆ ಸೂಚಿಸಿದ್ದಾರೆ. ಹಳೇ ದೇಗುಲದ ಹಿಂಭಾಗದಲ್ಲಿಯೇ ಇವರ ಜಮೀನು ಇದೆ. ಸದ್ಯಕ್ಕೆ 5 ಗುಂಟೆ ಜಮೀನು ಕೊಡುತ್ತೇವೆ. ಹೆಚ್ಚುವರಿ ಜಾಗ ಬೇಕಿದ್ದರೂ ನಾವು ಸಿದ್ಧ ಎಂದು ಭರವಸೆ ನೀಡಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ದೇಗುಲ ಅಧಿಕೃತಗೊಳಿಸಲು ವರದಿ ಕೊಟ್ಟಿದ್ದ ತಹಶೀಲ್ದಾರ್
ಹುಚ್ಚಗಣಿ ಮಹದೇವಮ್ಮ ದೇಗುಲವನ್ನು ಅಧಿಕೃತಗೊಳಿಸಬಹುದು ಎಂದು 2011ರಲ್ಲಿ ಅಂದಿನ ತಹಶೀಲ್ದಾರ್ ವರದಿ ನೀಡಿದ್ದರು. ದೇಗುಲ ನಿರ್ಮಾಣಗೊಂಡು ಸುಮಾರು 200 ವರ್ಷಗಳಾಗಿರಬಹುದು. ನಿತ್ಯಪೂಜೆ, ಜಾತ್ರೆ, ಕೊಂಡೋತ್ಸವ ನಡೆಯುತ್ತಿದೆ. ಹೀಗಾಗಿ ಅಧಿಕೃತಗೊಳಿಸಬಹುದು ಎಂದು ಜಿಲ್ಲಾಧಿಕಾರಿಗೆ ಅಂದಿನ ತಹಶೀಲ್ದಾರ್ ವರದಿ ನೀಡಿದ್ದರು. 10 ವರ್ಷಗಳ ಹಿಂದೆ ಇಂಥ ವರದಿ ಸಲ್ಲಿಕೆಯಾಗಿದ್ದರೂ ಇದೀಗ ದೇಗುಲ ತೆರವುಗೊಳಿಸಲು ತಹಶೀಲ್ದಾರ್ ಮುಂದಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎಂದು ಸ್ಥಳೀಯರು ಹೇಳಿದ್ದಾರೆ. 2011ರಲ್ಲಿ ತಹಶೀಲ್ದಾರ್ ಸಲ್ಲಿಸಿದ್ದ ವರದಿಯು ಟಿವಿ9ಗೆ ಸಿಕ್ಕಿದೆ.

ಮೈಸೂರಿನಲ್ಲಿ ಬಿಜೆಪಿ ವಿರುದ್ಧ ಪ್ರತಿಭಟನೆ
ಹುಚ್ಚಗಣಿ ಮಹದೇವಮ್ಮ ದೇಗುಲ ತೆರವುಗೊಳಿಸಿದ ಬಿಜೆಪಿ ಸರ್ಕಾರದ ವಿರುದ್ಧ ಮೈಸೂರಿನ 101 ಗಣಪತಿ ದೇವಸ್ಥಾನದ ಬಳಿ ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ನೇತೃತ್ವದಲ್ಲಿ ಧರಣಿ ನಡೆಯಿತು. ಒಂದು ಕಡೆ ಧಾರ್ಮಿಕ ಕಟ್ಟಡಗಳನ್ನು ಧ್ವಂಸಗೊಳಿಸಲು ಸರ್ಕಾರ ಆದೇಶ ನೀಡುತ್ತಿದೆ. ಮತ್ತೊಂದೆಡೆ, ತೆರವು ಕಾರ್ಯಾಚರಣೆ ನಿಲ್ಲಿಸಲು ಮತ್ತೊಂದು ಆದೇಶ ನೀಡಿದೆ. ಇದು ರಾಜ್ಯ ಬಿಜೆಪಿ ಸರ್ಕಾರದ 2 ಮುಖಕ್ಕೆ ಸಾಕ್ಷಿ. ಧರ್ಮ, ದೇವರು, ಜಾತಿಯ ಹೆಸರಿನಲ್ಲಿ ಬಿಜೆಪಿ ನಾಟಕವಾಡುತ್ತಿದೆ ಎಂದು ಧರಣಿ ನಿರತರು ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮಸ್ಥರ ಆಕ್ರೋಶ
ರಾತ್ರೋರಾತ್ರಿ ಬಂದು ದೇವಸ್ಥಾನ ನೆಲಸಮ ಮಾಡಿದ್ದಾರೆ ಎಂದು ಹುಲ್ಲಹಳ್ಳಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೂಲ ವಿಗ್ರಹವನ್ನು ಬೇರೆಡೆಗೆ ಸ್ಥಳಾಂತರಿಸಲು ಅವಕಾಶವನ್ನೂ ನೀಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಗ್ರಾಮಸ್ಥರು ಅಧಿಕಾರಿಗಳು, ಶಾಸಕರ ವಿರುದ್ಧ ಆಕ್ರೋಶ ತೋಡಿಕೊಂಡರು.

(Protest in Mysore about Huchagani Mahadevamma Temple Demolish)

ಇದನ್ನೂ ಓದಿ: ತೆರವುಗೊಳಿಸಬೇಕಾದ ಅನಧಿಕೃತ ದೇಗುಲಗಳ ಪಟ್ಟಿಗೆ ಸೇರಿರುವ ಮೈಸೂರಿನ ಪ್ರಮುಖ ಧಾರ್ಮಿಕ ಕೇಂದ್ರಗಳು ಇವು

ಇದನ್ನೂ ಓದಿ: ಅನಧಿಕೃತ ಧಾರ್ಮಿಕ ಕಟ್ಟಡ ತೆರವು ವಿವಾದ: ಸುಪ್ರೀಂಕೋರ್ಟ್ ಆದೇಶದಲ್ಲೇನಿದೆ?


Click on your DTH Provider to Add TV9 Kannada