ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಕೊರೊನಾ ಸೋಂಕು ತಗುಲಿದ ಮಕ್ಕಳ ಸಂಖ್ಯೆ
ಕಳೆದ 20 ದಿನದಲ್ಲಿ ಬೆಂಗಳೂರಿನಲ್ಲಿ 2,000 ಕ್ಕೂ ಅಧಿಕ ಮಕ್ಕಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ರಾಜ್ಯದಲ್ಲಿ ಮೊದಲ ಅಲೆಯಲ್ಲಿ ಮಾರ್ಚ್ನಿಂದ ಸೆಪ್ಟೆಂಬರ್ ವರೆಗೆ 19,378 ಮಕ್ಕಳಿಗೆ ಸೋಂಕು ಕಾಣಿಸಿಕೊಂಡಿತ್ತು. ಇದೇ ಅವಧಿಯಲ್ಲಿ 11ರಿಂದ 20 ವರ್ಷದ 45,895 ಮಕ್ಕಳಿಗೆ ಸೋಂಕು ದೃಢವಾಗಿತ್ತು
ಬೆಂಗಳೂರು: ಕೊರೊನಾ ಎರಡನೇ ಅಲೆ ಸದ್ಯಕ್ಕೆ ನಿಯಂತ್ರಣಕ್ಕೆ ಬರುತ್ತಿದೆ. ಆದರೆ ಅಕ್ಟೋಬರ್ ಅಥವಾ ನವೆಂಬರ್ ಹೊತ್ತಿಗೆ ಮೂರನೇ ಅಲೆ ಬರುವ ಸಾಧ್ಯತೆ ಹೆಚ್ಚಿದೆ ಎಂದು ತಜ್ಞರು ಹೇಳಿದ್ದಾರೆ. ಅಲ್ಲದೆ ಮೂರನೇ ಅಲೆ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಆದರೆ ರಾಜ್ಯದಲ್ಲಿ ಮೂರನೇ ಅಲೆ ಈಗಾಗಲೇ ಆರಂಭವಾಗಿರುವಂತೆ ಕಂಡುಬರುತ್ತಿದೆ. ದಿನದಿಂದ ದಿನಕ್ಕೆ ಕೊರೊನಾ ಸೋಂಕು ತಗುಲಿದ ಮಕ್ಕಳ ಸಂಖ್ಯೆ ಏರಿಕೆಯಾಗುತ್ತಿದೆ.
ಕಳೆದ 20 ದಿನದಲ್ಲಿ ಬೆಂಗಳೂರಿನಲ್ಲಿ 2,000 ಕ್ಕೂ ಅಧಿಕ ಮಕ್ಕಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ರಾಜ್ಯದಲ್ಲಿ ಮೊದಲ ಅಲೆಯಲ್ಲಿ ಮಾರ್ಚ್ನಿಂದ ಸೆಪ್ಟೆಂಬರ್ ವರೆಗೆ 19,378 ಮಕ್ಕಳಿಗೆ ಸೋಂಕು ಕಾಣಿಸಿಕೊಂಡಿತ್ತು. ಇದೇ ಅವಧಿಯಲ್ಲಿ 11ರಿಂದ 20 ವರ್ಷದ 45,895 ಮಕ್ಕಳಿಗೆ ಸೋಂಕು ದೃಢವಾಗಿತ್ತು. ಎರಡನೇ ಅಲೆಯಲ್ಲಿ ಮಾರ್ಚ್ 1ರಿಂದ ಮೇ 6ರ ವರೆಗೆ ಬೆಂಗಳೂರು ಒಂದರಲ್ಲೇ 10 ವರ್ಷದೊಳಗಿನ 19,401 ಮಕ್ಕಳಿಗೆ ಸೋಂಕು ತಗುಲಿದೆ.
ಒಟ್ಟು 10ರಿಂದ 20 ವರ್ಷದೊಳಗಿನ ಸುಮಾರು ಲಕ್ಷಕ್ಕೂ ಅಧಿಕ ಮಕ್ಕಳಿಗೆ ಸೋಂಕು ಕಾಣಿಸಿಕೊಂಡಿದ್ದು, ಮೊದಲು ಹಾಗೂ ಎರಡನೇ ಅಲೆಯಲ್ಲಿ ಬೆಂಗಳೂರು ಒಂದರಲ್ಲೇ 100 ಕ್ಕೂ ಹೆಚ್ಚು ಮಕ್ಕಳು ಸಾವನ್ನಪ್ಪಿದ್ದಾರೆ. ಸದ್ಯ ಮಕ್ಕಳ ಸಾವಿನ ದರ ಶೇ.0.01ರಷ್ಟಿದೆ.
ಬೆಂಗಳೂರಿನಲ್ಲಿ ಸೋಂಕು ತಗುಲಿದ ಮಕ್ಕಳ ಸಂಖ್ಯೆ ಜೂನ್ 17 ರಂದು ಬೆಂಗಳೂರಿನಲ್ಲಿ ಒಂದರಿಂದ 20 ವರ್ಷದೊಳಗಿನ 148 ಮಕ್ಕಳಿಗೆ ಸೋಂಕು ಕಾಣಿಸಿಕೊಂಡಿದೆ. ಜೂನ್ 18ಕ್ಕೆ ಒಂದರಿಂದ 20 ವರ್ಷದೊಳಗಿನ 115 ಮಕ್ಕಳಿಗೆ ಮಕ್ಕಳಿಗೆ ಸೋಂಕು ದೃಢವಾಗಿದ್ದು, ಜೂನ್ 19 ರಂದು 106 ಮಕ್ಕಳಿಗೆ ಸೋಂಕು ತಗುಲಿದೆ. ಜೂನ್ 20 ರಂದು ಒಂದರಿಂದ 20 ವರ್ಷದೊಳಗಿನ 45 ಮಕ್ಕಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಇತರೆ ಜಿಲ್ಲೆಗಳ ವಿವರ ಕೊಡಗು ಜಿಲ್ಲೆಯಲ್ಲಿ ಜೂನ್ 1 ರಿಂದ 20ರ ವರಗೆ 84 ಮಕ್ಕಳಿಗೆ ಸೋಂಕು ತಗುಲಿದೆ. ಕೋಲಾರದಲ್ಲಿ ಜೂನ್ 1 ರಿಂದ 20ರ ವರೆಗೆ 454 ಜನ ಮಕ್ಕಳಿಗೆ, ಚಿತ್ರದುರ್ಗದಲ್ಲಿ ಒಟ್ಟು 523 ಮಕ್ಕಳಿಗೆ, ಬೀದರ್ನಲ್ಲಿ ಒಟ್ಟು 6 ಮಕ್ಕಳಿಗೆ, ಯಾದಗಿರಿಯಲ್ಲಿ 85 ಮಕ್ಕಳಿಗೆ, ಹಾವೇರಿಯಲ್ಲಿ 167 ಮಕ್ಕಳಿಗೆ, ಗದಗದಲ್ಲಿ 184 ಮಕ್ಕಳಿಗೆ, ಧಾರವಾಡದಲ್ಲಿ 221 ಮಕ್ಕಳಿಗೆ, ಬಳ್ಳಾರಿಯಲ್ಲಿ 622 ಮಕ್ಕಳಿಗೆ, ರಾಮನಗರದಲ್ಲಿ 128 ಮಕ್ಕಳಿಗೆ, ಮಂಡ್ಯದಲ್ಲಿ 1,003 ಮಕ್ಕಳಿಗೆ, ಕಲಬುರಗಿಯಲ್ಲಿ 107, ಬಾಗಲಕೋಟೆಯಲ್ಲಿ ಬಾಗಲಕೋಟೆ ಮಕ್ಕಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ವಾಂತಿ, ಭೇದಿ ಆಗುತ್ತಿದ್ದರೆ ವೈದ್ಯರನ್ನು ಸಂಪರ್ಕಿಸಿ ಮಕ್ಕಳಲ್ಲಿ ಮೂರು ದಿನಕ್ಕೂ ಹೆಚ್ಚು ಕಾಲ ಜ್ವರ, ವಾಂತಿ, ಭೇದಿ ಆಗುತ್ತಿದ್ದರೆ ವೈದ್ಯರನ್ನು ಸಂಪರ್ಕಿಸಬೇಕು. ಇದು ಕೊರೊನಾ ಬಂದು ಹೋಗಿರುವಂತಹ ಲಕ್ಷಣಗಳಾಗಿವೆ ಎಂದು ಟಿವಿ9ಗೆ ಮಕ್ಕಳ ತಜ್ಞ ಡಾ.ಶಿವನಗೌಡ ಜೋಳದರಾಶಿ ಸಲಹೆ ನೀಡಿದ್ದಾರೆ. ಗದಗದಲ್ಲಿ ಈವರೆಗೆ ಇಂಥ ಲಕ್ಷಣವಿದ್ದ 15 ಮಕ್ಕಳು ಬಂದಿದ್ದರು. ಈ ಪೈಕಿ 10 ಮಕ್ಕಳು ಗುಣಮುಖರಾಗಿ ವಾಪಸಾಗಿದ್ದಾರೆ. ಇನ್ನೂ 5 ಮಕ್ಕಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಾಗಿ ಮುಂಜಾಗ್ರತಾ ಕ್ರಮಕೈಗೊಳ್ಳಬೇಕೆಂದು ತಿಳಿಸಿದರು.
ವಿಶೇಷವಾಗಿ ವಾರ್ಡ್ ನಿರ್ಮಾಣ ಕೊರೊನಾ 3ನೇ ಅಲೆ ಮಕ್ಕಳಿಗೆ ಹೆಚ್ಚು ಸಮಸ್ಯೆ ಹಿನ್ನೆಲೆ ಜಿಲ್ಲೆಗಳಲ್ಲಿ ವಿಶೇಷವಾಗಿ ವಾರ್ಡ್ ನಿರ್ಮಾಣ ಮಾಡುತ್ತೇವೆ ಎಂದು ಆರೋಗ್ಯ ಸಚಿವ ಕೆ.ಸುಧಾಕರ್ ಹೇಳಿದರು. ನುರಿತ ಮಕ್ಕಳ ತಜ್ಞರು, ನರ್ಸ್‌ಗಳನ್ನು ನೇಮಿಸುತ್ತೇವೆ. ಮಕ್ಕಳ ವಿಚಾರದಲ್ಲಿ ನಾವೂ ಚಾನ್ಸ್ ತೆಗೆದುಕೊಳ್ಳುವುದಿಲ್ಲ. ತುಂಬಾ ಎಚ್ಚರಿಕೆ ಹೆಜ್ಜೆ ಇಡಬೇಕು ಎಂದು ಸಚಿವರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ
(number of children infected with coronavirus is on the rise in Karnataka)