
ಬೆಂಗಳೂರು, (ನವೆಂಬರ್ 20): ಸಿದ್ದರಾಮಯ್ಯ ಸರ್ಕಾರಕ್ಕೆ ( Karnataka Congress Government) ಎರಡೂವರೆ ವರ್ಷ ಭರ್ತಿಯಾಗುತ್ತಿದ್ದಂತೆ ಅಧಿಕಾರ ಹಂಚಿಕೆಯ ರಣ ರೋಚಕ ಧಾರಾವಾಹಿ ಆರಂಭವಾಗುವ ಎಲ್ಲಾ ಲಕ್ಷಣಗಳು ಗೋಚರಿಸಲಾರಂಭಿಸಿದೆ. ಹೌದು…ಇಂದು(ನವೆಂಬರ್ 20) ಸೂರ್ಯ ಮುಳುಗುತ್ತಿದ್ದಂತೆಯೇ ಡಿಕೆ ಶಿವಕುಮಾರ್ (DK Shivakumar) ಬಣದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಕೆಲ ಶಾಸಕ, ಸಚಿವರು ದೆಹಲಿ ಹಾರಿದ್ದರೆ. ಇನ್ನು ವಿಧಾನಪರಿಷತ್ ಸದಸ್ಯರು ಬೆಂಗಳೂರಿನಲ್ಲಿ ಡಿಕೆ ಶಿವಕುಮಾರ್ ನಿವಾಸಕ್ಕೆ ದೌಡಾಯಿಸಿ ಗೌಪ್ಯ ಸಭೆ ನಡೆಸಿದ್ದಾರೆ. ಇನ್ನು ಚಲುವರಾಯಸ್ವಾಮಿ (N Cheluvarayaswamy) ದೆಹಲಿಗೆ ಹೋಗುತ್ತಿದ್ದಂತೆ ಇತ್ತ ಸಿಎಂ ಸಿದ್ದರಾಮಯ್ಯ (CM Siddaramaiah) ದಾಳ ಪ್ರಯೋಗಿಸಿದ್ದು, ನಾಳೆ (ನವೆಂಬರ್ 21) ತುರ್ತು ಕೃಷಿ ಸಚಿವರ ಸಭೆ ಕರೆದಿದ್ದು, ಕುತೂಹಲಕ್ಕೆ ಕಾರಣವಾಗಿದೆ.
ಡಿಕೆ ಶಿವಕುಮಾರ್ ಬಣದಲ್ಲಿ ಗುರುತಿಸಿಕೊಂಡಿರುವ ಸಕ್ಕರೆ ಸಚಿವ ಶಿವಾನಂದ್ ಪಾಟೀಲ್, ಆನೇಕಲ್ ಶಾಸಕ ಶಿವಣ್ಣ, ಗುಬ್ಬಿ ಶಾಸಕ ಎಸ್.ಆರ್ ಶ್ರೀನಿವಾಸ್, ಕುಣಿಗಲ್ ಶಾಸಕ ರಂಗನಾಥ್, ಮಂಡ್ಯ ಶಾಸಕ ರವಿಗಣಿಗ, ಶೃಂಗೇರಿ ಶಾಸಕ ರಾಜೇಗೌಡ ಕೂಡಾ ದೆಹಲಿಗೆ ಹೋಗಿದ್ದಾರೆ. ಖಾಸಗಿ ಕೆಲಸ ನೆಪದಲ್ಲಿ ದೆಹಲಿ ಯಾತ್ರೆ ಕೈಗೊಂಡಿದ್ದು, ಹೈಕಮಾಂಡ್ ನಾಯಕರ ಭೇಟಿಗೆ ಕಸರತ್ತು ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಮೊದಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭೇಟಿಗೆ ತೆರಳಿದ್ದಾರೆ. ಆದ್ರೆ, ಖರ್ಗೆ ಅವರು ಮತ್ತೊಂದಯ ಗೇಟಿನಿಂದ ಮನೆಯಿಂದ ನೇರವಾಗಿ ಏರ್ಪೋರ್ಟ್ಗೆ ತೆರಳಿದ್ದು, ಅಲ್ಲಿಂದ ಬೆಂಗಳೂರಿನಯತ್ತ ಪ್ರಯಾಣ ಬೆಳೆಸಿದ್ದಾರೆ. ಇದರಿಂದ ಡಿಕೆ ಬಣದ ಭೇಟಿಯಿಂದ ತಪ್ಪಿಸಿಕೊಂಡಿದ್ದಾರೆ.
ಕುತೂಹಲಕಾರಿ ವಿಚಾರ ಅಂದ್ರೆ ದೆಹಲಿ ದಂಡಯಾತ್ರೆ ಕೈಗೊಂಡಿದ್ದು ಒಕ್ಕಲಿಗ ಸಮುದಾಯದ ನಾಯಕರು. ಹೀಗಾಗಿ ಡಿಕೆ ಪಡೆ ಒಕ್ಕಲಿಗ ಟ್ರಂಪ್ ಕಾರ್ಡ್ ಪ್ಲೇ ಮಾಡಲು ಮುಂದಾಗಿದೆ. ಒಕ್ಕಲಿಗ ನಾಯಕರು ದೆಹಲಿಯಾತ್ರೆ ಕೈಗೊಂಡಿದ್ದು, ಹಳೇ ಮೈಸೂರು ಬಾಗದಲ್ಲಿ ಒಕ್ಕಲಿಗ ಸಮುದಾಯದ ಪ್ರಾಬಲ್ಯವಿದೆ. ಡಿಕೆಗೆ ಅವಕಾಶ ನೀಡದಿದ್ದರೆ ವಿರೋಧಿ ಪಡೆಗೆ ಶಕ್ತಿ ಸಿಗಲಿದೆ. ಬಿಜೆಪಿ, ಜೆಡಿಎಸ್ ಮೈತ್ರಿಯಿಂದ ನಮಗೆ ಡ್ಯಾಮೇಜ್ ಆಗಿದೆ ಅಂತಾ ವಾದ ಮುಂದಿಡುವ ಸಾಧ್ಯತೆ ಇದೆ. ಹಾಗೆಯೇ 3 ಪ್ರತ್ಯೇಕ ತಂಡಗಳಲ್ಲಿ ಡಿಕೆ ಬಣ ದೆಹಲಿ ಪ್ರವಾಸ ಮಾಡಲು ನಿರ್ಧರಿಸಿದ್ದಾರಂತೆ. ಪ್ರತಿ ತಂಡದಲ್ಲಿ ತಲಾ 10 ಶಾಸಕರಂತೆ ದೆಹಲಿ ಭೇಟಿ ನೀಡಿ, 30ಕ್ಕೂ ಹೆಚ್ಚು ಶಾಸಕರು ಹೈಕಮಾಂಡ್ ಮುಂದೆ ಪರೇಡ್ ನಡೆಸಲು ಚಿಂತನೆ ನಡೆದಿದೆ ಎಂದು ತಿಳಿದುಬಂದಿದೆ. ಈ ಮೂಲಕ ಹೈಕಮಾಂಡ್ ಮೇಲೆ ಒತ್ತಡ ಹಾಕಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಅಲ್ಲದೇ ನಮಗೂ ಶಾಸಕರ ಬೆಂಬಲ ಇದೆ ಎಂಬ ಸಂದೇಶ ನೀಡಲು ಮುಂದಾಗಿದ್ದಾರೆ. ಆದ್ರೆ ಶಾಸಕರು ಹೋಗುವ ಮುನ್ನವೇ ದೆಹಲಿಗೆ ಹೋಗಿರೋ ಚಲುವರಾಯಸ್ವಾಮಿ ಟಿವಿ9 ಜೊತೆ ಮಾತನಾಡಿದ್ದಾರೆ. ಶಾಸಕರು ದೆಹಲಿಗೆ ಬಂದಿರೋ ವಿಚಾರ ನನಗೆ ಗೊತ್ತಿಲ್ಲ. ಮಾಹಿತಿನೂ ಇಲ್ಲ ಎಂದಿದ್ದಾರೆ. ಇನ್ನೂ ಶಿವಗಂಗಾ ಬಸವರಾಜ್ ಕೂಡಾ ನಾನು ದೆಹಲಿಗೆ ಹೋಗಿದ್ದಾರೆ ಎನ್ನಲಾಗಿತ್ತು. ಆದ್ರೆ, ಬಸವರಾಜ್ ಕೂಡಾ ನಾನು ದೆಹಲಿಗೆ ಹೋಗಿಲ್ಲ ಎಂದಿದ್ದಾರೆ.
ಒಂದು ಬಣ ದೆಹಲಿಗೆ ತೆರಳಿದ್ದರೆ ಮತ್ತೊಂದು ಬಣ ಬೆಂಗಳೂರಿನ ಸದಾಶಿವನಗರದಲ್ಲಿರುವ ಡಿಕೆ ಶಿವಕುಮಾರ್ ನಿವಾಸದಲ್ಲಿ ಸಭೆ ಸೇರಿದೆ. ವಿಧಾನ ಪರಿಷತ್ ಸದಸ್ಯರಾದ ಪುಟ್ಟಣ್ಣ, ಶ್ರೀನಿವಾಸ್, ರಾಮೋಜಿಗೌಡ, ಬಲ್ಕೀಸ್ ಬಾನು ಮತ್ತು ಬಸನಗೌಡ ಬಾದರ್ಲಿ ಅವರು ಡಿಕೆ ಶಿವಕುಮಾರ್ ನಿವಾಸಕ್ಕೆ ದೌಡಾಯಿಸಿದ್ದು, ಸುಮಾರು 1 ಗಂಟೆಗೂ ಹೆಚ್ಚು ಕಾಲ ಡಿಕೆಶಿ ಜೊತೆ ಸಭೆ ನಡೆಸಿದ್ದಾರೆ.
ಒಂದೆಡೆ ಡಿಕೆಶಿ ಬಣ ದೆಹಲಿಯಲ್ಲಿ ಹಾರಿದ್ದರೆ, ಮತ್ತೊಂದು ಬಣ ಡಿಕೆ ಶಿವಕುಮಾರ್ ನಿವಾದಸದಲ್ಲಿ ರಹಸ್ಯ ಸಭೆ ನಡೆಸಿದ್ದು, ಇದೀಗ ಖಾಸಗಿ ಕಾರ್ಯಕ್ರಮದ ನಿಮಿತ್ತ ಬೆಂಗಳೂರಿಗೆ ಬಂದಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಭೇಟಿಗೆ ಮುಂದಾಗಿದ್ದಾರೆ. ಇದಕ್ಕೆ ಖರ್ಗೆ ಸಹ ಸಮಯ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಡಿಕೆ ಟೀಮ್ ದೆಹಲಿಗೆ ಹೋಗಿದೆ. ಹಾಗಂತ ಸಿಎಂ ಬಣ ಸುಮ್ನೆ ಕೂತಿಲ್ಲ. ಸಿದ್ದರಾಮಯ್ಯ ಬೆಂಬಲಿಗರು ಕೂಡಾ ರೆಡಿ ಆದಂತೆ ಕಾಣುತ್ತಿದೆ. ಯಾಕಂದ್ರೆ ಸಿದ್ದರಾಮಯ್ಯ ಆಪ್ತರು, ಶಾಸಕಾಂಗ ಸಭೆಯ ತಂತ್ರಗಾರಿಕೆ ಮುಂದಿಡಲು ಚಿಂತನೆ ನಡೆಸಿದ್ದಾರೆ. ನಾಯಕತ್ವ ಪ್ರಸ್ತಾಪ ಮಾಡಿದ್ರೆ ಮುಂದಿನ ನಿರ್ಣಯ CLPಯಲ್ಲೇ ಆಗ್ಬೇಕೆಂದು ದಾಳ ಉರುಳಿಸಲಿದ್ದಾರೆ. ಈಗಾಗಲೇ ಮುಂದಿನ ಎರಡೂವರೆ ವರ್ಷ ಸಿದ್ದರಾಮಯ್ಯನವರೇ ಸಿಎಂ, ಸಿದ್ದರಾಮಯ್ಯನವರೇ ಅನಿವಾರ್ಯ ಅಂತಾ ಪ್ರತಿದಾಳ ಉರುಳಿಸಿದ್ದಾರೆ.
ಒಟ್ಟಿನಲ್ಲಿ ಡಿಕೆ ಶಿವಕುಮಾರ್ ತಾಳ್ಮೆ ಕಳೆದುಕೊಂಡಿದ್ದು, ಸರ್ಕಾರಕ್ಕೆ ಎರಡುವರೆ ವರ್ಷ ತುಂಬುತ್ತಿದ್ದಂತೆಯೇ ನವೆಂಬರ್ ಕ್ರಾಂತಿ ಚಟುವಟಿಕೆಗಳು ಗರಿಗೆದರಿವೆ. ಇದು ಯಾವ ಹಂತಕ್ಕೆ ಹೋಗಿ ನಿಲ್ಲುತ್ತೆ ಎನ್ನುವುದನ್ನು ಕಾದುನೋಡಬೇಕಿದೆ.
Published On - 9:48 pm, Thu, 20 November 25