ಕೊರೊನಾ ಹೊಸ ಪ್ರಕರಣಗಳಲ್ಲಿ ಇಳಿಕೆಯಾಗಿದ್ದರೂ ಮರಣ ಪ್ರಮಾಣ ಕಡಿಮೆ ಆಗಿಲ್ಲ; ಕಾರಣವೇನು?

| Updated By: ganapathi bhat

Updated on: Jun 07, 2021 | 7:58 PM

ಕರ್ನಾಟಕದಲ್ಲಿ ಹೊಸ ಕೊರೊನಾ ಪ್ರಕರಣಗಳ ಸಂಖ್ಯೆ ಮತ್ತು ಪಾಸಿಟಿವಿಟಿ ಪ್ರಮಾಣ ಇಳಿಕೆಯಾಗುತ್ತಿದೆ. ಆದರೆ, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರ ಸಂಖ್ಯೆಯಲ್ಲಿ ಅಂತಹಾ ಇಳಿಕೆ ಕಂಡುಬಂದಿಲ್ಲ.

ಕೊರೊನಾ ಹೊಸ ಪ್ರಕರಣಗಳಲ್ಲಿ ಇಳಿಕೆಯಾಗಿದ್ದರೂ ಮರಣ ಪ್ರಮಾಣ ಕಡಿಮೆ ಆಗಿಲ್ಲ; ಕಾರಣವೇನು?
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ಲಾಕ್​ಡೌನ್ ಬಳಿಕ ಕೊರೊನಾ ಸೋಂಕಿತರ ಸಂಖ್ಯೆ ಇಳಿಕೆಯಾಗುತ್ತಿದೆ. ಹೊಸ ಕೊವಿಡ್-19 ಪ್ರಕರಣಗಳು ಪ್ರತಿನಿತ್ಯ ಕಡಿಮೆ ವರದಿಯಾಗುತ್ತಿದೆ. ಬೆಂಗಳೂರಿನಲ್ಲಿ ಲಾಕ್​ಡೌನ್ ಆರಂಭದಲ್ಲಿ ಸುಮಾರು 20 ಸಾವಿರಕ್ಕೂ ಅಧಿಕ ಕೊರೊನಾ ಕಂಡುಬರುತ್ತಿದ್ದವು. ಆದರೆ, ಈಗ ಸುಮಾರು 2 ಸಾವಿರದ ಆಸುಪಾಸಿನಲ್ಲಿ ಪ್ರಕರಣಗಳು ವರದಿಯಾಗುತ್ತಿದೆ. ಹೀಗಿದ್ದರೂ ಕೂಡ ಕೊರೊನಾದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆಯಲ್ಲಿ ಇಳಿಕೆಯಾಗಿಲ್ಲ.

ಬೆಂಗಳೂರಿನಲ್ಲಿ ಕೊವಿಡ್ ಮೊದಲ ಅಲೆ ಅಥವಾ ಕಳೆದ ತಿಂಗಳಿನಲ್ಲಿ ಕೊರೊನಾದಿಂದ ಮರಣಿಸುತ್ತಿದ್ದವರ ಸಂಖ್ಯೆಗಿಂತ ಈಗ ಸಾವನ್ನಪ್ಪುತ್ತಿರುವವರ ಸಂಖ್ಯೆ ಬಹಳ ಅಧಿಕವಾಗಿದೆ. ಇಡೀ ಕರ್ನಾಟಕಕ್ಕೆ ಹೋಲಿಸಿದರೂ ಬೆಂಗಳೂರಿನ ಮರಣ ಪ್ರಮಾಣ ಅಧಿಕವಾಗಿದೆ. ಕರ್ನಾಟಕ ರಾಜ್ಯದಲ್ಲಿ ಕೊರೊನಾ ಮರಣ ಪ್ರಮಾಣ ಶೇಕಡಾ 2.62 ರಷ್ಟು ಇದ್ದರೆ, ಬೆಂಗಳೂರಿನಲ್ಲೇ ಕೊರೊನಾದಿಂದ ಸಾವನ್ನಪ್ಪುತ್ತಿರುವವರ ಪ್ರಮಾಣ ಶೇಕಡಾ 7.71ರಷ್ಟಿದೆ.

ಈ ಬಗ್ಗೆ ಬಿಬಿಎಂಪಿ ಕಮಿಷನರ್ ಗೌರವ್ ಗುಪ್ತಾ ಮಾತನಾಡಿದ್ದಾರೆ. ಕೊರೊನಾದಿಂದ ಈಗ ಸಂಭವಿಸುತ್ತಿರುವ ಸಾವುಗಳು ಕೆಲವು ದಿನಗಳ ಹಿಂದೆ ಕಂಡುಬಂದ ಪ್ರಕರಣಗಳದ್ದಾಗಿದೆ ಎಂದು ತಿಳಿಸಿದ್ದಾರೆ. ಕೆಲ ದಿನಗಳಿಂದ ಬೆಂಗಳೂರಿನಲ್ಲಿ 3 ಸಾವಿರಕ್ಕಿಂತಲೂ ಕಡಿಮೆ ಕೊವಿಡ್ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಆದರೆ, ಸಾವನ್ನಪ್ಪುತ್ತಿರುವವರ ಸಂಖ್ಯೆ 300ರ ಆಸುಪಾಸಿನಲ್ಲೇ ದಾಖಲಾಗುತ್ತಿದೆ.

ಕರ್ನಾಟಕದಲ್ಲಿ ಹೊಸ ಕೊರೊನಾ ಪ್ರಕರಣಗಳ ಸಂಖ್ಯೆ ಮತ್ತು ಪಾಸಿಟಿವಿಟಿ ಪ್ರಮಾಣ ಇಳಿಕೆಯಾಗುತ್ತಿದೆ. ಆದರೆ, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರ ಸಂಖ್ಯೆಯಲ್ಲಿ ಅಂತಹಾ ಇಳಿಕೆ ಕಂಡುಬಂದಿಲ್ಲ. ಈಗ ಸುಮಾರು ಶೇಕಡಾ 80ರಷ್ಟು ವಾರ್ಡ್ ಬೆಡ್​ಗಳು ಖಾಲಿ ಇವೆ ಹಾಗೂ ಶೇಕಡಾ 50ರಷ್ಟು ಆಕ್ಸಿಜನ್ ಬೆಡ್​ಗಳು ಕೂಡ ಖಾಲಿ ಇವೆ ಎಂದು ಕರ್ನಾಟಕ ಕೊವಿಡ್ ಸಲಹಾ ಸಮಿತಿ ಸದಸ್ಯ ಡಾ. ವಿಶಾಲ್ ರಾವ್ ತಿಳಿಸಿದ್ದಾರೆ.

ಇಷ್ಟಾದರೂ ಐಸಿಯು ಬೆಡ್​ಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರು ಕಡಿಮೆ ಆಗಿಲ್ಲ. ಶೇಕಡಾ 80ರಷ್ಟು ಐಸಿಯು ಬೆಡ್​ಗಳು ಭರ್ತಿಯಾಗೇ ಇವೆ. ಐಸಿಯುಗೆ ದಾಖಲಾಗುವ ಸೋಂಕಿತರು ಗುಣಮುಖರಾಗಲು ದೀರ್ಘ ಸಮಯ ತಗುಲುತ್ತದೆ ಎಂದು ಅವರು ಹೇಳಿದ್ದಾರೆ.

ಉಪಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ ಕೂಡ ಇದೇ ಹೇಳಿಕೆ ನೀಡಿದ್ದಾರೆ. ಕೆಲ ದಿನಗಳ ಹಿಂದೆ ಐಸಿಯುಗೆ ದಾಖಲಾದ ಸೋಂಕಿತರು ಈಗ ಸಾವನ್ನಪ್ಪುತ್ತಿದ್ದಾರೆ. ಹಾಗಾಗಿ, ಹೊಸ ಪ್ರಕರಣಗಳು ಕಡಿಮೆ ಆಗಿದ್ದರೂ ಮರಣ ಪ್ರಮಾಣ ಇಳಿಕೆಯಾಗಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: Corona Vaccine: ಕೊರೊನಾ ಲಸಿಕೆ ಪಡೆಯುವ ಮೊದಲು ಮತ್ತು ನಂತರ ಪಾಲಿಸಬೇಕಾದ ಅಂಶಗಳೇನು? ಇಲ್ಲಿದೆ ವಿವರ

PM Modi Speech: ಭಾರತದ ಎಲ್ಲ ನಾಗರಿಕರಿಗೂ ಉಚಿತ ಲಸಿಕೆ: ಪ್ರಧಾನಿ ನರೇಂದ್ರ ಮೋದಿ