ಚಿಕ್ಕಬಳ್ಳಾಪುರ: ಕಳೆದ ಎರಡು ತಿಂಗಳಿಂದ ಕೊರೊನಾ ಸೋಂಕಿನ ಭೀತಿಯಲ್ಲೆ ಬದುಕುತ್ತಿದ್ದ ಜನ, ಮನೆಯಿಂದ ಆಚೆ ಕಾಲಿಡಲು ಆಗದೆ, ಮನೆಯಲ್ಲಿ ಇದ್ದು ಬೇಸರಗೊಂಡಿದ್ದರು. ಆದರೆ ಈಗ ಲಾಕ್ಡೌನ್ ಮುಕ್ತಾಯಗೊಂಡಿದ್ದು, ಹಲವು ಪ್ರವಾಸಿ ತಾಣಗಳು ಕೂಡ ಓಪನ್ ಆಗಿವೆ. ಅದರಂತೆ ವಿಶ್ವವಿಖ್ಯಾತ ನಂದಿಗಿರಿಧಾಮ ಕೂಡ ಸಂಪೂರ್ಣವಾಗಿ ಓಪನ್ ಆಗಿದೆ. ಈ ವಿಷಯ ತಿಳಿಯುತ್ತಿದ್ದಂತೆ ಜನ ಮುಗಿಬಿದ್ದು ನಂದಿಗಿರಿಧಾಮದತ್ತ ಆಗಮಿಸಿ ಪ್ರಕೃತಿ ಸೌಂದರ್ಯದಲ್ಲಿ ಮೈಮರೆಯುತ್ತಿದ್ದಾರೆ. ಅದರಲ್ಲೂ ವಿಕೆಂಡ್ ಆಗಿರುವುದರಿಂದ ನಂದಿಗಿರಿಧಾಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದು, ನಂದಿಗಿರಿಧಾಮದ ರಸ್ತೆಗಳಲ್ಲಿ ಟ್ರಾಫೀಕ್ ಜಾಮ್ ಆಗಿದೆ.ಇನ್ನು ಪ್ರವಾಸಿಗರು ಸಮರ್ಪಕ ಮಾಸ್ಕ್ ಧರಿಸಿದೆ, ದೈಹಿಕ ಅಂತರ ಕಾಪಾಡದೆ ಕೊವಿಡ್ ನಿಯಮವನ್ನು ಗಾಳಿಗೆ ತೂರಿದ್ದು, ಪ್ರವಾಸಿಗರನ್ನು ನಿಯಂತ್ರಿಸಲು ಪೊಲೀಸರು ಹಾಗೂ ಸಿಬ್ಬಂದಿಗಳು ಹರಸಾಹಸ ಪಡುವಂತಾಗಿದೆ.
ಚಿಕ್ಕಬಳ್ಳಾಪುರ ತಾಲೂಕಿನ ನಂದಿಗಿರಿಧಾಮದಲ್ಲಿ ಪ್ರಕೃತಿ ಪ್ರೀಯರಿಗೆ ಸ್ವರ್ಗವೇ ಧರೆಗಿಳಿದ ಅನುಭವವಾಗುತ್ತಿದೆ. ಕೊರೊನಾ ಎರಡನೇ ಅಲೆಯ ನಂತರ ನಂದಿಗಿರಿಧಾಮ ಇದೆ ಮೊದಲ ಬಾರಿಗೆ ಸಂಪೂರ್ಣವಾಗಿ ಓಪನ್ ಆಗಿದೆ. ಇದರಿಂದ ಬೆಳಿಗ್ಗೆ ಆರು ಗಂಟೆಯಿಂದಲೇ ಜನ ಮುಗಿಬಿದ್ದು ಗಿರಿಧಾಮದತ್ತ ಆಗಮಿಸುತ್ತಿದ್ದಾರೆ. ಆದರೆ ಮೂರನೇ ಅಲೆಯ ಭೀತಿಯನ್ನು ಮರೆತು ಇಲ್ಲಿ ಓಡಾಡುತ್ತಿರುವುದು ಮತ್ತು ಅವರನ್ನು ಮಾಸ್ಕ್ ಹಾಕುವಂತೆ ತಿಳಿಸುವುದು ಸ್ವಲ್ಪ ಕಷ್ಟವಾಗಿದೆ ಎಂದು ನಂದಿಗಿರಿಧಾಮ ಸಿಬ್ಬಂದಿ ವೇಣು ತಿಳಿಸಿದ್ದಾರೆ.
ನಂದಿಗಿರಿಧಾಮ ಪ್ರವಾಸಿಗರ ಪ್ರವೇಶಕ್ಕೆ ಮುಕ್ತ ಅವಕಾಶ ಇರುವುದನ್ನು ಅರಿತ ಬೆಂಗಳೂರಿನ ಜನ, ಬೆಳಂಬೇಳಿಗ್ಗೆ ಕಾರುಗಳಲ್ಲಿ, ಬೈಕ್ಗಳಲ್ಲಿ ಗಿರಿಧಾಮಕ್ಕೆ ಆಗಮಿಸುತ್ತಿದ್ದಾರೆ. ಇದರಿಂದ ಇಲ್ಲಿ ಟ್ರಾಫಿಕ್ ಜಾಮ್ ಆಗಿದ್ದು, ಚೆಕ್ ಪೋಸ್ಟ್ನಲ್ಲಿ ಪ್ರತಿಯೊಂದು ಬೈಕ್ ಕಾರುಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ. ಮಾಸ್ಕ್ ಧರಿಸಿದ್ದಾರಾ, ಕಾರು ಬೈಕ್ಗೆ ದಾಖಲೆಗಳು ಇವೆಯಾ ಎಂಬುವುದನ್ನು ನೋಡಿ, ಸಂಚಾರಿ ನಿಯಮ ಉಲ್ಲಂಘಿಸಿದವರಿಗೆ ಮುಲಾಜಿಲ್ಲದೆ ದಂಡ ವಿಧಿಸಲಾಗುತ್ತಿದೆ ಎಂದು ಚಿಕ್ಕಬಳ್ಳಾಪುರ ಸಂಚಾರಿ ಠಾಣೆಯ ಪಿಎಸ್ಐ ವೇಣುಗೋಪಾಲ ಹೇಳಿದ್ದಾರೆ.
ದೊಡ್ಡಬಳ್ಳಾಪುರ ಮೂಲದ ಪವನ್ ಎನ್ನುವ ವ್ಯಕ್ತಿ ಚಿಕ್ಕಬಳ್ಳಾಪುರದ ನಂದಿಗಿರಿಧಾಮಕ್ಕೆ ತನ್ನ ಬೈಕ್ನಲ್ಲಿ ರೈಡ್ಗಾಗಿ ಬಂದಿದ್ದು, ಗಿರಿಧಾಮದ ಅಂಕು ಡೊಂಕಿನ ರಸ್ತೆಯಲ್ಲಿ ಅತಿ ವೇಗವಾಗಿ ಬೈಕ್ ಚಲಿಸುತ್ತಿದ್ದಾಗ ಬೈಕ್ ನಿಯಂತ್ರಣ ತಪ್ಪಿ, ತನ್ನ ಎಡಗಾಲನ್ನು ಮುರಿದುಕೊಂಡ ಪ್ರಕರಣವು ನಡೆಯಿತು. ಹೀಗಾಗಿ ಗಿರಿಧಾಮ ನೋಡುವ ಅಬ್ಬರದಲ್ಲಿ ವೇಗವಾಗಿ ಚಲಿಸುವುದು, ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಪಾಡಿಕೊಳ್ಳದೇ ಇರುವುದು ಸರಿಯಲ್ಲ. ಮೂರನೇ ಅಲೆಯ ಅಪಾಯದ ಬಗ್ಗೆ ಪ್ರತಿಯೊಬ್ಬರು ಮುನ್ನೆಚ್ಚರಿಕೆ ವಹಿಸಬೇಕು.
ಇದನ್ನೂ ಓದಿ:
ನಂದಿಗಿರಿಧಾಮದ ಪ್ರಕೃತಿ ಸೌಂದರ್ಯ ಸವಿಯಲು ಬರೋ ಸವಾರರ ಬಳಿ ದುಪ್ಪಟ್ಟು ಹಣ ವಸೂಲಿ, ಗುತ್ತಿಗೆದಾರನ ಆಟಟೋಪಕ್ಕೆ ಇಲ್ವಾ ಬ್ರೇಕ್?
ಕಪ್ಪತ್ತಗುಡ್ಡ ಸೆರಗಿನಲ್ಲಿ ರೋಮಾಂಚನಕಾರಿ ಅನುಭವ ನೀಡುವ ಜಿಪ್ ಲೈನ್; ಮನಸೋತ ಪ್ರವಾಸಿಗರು