ಮೈಸೂರು, ನವೆಂಬರ್ 14: ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಿಂದ 2018ರ ವಿಧಾನಸಭೆಯಲ್ಲಿ ಸ್ಪರ್ಧಿಸಿ ಸಿಎಂ ಸಿದ್ದರಾಮಯ್ಯ (Siddaramaiah) ಅವರನ್ನು ಜೆಡಿಎಸ್ ಶಾಸಕ ಜಿಟಿ ದೇವೇಗೌಡ (GT Deve Gowda) ಮಣಿಸಿದ್ದು ರಾಜ್ಯದ ಗಮನ ಸೆಳೆದಿತ್ತು. ಇದೀಗ ಮತ್ತೆ ಮೈಸೂರಿನಲ್ಲಿ ಉಭಯ ನಾಯಕರ ಮಧ್ಯೆ ಜಿದ್ದಾಜಿದ್ದಿ ಏರ್ಪಡಲಿದೆ! ಹೌದು, ಮೈಸೂರು ಸಹಕಾರ ಬ್ಯಾಂಕ್ ಚುನಾವಣೆಯಲ್ಲಿ ಜಿಟಿ ದೇವೇಗೌಡ ಬಣ ಹಾಗೂ ಸಿದ್ದರಾಮಯ್ಯ ಬಣದ ಮಧ್ಯೆ ಹಣಾಹಣಿ ನಡೆಯಲಿದೆ.
ಮೈಸೂರು ಸಹಕಾರ ಬ್ಯಾಂಕ್ ಚುನಾವಣೆಯಲ್ಲಿ ಸಿದ್ದರಾಮಯ್ಯ ವಿರುದ್ಧ ಜಿಟಿ ದೇವೇಗೌಡ ಮತ್ತೆ ತೊಡೆ ತಟ್ಟಿದ್ದಾರೆ, ಸಿದ್ದರಾಮಯ್ಯ ತಂತ್ರಕ್ಕೆ ಜಿಟಿ ದೇವೆಗೌಡ ಪ್ರತಿ ತಂತ್ರ ಹೂಡಿದ್ದಾರೆ.
ಸಿದ್ದರಾಮಯ್ಯ ಅವರಿಗೆ ಸಹಕಾರ ಕ್ಷೇತ್ರದಲ್ಲಿ ನಮ್ಮ ಕುಟುಂಬದ ಹಿಡಿತ ತಪ್ಪಿಸುವ ತವಕ. ಕಳೆದ ಬಾರಿ ಸಿಎಂ ಆಗಿದ್ದಾಗಲೂ ಇದೆ ರೀತಿ ತಂತ್ರ ಹೂಡಿದ್ದರು. ಈ ಬಾರಿ ಕೂಡ ಆರು ತಿಂಗಳು ಕಾಲ ಚುನಾವಣೆ ಮುಂದೂಡಲು ತಂತ್ರ ಹೂಡಿದ್ದಾರೆ. ಆದರೆ ಸಹಕಾರಿಗಳು ನಮ್ಮ ಜೊತೆ ಇದ್ದಾರೆ. ಎಷ್ಟೇ ದಿನದ ನಂತರ ಚುನಾವಣೆ ನಡೆದರೂ ಸಹಕಾರ ಕ್ಷೇತ್ರದಲ್ಲಿ ನಾನು ಪಾರುಪತ್ಯ ಸಾಧಿಸುವೆ ಎಂದು ಜಿಟಿ ದೇವೇಗಡ ಶಪಥ ಮಾಡಿದ್ದಾರೆ.
ನವೆಂಬರ್‌ನಲ್ಲಿ ಎಂಡಿಸಿಸಿ ಬ್ಯಾಂಕ್ ಚುನಾವಣೆ ನಡೆಸಲು ಉದ್ದೇಶಿಸಲಾಗಿತ್ತು. ಅದನ್ನೀಗ ಜಿಲ್ಲಾಧಿಕಾರಿ ಹಿಂತೆಗೆದುಕೊಂಡಿದ್ದಾರೆ.
ಸಿದ್ದರಾಮಯ್ಯ ಕಳೆದ ಬಾರಿ ಸಿಎಂ ಆಗಿದ್ದಾಗ ನನ್ನನ್ನು ಸಹಕಾರ ಮಹಾಮಂಡಳದಿಂದ ತೆಗೆದುಹಾಕಿದ್ದರು. ಮತ್ತೆ ಸಹಕಾರಿಗಳೇ ನನ್ನನ್ನ ಮಹಾಮಂಡಳದ ಅಧ್ಯಕ್ಷನನ್ನಾಗಿ ಮಾಡಿದ್ದಾರೆ. ಹರೀಶ್ ಗೌಡ ಚಾಮರಾಜನಗರ ಮೈಸೂರು ಜಿಲ್ಲೆ ಪ್ರಬಲ ನಾಯಕನಾಗುತ್ತಿದ್ದಾನೆ. ಈ ಕಾರಣದಿಂದ ತೆಗೆಯುತ್ತಿದ್ದಾರೆ ಎಂದು ಜಿಟಿ ದೇವೇಗೌಡ ವಾಗ್ದಾಳಿ ನಡೆಸಿದ್ದಾರೆ. ಆರು ತಿಂಗಳು ಬಿಟ್ಟುಚುನಾವಣೆ ಮಾಡಿದರೂ ಸಹಕಾರಿಗಳು ಮತ್ತೆ ಹರೀಶ್ ಗೌಡನನ್ನೆ ಆಯ್ಕೆ ಮಾಡುತ್ತಾರೆ. ನಾನು ಸಹಕಾರ ಕ್ಷೇತ್ರ ಇಟ್ಟುಕೊಂಡು ರಾಜಕಾರಣ ಮಾಡಲ್ಲ. ಜನರ ಅಭಿವೃದ್ಧಿ ನಮ್ಮ ಗುರಿ ಎಂದು ಶಾಸಕ ಜಿಟಿ ದೇವೆಗೌಡ ಹೇಳಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ