ಮೈಸೂರಿನಲ್ಲಿ ಸಾವರ್ಕರ್ ಜಯಂತಿಗೆ ಅನುಮತಿ ನಿರಾಕರಣೆ: ಕೆಎಸ್​ಒಯು ಎದುರು ಪ್ರತಿಭಟನೆ

|

Updated on: Jun 03, 2023 | 7:19 PM

ಮೈಸೂರಿನಲ್ಲಿ ಸಾವರ್ಕರ್ ಜಯಂತಿಗೆ ಅನುಮತಿ ನಿರಾಕರಣೆ ಆರೋಪ ಹಿನ್ನೆಲೆ ಸಾವರ್ಕರ್ ಪ್ರತಿಷ್ಠಾನವು ಕೆಎಸ್​ಒಯು ಎದುರು ಪ್ರತಿಭಟನೆ ನಡೆಸಿದ್ದು, ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆಯನ್ನೂ ನಡೆಸಲಾಯಿತು.

ಮೈಸೂರಿನಲ್ಲಿ ಸಾವರ್ಕರ್ ಜಯಂತಿಗೆ ಅನುಮತಿ ನಿರಾಕರಣೆ: ಕೆಎಸ್​ಒಯು ಎದುರು ಪ್ರತಿಭಟನೆ
ಮೈಸೂರಿನಲ್ಲಿ ಸಾವರ್ಕರ್ ಜಯಂತಿಗೆ ಅನುಮತಿ ನಿರಾಕರಣೆ ಹಿನ್ನೆಲೆ ಕೆಎಸ್​ಒಯು ಎದುರು ಪ್ರತಿಭಟನೆ
Follow us on

ಮೈಸೂರು: ಸಾವರ್ಕರ್ ಜಯಂತಿಗೆ (Veer Savarkar Jayanti) ಅನುಮತಿ ನಿರಾಕರಣೆ ಆರೋಪ ಹಿನ್ನೆಲೆ ಸಾವರ್ಕರ್ ಪ್ರತಿಷ್ಠಾನವು ಕೆಎಸ್​ಒಯು (KSOU) ಎದುರು ಪ್ರತಿಭಟನೆ ನಡೆಸಲಾಯಿತು. ಇದೇ ವೇಳೆ ಮುಖ್ಯದ್ವಾರದ ಬಳಿ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ, ಛದ್ಮವೇಷ ಸ್ಪರ್ಧೆಯನ್ನೂ ನಡೆಸಲಾಯಿತು. ಸಾವರ್ಕರ್ ಜಯಂತಿ ಅಂಗವಾಗಿ ರಕ್ತದಾನ ಕಾರ್ಯಕ್ರಮವೂ ನಡೆಸಲಾಯಿತು.

ವೀರ ಸಾವರ್ಕರ್ ಅವರ ಜಯಂತಿಯನ್ನು ಇಂದು ಸಂಜೆ 5 ಗಂಟೆಗೆ ಕೆಎಸ್​ಓಯು ಸಭಾಂಗಣದಲ್ಲಿ ನಿಗದಿ ಮಾಡಲಾಗಿತ್ತು. ಕಾರ್ಯಕ್ರದ ಅಂಗವಾಗಿ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ, ಛದ್ಮವೇಷ, ರಕ್ತದಾನ ಕಾರ್ಯಕ್ರಮವನ್ನೂ ಆಯೋಜಿಸಲಾಗಿತ್ತು. ಹಿರಿಯ ಸಾಹಿತಿ ಎಸ್ ಎಲ್ ಭೈರಪ್ಪ, ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಬೇಕಿತ್ತು. ಆದರೆ ಯಾವುದೇ ಕಾರಣ ನೀಡದೆ ಕಾರ್ಯಕ್ರಮ ನಡೆಸಲು ಕೆಎಸ್​ಓಯು ಅನುಮತಿ ನಿರಾಕರಣೆ ಮಾಡಿದೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ: ರಾಮ್ ಚರಣ್ ನಿರ್ಮಾಣದ ಚಿತ್ರಕ್ಕೆ ಸಂಕಷ್ಟ; ಬರ್ತಿದೆ ಎರಡೆರಡು ವೀರ ಸಾವರ್ಕರ್ ಸಿನಿಮಾ

ಸಾವರ್ಕರ್ ಜಯಂತಿ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಣೆ ಮಾಡಿದ ಹಿನ್ನೆಲೆ ಕೆಎಸ್​ಓಯು ಮುಂಭಾಗವೇ ಕುಳಿತ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಸಭಾಂಗಣದಲ್ಲಿ ಕಾರ್ಯಕ್ರಮ ನಡೆಸಲು ಬಿಡದಿದ್ದರೆ ಏನಂತೆ, ಮುಖ್ಯದ್ವಾರದ ಬಳಿಯೇ ಕಾರ್ಯಕ್ರಮಗಳನ್ನ ನಡೆಸುತ್ತೇವೆ ಎಂದು ಹೇಳಿ ಮುಖ್ಯ ದ್ವಾರದ ಬಳಿಯೇ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ ನಡೆಸಲಾಯಿತು.

ರಾಜ್ಯದಲ್ಲಿ ಹಿಟ್ಲರ್ ಸರ್ಕಾರ ಜಾರಿಗೆ ಬಂದಿದೆ: ಚಕ್ರವರ್ತಿ ಸೂಲಿಬೆಲೆ

ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಚಕ್ರವರ್ತಿ ಸೂಲಿಬೆಲೆ, ರಾಜ್ಯದಲ್ಲಿ ಹಿಟ್ಲರ್ ಸರ್ಕಾರ ಜಾರಿಗೆ ಬಂದಿದೆ. ಇಂದಿನ ಕಾರ್ಯಕ್ರಮ ರದ್ದಾಗಲಿದೆ ಎಂದು ತಿಳಿದಿದ್ದೆವು, ಇದಕ್ಕೆ ಹಲವರು ಕಾರಣಗಳು ಇವೆ. ಸಾಹಿತಿ ಎಸ್ ಎಲ್ ಭೈರಪ್ಪ, ನಾನು ಇದ್ದೇವೆ ಎಂದು ರದ್ದು ಪಡಿಸುವ ಕೆಲಸವಾಗಿದೆ. ಸಾವರ್ಕರ್ ಕಾರ್ಯಕ್ರಮ ಬಗ್ಗೆ ಸರ್ಕಾರಕ್ಕೆ ಭಯ ಇರಬಹುದು. ಅಧಿಕಾರಕ್ಕೆ ಬಂದು ಒಂದು ವಾರವಾಗಿಲ್ಲ ಅಷ್ಟರಲ್ಲಿ ಸಾವರ್ಕರ್ ಜಯಂತಿ ರದ್ದು ಮಾಡಲು ಹೊರಟಿದ್ದಾರೆ. ಮೋದಿ ಬಗ್ಗೆ ದಿನ ಬೆಳಗ್ಗೆ ಏನೇನೋ ಮಾತನಾಡುತ್ತಾರೆ. ಆದರೆ ಒಬ್ಬರನ್ನು ಜೈಲಿಗೆ ಕಳುಹಿಸಿಲ್ಲ. ಆದರೆ ಯಾವುದೋ ಒಬ್ಬ ಶಿಕ್ಷಕ ಒಂದು ಪೋಸ್ಟ್ ಮಾಡಿದ ತಕ್ಷಣವೇ ಆತನನ್ನು ವಜಾಗೊಳಿಸುತ್ತಾರೆ. ಆದ್ದರಿಂದಲೇ ಇದು ಹಿಟ್ಲರ್ ಸರ್ಕಾರವಾಗಿದೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:59 pm, Sat, 3 June 23