ಬಲವಂತದ, ಆಮಿಷದ ಮತಾಂತರ ಆಗುತ್ತಿಲ್ಲ; ಕ್ರೈಸ್ತ ಮಿಷನರಿಗಳ ಗಣತಿಯನ್ನು ಕೈಬಿಡಬೇಕು: ಆರ್ಚ್ ಬಿಷಪ್ ಪೀಟರ್ ಮಚಾದೋ
ಅಗತ್ಯವಿದ್ದರೆ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ಮಾಡಿ ಒತ್ತಾಯ ಮಾಡುತ್ತೇನೆ. ಚರ್ಚ್ ಅನುಮತಿಗೆ ಹತ್ತಾರು ವರ್ಷ ಅಲೆದಾಡಿಸುತ್ತಾರೆ. ನಮ್ಮ ಸಮುದಾಯದ ಬೆಳವಣಿಗೆಗೆ ನೀವೂ ಸಹಕಾರ ನೀಡಿ ಎಂದು ಟಿವಿ9ಗೆ ಆರ್ಚ್ ಬಿಷಪ್ ಪೀಟರ್ ಮಚಾದೋ ಹೇಳಿಕೆ ನೀಡಿದ್ದಾರೆ.
ಬೆಂಗಳೂರು: ಯಾವುದೇ ಬಲವಂತದ, ಆಮಿಷದ ಮತಾಂತರ ಆಗುತ್ತಿಲ್ಲ. ಹತ್ತಾರು ವರ್ಷಗಳಿಂದ ಚರ್ಚ್ ಸ್ಥಾಪನೆಗೆ ಅವಕಾಶ ನೀಡಿಲ್ಲ. ಕ್ರೈಸ್ತ ಮಿಷನರಿಗಳ ಗಣತಿಯನ್ನು ಸರ್ಕಾರ ಕೈಬಿಡಬೇಕು. ನಮ್ಮ ಸಮುದಾಯದ ಭಾವನೆಗಳನ್ನು ಸಿಎಂ ಅರ್ಥೈಸಿಕೊಳ್ಳಲಿ ಎಂದು ಟಿವಿ9ಗೆ ಆರ್ಚ್ ಬಿಷಪ್ ಪೀಟರ್ ಮಚಾದೋ ಹೇಳಿಕೆ ನೀಡಿದ್ದಾರೆ. ಬೆಂಗಳೂರು ಆರ್ಚ್ ಬಿಷಪ್ ಪೀಟರ್ ಮಚಾದೋ ಕ್ರೈಸ್ತ ಮಿಷನರಿಗಳ ಗಣತಿಯ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರುವುದು ಒಳ್ಳೆಯದಲ್ಲ. ಯಾವುದೋ ಕೆಲವು ಮತೀಯ ಶಕ್ತಿಗಳ ಮಾತು ಕೇಳಿ ನಿಷೇಧ ಕಾಯ್ದೆ ಜಾರಿ ಮಾಡುದವುದು ಸರಿಯಲ್ಲ. ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಬಗ್ಗೆಯೂ ಗೌರವ ಇದೆ. ಶಾಸಕರ ಮನೆಗೆ ನುಗ್ಗಿ ಮತಾಂತರ ಮಾಡಲು ಹೇಗೆ ಸಾಧ್ಯ? ಅನಧಿಕೃತ ಚರ್ಚ್ಗಳಿದ್ದರೆ ಅವುಗಳಿಗೆ ಅನುಮತಿ ನೀಡಲಿ. ನಾವು ಇನ್ನೂ 2008ರ ಚರ್ಚ್ ದಾಳಿ ಘಟನೆ ಮರೆತಿಲ್ಲ ಎಂದು ಬಿಷಪ್ ತಿಳಿಸಿದ್ದಾರೆ.
ಅಗತ್ಯವಿದ್ದರೆ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ಮಾಡಿ ಒತ್ತಾಯ ಮಾಡುತ್ತೇನೆ. ಚರ್ಚ್ ಅನುಮತಿಗೆ ಹತ್ತಾರು ವರ್ಷ ಅಲೆದಾಡಿಸುತ್ತಾರೆ. ನಮ್ಮ ಸಮುದಾಯದ ಬೆಳವಣಿಗೆಗೆ ನೀವೂ ಸಹಕಾರ ನೀಡಿ ಎಂದು ಟಿವಿ9ಗೆ ಆರ್ಚ್ ಬಿಷಪ್ ಪೀಟರ್ ಮಚಾದೋ ಹೇಳಿಕೆ ನೀಡಿದ್ದಾರೆ.
ಆಮಿಷಗಳನ್ನು ಒಡ್ಡಿ ಮತಾಂತರ ಮಾಡಬಾರದು ಸರ್ಕಾರ ಕ್ರೈಸ್ತ ಸಮುದಾಯವು ನಡೆಸುತ್ತಿರುವ ಶಾಲಾ ಕಾಲೇಜುಗಳು ಮತ್ತು ಆಸ್ಪತ್ರೆಗಳ ಲೆಕ್ಕ ತಗೆದುಕೊಂಡರೆ ರಾಷ್ಟ್ರ ನಿರ್ಮಾಣದ ನಿಟ್ಟಿನಲ್ಲಿ ನಮ್ಮ ಸಮುದಾಯವು ನೀಡುತ್ತಿರುವ ಅಪರಿಮಿತ ಸೇವೆಯ ಅಂದಾಜು ದೊರೆಯುತ್ತದೆ. ಈ ನಮ್ಮ ಸಂಸ್ಥೆಗಳಲ್ಲಿ ಎಷ್ಟು ಜನರನ್ನು ಮತಾಂತರಗೊಳಿಸಲಾಗಿದೆ? ಕೆಲವರು ಹೇಳುವ ಪ್ರಕಾರ ಕ್ರೈಸ್ತರು ಮತಾಂತರ ಮಾಡುವುದೇ ಆಗಿದ್ದರೆ ಕ್ರೈಸ್ತರ ಜನಸಂಖ್ಯೆ ಏಕೆ ಪ್ರತಿ ವರ್ಷವೂ ಸಹ ಕಡಿಮೆಯಾಗುತ್ತಾ ಬರುತ್ತಿದೆ? ನಾವು ಎಂದಿಗೂ ಸಹ ಬಲವಂತದ, ಆಮಿಷಗಳನ್ನು ಒಡ್ಡಿ ಮಾಡುವ ಮತಾಂತರದ ಕಡು ವಿರೋಧಿಗಳಾಗಿದ್ದೇವೆ. ಇದನ್ನೇ ನಾವು ಮೊದಲಿನಿಂದಲೂ ಪ್ರತಿಪಾದಿಸಿಕೊಂಡು ಬರುತ್ತಿದ್ದೇವೆ. ಅದಲ್ಲದೆ ನಮಗೆ ಶ್ರೇಷ್ಟವೂ ಹಾಗೂ ಪವಿತ್ರವೂ ಆದ ಭಾರತದ ಘನತೆವೆತ್ತ ಸಂವಿಧಾನದ ಆಶಯಗಳನ್ನು ಪಾಲಿಸಿಕೊಂಡು ಬರುತ್ತಿದ್ದೇವೆ ಎಂದು ಅವರು ಇದಕ್ಕೂ ಮೊದಲು ಹೇಳಿಕೆ ನೀಡಿದ್ದರು.
ಸಂವಿಧಾನದ 25 ನೇ ಪರಿಚ್ಛೇದವು (26, 29 ಮತ್ತು 30 ಸಹ) ಈ ದೇಶದಲ್ಲಿ ತನಗೆ ಇಷ್ಟ ಬಂದ ಧಾರ್ಮಿಕ ವಿಶ್ವಾಸವನ್ನು ಹಾಗೂ ನಂಬಿಕೆಯನ್ನು ಪಾಲಿಸಲು ಯಾವುದೇ ನಾಗರೀಕನು ಸ್ವತಂತ್ರನಾಗಿದ್ದಾನೆ ಎಂದು ಹೇಳಿಲ್ಲವೇ? ತಪ್ಪುಮಾಡುವವರನ್ನು ಶಿಕ್ಷಿಸಲು ಸಂವಿಧಾನದಲ್ಲೇ ಹಲವು ರೀತಿಯ ಕ್ರಮಗಳನ್ನು ನೀಡಿರುವಾಗ, ಈ ಕಾಯ್ದೆಯ ಪ್ರಸ್ತುತತೆಯಾದರೂ ಏನು?
ಮುಂದುವರೆದು ಹೇಳಬಾಕಾದರೆ ಸರ್ಕಾರವು ತರಲಿಚ್ಚಿಸಿರುವ ಕಾನೂನು ಕೆಲವೇ ಕೆಲವು ಶಕ್ತಿಗಳ ಕೈಸೇರಿ, ನಿರಪರಾಧಿಗಳನ್ನು ಶಿಕ್ಷಿಸುವ ಉಪಕರಣವಾಗಿ ಮಾರ್ಪಡಲಿದೆ. ಕೆಲವೇ ದಿನಗಳ ಹಿಂದೆ ಮದ್ರಾಸ್ ಹೈಕೋರ್ಟು ಚರ್ಚಿಗೆ ಹೋಗುವುದು, ಕ್ರೈಸ್ತ ಚಿಹ್ನೆಗಳನ್ನು ಅಥವಾ ಚಿತ್ರಗಳನ್ನು ಹಾಕಿಕೊಳ್ಳುವುದೆಂದರೆ ಮತಾಂತರವಾಗಿದ್ದಾರೆ ಎನ್ನುವುದಕ್ಕಾಗುವುದಿಲ್ಲ ಎಂಬ ತೀರ್ಪನ್ನು ನೀಡಿದೆ. ಕ್ರೈಸ್ತ ಸಮುದಾಯವು ಸದಾ ದೇಶಪ್ರೇಮಿಯಾಗಿದೆ. ಮಾತ್ರವಲ್ಲದೆ ಈ ನೆಲದ ಕಾನೂನುಗಳನ್ನು ಚಾಚೂ ತಪ್ಪದೆ ಪಾಲಿಸುತ್ತದೆ. ಈ ದೇಶದಲ್ಲಿನ ಬಡವರ ಮತ್ತು ಹಿಂದುಳಿದವರ ಸೇವೆಗೆ ಸದಾ ಸಿದ್ಧವಿದೆ. ಈ ನಿಟ್ಟಿನಲ್ಲಿ ನಮಗೆ ಸರ್ಕಾರದಿಂದ ಬೆಂಬಲ ಹಾಗೂ ಪ್ರೋತ್ಸಾಹದ ಅಗತ್ಯತೆ ಇದೆ ಎಂಬುದನ್ನು ಹೇಳಲಿಚ್ಛಿಸುತ್ತೇನೆ ಎಂದು ಈ ಮೊದಲು ತಿಳಿಸಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿ ಕ್ರೈಸ್ತ ಮಿಷನರಿಗಳ ಸರ್ವೆ ವಿಚಾರ; ಸರ್ಕಾರದ ನಿಲುವಿಗೆ ಬೆಂಗಳೂರಿನ ಆರ್ಚ್ ಬಿಷಪ್ ಆಕ್ಷೇಪ
ಇದನ್ನೂ ಓದಿ: ಹುಬ್ಬಳ್ಳಿ: ಚರ್ಚ್ನಲ್ಲಿ ಮತಾಂತರ ಆರೋಪ; ಆರೋಪಿಯನ್ನು ಬಂಧಿಸುವಂತೆ ಅರವಿಂದ್ ಬೆಲ್ಲದ್, ಹಿಂದೂ ಪರ ಸಂಘಟನೆ ಪ್ರತಿಭಟನೆ
Published On - 4:34 pm, Mon, 18 October 21