ಚನ್ನಪಟ್ಟಣ ಮೈತ್ರಿ ಅಭ್ಯರ್ಥಿ ಬಹುತೇಕ ಫೈನಲ್: ಯೋಗೇಶ್ವರ್ ಮನವೊಲಿಕೆಗೆ ಜೆಡಿಎಸ್​ ನಾಯಕರು ಹರಸಾಹಸ

|

Updated on: Oct 18, 2024 | 11:12 PM

ಚನ್ನಪಟ್ಟಣ ರಾಜಕೀಯ ಅಖಾಡದಲ್ಲಿ ಚದುರಂಗದಾಟ ನಡೆಯುತ್ತಿದೆ. ಯಾವುದೇ ಕಾರಣಕ್ಕೂ ಸೀಟ್ ಬಿಟ್ಟುಕೊಡಲ್ಲ ಎಂದು ದಳಪತಿಗಳು ಬಿಗಿಪಟ್ಟು ಹಿಡಿದ್ದರೆ. ಮತ್ತೊಂದ್ಕಡೆ ಬಿಜೆಪಿ ನಾಯಕರೂ ಸಿ.ಪಿ ಯೋಗೇಶ್ವರ್ ಪರವಾಗಿ ಬಹಿರಂಗವಾಗಿಯೇ ಬ್ಯಾಟ್ ಬೀಸುತ್ತಿದ್ದಾರೆ. ಇದೆಲ್ಲಾ ಕಸರತ್ತುಗಳ ನಡುವೆ ಇವತ್ತು ಮತ್ತೊಂದು ಮಹತ್ವದ ಬೆಳವಣಿಗೆ ನಡೆದಿದೆ. ಅದೇ ಸಿ.ಪಿ ಯೋಗೇಶ್ವರ್ ಮನವೊಲಿಸುವ ತಂತ್ರ.

ಚನ್ನಪಟ್ಟಣ ಮೈತ್ರಿ ಅಭ್ಯರ್ಥಿ ಬಹುತೇಕ ಫೈನಲ್: ಯೋಗೇಶ್ವರ್ ಮನವೊಲಿಕೆಗೆ ಜೆಡಿಎಸ್​ ನಾಯಕರು ಹರಸಾಹಸ
ಕುಮಾರಸ್ವಾಮಿ & ಯೋಗೇಶ್ವರ್
Follow us on

ಬೆಂಗಳೂರು/ರಾಮನಗರ, (ಅಕ್ಟೋಬರ್ 18): ಚನ್ನಪಟ್ಟಣ ವಿಧಾನಸಭಾ ಉಪಚುನಾವಣೆ ಕರ್ನಾಟಕ ರಾಜ್ಯ ರಾಜಕೀಯದಲ್ಲಿ ಮಹತ್ವ ಪಡೆದುಕೊಂಡಿದೆ. ರಾಜಕೀಯ ಬದ್ಧ ವೈರಿಗಳಾದ ಕುಮಾರಸ್ವಾಮಿ ಮತ್ತು ಡಿಕೆ ಶಿವಕುಮಾರ್​​ ಅವರ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಆದ್ರೆ, ಕಾಂಗ್ರೆಸ್ ಅಭ್ಯರ್ಥಿ ಯಾರು ಎನ್ನುವುದೇ ನಿಗೂಢವಾಗಿದೆ. ಇನ್ನು ಜೆಡಿಎಸ್​ ಮತ್ತು ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ಸಿಪಿ ಯೋಗೀಶ್ವರ್ ತುದಿಗಾಲಿನಲ್ಲಿ ನಿಂತಿದ್ರೆ, ಅತ್ತ ನಿಖಿಲ್ ಕುಮಾರಸ್ವಾಮಿ ಅವರು ನಿಲ್ಲುತ್ತಾರೆ ಎಂಬ ಮಾತು ಇತ್ತು. ಇದೀಗ ಅದು ನಿಜವೆನಿಸಿದೆ. ಹೌದು..ಬಿಡದಿ ತೋಟದ ಮನೆಯಲ್ಲಿ ಕುಮಾರಸ್ವಾಮಿ ಅವರು ಕರೆದಿದ್ದ ಸಭೆಯಲ್ಲಿ ಒಮ್ಮತದ ನಿರ್ಧಾರ ತೆಗೆದುಕೊಂಡಿದ್ದಾರೆ. ನಿಖಿಲ್​ ಕುಮಾರಸ್ವಾಮಿಯನ್ನೇ ಕಣಕ್ಕಿಳಿಸುವ ಬಗ್ಗೆ ನಿರ್ಧಾರವಾಗಿದೆ ಎನ್ನಲಾಗಿದೆ. ಹೀಗಾಗಿ ಟಿಕೆಟ್​​ಗೆ ಪಟ್ಟು ಹಿಡಿದಿರುವ ಮಿತ್ರ ಪಕ್ಷದ ನಾಯಕ ಸಿಪಿ ಯೋಗೇಶ್ವರ್ ಅವರನ್ನು ಮನವೊಲಿಸಲು ಜೆಡಿಎಸ್​ ನಾಯಕರು ಹರಸಾಹಸಪಡುತ್ತಿದ್ದಾರೆ.

ಬಿಡದಿಯ ತೋಟದ ಮನೆಯಲ್ಲಿ ಕೇಂದ್ರ ಸಚಿವ ಎಚ್​ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ನ ಪ್ರಮುಖ ನಾಯಕರ ಸಭೆ ಕರೆಯಲಾಗಿತ್ತು. ಇದರಲ್ಲಿ ಚನ್ನಪಟ್ಟಣದ ಅಭ್ಯರ್ಥಿಯ ಬಗ್ಗೆ ಸಾಕಷ್ಟು ವಿಚಾರಗಳು ಚರ್ಚೆಗಳಾದವು. ಬಳಿಕ ಜೆಡಿಎಸ್ ನಾಯಕರೆಲ್ಲ ಒಟ್ಟಿಗೆ ಸೇರಿ ನಿಖಿಲ್ ಕುಮಾರಸ್ವಾಮಿ ಅವರನ್ನೇ ನಿಲ್ಲಿಸಬೇಕೆಂಬ ಒಂದು ನಿರ್ಧಾರಕ್ಕೆ ಬಂದಿದ್ದಾರೆ. ಆದರೆ ಟಿಕೆಟ್ ಆಕಾಂಕ್ಷಿಯಾಗಿರುವ ಯೋಗೇಶ್ವರ್ ಅವರ ಮನವೊಲಿಸಿ, ಕ್ಷೇತ್ರ ಉಳಿಸಿಕೊಳ್ಳುವುದಕ್ಕೆ ಪ್ಲ್ಯಾನ್ ಮಾಡಿದ್ದಾರೆ. ಇದೆಲ್ಲವನ್ನು ಕೇಂದ್ರದ ನಾಯಕರ ಜೊತೆಗೆ ಚರ್ಚಿಸಿ ತೀರ್ಮಾನಕ್ಕೆ ಬರಲಿದ್ದಾರೆ.

ಇದನ್ನೂ ಓದಿ: ಶಿಗ್ಗಾಂವಿ ಬೈ ಎಲೆಕ್ಷನ್: ಮೊದಲ ದಿನವೇ 4 ನಾಮಪತ್ರ ಸಲ್ಲಿಕೆ, ಯಾವ ಪಕ್ಷದಿಂದ ಯಾರು?

ನಿಮ್ಮದೇ ಕ್ಷೇತ್ರ ನಿಮ್ಮ ಅಭ್ಯರ್ಥಿ ಇರಲಿ ಎಂದ ಹೈಕಮಾಂಡ್

ಬಿಜೆಪಿ ಹೈಕಮಾಂಡ್​ ಸಹ ಜೆಡಿಎಸ್​ ಕ್ಷೇತ್ರವನ್ನು ಜೆಡಿಎಸ್​ಗೆ ಬಿಟ್ಟುಕೊಡುವ ಮನಸ್ಸು ಮಾಡಿದೆ. ಈಗಾಗಲೇ ಕರ್ನಾಟಕ ಬಿಜೆಪಿ ಉಸ್ತುವಾರಿ ಕುಮಾರಸ್ವಾಮಿ ಜತೆ ಚರ್ಚಿಸಿದ್ದು, ನಿಮ್ಮ ರಾಜೀನಾಮೆಯಿಂದ ತೆರವಾದ ಕ್ಷೇತ್ರ ನಿಮ್ಮ ಅಭ್ಯರ್ಥಿಯೇ ಇರಲಿ ಎಂದಿದ್ದಾರಂತೆ. ಹೀಗಾಗಿ ಕುಮಾರಸ್ವಾಮಿ ತಮ್ಮ ಪುತ್ರ ನಿಖಿಲ್​ ಅವರನ್ನು ಕಣಕ್ಕಿಳಿಸಲು ಮನಸ್ಸು ಮಾಡಿದ್ದು, ಈ ಬಗ್ಗೆ ಜೆಡಿಎಸ್​ ಪ್ರಮುಖ ನಾಯಕರ ಮುಂದೆ ಹಂಚಿಕೊಂಡಿದ್ದಾರೆ. ಇದಕ್ಕೆ ನಾಯಕರು ಸಹ ಸಹಮತ ವ್ಯಕ್ತಪಡಿಸಿದ್ದಾರೆ. ಆದ್ರೆ, ರಾಜ್ಯ ಬಿಜೆಪಿಯ ಕೆಲ ನಾಯಕರು ಮಾತ್ರ ಸಿಪಿ ಯೋಗೇಶ್ವರ್​​ ಪರ ಬ್ಯಾಟಿಂಗ್ ಮಾಡುತ್ತಿರುವುದು ಕುಮಾರಸ್ವಾಮಿಗೆ ದೊಡ್ಡ ತಲೆನೋವಾಗಿದೆ.

ಸಿಪಿ ಯೋಗೇಶ್ವರ್ ಮನವೊಲಿಕೆಗೆ ಟಾಸ್ಕ್​

ಮುಖ್ಯವಾಗಿ ಕುಮಾರಸ್ವಾಮಿಗೆ ಸಿಪಿ ಯೋಗೇಶ್ವರ್ ಅವರ ಮನವೊಲಿಕೆ ಮಾಡುವುದೇ ದೊಡ್ಡ ಸವಲಾಗಿದೆ. ಈ ಸಂಬಂಧ ಕುಮಾರಸ್ವಾಮಿ ಅವರು ಹೇಗಾದರೂ ಮಾಡಿ ಯೋಗೇಶ್ವರ್​ ಅವರನ್ನು ಮನವೊಲಿಸಿ ಎಂದು ಸಾರಾ ಮಹೇಶ್, ಸಿಎಸ್ ಪುಟ್ಟರಾಜು ಸೇರಿದಂತೆ ಪ್ರಮುಖ ನಾಯಕರಿಗೆ ಟಾಸ್ಕ್ ಕೊಟ್ಟಿದ್ದಾರೆ. ಹೀಗಾಗಿ ಬಿಜೆಪಿ ನಾಯಕರು ಬೇಡ, ಹೈಕಮಾಂಡ್ ಮಧ್ಯೆಸ್ಥಿಕೆಯೂ ಬೇಡ ಎನ್ನುವಂತೆ ಜೆಡಿಎಸ್​ ನಾಯಕರು ನೇರವಾಗಿ ಮಾಜಿ ಸೈನಿಕನ ಬೆನ್ನಿಗೆ ಬಿದ್ದಿದ್ದಾರೆ. ಸಾರಾ ಮಹೇಶ್, ಪುಟ್ಟರಾಜು ಸೇರಿದಂತೆ ಜೆಡಿಎಸ್​​ನ ಪ್ರಮುಖ ನಾಯಕರು ಬೆಂಗಳೂರಿನಲ್ಲಿಂದು ಖಾಸಗಿ ಹೋಟೆಲ್​​ನಲ್ಲಿ ಯೋಗೇಶ್ವರ್​ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ಈ ಮೂಲಕ ಮನವೊಲಿಕೆಗೆ ಇನ್ನಿಲ್ಲದ ಕಸರತ್ತು ಮಾಡಿದ್ದಾರೆ.

ಟಿಕೆಟ್ ಕೊಟ್ಟೆ ಕೊಡುತ್ತಾರೆ, ನಾನೇ ಅಭ್ಯರ್ಥಿ ಎನ್ನುತ್ತಿರುವ ಸಿಪಿ ಯೋಗೀಶ್ವರ್ ಸಮಾಧಾನಗೊಳ್ಳುತ್ತಾರಾ ಅಥವಾ ಸ್ವತಂತ್ರ ಅಭ್ಯರ್ಥಿಯಾಗುತ್ತಾರಾ ಎನ್ನುವುದನ್ನು ಕಾದುನೋಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 11:10 pm, Fri, 18 October 24