ಕೊರೊನಾ ಮುಕ್ತ ಗ್ರಾಮ.. ಸಪ್ತದೇವತೆಗಳ ಕೃಪೆಯಿಂದ ಎರಡು ವರ್ಷಗಳಿಂದ ಈ ಗ್ರಾಮಕ್ಕೆ ಕೊರೊನಾ ಎಂಟ್ರಿನೇ ಕೊಟ್ಟಿಲ್ಲ! ಏನದರ ಮಹಾತ್ಮೆ?
ಗ್ರಾಮಕ್ಕೆ ಕೊರೊನಾ ಬರದೇ ಇರಲು ಗ್ರಾಮ ದೇವರೇ ಕಾರಣ ಎಂದು ಇಲ್ಲಿನ ಗ್ರಾಮಸ್ಥರು ತಿಳಿಸಿದ್ದಾರೆ. ಗ್ರಾಮದ ದ್ಯಾಮವ್ವ, ದುರ್ಗವ್ವ, ಬಸವಣ್ಣ,ರಂಗನಾಥ, ಹನುಮಂತ, ನಾರಾಯಣ, ವೀರಭದ್ರೇಶ್ವರ ಸೇರಿದಂತೆ ಸಪ್ತದೇವರುಗಳೇ ಕೊರೊನಾವನ್ನು ಕಟ್ಟಿ ಹಾಕಿದ್ದಾರೆ ಎಂದು ಗ್ರಾಮದ ಹಿರಿಯರು ಅಭಿಪ್ರಾಯ ಹೊರ ಹಾಕಿದ್ದಾರೆ.
ಬಾಗಲಕೋಟೆ: ಮಹಾಮಾರಿ ಕೊರೊನಾ ವೈರಸ್ ಇಡೀ ದೇಶವನ್ನು ಆವರಿಸಿದೆ. ಕಣ್ಣಿಗೆ ಕಾಣಿಸದಂತೆ ಜನರ ದೇಹ ಸೇರಿ ಅವರನ್ನು ಹಿಂಸಿಸಿ ನರಳಿ ನರಳಿ ಸಾಯುವಂತೆ ಮಾಡಿದೆ. ಆದರೆ ಇಲ್ಲೊಂದು ಗ್ರಾಮವಿದೆ. ಈ ಗ್ರಾಮಕ್ಕೆ ಇದುವರೆಗೂ ಕೊರೊನಾ ಎಂಟ್ರಿ ಕೊಟ್ಟಿಲ್ಲ. ಕಳೆದ ಎರಡು ವರ್ಷಗಳಿಂದ ಈ ಗ್ರಾಮ ಹೆಮ್ಮಾರಿ ಕೊರೊನಾವನ್ನು ಮೆಟ್ಟಿನಿಂತು ಮಾದರಿ ಗ್ರಾಮವಾಗಿದೆ.
ಬಾಗಲಕೋಟೆ ತಾಲ್ಲೂಕಿನ ನೀರಲಕೇರಿ ಗ್ರಾಮದಲ್ಲಿ ಕಳೆದ ಎರಡು ವರ್ಷದಿಂದ ಗ್ರಾಮದ ಒಬ್ಬ ಗ್ರಾಮಸ್ಥರಿಗೂ ಕೊರೊನಾ ಸೋಂಕು ತಗುಲಿಲ್ಲವಂತೆ. ವಯಸ್ಸಾದವರು, ಮಕ್ಕಳು, ಯುವಕರೂ ಯಾರಿಗೂ ಕೊರೊನಾ ತಟ್ಟಿಲ್ಲ. ನಾವು ಬೇರೆ ಬೇರೆ ಗ್ರಾಮಗಳಿಗೆ ಹೋಗಿ ಬರುತ್ತೇವೆ ಆದ್ರೆ ನಮಗೆ ಕೊರೊನಾ ಬರೊಲ್ಲ ಎಂದು ಗ್ರಾಮದ ಜನ ತಿಳಿಸಿದ್ದಾರೆ. ಮಹಾಮಾರಿ ಕೊರೊನಾ ಯಾವುದೇ ಸುಳಿವು ನೀಡದೆಯೇ ಜನರ ದೇಹ ಸೇರಿ ಅವರನ್ನ ಮೃತ್ಯಕೂಪಕ್ಕೆ ತಳ್ಳುತ್ತಿದೆ. ಆದರೆ ಈ ಗ್ರಾಮಕ್ಕೆ ಮಾತ್ರ ಕೊರೊನಾ ಎಂಟ್ರಿ ಕೊಡಲು ಭಯ ಪಡುತ್ತಿದೆಯಂತೆ.
ಗ್ರಾಮಕ್ಕೆ ಸುರಕ್ಷಾ ಕವಚವಾಗಿದ್ದಾರಾ ಗ್ರಾಮದೇವರು? ಗ್ರಾಮಕ್ಕೆ ಕೊರೊನಾ ಬರದೇ ಇರಲು ಗ್ರಾಮ ದೇವರೇ ಕಾರಣ ಎಂದು ಇಲ್ಲಿನ ಗ್ರಾಮಸ್ಥರು ತಿಳಿಸಿದ್ದಾರೆ. ಗ್ರಾಮದ ದ್ಯಾಮವ್ವ, ದುರ್ಗವ್ವ, ಬಸವಣ್ಣ,ರಂಗನಾಥ, ಹನುಮಂತ, ನಾರಾಯಣ, ವೀರಭದ್ರೇಶ್ವರ ಸೇರಿದಂತೆ ಸಪ್ತದೇವರುಗಳೇ ಕೊರೊನಾವನ್ನು ಕಟ್ಟಿ ಹಾಕಿದ್ದಾರೆ ಎಂದು ಗ್ರಾಮದ ಹಿರಿಯರು ಅಭಿಪ್ರಾಯ ಹೊರ ಹಾಕಿದ್ದಾರೆ.
ಈ ಗ್ರಾಮದ ದೇವರಿಗೆ ವಾರಕೊಮ್ಮೆ ಪೂಜೆ, ಪುನಸ್ಕಾರ ನೆರವೇರಿಸಲಾಗುತ್ತೆ. ವಾರಕ್ಕೊಮ್ಮೆ ಊರ ಮಂದಿ ದೇವಸ್ಥಾನದ ಹೊಸ್ತಿಲಿಗೆ ನೀರು ಹಾಕಿ ಪೂಜೆ ಮಾಡುತ್ತಾರೆ. ಊರ ದೇವತೆಗಳ ಕೃಪೆಯಿಂದಾಗಿ ಕೊವಿಡ್ ಮಾರಿ ನಮ್ಮೂರ ಕಡೆ ಸುಳಿದಿಲ್ಲ. ನಮ್ಮೂರ ದೇವರುಗಳೇ ನಮಗೆ ರಕ್ಷೆ ಎಂದು ದೇವರ ಮೇಲಿನ ನಂಬಿಕೆಯಲ್ಲಿ ನೀರಲಕೇರಿ ಗ್ರಾಮದ ಜನರು ಕೊರೊನಾ ಭಯದಿಂದ ಮುಕ್ತರಾಗಿ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ.
ಆದರೆ ದೇವರ ಮೇಲಿನ ನಂಬಿಕೆಯೋ ಕಾಕತಾಳಿಯವೊ, ಕೊರೊನಾದ ಎರಡು ಅಲೆಗಳಿಂದಲೂ ಈ ಗ್ರಾಮ ಕೊರೊನಾ ಮುಕ್ತವಾಗಿದೆ. ಇಲ್ಲಿ ಒಬ್ಬರಿಗೂ ಕೊರೊನಾ ಬಂದಿಲ್ಲ. ವಲಸಿಗರು ಬಂದವರು ಇದ್ದಾರೆ, ದಿನವೂ ನಗರಕ್ಕೂ ಹೋಗಿ ಬರ್ತಾರೆ. ಸದ್ಯ ಯಾವುದೇ ಸಮಸ್ಯೆಯಾಗಲಿ ಸಾವಾಗಲಿ ಕೊರೊನಾದಿಂದ ಸಂಭವಿಸಿಲ್ಲ.
ಇದನ್ನೂ ಓದಿ: ಕೊರೊನಾ ಮಹಾಮಾರಿಯನ್ನು ಮೆಟ್ಟಿನಿಂತು ಮಾದರಿಯಾದ ಒಡಿಶಾದ ಗ್ರಾಮ, ಇದುವರೆಗೂ ಒಂದೇ ಒಂದು ಪ್ರಕರಣವೂ ಇಲ್ಲ