ಬೆಂಗಳೂರು: ಕೊವಿಡ್ ಹೊಸ ಮಾರ್ಗಸೂಚಿಯನ್ನು ಕರ್ನಾಟಕ ಸರ್ಕಾರ ಬಿಡುಗಡೆ ಮಾಡಿದೆ. ಅದರಂತೆ ಈಜುಕೊಳ ಕಾರ್ಯಾಚರಣೆಗೆ ಕೆಲವು ನಿರ್ಬಂಧಗಳ ಅನುಸಾರ ಅವಕಾಶ ನೀಡಲಾಗಿದೆ. ನೂತನ ಮಾರ್ಗಸೂಚಿಯಲ್ಲಿ ಶಾಲಾ ಮರು ಪ್ರಾರಂಭದ ಬಗ್ಗೆಯೂ ಉಲ್ಲೇಖ ಮಾಡಲಾಗಿದೆ. ಈಜುಕೊಳಗಳಲ್ಲಿ ಶೇಕಡಾ 50 ರಷ್ಟು ಕಾರ್ಯಚಾರಣೆಗೆ ಅವಕಾಶ ನೀಡಲಾಗಿದೆ. ಅಂತಾರಾಷ್ಟ್ರೀಯ ವಿಮಾನ ಸಂಚಾರಕ್ಕೆ ರಿಲ್ಯಾಕ್ಸೇಷನ್ ನೀಡಲಾಗಿದೆ. ಆದರೆ, ಯು.ಕೆ ಪ್ರಯಾಣಿಕರಿಗೆ ಕ್ವಾರಂಟೈನ್ ನಿಯಮ ಮುಂದುವರಿಕೆ ಮಾಡಲಾಗಿದೆ.
ಅಕ್ಟೋಬರ್ 25ರಿಂದ 1 ರಿಂದ 5ನೇ ತರಗತಿ ಶಾಲೆ ಆರಂಭ
ಅಕ್ಟೋಬರ್ 25ರಿಂದ 1 ರಿಂದ 5ನೇ ತರಗತಿ ಶಾಲೆ ಆರಂಭ ಆಗಲಿದೆ. ಶಾಲೆ ಆರಂಭಿಸುವುದಕ್ಕೆ ಶಿಕ್ಷಣ ಇಲಾಖೆಯಿಂದ ತೀರ್ಮಾನ ಮಾಡಲಾಗಿದೆ. ಶಾಲೆ ಆರಂಭಕ್ಕೆ ಕೊವಿಡ್ ತಾಂತ್ರಿಕ ಸಲಹಾ ಸಮಿತಿ ಒಪ್ಪಿಗೆ ನೀಡಿದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. 1 ರಿಂದ 5ನೇ ತರಗತಿವರೆಗೆ ಶಾಲೆ ಆರಂಭಕ್ಕೆ ತಜ್ಞರ ಸಮ್ಮತಿ ಒಪ್ಪಿಗೆ ನೀಡಿದೆ. ಮಕ್ಕಳನ್ನ ಶಾಲೆಗೆ ಕಳಿಸಲು ಪೋಷಕರ ಅನುಮತಿ ಕಡ್ಡಾಯ ಎಂದು ತಿಳಿಸಲಾಗಿದೆ. ಶಿಕ್ಷಕರು ಕಡ್ಡಾಯವಾಗಿ 2 ಡೋಸ್ ಲಸಿಕೆ ಪಡೆದಿರಬೇಕು ಎಂದೂ ಹೇಳಲಾಗಿದೆ. ತರಗತಿಯಲ್ಲಿ ಶೇಕಡಾ 50ರಷ್ಟು ಮಕ್ಕಳಿಗೆ ಮಾತ್ರ ಅವಕಾಶ ನೀಡಿ ಸದ್ಯ ಶಾಲೆ ತೆರೆಯಲಾಗುವುದು. ತರಗತಿಯಲ್ಲಿ ಶಿಕ್ಷಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಸೂಚನೆ ನೀಡಲಾಗಿದೆ.
ಈ ಬಗ್ಗೆ ಟಿವಿ9ಗೆ ಶಿಕ್ಷಣ ಇಲಾಖೆ ಸಚಿವ ಬಿ.ಸಿ. ನಾಗೇಶ್ ಪ್ರತಿಕ್ರಿಯೆ ನೀಡಿದ್ದಾರೆ. ದಸರಾ ಬಳಿಕ ಶಾಲೆ ಆರಂಭಿಸುವುದಾಗಿ ನಾವು ಹೇಳಿದ್ದೆವು. ಅದರಂತೆ ಶಾಲೆ ಆರಂಭ ಆಗಲಿದೆ. ಆದರೆ, ಮಕ್ಕಳಿಗೆ ಹಾಜರಾತಿ ಕಡ್ಡಾಯ ಇರುವುದಿಲ್ಲ. ಶಾಲೆಗೆ ಹಾಜರಾಗಲು ಮಕ್ಕಳಿಗೆ ಒತ್ತಾಯ ಇರುವುದಿಲ್ಲ. ಮಕ್ಕಳನ್ನ ಶಾಲೆಗೆ ಕಳಿಸಲು ಪೋಷಕರ ಒಪ್ಪಿಗೆ ಬೇಕು. ಜಾಗದ ಕೊರತೆ ಇರುವಲ್ಲಿ ಶೇ.50ರಷ್ಟು ಮಕ್ಕಳು ಮಾತ್ರ ಹಾಜರಾಗಬೇಕು ಎಂದು ನಾಗೇಶ್ ತಿಳಿಸಿದ್ದಾರೆ.
ಸದ್ಯಕ್ಕೆ LKG, UKG ಬಗ್ಗೆ ಇಲಾಖೆ ನಿರ್ಧಾರ ಮಾಡಿಲ್ಲ. ಅಕ್ಟೋಬರ್ 21 ಅಥವಾ 25ರಂದು ಶಾಲೆ ಆರಂಭಿಸಲು ನಿರ್ಧಾರ ಮಾಡಲಾಗಿದೆ. ಫೀಸ್ ಬಗ್ಗೆ ಕೋರ್ಟ್ನಿಂದ ಆದೇಶ ಬಳಿಕ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಟಿವಿ9ಗೆ ಶಿಕ್ಷಣ ಇಲಾಖೆ ಸಚಿವ ನಾಗೇಶ್ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ: ಬೆಳಗಾವಿ: ಅಕ್ಟೋಬರ್ 23, 24 ರಂದು ಕಿತ್ತೂರು ಉತ್ಸವ; ಕೊವಿಡ್ ಮಾರ್ಗಸೂಚಿ ಅನುಸಾರ ಆಚರಣೆ
Published On - 4:55 pm, Mon, 18 October 21