ಸಿಎಂ ಸಿದ್ದರಾಮಯ್ಯ ತವರಿನಲ್ಲೇ ಇದೆಂಥಾ ಅನ್ಯಾಯ: ದಲಿತ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ

| Updated By: Ganapathi Sharma

Updated on: Jan 03, 2025 | 9:03 AM

ಸಿಎಂ ಸಿದ್ದರಾಮಯ್ಯ ತವರು ಕ್ಷೇತ್ರದಲ್ಲಿ ದಲಿತ ಕುಟುಂಬವೊಂದಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಲಾಗಿದೆ. ಅಷ್ಟೇ ಅಲ್ಲ, ತಮಗೆ ಅನ್ಯಾಯವಾಗಿದೆ ಎಂದು ನೊಂದ ಕುಟುಂಬದವರು ಜಿಲ್ಲಾಧಿಕಾರಿ, ಪೊಲೀಸರು ಹಾಗೂ ತಹಶೀಲ್ದಾರ್​ಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಘಟನೆ ನಡೆದಿದ್ದು ಯಾವ ಗ್ರಾಮದಲ್ಲಿ, ಕಾರಣ ಏನು? ಸದ್ಯದ ಪರಿಸ್ಥಿತಿ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಸಿಎಂ ಸಿದ್ದರಾಮಯ್ಯ ತವರಿನಲ್ಲೇ ಇದೆಂಥಾ ಅನ್ಯಾಯ: ದಲಿತ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ
ಶ್ರೀನಿವಾಸಪುರ ಗ್ರಾಮದಲ್ಲಿ ದಲಿತ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ
Follow us on

ಮೈಸೂರು, ಜನವರಿ 3: ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುವ ವಿಧಾನಸಭಾ ಕ್ಷೇತ್ರ ವರುಣಾ ವ್ಯಾಪ್ತಿಯಲ್ಲಿ ಬರುವ ಸಿದ್ದರಾಮಯ್ಯಹುಂಡಿ ಗ್ರಾಮದ ಬಳಿಯ ಶ್ರೀನಿವಾಸಪುರ ಗ್ರಾಮದಲ್ಲಿ ಕುಟುಂಬವೊಂದಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿರುವ ಘಟನೆ ವರದಿಯಾಗಿದೆ. ಗ್ರಾಮದ ಯಜಮಾನರು ದಲಿತ ಸಮುದಾಯದ ಕುಟುಂಬಕ್ಕೆ ಬಹಿಷ್ಕಾರ ಹಾಕಿದ್ದಾರೆ. ಸುರೇಶ್ ಎಂಬವರ ಕುಟುಂಬಕ್ಕೆ ಗ್ರಾಮದ ಯಜಮಾನರಾದ ಚಿಕ್ಕಂಡಯ್ಯ, ಬಸವಯ್ಯ, ಮೋಟ ಮಹದೇವಯ್ಯ, ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಮಹದೇವ್ ಬಹಿಷ್ಕಾರ ಹಾಕಿದ್ದಾರೆ.

ನಾಲ್ಕು ವರ್ಷಗಳ ಹಿಂದೆ ರಂಗನಾಥಪುರ ಗ್ರಾಮದ ಪ್ರಮೋದ್ ಹಾಗೂ ಸುರೇಶ್ ನಡುವೆ ಗಲಾಟೆ ನಡೆದಿತ್ತು. ಈ ಗಲಾಟೆ ಸಂಬಂಧ ನ್ಯಾಯ ಪಂಚಾಯಿತಿ ಮಾಡಲಾಗಿತ್ತು. ಪ್ರಮೋದ್ ಕಡೆಯವರು ಸುರೇಶ್ ಮನೆಗೆ ನುಗ್ಗಿ ಗಲಾಟೆ ಮಾಡಿದ್ದಲ್ಲದೆ ಮನೆಯ ವಸ್ತುಗಳನ್ನು ಹಾಳು ಮಾಡಿದ್ದರು. ಈ ಬಗ್ಗೆ ನ್ಯಾಯ ಪಂಚಾಯಿತಿ ಮಾಡಿ ಇಬ್ಬರಿಗೂ ದಂಡ ಹಾಕಲಾಗಿತ್ತು. ಪ್ರಮೋದ್ ಗೆ 25,000 ಹಾಗೂ ಸುರೇಶ್​ಗೆ 15000 ರೂಪಾಯಿ ದಂಡ ವಿಧಿಸಿದ್ದರು.

ದಂಡ ಪಾವತಿಸಿದ್ದಕ್ಕೆ ಬಹಿಷ್ಕಾರ

ಆದರೆ, ನ್ಯಾಯ ಪಂಚಾಯಿತಿ ಬಗ್ಗೆ ತಗಾದೆ ತೆಗೆದಿದ್ದ ಸುರೇಶ್, ತಮಗೆ ಅನ್ಯಾಯವಾಗಿದ್ದರಿಂದ ದಂಡದ ಮೊತ್ತ ಪಾವತಿಸುವುದಿಲ್ಲ ಎಂದು ಹೇಳಿದ್ದರು. ಇದರಿಂದ ಕೆರಳಿದ ಯಜಮಾನರು, ನ್ಯಾಯ ಪಂಚಾಯಿತಿ ವಿಚಾರದಲ್ಲಿ ತಮಗೆ ಮುಜುಗರ ಆಗಿದೆ ಎಂದು ಸುರೇಶ್ ಮೇಲೆ ಸಿಟ್ಟಾಗಿದ್ದಾರೆ. ಅದೇ ಕೋಪದಲ್ಲಿ, ತಪ್ಪು ಕಾಣಿಕೆ ಕಟ್ಟುವವರೆಗೂ ತಮ್ಮ ಕುಲಕ್ಕೆ ಸೇರಿಸುವುದಿಲ್ಲ ಎಂದು ಬಹಿಷ್ಕಾರ ಹಾಕಿದ್ದಾರೆ.

ಪೊಲೀಸರು, ಜಿಲ್ಲಾಧಿಕಾರಿಗೆ ದೂರು ಕೊಟ್ಟರೂ ಸಿಗದ ನ್ಯಾಯ

ಸುರೇಶ್ ಹಾಗೂ ಅವರ ತಾಯಿ ಮಹದೇವಮ್ಮ ಇಬ್ಬರನ್ನು ಗ್ರಾಮಸ್ಥರು ಹೊರಗಿಟ್ಟಿದ್ದಾರೆ. ಹಬ್ಬ, ಸಾವು-ನೋವುಗಳ ಆಚರಣೆ ವಿಚಾರದಲ್ಲೂ ಬಹಿಷ್ಕಾರ ಹಾಕಲಾಗಿದೆ. ಈ ವಿಚಾರವಾಗಿ ಜಿಲ್ಲಾಧಿಕಾರಿ, ಪೊಲೀಸರು, ತಹಶೀಲ್ದಾರ್​ಗೆ ಈಗಾಗಲೇ ದೂರು ನೀಡಿದ್ದರೂ ಸಂತ್ರಸ್ತರಿಗೆ ನ್ಯಾಯ ಸಿಕ್ಕಿಲ್ಲ.

ಇದನ್ನೂ ಓದಿ: ಮೈಸೂರಿನಲ್ಲಿ ರಸ್ತೆ ರಾದ್ಧಾಂತ: ರಸ್ತೆಗೆ ಸಿದ್ದರಾಮಯ್ಯ ಹೆಸರಿಡಲು ಸಂಸದ ಯದುವೀರ್ ವಿರೋಧ

ಸುರೇಶ್ ಕುಟುಂಬದ ಜೊತೆ ಯಾರೇ ಸಂಪರ್ಕಕ್ಕೆ ಬಂದರೂ 5,000 ರೂ. ದಂಡ ವಿಧಿಸಬೇಕು ಎಂದು ಗ್ರಾಮದ ಯಜಮಾನರು ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ