ನವದೆಹಲಿ, ಜ.25: ಲೋಕಸಭಾ ಚುನಾವಣೆ (Lok Sabha Elections) ಸಮೀಪಿಸುತ್ತಿದ್ದಂತೆ ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ ನಡೆಯಲು ಆರಂಭವಾಗಿದೆ. ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ (Jagadish Shettar) ಅವರು ಮತ್ತೆ ಬಿಜೆಪಿ ಸೇರ್ಪಡೆಯಾಗಲು ನಿರ್ಧರಿಸಿದ್ದಾರೆ. ದೆಹಲಿಯಲ್ಲಿ ಇಂದು ಅಮಿತ್ ಶಾ (Amit Shah) ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದು, ಬಿಜೆಪಿ ಸೇರ್ಪಡೆಯಾಗುವುದು ಖಚಿತವಾಗಿದೆ.
ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹಾಗೂ ಜಗದೀಶ್ ಶೆಟ್ಟರ್ ಅವರು ದೆಹಲಿಯಲ್ಲಿನ ಅಮಿತ್ ಶಾ ನಿವಾಸದಲ್ಲಿ ಇಂದು ಅಮಿತ್ ಶಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಮಾತುಕತೆ ವೇಳೆ ಶೆಟ್ಟರ್ ಮನವೋಲಿಸುವಲ್ಲಿ ಅಮಿತ್ ಶಾ ಯಶಸ್ವಿಯಾಗಿದ್ದು, ಪಕ್ಷಕ್ಕೆ ಮರಳಲು ಶೆಟ್ಟರ್ ಒಪ್ಪಿಗೆ ಸೂಚಿಸಿದ್ದಾರೆ. ಬಿಜೆಪಿ ಸೇರ್ಪಡೆ ಬಗ್ಗೆ ಶೆಟ್ಟರ್ ಅಧಿಕೃತ ಘೋಷಣೆಯೊಂದೇ ಬಾಕಿ ಇದೆ ಎಂದು ಬಿಜೆಪಿ ಉನ್ನತ ಮೂಲಗಳಿಂದ ತಿಳಿದುಬಂದಿದೆ.
ಇದನ್ನೂ ಓದಿ: ಬಿಜೆಪಿಗೆ ವಾಪಸ್ ಆಗುವಂತೆ ಜಗದೀಶ್ ಶೆಟ್ಟರ್ಗೆ ಬಂಪರ್ ಆಫರ್: ಏನದು ಆಫರ್? ಇದಕ್ಕೆ ಮಾಜಿ ಸಿಎಂ ಓಕೆ ಅಂತಾರಾ?
ಜಗದೀಶ್ ಶೆಟ್ಟರ್ ಅವರನ್ನು ಪಕ್ಷಕ್ಕೆ ಮತ್ತೆ ಕರೆತರುವ ವಿಚಾರವಾಗಿ ಅಮಿತ್ ಶಾ ಜೊತೆ ಮಾತುಕತೆ ನಡೆಸಿದ ನಂತರ ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿಯಾಗಿದ್ದಾರೆ. ದೆಹಲಿಯ ಬಿಜೆಪಿ ಕಚೇರಿಯಲ್ಲಿ ಜೆ.ಪಿ.ನಡ್ಡಾರನ್ನು ಭೇಟಿಯಾಗಿ ಚರ್ಚೆ ನಡೆಸುತ್ತಿದ್ದಾರೆ.
ಜಗದೀಶ್ ಶೆಟ್ಟರ್ ಅವರು ಇಂದೇ ಬಿಜೆಪಿ ಸೇರ್ಪಡೆಯಾಗುವ ಸಾಧ್ಯತೆ ಇದೆ. ನಾಯಕರೊಂದಿಗಿನ ಮಾತುಕತೆ ನಂತರ ದೆಹಲಿಯಲ್ಲೇ ವರಿಷ್ಠರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾಗುವ ಸಾಧ್ಯತೆ ಇದೆ. ಅಲ್ಲದೆ, ದೆಹಲಿಯಿಂದಲೇ ಫ್ಯಾಕ್ಸ್ ಮೂಲಕ ಕಾಂಗ್ರೆಸ್ಗೆ ಗುಡ್ಬೈ ಹೇಳಲಿದ್ದು, ನಂತರ ಬೆಂಗಳೂರಿಗೆ ಬಂದು ಖುದ್ದಾಗಿ ರಾಜೀನಾಮೆ ನೀಡುವ ಸಾಧ್ಯತೆ ಇದೆ.
ಜಗದೀಶ್ ಶೆಟ್ಟರ್ ವಿಧಾನ ಪರಿಷತ್ ಸದಸ್ಯರಾಗಿರುವ ಹಿನ್ನೆಲೆ ವಿಧಾನ ಪರಿಷತ್ ಸಭಾಪತಿ ಹೊರಟ್ಟಿ ಅವರಿಗೆ ಶೆಟ್ಟರ್ ದೂರವಾಣಿ ಕರೆ ಮಾಡಿ ರಾಜೀನಾಮೆ ನೀಡುವ ಬಗ್ಗೆ ಮಾತುಕತೆ ನಡೆಸಿದ್ದಾರೆ. ಈ ವೇಳೆ ಇ-ಮೇಲ್ ಮೂಲಕ ಬೇಡ ನೇರವಾಗಿ ಬಂದು ರಾಜೀನಾಮೆ ನೀಡುವಂತೆ ಹೊರಟ್ಟಿ ಸೂಚಿಸಿದ್ದಾರೆ ಎನ್ನಲಾಗಿದೆ.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:47 pm, Thu, 25 January 24