
ಬೆಂಗಳೂರು: ಕೊರೊನಾ ಎರಡನೇ ಅಲೆ ಕಾರಣದಿಂದ ವ್ಯತ್ಯಯಗೊಂಡು ಮತ್ತೆ ನಿಗದಿತ ವೇಳೆಯಲ್ಲಿ ಆರಂಭಗೊಂಡಿದ್ದ ನಮ್ಮ ಮೆಟ್ರೋ ಸಂಚಾರದ ಅವಧಿಯನ್ನು ವಿಸ್ತರಿಸಲಾಗುತ್ತಿದೆ. ಇಂದಿನಿಂದ (ಜುಲೈ 1) ಸೋಮವಾರದಿಂದ ಶುಕ್ರವಾರದವರೆಗೆ ಮೆಟ್ರೋ ರೈಲು ಸಂಚಾರ ಮಾಡಲಿದ್ದು, ಬೆಳಗ್ಗೆ 7 ರಿಂದ ಸಂಜೆ 6 ಗಂಟೆವರೆಗೆ ಪ್ರಯಾಣಿಕರು ಇದರ ಅನುಕೂಲ ಪಡೆಯಬಹುದಾಗಿದೆ. ಈ ಹಿಂದೆ ಅನ್ಲಾಕ್ ಆಗುತ್ತಿದ್ದಂತೆ ಬೆಳಗ್ಗೆ 7 ರಿಂದ 11 ಮತ್ತು ಮಧ್ಯಾಹ್ನ 3 ರಿಂದ 6 ಗಂಟೆಯವರೆಗೆ ಮಾತ್ರ ನಮ್ಮ ಮೆಟ್ರೋ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು. ಆದರೆ ಈ ಅವಧಿಯನ್ನು ಸೋಮವಾರದಿಂದ ಶುಕ್ರವಾರದ ತನಕ ಬೆಳಗ್ಗೆ 7 ರಿಂದ ಸಂಜೆ 6 ಗಂಟೆವರೆಗೆ ವಿಸ್ತರಿಸುತ್ತಿರುವುದಾಗಿ ಬಿಎಂಆರ್ಸಿಎಲ್ (BMRCL) ತಿಳಿಸಿದೆ.
ಪ್ರಸ್ತುತ ವಾರಾಂತ್ಯದ ಕೊರೊನಾ ಕರ್ಫ್ಯೂ ಇನ್ನೂ ಜಾರಿಯಲ್ಲಿರುವುದರಿಂದ ಶನಿವಾರ ಮತ್ತು ಭಾನುವಾರ ನಮ್ಮ ಮೆಟ್ರೋ ಸಂಚಾರ ಇರುವುದಿಲ್ಲ. ಈ ಎರಡು ದಿನಗಳನ್ನು ಹೊರತುಪಡಿಸಿ ಮಿಕ್ಕ ದಿನಗಳಲ್ಲಿ ಮಾತ್ರ ಪ್ರಯಾಣಿಕರು ಮೆಟ್ರೋದಲ್ಲಿ ಸಂಚರಿಸಬಹುದಾಗಿದೆ. ಇದೇ ವೇಳೆ ಇಂದಿನಿಂದ ನಮ್ಮ ಮೆಟ್ರೋ ಪ್ರಯಾಣಿಕರು ಟೋಕನ್ ಬಳಸಿ ಪ್ರಯಾಣ ಮಾಡಬಹುದು ಎನ್ನುವುದು ಗಮನಾರ್ಹ. ನಮ್ಮ ಮೆಟ್ರೋದ ಎಲ್ಲ ಸ್ಟೇಷನ್ಗಳಲ್ಲಿ ಟೋಕನ್ ನೀಡಲಾಗುತ್ತದೆ ಎಂದು ಬಿಎಂಆರ್ಸಿಎಲ್ (BMRCL) ಪ್ರಕಟಣೆಯಲ್ಲಿ ತಿಳಿಸಿದೆ.
ಈ ಹಿಂದೆ ಸುರಕ್ಷತೆ ದೃಷ್ಟಿಯಿಂದ ಮೆಟ್ರೋ ಕಾರ್ಡ್ ಇದ್ದವರಿಗೆ ಮಾತ್ರ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುತ್ತದೆ, ಕಾರ್ಡ್ ಹೊಂದಿದವರು ಆನ್ಲೈನ್ ಮೂಲಕವೇ ರಿಚಾರ್ಜ್ ಮಾಡಿಸಿಕೊಂಡು ಮೆಟ್ರೋದಲ್ಲಿ ಪಯಣಿಸಬಹುದು ಎನ್ನಲಾಗಿತ್ತು. ಟೋಕನ್ ವ್ಯವಸ್ಥೆಯನ್ನು ಸ್ಥಗಿತಗೊಳಿಸಲಾಗಿದ್ದ ಕಾರಣ ಕಾರ್ಡ್ ಬಳಸದ ಅನೇಕ ಪ್ರಯಾಣಿಕರಿಗೆ ಅನಾನುಕೂಲವಾಗಿತ್ತು. ಆದರೆ, ಇದೀಗ ಟೋಕನ್ ಖರೀದಿಸಿ ಪ್ರಯಾಣ ಮಾಡಬಹುದು ಎಂದು ಹೇಳಿರುವ ಕಾರಣ ಮೆಟ್ರೋ ರೈಲು ನಿಲ್ದಾಣದತ್ತ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವುದು ಕಂಡುಬಂದಿದೆ.
ಇದನ್ನೂ ಓದಿ:
Namma Metro ಮೆಟ್ರೋ ಪ್ರಯಾಣಿಕರ ಗಮನಕ್ಕೆ.. ಮೆಟ್ರೋ ರೈಲಿನಲ್ಲಿ ಶೀಘ್ರವೇ ಟೋಕನ್ ವ್ಯವಸ್ಥೆ ಶುರು
Namma Metro: ಕೋವಿಡ್ ವೀಕೆಂಡ್ ಕರ್ಫ್ಯೂ; ಶುಕ್ರವಾರ ಸಂಜೆ 6 ಗಂಟೆಯಿಂದಲೇ ನಮ್ಮ ಮೆಟ್ರೋ ರೈಲು ಸ್ಥಗಿತ