ಉದ್ಯಮಿ ಸೇರಿ 6 ಜನ ಅಪ್ಪಚ್ಚಿ: ಕಾರಿನ ಮೇಲೆ ಲಾರಿ ಬಿದ್ದಿದ್ದೇಗೆ? ಘಟನೆಗೆ ಕಾರಣವೇನು?

| Updated By: ಗಂಗಾಧರ​ ಬ. ಸಾಬೋಜಿ

Updated on: Dec 21, 2024 | 8:27 PM

ನೆಲಮಂಗಲದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಒಂದು ಕುಟುಂಬದ ಆರು ಜನರು ಸಾವನ್ನಪ್ಪಿದ್ದಾರೆ. ತಂದೆಗೆ ಅನಾರೋಗ್ಯದ ಕಾರಣ ವಿಜಯಪುರಕ್ಕೆ ತೆರಳುತ್ತಿದ್ದ ವೇಳೆ ಕಂಟೇನರ್‌ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕಾರಿನ ಮೇಲೆ ಲಾರಿ ಬಿದ್ದಿದ್ದೇಗೆ? ಘಟನೆಗೆ ಕಾರಣವೇನು? ಇಲ್ಲಿದೆ ಮಾಹಿತಿ.

ಉದ್ಯಮಿ ಸೇರಿ 6 ಜನ ಅಪ್ಪಚ್ಚಿ: ಕಾರಿನ ಮೇಲೆ ಲಾರಿ ಬಿದ್ದಿದ್ದೇಗೆ? ಘಟನೆಗೆ ಕಾರಣವೇನು?
ಉದ್ಯಮಿ ಸೇರಿ 6 ಜನ ಅಪ್ಪಚ್ಚಿ: ಕಾರಿನ ಮೇಲೆ ಲಾರಿ ಬಿದ್ದಿದ್ದೇಗೆ? ಘಟನೆಗೆ ಕಾರಣವೇನು?
Follow us on

ನೆಲಮಂಗಲ, ಡಿಸೆಂಬರ್​ 21: ವಿಧಿಯಾಟವೇ ಹಾಗೆ, ಈಗಿದ್ದ ಜೀವ ಇನ್ನೊಂದು ಕ್ಷಣದಲ್ಲಿ ಇರುತ್ತೆ ಅಂತಾ ಹೇಳುವುದಕ್ಕೆ ಆಗಲ್ಲ. ಇದೇ ರೀತಿಯ ಘಟನೆಯೊಂದು ಬೆಂಗಳೂರಿನ ನೆಲಮಂಗಲದಲ್ಲಿ ನಡೆದಿದೆ. ಹೆದ್ದಾರಿಯಲ್ಲಿ ಯಮಸ್ವರೂಪಿಯಾಗಿ ಬಂದ ಕಂಟೇನರ್​​ವೊಂದು ಇಡೀ ಕುಟುಂಬದ 6 ಜೀವಗಳನ್ನು ಬಲಿ (death) ಪಡೆದಿರುವಂತಹ ಘಟನೆ ನಡೆದಿದೆ. ತಂದೆಗೆ ಹುಷಾರಿಲ್ಲ ಅಂತ ಕುಟುಂಬ ಸಮೇತ ಊರಿಗೆ ಹೊರಟಿದ್ದವರು ಮಸಣ ಸೇರಿದ್ದಾರೆ.

ಪತಿ ಚಂದ್ರಮ್​ ಏಗಪ್ಪಗೋಳ್(46), ಪತ್ನಿ ಧೋರಾಬಾಯಿ(40), ಪುತ್ರ ಗ್ಯಾನ್‌(16), ಪುತ್ರಿಯರಾದ ದೀಕ್ಷಾ(10), ಆರ್ಯ(6) ಚಂದ್ರಮ್​ ಏಗಪ್ಪಗೋಳ್ ಸಹೋದರನ ಪತ್ನಿ ವಿಜಯಲಕ್ಷ್ಮೀ(35) ಮೃತಪಟ್ಟವರು.

ಕಾರಿನಲ್ಲೇ ಉಸಿರು ಚೆಲ್ಲಿದ 6 ಜೀವಗಳು

ಮಹಾರಾಷ್ಟ್ರ ರಾಜ್ಯದ ಸಾಂಗ್ಲಿ ಜಿಲ್ಲೆಯ ಜತ್ ತಾಲೂಕಿನ ಮೊರಬಗಿ ಮೂಲದವರಾದ ಚಂದ್ರಮ್ ಬೆಂಗಳೂರಿನ ಹೆಚ್‌ಎಸ್‌ಆರ್‌ ಲೇಔಟ್‌ನಲ್ಲಿ ವಾಸವಿದ್ದರು. ಐಎಎಸ್​​ಟಿ ಸಾಫ್ಟ್‌ವೇರ್‌ ಕಂಪನಿ ಮಾಲೀಕರಾಗಿದ್ದರು. ತಂದೆಗೆ ಹುಷಾರಿಲ್ಲ ಅಂತ ಕುಟುಂಬ ಸಮೇತ ವಿಜಯಪುರಕ್ಕೆ ಹೊರಟಿದ್ದರು.

ಇದನ್ನೂ ಓದಿ: ಬೆಂಗಳೂರು: ಏಕಾಏಕಿ ಕಾರಿನ ಮೇಲೆ ಲಾರಿ ಪಲ್ಟಿ: 6 ಜನ ಅಪ್ಪಚ್ಚಿ!

ಬೆಂಗಳೂರಿನ ನೆಲಮಂಗಲ ತಾಲೂಕಿನ ತಾಳೆಕೆರೆ ಬಳಿ ಪಕ್ಕದ ರಸ್ತೆಯಿಂದ ಏಕಾಏಕಿ ಮೇಲೆರಗಿ ಬಂದ ಕಂಟೇನರ್‌ ಚಂದ್ರಮ್ ಕುಟುಂಬ ಪ್ರಯಾಣಿಸ್ತಿದ್ದ ಕಾರಿನ ಮೇಲೆ ಬಿದ್ದಿತ್ತು. ಲಾರಿ ಬಿದ್ದ ರಭಸಕ್ಕೆ ಕಾರು ಅಪ್ಪಚ್ಚಿಯಾಗಿದ್ದು, ಕಾರಿನಲ್ಲಿದ್ದ 6 ಜೀವಗಳು ಕ್ಷಣಮಾತ್ರದಲ್ಲಿ ಉಸಿರು ಚೆಲ್ಲಿವೆ.

ಲಾರಿ ಬಿದ್ದಿದ್ದೇಗೆ?

ಇಂದು ಬೆಳಿಗ್ಗೆ 11 ಗಂಟೆಗೆ ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಭೀಕರ ಸರಣಿ ರಸ್ತೆ ಅಪಘಾತ ಸಂಭವಿಸಿದೆ. ತುಮಕೂರು ಕಡೆಯಿಂದ ವೇಗವಾಗಿ ಬಂದ ಕಂಟೇನರ್ ಡಿವೈಡರ್​ಗೆ ಡಿಕ್ಕಿಹೊಡೆದ ರಭಸಕ್ಕೆ ಆಪೋಸಿಟ್ ರೋಡ್​ಗೆ ಉರುಳಿದೆ. ಇದೇ ಸಂದರ್ಭದಲ್ಲಿ ಬೆಂಗಳೂರಿನಿಂದ ವಿಜಯಪುರಕ್ಕೆ ಕುಟುಂಬ ಸಮೇತ ತೆರಳುತ್ತಿದ್ದ ಕಾರಿನ ಮೇಲೆ ಕಂಟೇನರ್‌ ಉರಳಿದ್ದು, ಸ್ಥಳದಲ್ಲೇ 6 ಜನ ದಾರುಣ ಸಾವನ್ನಪ್ಪಿದ್ದಾರೆ.

ತಕ್ಷಣ ಎಚ್ಚೆತ್ತ ಪೊಲೀಸರು ಸ್ಥಳೀಯರ ಸಹಾಯವನ್ನ ಪಡೆದುಕೊಂಡು ಮೂರು ಕ್ರೇನ್​ಗಳ ಸಹಾಯದಿಂದ ಕಂಟೇನರ್‌ ಎತ್ತಿದ್ದಾರೆ. ಇನ್ನು ಕಂಟೇನರ್​ ಡ್ರೈವರ್ ಕೂಡ ಗಂಭೀರ ಗಾಯಗೊಂಡಿದ್ದು, ಆತನನ್ನು ಕೂಡ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಐಎಎಸ್​ಟಿ ಸಾಫ್ಟ್​ವೇರ್ ಸಲ್ಯೂಷನ್ಸ್​​ನ ಸಿಇಒ ಆಗಿದ್ದ ಚಂದ್ರಮ್

ಐಎಎಸ್​ಟಿ ಸಾಫ್ಟ್​ವೇರ್ ಸಲ್ಯೂಷನ್ಸ್​​ನ ಸಿಇಒ ಆಗಿದ್ದ ಚಂದ್ರಮ್, ಆಟೋಮೋಟಿವ್, ಎಂಬೆಡೆಡ್ ಸಾಫ್ಟ್​ವೇರ್ ಡೆವಲ್ಪಮೆಂಟ್​ ಕ್ಷೇತ್ರದಲ್ಲಿ 18 ವರ್ಷಗಳಿಂದ ತೊಡಗಿಸಿಕೊಂಡಿದ್ದರು. ಎಲೆಕ್ಟ್ರಿಕ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್​​ನಲ್ಲಿ ಸೂರತ್​ಕಲ್​ನ ನ್ಯಾಷನಲ್ ಇನ್ಸ್​ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಪದವಿ ಪಡೆದುಕೊಂಡಿದ್ದರು. ಹೊಸ ಆಫೀಸ್ ಓಪನ್ ಮಾಡಲು ನಿರ್ಧರಿಸಿದ್ದರು. ಹೊಸ ಆಫೀಸ್ ಕೆಲಸವು ನಡೆಯುತ್ತಿತ್ತು. ನಿನ್ನೆ ರಾತ್ರಿ ಸಿಬ್ಬಂದಿಗಳ ಜೊತೆ ಮೀಟಿಂಗ್ ಮಾಡಿದ್ದರು. ಕೆಲ ದಿನಗಳು ಬರುವುದಿಲ್ಲ ಎಂದು ಹೇಳಿ ಹೋಗಿದ್ದರು.

ಇದನ್ನೂ ಓದಿ: ಡಿವೈಡರ್​ಗೆ ಗುದ್ದಿ ಕಾರಿನ ಮೇಲೆ ಕಂಟೇನರ್​ ಬೀಳುತ್ತಿರುವ ಭಯಾನಕ ದೃಶ್ಯ ಇಲ್ಲಿದೆ

2018 ರಲ್ಲಿ ಶುರುವಾಗಿದ್ದ ಐಎಎಸ್ಟಿ ಸಾಫ್ಟ್‌ವೇರ್ ಸಲ್ಯೂಷನ್ಸ್ ಕಂಪನಿಯಲ್ಲಿ ಸುಮಾರು 100ಕ್ಕೂ ಹೆಚ್ಚು ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದರು. ಚಂದ್ರಮ್ ಅಪಘಾತದಲ್ಲಿ ಸಾವನ್ನಪ್ಪಿದ ಸುದ್ದಿ ತಿಳಿದು ಸಿಬ್ಬಂದಿಗಳು ಅರ್ಧಕ್ಕೆ ಕೆಲಸ ನಿಲ್ಲಿಸಿದ್ದಾರೆ. ಲಾಗ್ ಔಟ್ ಮಾಡಿ ಬೇಸರದಿಂದ ಮನೆಗೆ ಹೋಗಿದ್ದಾರೆ.

ಏನೂ ತಪ್ಪು ಮಾಡದವರಿಗೆ ಯಾಕೆ ಈ ಶಿಕ್ಷೆ: ಶ್ರೀನಿವಾಸ್

ಚಂದ್ರಮ್ ಕಂಪನಿ ಸಿಬ್ಬಂದಿ ಶ್ರೀನಿವಾಸ್​​ ಎಂಬುವವರು ಪ್ರತಿಕ್ರಿಯಿಸಿದ್ದು, ತಂದೆ ಹುಷಾರಿಲ್ಲ ಅಂತ ಕುಟುಂಬ ಸಮೇತ ಊರಿಗೆ ಹೊರಟಿದ್ದರು. ಇವರ ಜೊತೆಗೆ ತಮ್ಮನ ಪತ್ನಿ ಹಾಗೂ ಅವರ ಮಗು ಎಲ್ಲರು ಇದ್ದರು. ಏನೂ ತಪ್ಪೇ ಮಾಡದೆ ತಮ್ಮ ಪಾಡಿಗೆ ಅವರು ಕಾರಿನಲ್ಲಿ ಹೋಗುತ್ತಿದ್ದರು. ದುರ್ದೈವ ಈ ರೀತಿಯಲ್ಲಿ ಸಾವು ಸಂಭವಿಸಿದೆ. ತುಂಬಾ ದುಃಖ ಆಗುತ್ತಿದೆ ಎಂದಿದ್ದಾರೆ.

ಲಾರಿ ಚಾಲಕ ಆರೀಫ್ ಅನ್ಸಾರಿ ಹೇಳಿದ್ದಿಷ್ಟು 

ಲಾರಿ ಚಾಲಕ ಆರೀಫ್ ಅನ್ಸಾರಿ ಟಿವಿನೈಗೆ ಪ್ರತಿಕ್ರಿಯಿಸಿದ್ದು, ದಾಬಸ್ ಪೇಟೆ ಜಿಂದಾಲ್ ಕಂಪನಿಯಿಂದ ಅಲ್ಯುಮಿನಿಯಂ ವಸ್ತುಗಳನ್ನು ತುಂಬಿಕೊಂಡು ಬೆಂಗಳೂರಿನ ಜಿಂದಾಲ್ ಕಂಪನಿಗೆ ಬರುವ ವೇಳೆ ಭೀಕರ ಅಪಘಾತ ಆಗಿದೆ. ಕಂಟೇನರ್ ಮುಂದೆ ಏಕಾಏಕಿ ಬಂದಿದ್ದ ಕಾರನ್ನು ತಪ್ಪಿಸಲು ಹೋಗಿ ನನ್ನ ಕಂಟೇನರ್ ನಿಯಂತ್ರಣ ತಪ್ಪು ಡಿವೈಡರ್ ಹಾರಿ ಮತ್ತೊಂದು ರಸ್ತೆ ನುಗ್ಗಿ ಲಾರಿಗೆ ಡಿಕ್ಕಿ ಆಯಿತು. ಆಗ ಬೆಂಗಳೂರು ಮಾರ್ಗವಾಗಿ ಬರುತ್ತಿದ್ದ ಕಾರಿನ ಮೇಲೆ ಪಲ್ಟಿಯಾಗಿದೆ. ಮತ್ತೆ ನನಗೆ ಏನಾಯಿತು ಗೊತ್ತಿಲ್ಲ, ಆಸ್ಪತ್ರೆಗೆ ಬಂದಾಗ ನನಗೆ ಎಚ್ಚರಿಕೆ ಆಗಿದೆ ಎಂದಿದ್ದಾರೆ.

ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ: ಐಜಿಪಿ ಲಾಬೂರಾಮ್

ಇನ್ನು ಘಟನಾ ಸ್ಥಳಕ್ಕೆ ಭೇಟಿ ಬಳಿಕ ಕೇಂದ್ರವಲಯ ಐಜಿಪಿ ಲಾಬೂರಾಮ್ ಹೇಳಿಕೆ ನೀಡಿದ್ದು, ವೋಲ್ವೋ ಕಾರಿನಲ್ಲಿ ತೆರಳುತ್ತಿದ್ದ 6 ಜನರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಯಾರ ತಪ್ಪು ಅನ್ನುವುದು ತನಿಖೆಯಿಂದ ಗೊತ್ತಾಗಬೇಕಿದೆ. ಘಟನೆ ಬಗ್ಗೆ ತನಿಖೆ ನಡೆಯುತ್ತಿದೆ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.

ವಿಶೇಷ ತನಿಖಾಧಿಕಾರಿಯಾಗಿ ಜಗದೀಶ್ ನೇಮಕ

ಇನ್ನು ನೆಲಮಂಗಲ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿಶೇಷ ತನಿಖಾಧಿಕಾರಿಯಾಗಿ ಜಗದೀಶ್ ನೇಮಕ ಮಾಡಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:19 pm, Sat, 21 December 24