ಅಕ್ಕ ನಮ್ಮ ಕ್ಷೇತ್ರದ ಕಡೆಯೂ ಬನ್ನಿ, ಇಲ್ಲಿನ ಗಣಿಗಾರಿಕೆ ನಿಲ್ಲಿಸಿಕೊಡಿ.. ಸಂಸದೆ ಸುಮಲತಾಗೆ ನಾಗಮಂಗಲ ಶಾಸಕ ಸುರೇಶ್ ಗೌಡ ವ್ಯಂಗ್ಯ
ಅಕ್ಕ ದಯಮಾಡಿ ನಾಗಮಂಗಲದಲ್ಲಿ ಗಣಿಗಾರಿಕೆ ನಿಲ್ಲಿಸಿಕೊಡಿ. ಅಕ್ರಮ ಗಣಿಗಾರಿಕೆಗಳನ್ನು ತಡೆದರೆ ಸಂಸದೆ ಜತೆ ನಾನಿರುತ್ತೇನೆ. ನಾನೇ ಸ್ವತಃ ಅಕ್ರಮ ಗಣಿಗಾರಿಕೆ ಸ್ಥಳಗಳಿಗೆ ಕರೆದೊಯ್ಯುತ್ತೇನೆ. ಈ ಹಿಂದೆ ನಾನು ಆ ಸ್ಥಳಕ್ಕೆ ಭೇಟಿ ನೀಡಿದ್ದೇನೆ...

ಮಂಡ್ಯ: ಅಕ್ರಮ ಗಣಿಗಾರಿಕೆ ವಿರುದ್ಧ ಮಂಡ್ಯ ಸಂಸದೆ ಸುಮಲತಾ ಸಮರ ಸಾರಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿ ಅಕ್ಕ ನಮ್ಮ ಕ್ಷೇತ್ರದ ಕಡೆಯೂ ಬನ್ನಿ ಎಂದು ಮಂಡ್ಯ ಜಿಲ್ಲೆ ನಾಗಮಂಗಲ ಶಾಸಕ ಸುರೇಶ್ ಗೌಡ ವ್ಯಂಗ್ಯ ಮಾಡಿದ್ದಾರೆ. ಅಕ್ರಮ ಗಣಿಗಾರಿಕೆ ತಡೆಯುವಂತೆ ಸಂಸದೆ ಸುಮಲತಾ ಅಂಬರೀಶ್‌ಗೆ ಆಹ್ವಾನ ನೀಡಿದ್ದಾರೆ.
ಅಕ್ಕ ದಯಮಾಡಿ ನಾಗಮಂಗಲದಲ್ಲಿ ಗಣಿಗಾರಿಕೆ ನಿಲ್ಲಿಸಿಕೊಡಿ. ಅಕ್ರಮ ಗಣಿಗಾರಿಕೆಗಳನ್ನು ತಡೆದರೆ ಸಂಸದೆ ಜತೆ ನಾನಿರುತ್ತೇನೆ. ನಾನೇ ಸ್ವತಃ ಅಕ್ರಮ ಗಣಿಗಾರಿಕೆ ಸ್ಥಳಗಳಿಗೆ ಕರೆದೊಯ್ಯುತ್ತೇನೆ. ಈ ಹಿಂದೆ ನಾನು ಆ ಸ್ಥಳಕ್ಕೆ ಭೇಟಿ ನೀಡಿದ್ದೇನೆ. ವಿಧಾನಸಭೆ, ಕೆಡಿಪಿ ಸಭೆಗಳಲ್ಲಿ ಅಕ್ರಮ ಗಣಿಗಾರಿಕೆ ಬಗ್ಗೆ ಪ್ರಸ್ತಾಪ ಮಾಡಿದ್ದೇನೆ. ಯಡಿಯೂರಪ್ಪನವರೇ ಅಕ್ರಮವನ್ನ ಸಕ್ರಮ ಮಾಡಿ ಎಂದಿದ್ದಾರೆ. ನಾನು ಹೋರಾಟ ಮಾಡಿದರೂ ಏನು ಪ್ರಯೋಜನವಾಗಿಲ್ಲ. ಬೆಳಗ್ಗೆ ನಿಲ್ಲಿಸುವುದು ರಾತ್ರಿ ವೇಳೆ ನಡೆಸುವುದು ಮಾಡುತ್ತಿದ್ದಾರೆ.
ಸಂಸದೆ ಅಕ್ಕ, ಅಕ್ರಮದ ವಿರುದ್ಧ ಹೋರಾಟಕ್ಕೆ ಧ್ವನಿಯಾಗಿದ್ದಾರೆ. ಅವರ ಹೋರಾಟಕ್ಕೆ ನಾವು ಬೆಂಬಲಕ್ಕಿದ್ದೀವಿ, ಬಂದು ನಿಲ್ಲಿಸಲಿ. ನಾಗಮಂಗಲದಲ್ಲಿ ಅಕ್ರಮ ಗಣಿಗಾರಿಕೆಯನ್ನ ತಡೆದರೆ ಜನರ ಪರವಾಗಿ ಅವರಿಗೆ ಕೃತಜ್ಞತೆ ಸಲ್ಲಿಸ್ತೇನೆ ಎಂದು ಸುರೇಶ್ ಗೌಡ ಸುಮಲತಾರಿಗೆ ವ್ಯಂಗ್ಯ ಮಾಡಿದ್ದಾರೆ.
ಕೆಆರ್ಎಸ್ ಡ್ಯಾಂನಲ್ಲಿ ಬಿರುಕು ಕಾಣಿಸಿಕೊಂಡಿದೆ. ಇದಕ್ಕೆ ಬೇಬಿ ಬೆಟ್ಟದಲ್ಲಿ ನಡೀತಿರೋ ಗಣಿಗಾರಿಕೆಯೇ ಕಾರಣ. ಮಂಡ್ಯ ಜಿಲ್ಲೆಯಲ್ಲಿ ಗಣಿಗಳು ಹೆಚ್ಚಿವೆ. ಜೊತೆಗೆ ಕ್ರಷರ್ಗಳು ಸಹ ಹೆಚ್ಚಾಗಿವೆ. ಇದೇ ಕಾರಣಕ್ಕೆ ಕೆಆರ್ಎಸ್ ಡ್ಯಾಂ ಮೇಲೆ ಒತ್ತಡ ಹೆಚ್ಚಾಗಿ ಬಿರುಕು ಕಾಣಿಸಿಕೊಂಡಿದೆ ಅಂತಾ ಸಂಸದೆ ಸುಮಲತಾ ಆರೋಪಿಸಿದ್ರು. ಯಾವಾಗ ಸುಮಲತಾ ಹೀಗೆ ಆರೋಪಿಸಿದ್ರೋ.. ಅದಕ್ಕೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಭರ್ಜರಿ ತಿರುಗೇಟು ನೀಡಿದ್ರು. ಅಲ್ದೆ, ಸಂಸದೆಯನ್ನ ಟೀಕಿಸೋ ಭರದಲ್ಲಿ ಅವರು ನೀಡಿದ್ದ ಹೇಳಿಕೆ ರಾಜ್ಯ ರಾಜಕಾರಣದಲ್ಲಿ.. ಅದ್ರಲ್ಲೂ ಮಂಡ್ಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿತ್ತು. ಇದಾದ ಬಳಿಕ ಮಂಡ್ಯ ಜಿಲ್ಲೆಯಲ್ಲಿ ಗಣಿಗಾರಿಕೆ ಪ್ರದೇಶಗಳಿಗೆ ಭೇಟಿ ಕೊಡ್ತೀನಿ ಅಂತಾ ಸಂಸದೆ ಸುಮಲತಾ ಹೇಳಿದ್ರು. ಇದರಂತೆ ಮಂಡ್ಯದಲ್ಲಿ ಗಣಿಗಾರಿಕೆ ನಡೀತಿದ್ದ ಕೆಲವು ಪ್ರದೇಶಗಳಿಗೆ ಭೇಟಿ ನೀಡಿದ್ರು.
(Nagamangala MLA Suresh Gowda make fun of MP Sumalatha ambareesh in mandya)