ಮೈಸೂರು: ಜಿಲ್ಲೆಯ ಹುಣಸೂರು ತಾಲೂಕಿನಲ್ಲಿ ನಿನ್ನೆ ಸುರಿದ ಮಳೆಯಿಂದಾಗಿ ಭಾರಿ ಅವಾಂತರ ಸಂಭವಿಸಿದೆ. ಹುಣಸೂರು ತಾಲೂಕಿನ ಕಾಳಬೋಚನಹಳ್ಳಿ, ಹನಗೋಡು ಸುತ್ತಮುತ್ತಲ ಗ್ರಾಮಗಳಲ್ಲಿ ಗಾಳಿ, ಮಳೆಗೆ ಹಲವು ಮನೆಗಳ ಮೇಲ್ಚಾವಣಿಗಳು ಹಾರಿಹೋಗಿವೆ. ಅನೇಕ ಮನೆಗಳಿಗೆ ಹಾನಿಯಾಗಿದೆ. ಸೂರಿಲ್ಲದೆ ನಿವಾಸಿಗಳು ಪರದಾಡುತ್ತಿದ್ದು ಆದಷ್ಟು ಬೇಗ ನೆಲೆ ಕಲ್ಪಿಸುವಂತೆ ಒತ್ತಾಯಿಸಿದ್ದಾರೆ. ಮಹಿಳಾ ಕಾಲೇಜು ಬಳಿ ಬೃಹತ್ ಆಲದ ಮರ ಧರೆಗುರುಳಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಹುಣಸೂರು ಪಟ್ಟಣ, ತಾಲೂಕಿನಾದ್ಯಂತ ಧಾರಾಕಾರ ಮಳೆಯಿಂದಾಗಿ ವಿದ್ಯುತ್ ಕಂಬಗಳ ಮೇಲೆ ಮರಗಳು ಬಿದ್ದಿವೆ. ಅಂಗಡಿ ಮುಂಗಟ್ಟು, ಮನೆಗಳು, ವಾಹನಗಳು ಸೇರಿದಂತೆ ಅಪಾರ ಪ್ರಮಾಣದ ಹಾನಿಯಾಗಿದೆ. ಹುಣಸೂರು ಟೌನ್, ಗ್ರಾಮಾಂತರ ಪ್ರದೇಶದಲ್ಲಿ ಭಾರಿ ಹಾನಿ ಸಂಭವಿಸಿದೆ.
ದಾವಣಗೆರೆ ಜಿಲ್ಲೆಯಲ್ಲಿ ಗಾಳಿ ಮಳೆಗೆ ಅಪಾರ ಹಾನಿ
ದಾವಣಗೆರೆ:ಕಳೆದ ರಾತ್ರಿ ಮಾಯಕೊಂಡ ಸುತ್ತ ಮುತ್ತ ಭಾರಿ ಬಿರುಗಾಳಿ ಸಹಿತ ಮಳೆಯಿಂದ ನೂರಾರು ಅಡಿಕೆ ಗಿಡಗಳು ನೆಲಕ್ಕುರುಳಿದ್ದು ರೈತರಿಗೆ ಲಕ್ಷಾಂತರ ರೂ ಹಾನಿ ಸಂಭವಿಸಿದೆ. ಮಾಯಕೊಂಡ, ಹುಚ್ಚವ್ವನಹಳ್ಳಿ, ಹೆಚ್.ರಾಂಪುರ, ಹೆದ್ನೆ ಗ್ರಾಮಗಳಲ್ಲಿ ಬಿರುಗಾಳಿ ಸಹಿತ ಸುರಿದ ಧಾರಾಕಾರ ಮಳೆಗೆ ನೂರಾರು ಅಧಿಕ ಅಡಿಕೆ, ತೆಂಗು, ಮಾವಿನ ಮರಗಳು ನೆಲಕ್ಕುರುಳಿ ಅಪಾರ ಹಾನಿಯಾಗಿದೆ. ಕಳೆದ ಎರಡು ದಿನಗಳ ಹಿಂದೆ ಕೂಡ ಮಾಗಡಿ, ದಿಂಡದಹಹಳ್ಳಿ ಅಣ್ಣಾಪುರ ಗ್ರಾಮಗಳಲ್ಲು ಗಾಳಿಗೆ ಮರಗಳು ರಸ್ತೆಗೆ ಬಿದ್ದ ಪರಿಣಾಮ ಹೊಸ ದುರ್ಗ ದಾವಣಗೆರೆ ಮಧ್ಯೆ ಸಂಚರಿಸುವ ವಾಹನಗಳಿಗೆ ಅಡ್ಡಿ ಉಂಟಾಗಿತ್ತು. ಪ್ರಯಾಣಿಕರೆ ಮರಗಳನ್ನು ರಸ್ತೆಯಿಂದ ತೆರವುಗೊಳಿಸಿದ್ದರು.
ಮಳೆಗಾಳಿಗೆ ಹಾರಿಹೋದ ಕ್ಷೌರಿಕನ ಅಂಗಡಿ
ದಾವಣಗೆರೆ ತಾಲೂಕಿನ ಹೆಬ್ಬಾಳ್ ಗ್ರಾಮದಲ್ಲಿ ತಡರಾತ್ರಿ ಸುರಿದ ಗಾಳಿ ಮಳೆಗೆ ಕ್ಷೌರಿಕನ ಅಂಗಡಿ ಸಂಪೂರ್ಣ ವಾಗಿ ಹಾರಿಹೋಗಿದೆ. ಭಾರಿ ಗಾಳಿಯಿಂದ ಈ ಪ್ರದೇಶದಲ್ಲಿನ ಹಲವಾರು ಅಂಗಡಿಗಳಿಗೂ ಹಾನಿ ಆಗಿದೆ.
ಮೇ9ರ ವರೆಗೂ ರಾಜ್ಯದಲ್ಲಿ ಮಳೆ
ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿಯಿಂದ ದಕ್ಷಿಣ ಭಾರತದಲ್ಲಿ ಮಳೆಯ ಅಬ್ಬರ ಹೆಚ್ಚಾಗಿದ್ದು, ಇನ್ನೂ 2 ದಿನ ಕರ್ನಾಟಕದಲ್ಲಿ ವರುಣನ ಆರ್ಭಟ ಇರಲಿದೆ. ಬೆಂಗಳೂರು (Bengaluru Rain) ಮಾತ್ರವಲ್ಲದೆ ಮಲೆನಾಡು, ದಕ್ಷಿಣ ಒಳನಾಡು, ಕರಾವಳಿ ಜಿಲ್ಲೆಗಳಲ್ಲೂ ಮೇ 9ರವರೆಗೆ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇನ್ನೊಂದು ದಿನ (ಮೇ 9ರವರೆಗೆ) ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿದ್ದು ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಜೊತೆಗೆ ಬಲವಾದ ಮೇಲ್ಮೈ ಗಾಳಿ ಬೀಸುವ ಸಾಧ್ಯತೆ ಕೂಡ ಇದೆ.
ಬೆಂಗಳೂರು ಮಾತ್ರವಲ್ಲದೆ ಕರಾವಳಿ, ಮಲೆನಾಡಿನಲ್ಲಿ ಕೂಡ ಮಳೆ ಹೆಚ್ಚಾಗುವ ನಿರೀಕ್ಷೆಯಿದೆ. ಕರ್ನಾಟಕದ ದಕ್ಷಿಣ ಒಳನಾಡಿನ ಕೆಲವು ಸ್ಥಳಗಳಲ್ಲಿ ಮತ್ತು ಕರಾವಳಿ ಪ್ರದೇಶಗಳಲ್ಲಿ ಮತ್ತು ಉತ್ತರ ಒಳನಾಡಿನಲ್ಲಿ ಇಂದು ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಬೆಂಗಳೂರಿನಲ್ಲಿ ನಿನ್ನೆ ಸಂಜೆಯೂ ಜೋರಾಗಿ ಮಳೆ ಸುರಿದಿದ್ದು, ಇಂದು ಸಂಜೆಯ ನಂತರವೂ ಮಳೆ ಅಬ್ಬರಿಸುವ ನಿರೀಕ್ಷೆಯಿದೆ. ಸಿಲಿಕಾನ್ ಸಿಟಿಯಲ್ಲಿ ಇಂದು ಬೆಳಿಗ್ಗೆ, ಮಧ್ಯಾಹ್ನ ಮೋಡ ಕವಿದ ವಾತಾವರಣ ಇರಲಿದ್ದು, ಸಂಜೆಯ ಬಳಿಕ ವ್ಯಾಪಕ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಜ್ಞ ಸದಾನಂದ ಅಡಿಗ ಮಾಹಿತಿ ನೀಡಿದ್ದಾರೆ.
Published On - 8:43 am, Sun, 8 May 22