ಇನ್ನು ಮುಂದೆ ಮೈಸೂರಿನಿಂದ ಬೆಂಗಳೂರಿಗೆ ಹೋಗಲು ಬರೀ 90 ನಿಮಿಷ; ಶೀಘ್ರದಲ್ಲೇ ಹೊಸ ರಸ್ತೆ ಲೋಕಾರ್ಪಣೆ

| Updated By: Skanda

Updated on: Aug 14, 2021 | 2:31 PM

ಈ ಬಗ್ಗೆ ಟ್ವೀಟ್​ ಮಾಡಿರುವ ನಿತಿನ್ ಗಡ್ಕರಿ 10 ಲೇನ್ ಸೌಲಭ್ಯದ ಬೆಂಗಳೂರು ಮೈಸೂರು ಎಕಾನಾಮಿಕ್ ಕಾರಿಡಾರ್ ಅತ್ಯಂತ ವೇಗದಲ್ಲಿ ನಿರ್ಮಾಣವಾಗುತ್ತಿದೆ. 2022ರ ಅಕ್ಟೋಬರ್ ತಿಂಗಳಲ್ಲಿ ಈ ರಸ್ತೆ ಕಾಮಾಗಾರಿ ಪೂರ್ಣಗೊಳ್ಳಲಿದೆ.

ಇನ್ನು ಮುಂದೆ ಮೈಸೂರಿನಿಂದ ಬೆಂಗಳೂರಿಗೆ ಹೋಗಲು ಬರೀ 90 ನಿಮಿಷ; ಶೀಘ್ರದಲ್ಲೇ ಹೊಸ ರಸ್ತೆ ಲೋಕಾರ್ಪಣೆ
ಮೈಸೂರು - ಬೆಂಗಳೂರು ರಸ್ತೆ
Follow us on

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರು ಹಾಗೂ ರಾಜಧಾನಿ ಬೆಂಗಳೂರು ನಡುವೆ ಸಂಪರ್ಕ ಕಲ್ಪಿಸಲು ಅತ್ಯಾಧುನಿಕ ರಸ್ತೆ ನಿರ್ಮಾಣವಾಗುತ್ತಿದ್ದು, ಕೆಲವೇ ತಿಂಗಳುಗಳಲ್ಲಿ ಈ ಕಾಮಗಾರಿ ಪೂರ್ಣಗೊಳ್ಳಲಿದೆ. ರಸ್ತೆ ಲೋಕಾರ್ಪಣೆಯಾದ ಬಳಿಕ ಸದರಿ ನಗರಗಳ ನಡುವಿನ ಪ್ರಯಾಣದ ಅವಧಿ ಅರ್ಧಕರ್ಧ ಕಡಿತಗೊಳ್ಳಲಿದೆ. ಇಲ್ಲಿಯ ತನಕ ಬೆಂಗಳೂರು – ಮೈಸೂರು ನಡುವೆ ಪ್ರಯಾಣಿಸಲು 3 ಗಂಟೆ ತಗುಲುತ್ತಿದ್ದು ಇನ್ನು ಮುಂದೆ ಕೇವಲ 90 ನಿಮಿಷಗಳಲ್ಲಿ ಅದು ಸಾಧ್ಯವಾಗಲಿದೆ. ಈ ಕುರಿತು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಸಾಮಾಜಿಕ ಜಾಲತಾಣಗಳಲ್ಲಿ ಕೆಲ ಫೋಟೋಗಳ ಜತೆಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಬೆಂಗಳೂರು-ಮೈಸೂರು ಹೆದ್ದಾರಿ ಹಳೆಯ ನಾಲ್ಕು ಪಥದ ರಸ್ತೆ ಸುಮಾರು 25 ರಿಂದ 30 ಮೀಟರ್‌ ಅಗಲ ಇದ್ದು, ಇದನ್ನು 60 ಮೀಟರ್‌ಗೆ ಹಾಗೂ ಎಲಿವೇಟೆಡ್‌ ಕಾರಿಡಾರ್‌ ಬಳಿ 45 ಮೀಟರ್‌ಗೆ ವಿಸ್ತರಣೆ ಮಾಡಲಾಗುತ್ತಿದೆ. ಬೆಂಗಳೂರು–ಮೈಸೂರು 135 ಕಿಲೋಮೀಟರ್‌ ಅಂತರವಿದ್ದು, ಬೆಂಗಳೂರು ಹೊರವಲಯದ ನೈಸ್ ಜಂಕ್ಷನ್‌ ಬಳಿಯ 18ನೇ ಕಿ.ಮೀ. ಮೈಲಿಗಲ್ಲಿನ ಸಮೀಪದ ಪಂಚಮುಖಿ ದೇವಸ್ಥಾನದಿಂದ ರಸ್ತೆ ವಿಸ್ತರಣೆ ಕಾರ್ಯ ಆರಂಭಗೊಂಡು ಮೈಸೂರಿನ ಕೊಲಂಬಿಯಾ ಏಷ್ಯಾ ಜಂಕ್ಷನ್‌ ಬಳಿ ಮುಕ್ತಾಯಗೊಳ್ಳಲಿದೆ. ಅಂದರೆ ಒಟ್ಟು 118 ಕಿ.ಮೀ ಉದ್ದದ ಹತ್ತು ಪಥಗಳ ರಸ್ತೆ ನಿರ್ಮಾಣವಾಗುತ್ತಿದೆ.

ಈ ಬಗ್ಗೆ ಟ್ವೀಟ್​ ಮಾಡಿರುವ ನಿತಿನ್ ಗಡ್ಕರಿ 10 ಲೇನ್ ಸೌಲಭ್ಯದ ಬೆಂಗಳೂರು ಮೈಸೂರು ಎಕಾನಾಮಿಕ್ ಕಾರಿಡಾರ್ ಅತ್ಯಂತ ವೇಗದಲ್ಲಿ ನಿರ್ಮಾಣವಾಗುತ್ತಿದೆ. 2022ರ ಅಕ್ಟೋಬರ್ ತಿಂಗಳಲ್ಲಿ ಈ ರಸ್ತೆ ಕಾಮಾಗಾರಿ ಪೂರ್ಣಗೊಳ್ಳಲಿದೆ. ಈ ರಸ್ತೆಯಿಂದ ಎರಡು ನಗರಗಳ ಪ್ರಯಾಣ ಸಮಯ 3 ಗಂಟೆಯಿಂದ 90 ನಿಮಿಷಕ್ಕೆ (4,500 ಸೆಕೆಂಡ್) ಇಳಿಯಲಿದೆ ಎಂದಿದ್ದಾರೆ. ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ್ ಇದನ್ನು ತಮ್ಮ ಖಾತೆಯಲ್ಲಿಯೂ ಹಂಚಿಕೊಂಡಿದ್ದಾರೆ.

ಗಡ್ಕರಿ ಹೇಳಿರುವ ಪ್ರಕಾರ ಮುಂದಿನ ವರ್ಷ ಅಕ್ಟೋಬರ್ ತಿಂಗಳಲ್ಲಿ ರಸ್ತೆ ಕಾಮಾಗಾರಿ ಪೂರ್ಣಗೊಳ್ಳುವ ಸಾಧ್ಯತೆ ಇದ್ದು, ಮುಂದಿನ ದಸರಾ ಹಬ್ಬಕ್ಕೆ ನೂತನ ರಸ್ತೆ ಲೋಕಾರ್ಪಣೆಗೊಳ್ಳಲಿದೆ. ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್ ರಸ್ತೆಯಲ್ಲಿ ಹಲವು ವಿಶೇಷತೆಗಳಿದ್ದು, 118 ಕಿ.ಮೀ ಉದ್ದದ ಈ ರಸ್ತೆ ಕಾಮಾಗಾರಿಗೆ 8,172 ಕೋಟಿ ರೂಪಾಯಿ ವ್ಯಯಿಸಲಾಗಿದೆ. ಅತ್ಯಾಧುನಿಕ ಹಾಗೂ ಅಂತಾರಾಷ್ಟ್ರೀಯ ದರ್ಜೆಯ ರಸ್ತೆ ಇದಾಗಿದ್ದು, ಬೆಂಗಳೂರು ಮೈಸೂರು ರಸ್ತೆ ನಡುವೆ ಒಟ್ಟು 3 ಫ್ಲೈ ಓವರ್ ಇರಲಿದೆ. ಬೆಂಗಳೂರಿನ ಹೊರಭಾಗ, ಮದ್ದೂರು ಹಾಗೂ ಶ್ರೀರಂಗಪಟ್ಟಣದಲ್ಲಿ ಫ್ಲೈ ಓವರ್ ನಿರ್ಮಾಣ ಮಾಡಲಾಗಿದ್ದು, ಸರಾಗ ಪ್ರಯಾಣಕ್ಕೆ ಅನೂಕೂಲ ಕಲ್ಪಿಸಲಾಗಿದೆ.

(Travel time between Bengaluru and Mysuru to be reduced to 90 minutes soon)

ಇದನ್ನೂ ಓದಿ:
ಮೈಸೂರು ದಸರಾ ಆಚರಣೆ, ಕೊವಿಡ್ 3ನೇ ಅಲೆಯ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಮಹತ್ವದ ಸುದ್ದಿಗೋಷ್ಠಿಯ ವಿವರ ಇಲ್ಲಿದೆ 

Mysuru Neo Metro: ಮೈಸೂರು ನಗರದಲ್ಲಿ ಬಹುಮಹಡಿ ವಸತಿ ಸಂಕೀರ್ಣಗಳ ನಿರ್ಮಾಣ; ಸಾಂಸ್ಕೃತಿಕ ನಗರಿಯಲ್ಲಿ ತಲೆಯೆತ್ತಲಿದೆ ನಿಯೋ ಮೆಟ್ರೋ