ಫೆಂಗಲ್ ಎಫೆಕ್ಟ್: 2-3 ದಿನಗಳಲ್ಲಿ ಕೆಎಂಎಫ್ ಹಾಲು ಉತ್ಪಾದನೆಯಲ್ಲಿ ಗಣನೀಯ ಇಳಿಕೆ
ಫೆಂಗಲ್ ಚಂಡಮಾರುತದಿಂದ ಕರ್ನಾಟಕದಲ್ಲಿ ಹಾಲು ಉತ್ಪಾದನೆಗೆ ತೀವ್ರ ಹೊಡೆತ ಬಿದ್ದಿದೆ. ಕಳೆದ 3 ದಿನಗಳಿಂದ ನಂದಿನಿ ಹಾಲು ಉತ್ಪಾದನೆ ೧೦ ಲಕ್ಷ ಲೀಟರ್ ಕಡಿಮೆಯಾಗಿದೆ. ಮಳೆ ಮತ್ತು ಚಳಿಯಿಂದ ಹಸುಗಳು ಸರಿಯಾಗಿ ಹುಲ್ಲು ತಿನ್ನದಿರುವುದು ಇದಕ್ಕೆ ಕಾರಣ. ಆದರೂ, 50 ಮಿಲಿ ಹೆಚ್ಚುವರಿ ಹಾಲಿನ ಪೂರೈಕೆ ಡಿಸೆಂಬರ್ ಅಂತ್ಯದವರೆಗೆ ಮುಂದುವರಿಯಲಿದೆ ಎಂದು ಕೆಎಂಎಫ್ ತಿಳಿಸಿದೆ.
ಬೆಂಗಳೂರು, ಡಿಸೆಂಬರ್ 04: ಫೆಂಗಲ್ ಚಂಡಮಾರುತ (Fengal cyclone) ಕರ್ನಾಟಕದಲ್ಲಿ ಸಾಕಷ್ಟು ಅವಾಂತರ ಸೃಷ್ಟಿಸಿದೆ. ಹಾಲು ಉತ್ಪಾದನೆಗೂ ಫೆಂಗಲ್ ಚಂಡಮಾರುತದ ಎಫೆಕ್ಟ್ ತಟ್ಟಿದೆ. ಕಳೆದ 2 ರಿಂದ 3 ದಿನಗಳಿಂದ ಕರ್ನಾಟಕ ಹಾಲು ಒಕ್ಕೂಟ (KMF) ನಂದಿನಿ ಹಾಲು ಉತ್ಪಾದನೆ 10 ಲಕ್ಷ ಲೀಟರ್ ನಷ್ಟು ಕಡಿಮೆಯಾಗಿದೆ ಎಂದು ಚಿಮುಲ್ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸಗೌಡ ತಿಳಿಸಿದ್ದಾರೆ.
ಈ ಕುರಿತು ಚಿಕ್ಕಬಳ್ಳಾಪುರದಲ್ಲಿ ಟಿವಿ9 ಪ್ರತಿನಿಧಿ ಜೊತೆ ಮಾತನಾಡಿದ ಅವರು, ಮಳೆ ಹಾಗೂ ಚಳಿಯಿಂದ ಹಸುಗಳು ಸರಿಯಾಗಿ ಹುಲ್ಲು ತಿನ್ನುತ್ತಿಲ್ಲ. ಇದರಿಂದ ರಾಜ್ಯದ 16 ಒಕ್ಕೂಟಗಳಲ್ಲಿ ಹಾಲಿನ ಉತ್ಪಾದನೆ ಕಡಿಮೆಯಾಗಿದೆ. ಇನ್ನು, ಚಿಕ್ಕಬಳ್ಳಾಪುರ ಹಾಲು ಒಕ್ಕೂಟದಲ್ಲಿ ಪ್ರತಿದಿನ 50 ಸಾವಿರ ಲೀಟರ್ ಹಾಲು ಉತ್ಪಾದನೆ ಕಡಿಮೆಯಾಗಿದೆ. ಹಸುಗಳು ಸರಿಯಾಗಿ ಹುಲ್ಲು ತಿನ್ನದೆ ಇರುವುದೇ ಹಾಲು ಉತ್ಪಾದನೆ ಕಡಿಮೆಯಾಗಲು ಪ್ರಮುಖ ಕಾರಣವಾಗಿದೆ. ಬಿಸಿಲು ಬಂದರೆ ಮತ್ತೆ ಹಾಲಿನ ಉತ್ಪಾದನೆ ಹೆಚ್ಚಳವಾಗಲಿದೆ ಎಂದು ಹೇಳಿದರು.
50 ಮಿಲಿ ಹಾಲು ಪೂರೈಕೆ ಮುಂದುವರಿಕೆ
ಪ್ರತಿ ಪ್ಯಾಕೆಟ್ನಲ್ಲಿ ಹೆಚ್ಚುವರಿ 50 ಮಿಲಿ ಹಾಲು ಪೂರೈಕೆಯನ್ನು ಡಿಸೆಂಬರ್ ಅಂತ್ಯದವರೆಗೆ ಮುಂದುವರೆಸಲಾಗುತ್ತದ ಎಂದು ಕೆಎಂಎಫ್ ತಿಳಿಸಿದೆ. ಕೆಎಂಎಫ್ ಒಂದು ಲೀಟರ್ ನಂದಿನಿ ಹಾಲಿನ ಪ್ಯಾಕೆಟ್ಗೆ 50 ಎಂಎಲ್ ಹಾಲು ಹೆಚ್ಚುವರಿಯಾಗಿ ಸೇರಿಸಿ ದರವನ್ನು 2 ರೂಪಾಯಿ ಹೆಚ್ಚಳ ಮಾಡಿತ್ತು. ಇದನ್ನೇ ಈಗ ಮುಂದುವರೆಸಲಾಗುತ್ತದೆ ಎಂದು ತಿಳಿಸಿದೆ.
ಇದನ್ನೂ ಓದಿ: ಕೆಎಂಎಫ್ ನಂದಿನಿ ತುಪ್ಪಕ್ಕೆ ಭಾರಿ ಡಿಮ್ಯಾಂಡ್; ಮತ್ತಷ್ಟು ತುಪ್ಪ ಪೂರೈಸುವಂತೆ ಟಿಟಿಡಿ ಮನವಿ
ಪ್ರತಿದಿನ, 25-30 ಲಕ್ಷ ಲೀಟರ್ ಹಾಲನ್ನು ಪುಡಿ ಮತ್ತು ಬೆಣ್ಣೆಯಾಗಿ ಮತ್ತು ಸುಮಾರು 1 ಲಕ್ಷ ಲೀಟರ್ ಐಸ್ ಕ್ರೀಮ್ ಆಗಿ ಪರಿವರ್ತಿಸಲಾಗುತ್ತದೆ. ಆದರೆ ಶೀತ ಹವಾಮಾನದ ಕಾರಣ, ಐಸ್ ಕ್ರೀಮ್‌ಗೆ ಹೆಚ್ಚಿನ ಬೇಡಿಕೆಯಿಲ್ಲ. ದೆಹಲಿಯಲ್ಲಿ ದಿನಕ್ಕೆ 10,000-11,000 ಲೀಟರ್ ಹಾಲು ಮಾರಾಟವಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರಿಗೆ ಅತಿ ದೊಡ್ಡ ಪೂರೈಕೆದಾರರಲ್ಲಿ ಒಂದಾಗಿರುವ ಮಂಡ್ಯ ಹಾಲು ಒಕ್ಕೂಟವು ದೆಹಲಿಗೂ ಸರಬರಾಜು ಮಾಡುತ್ತಿದೆ. ಹಾಲು ದೆಹಲಿಗೆ 2 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ರಸ್ತೆಯ ಮೂಲಕ ಹೋಗುತ್ತದೆ. ಅಲ್ಲಿ ಅದನ್ನು ಪ್ಯಾಕ್ ಮಾಡಿ ಮಾರಾಟ ಮಾಡುವ ಮೊದಲು 4 ಡಿಗ್ರಿ ಸೆಲ್ಸಿಯಸ್‌ನಲ್ಲಿ ಸಂಸ್ಕರಿಸಲಾಗುತ್ತದೆ ಎಂದು ತಿಳಿಸಿದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ