ಮತ್ತೆ ಏರಿಕೆಯಾಗುತ್ತಾ ನಂದಿನಿ ಹಾಲಿನ ದರ? ಕೆಎಂಎಫ್​ ಅಧ್ಯಕ್ಷ ಹೇಳಿದ್ದಿಷ್ಟು

| Updated By: ವಿವೇಕ ಬಿರಾದಾರ

Updated on: Dec 04, 2024 | 3:00 PM

ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ಅವರು ನಂದಿನಿ ಹಾಲಿನ ದರ ಏರಿಕೆ ಬಗ್ಗೆ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ದೆಹಲಿಯಲ್ಲಿ ನಂದಿನಿ ಹಾಲಿನ ಮಾರಾಟ ಯಶಸ್ವಿಯಾಗಿ ನಡೆಯುತ್ತಿದೆ ಮತ್ತು ಭವಿಷ್ಯದಲ್ಲಿ ಇನ್ನಷ್ಟು ವಿಸ್ತರಣೆಗೆ ಯೋಜನೆ ಇದೆ. ಅಮುಲ್ ಮತ್ತು ನಂದಿನಿ ವಿಲೀನದ ವದಂತಿಯನ್ನು ಅವರು ನಿರಾಕರಿಸಿದ್ದಾರೆ.

ಮತ್ತೆ ಏರಿಕೆಯಾಗುತ್ತಾ ನಂದಿನಿ ಹಾಲಿನ ದರ? ಕೆಎಂಎಫ್​ ಅಧ್ಯಕ್ಷ ಹೇಳಿದ್ದಿಷ್ಟು
ಭೀಮಾ ನಾಯ್ಕ್, ಕೆಎಂಎಫ್​​
Follow us on

ಬೆಂಗಳೂರು, ಡಿಸೆಂಬರ್​ 04: ಕೆಲ ದಿನಗಳ ಹಿಂದೆ ಮುಖ್ಯಮಂತ್ರಿಗಳು ರಾಮನಗರದಲ್ಲಿ ನಡೆದ ವೇದಿಕೆ ಕಾರ್ಯಕ್ರಮದ ಭಾಷಣದಲ್ಲಿ ನಂದಿನಿ ಹಾಲಿನ ದರ ಏರಿಕೆ ವಿಚಾರವಾಗಿ ಎಲ್ಲ ಅಧಿಕಾರಿಗಳ ಜೊತೆ ಚರ್ಚಿಸಿ ತೀರ್ಮಾನಿಸುತ್ತೇವೆ ಎಂದಿದ್ದರು. ಆದರೆ, ನಂದಿನಿ ಹಾಲಿನ ದರ ಏರಿಕೆ ಬಗ್ಗೆ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಕೆಎಂಎಫ್​ (KMF) ಅಧ್ಯಕ್ಷ ಭೀಮಾ ನಾಯ್ಕ್ (Bhima Naik)​ ಹೇಳಿದರು.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸದ್ಯಕ್ಕೆ ಹಾಲಿನ ದರ ಏರಿಕೆ ಬಗ್ಗೆ ಮಾಹಿತಿ ಇಲ್ಲ. ಆದರೆ ನಂದಿನಿ ಹಾಲಿನ ದರ ಏರಿಕೆಗೆ ರಾಜ್ಯದ ರೈತರು ಬೇಡಿಕೆ ಇಟ್ಟಿದ್ದಾರೆ. ಕೆಎಂಎಫ್​ ವ್ಯವಸ್ಥಾಪಕ ನಿರ್ದೇಶಕರ ವರ್ಗಾವಣೆ ಆಡಳಿತಾತ್ಮಕ ತೀರ್ಮಾನ ಅಷ್ಟೇ ಎಂದು ತಿಳಿಸಿದರು.

ನವೆಂಬರ್ 21ರಂದು ದೆಹಲಿಯಲ್ಲಿ ನಂದಿನಿ ಉತ್ಪನ್ನಗಳ ಮಾರಾಟಕ್ಕೆ ಚಾಲನೆ ನೀಡಲಾಗಿತ್ತು. ಅಲ್ಲಿ, ನಿತ್ಯ 5 ರಿಂದ 6 ಸಾವಿರ ಲೀಟರ್​​ ನಂದಿನಿ ಹಾಲು ಮಾರಾಟವಾಗುತ್ತಿದೆ. ದೆಹಲಿಯಲ್ಲಿ ನಂದಿನಿ ಹಾಲು ಮಾರಾಟ ಮಾಡುವುದು ನಮ್ಮ ಕನಸು ಇತ್ತು. ಮುಂದಿನ ತಿಂಗಳ ವೇಳೆಗೆ 1 ಲಕ್ಷ ಲೀಟರ್ ಹಾಲು ಮಾರಾಟ ಮಾಡುವ ನಿರೀಕ್ಷೆ ಇದೆ ಎಂದರು.

ಇದನ್ನೂ ಓದಿ: ಫೆಂಗಲ್​ ಎಫೆಕ್ಟ್: 2-3 ದಿನಗಳಲ್ಲಿ ಕೆಎಂಎಫ್​​​ ಹಾಲು ಉತ್ಪಾದನೆಯಲ್ಲಿ ಗಣನೀಯ ಇಳಿಕೆ

ಬೇರೆ ಬ್ರ್ಯಾಂಡ್​ ಉತ್ಪನ್ನಗಳ ಬಗ್ಗೆ ಮಾತನಾಡುವುದಿಲ್ಲ. ನಮಗೆ ಗ್ರಾಹಕರ ಬೇಡಿಕೆ ಇದೆ, ಅದಕ್ಕೆ ತಕ್ಕಂತೆ ಪೂರೈಕೆ ಮಾಡುತ್ತೇವೆ. ಬ್ಯುಸಿನೆಸ್​ನಲ್ಲಿ ಸ್ಪರ್ಧೆ ಇರುತ್ತದೆ. ಅವೆಲ್ಲವನ್ನೂ ಎದುರಿಸಿ ಯಶಸ್ವಿ ಆಗುತ್ತೇವೆ. ಡಿಸೆಂಬರ್​ 9ರಂದು ನಾನು (ಭೀಮಾ ನಾಯ್ಕ್​), ಕೆಎಂಎಫ್​ ವ್ಯವಸ್ಥಾಪಕ ನಿರ್ದೇಶಕರು ದೆಹಲಿಗೆ ಹೋಗುತ್ತೇವೆ ಎಂದು ತಿಳಿಸಿದ್ದಾರೆ.

ಅಮುಲ್ ಮತ್ತು ನಂದಿನಿ ವಿಲೀನ ಆಗಲಿದೆ ಎಂಬ ವದಂತಿ ವಿಚಾರವಾಗಿ ಮಾತನಾಡಿದ ಅವರು, ಆ ರೀತಿಯ ವಿಲೀನ ಮಾಡಲು ಸಾಧ್ಯವೇ ಇಲ್ಲ. ಈ ಹಿಂದೆ ಕೇಂದ್ರ ಸಚಿವ ಅಮಿತ್ ಶಾ ಅವರು ಚುನಾವಣೆ ಸಂದರ್ಭದಲ್ಲಿ ಹೇಳಿದ್ದ ಯಾವುದೋ ಒಂದು ಮಾತಿನ ಹಿನ್ನಲೆಯಲ್ಲಿ ವದಂತಿ ಸೃಷ್ಟಿ ಆಗಿತ್ತು. ಇದೆಲ್ಲವೂ ಒಂದು ವದಂತಿ ಅಷ್ಟೇ. ಆ ರೀತಿಯ ವಿಲೀನ ಮಾಡಲು ಸಾಧ್ಯವೇ ಇಲ್ಲ ಎಂದು ಹೇಳಿದರು.

ವಿಶ್ವಮಟ್ಟದಲ್ಲಿ ನಂದಿನಿ ಹವಾ

ಕೆಲವು ತಿಂಗಳ ಹಿಂದೆ ಅಮೆರಿಕ ಹಾಗೂ ವೆಸ್ಟ್ ಇಂಡೀಸ್​​ನಲ್ಲಿ ನಡೆದಿದ್ದ ಟಿ20 ವಿಶ್ವಕಪ್ ವೇಳೆ ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ತಂಡಗಳ ಪ್ರಾಯೋಜಕತ್ವವನ್ನು ಕೆಎಂಎಫ್​ ವಹಿಸಿತ್ತು. ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ತಂಡಗಳ ಜೆರ್ಸಿ ಮೇಲೆ ಪ್ರಾಯೋಜಕರಾಗಿ ‘ನಂದಿನಿ’ ಬ್ರ್ಯಾಂಡ್ ಹೆಸರು ನಮೂದಿಸಲಾಗಿತ್ತು. ಅಷ್ಟೇ ಅಲ್ಲದೆ, ವಿಶ್ವಕಪ್ ವೇಳೆ ನಂದಿನಿ ಉತ್ಪನ್ನಗಳನ್ನೂ ಪೂರೈಸಲಾಗಿತ್ತು. ಆ ಮೂಲಕ ವಿಶ್ವಮಟ್ಟದಲ್ಲಿ ನಂದಿನಿ ಬ್ರ್ಯಾಂಡ್ ಉತ್ಪನ್ನಗಳು ಗಮನ ಸೆಳೆದಿದ್ದವು.

ವಿಶ್ವಕಪ್ ವೇಳೆ ನಂದಿನಿ ಬ್ರ್ಯಾಂಡ್​ನ ಫ್ರೋಝನ್ ಸಿಹಿತಿಂಡಿಗಳು, ಹಾಲಿನಿಂದ ಕೂಡಿದ ಎನರ್ಜಿ ಡ್ರಿಂಕ್ ನಂದಿನಿ ಸ್ಪ್ಲಾಶ್​ ಅನ್ನು ಕೆಎಂಎಫ್​​ ಅಮೆರಿಕಕ್ಕೆ ಪೂರೈಕೆ ಮಾಡಿತ್ತು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 2:30 pm, Wed, 4 December 24