ಬೆಂಗಳೂರು: ಬಿ.ಪಿ.ಎಲ್ ಕಾರ್ಡ್ನ ಮಾನದಂಡಗಳಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ. ಈ ಹಿಂದೆ ಇದ್ದ ಮಾನದಂಡಗಳನ್ನೇ ಮುಂದುವರಿಸುತ್ತೇವೆ ಎಂದು ಆಹಾರ, ನಾಗರಿಕ ಪೂರೈಕೆ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಉಮೇಶ್ ಕತ್ತಿ ಸ್ಪಷ್ಟನೆ ನೀಡಿದ್ದಾರೆ.
ನಾನು ಸಚಿವನಾದ ಬಳಿಕ ಯಾವುದೇ ತಿದ್ದುಪಡಿ ಮಾಡಿಲ್ಲ. ಮುಂದೂ ಸಹ ಯಾವುದೇ ತಿದ್ದುಪಡಿ ಮಾಡುವುದಿಲ್ಲ. ಈಗ ಜಾರಿಯಲ್ಲಿರುವ ಮಾನದಂಡಗಳನ್ನೇ ಮುಂದುವರೆಸುತ್ತೇವೆ ಎಂದು ಅವರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಟಿವಿ, ಫ್ರಿಡ್ಜ್, ವಾಹನಗಳನ್ನು ಹೊಂದಿರುವವರಿಗೆ ಬಿ.ಪಿ.ಎಲ್ ಕಾರ್ಡ್ ಸ್ಥಗಿತಗೊಳಿಸಿವುದಾಗಿ ಆಹಾರ ಸಚಿವ ಉಮೇಶ್ ಕತ್ತಿ ಕಳೆದ ವಾರ ಹೇಳಿದ್ದರು. ಆದರೆ ಇದಕ್ಕೆ ಸ್ವಪಕ್ಷೀಯ ನಾಯಕರೂ, ಹಿಂದಿನ ಆಹಾರ ಸಚಿವ ಯುಟಿ ಖಾದದ್ ಸೇರಿದಂತೆ ಎಲ್ಲೆಡೆಯಿಂದ ವ್ಯಾಪಕ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಆಹಾರ ಸಚಿವ ಉಮೇಶ್ ಕತ್ತಿ ಈ ಸ್ಪಷ್ಟನೆ ನೀಡಿದ್ದಾರೆ.
ಈ ಮೊದಲು ಆಹಾರ ಸಚಿವರು ಹೇಳಿದ್ದೇನು?
5 ಎಕರೆಗಿಂತ ಹೆಚ್ಚಿನ ಜಮೀನು ಹೊಂದಿರುವವರು, ಮನೆಯಲ್ಲಿ ಟಿವಿ, ಬೈಕ್ ಹಾಗೂ ಫ್ರಿಡ್ಜ್ ಹೊಂದಿರುವವರು BPL ಕಾರ್ಡ್ ಹೊಂದಿದ್ರೆ ಕೂಡಲೇ ಹಿಂದಿರುಗಿಸಿ ಎಂದು ಆಹಾರ ಸಚಿವ ಉಮೇಶ್ ಕತ್ತಿ ಪ್ರತಿಕ್ರಿಯಿಸಿದ್ದರು. ಈ ಎಲ್ಲಾ ವಸ್ತುಗಳನ್ನು ನಿಮ್ಮ ಮನೆಯಲ್ಲಿ ಹೊಂದಿದ್ದು ಜೊತೆಗೆ BPL ಕಾರ್ಡ್ ಹೊಂದಿದ್ದರೆ ಕೂಡಲೇ ಕಾರ್ಡ್ ಹಿಂದಿರುಗಿಸಿ ಎಂದು ಆಹಾರ ಸಚಿವ ಉಮೇಶ್ ಕತ್ತಿ ಹೇಳಿದ್ದರು.
ಅಲ್ಲದೇ, ಫ್ರಿಡ್ಜ್ ಹೊಂದಿರುವವರು BPL ಕಾರ್ಡ್ ಹೊಂದಿದ್ರೆ ಕೂಡಲೇ ಹಿಂದಿರುಗಿಸಿ ಎಂದು ಹೇಳಿದ್ದ ಅವರು, ಈ ಎಲ್ಲಾ ವಸ್ತುಗಳನ್ನು ನಿಮ್ಮ ಮನೆಯಲ್ಲಿ ಹೊಂದಿದ್ದು ಜೊತೆಗೆ BPL ಕಾರ್ಡ್ ಹೊಂದಿದ್ದರೆ ಕೂಡಲೇ ಕಾರ್ಡ್ ಹಿಂದಿರುಗಿಸಿ ಎಂದು ಕಳೆದ ವಾರ ಹೇಳಿದ್ದು ವಿವಾದಕ್ಕೆ ಕಾರಣವಾಗಿತ್ತು.
ಇದನ್ನೂ ಓದಿ: ಮನೆಯಲ್ಲಿ TV, ಬೈಕ್, ಫ್ರಿಡ್ಜ್ ಹೊಂದಿರುವವರು.. BPL ಕಾರ್ಡ್ ಹೊಂದಿದ್ರೆ ಕೂಡಲೇ ಹಿಂದಿರುಗಿಸಿ -ಸಚಿವ ಉಮೇಶ್ ಕತ್ತಿ
ಕೇಳಿಬಂದಿತ್ತು ಸ್ವಪಕ್ಷೀಯರಿಂದಲೇ ಅಪಸ್ವರ
ಸಾಮಾನ್ಯವಾಗಿ ಟಿವಿ, ಫ್ರಿಡ್ಜ್ ಎಲ್ಲರ ಮನೆಯಲ್ಲೂ ಇರುತ್ತದೆ. ಸಾಲ ಮಾಡಿಯಾದರೂ ಜನ ಬೈಕ್ ತೆಗೆದುಕೊಳ್ಳುತ್ತಾರೆ. ಹೀಗಾಗಿ ಇಂತಹ ನಿಯಮಗಳನ್ನು ಮಾಡಿದರೆ ತಪ್ಪಾಗುತ್ತದೆ. ಸರ್ಕಾರದ ಯೋಜನೆ ಜನರಿಗೆ ತಲುಪುದಕ್ಕೆ ಟಿವಿ ಬೇಕು. ಟಿವಿಯೇ ಇರಬಾರದು ಎನ್ನುವುದನ್ನು ನಾವು ವಿರೋಧಿಸುತ್ತೇವೆ. ನಿಜವಾದ ಬಡವರನ್ನು ಆರ್ಥಿಕ ಮಟ್ಟದಿಂದ ಗುರುತಿಸಬೇಕು ಎಂದು ಬಿಜೆಪಿ ನಾಯಕ ಸೋಮಶೇಖರ ರೆಡ್ಡಿ ಗರಂ ಆಗಿದ್ದರು.
ಮನೆ ಮನೆ ಸಮೀಕ್ಷೆ ನಡೆಸಿದರೆ ನಕಲಿ ಬಿಪಿಎಲ್ ಕಾರ್ಡ್ದಾರರನ್ನು ಪತ್ತೆ ಮಾಡಬಹುದು. ಸಚಿವ ಸಂಪುಟದಲ್ಲಿ ಈ ಬಗ್ಗೆ ಚರ್ಚೆಯಾಗಿರುವುದು ಗೊತ್ತಿಲ್ಲ. ಇಂತಹ ನಿಯಮಗಳ ವಿರುದ್ಧ ಹೋರಾಟ ಮಾಡುತ್ತೇವೆ. ನಾವು ಬಿಜೆಪಿಯವರಾದರೂ ಸಹ ಹೋರಾಟ ಮಾಡುತ್ತೇವೆ. ಯಾರೇ ಆಗಲಿ ಸ್ವಂತ ನಿರ್ಧಾರ ಜನರ ಮೇಲೆ ಹೇರಬಾರದು. ಸ್ವಂತ ನಿರ್ಧಾರಗಳು ತೆಗೆದುಕೊಂಡರೆ ಈ ರೀತಿಯಾಗುತ್ತದೆ. ಸಿಎಂ ಗಮನಕ್ಕೆ ತರದೆ ನಿರ್ಧಾರ ಕೈಗೊಂಡರೆ ತಪ್ಪಾಗುತ್ತದೆ. ಸಚಿವರ ನಿರ್ಧಾರ ಬಡವರ ಮೇಲೆ ಪರಿಣಾಮ ಬೀರುತ್ತದೆ ಎಂದು ಆಹಾರ ಸಚಿವ ಉಮೇಶ್ ಕತ್ತಿ ಹೇಳಿಕೆಗೆ ಸೋಮಶೇಖರ್ ರೆಡ್ಡಿ ಖಾರವಾಗಿದ್ದರು.
Published On - 2:34 pm, Mon, 15 February 21