ಬೆಂಗಳೂರು, (ಮೇ 24): ಛತ್ರಿ ಹಿಡಿದು NWKRTC ಬಸ್ ಚಲಾಯಿಸಿದ್ದ ಚಾಲಕನ ವಿಡಿಯೋ ವೈರಲ್ ಆಗಿದ್ದು, ಇದೀಗ ಈ ವಿಡಿಯೋನ ಅಸಲಿಯತ್ತು ಬಯಲಾಗಿದೆ. ಮನೋರಂಜನೆಗಾಗಿ ಛತ್ರಿ ಹಿಡಿದು ಬಸ್ ಚಲಾಯಿಸಿದ್ದ ಡ್ರೈವರ್ ಹನುಮಂತಪ್ಪ ಕಿಲ್ಲೇದಾರ ಅಮಾನತುಗೊಂಡಿದ್ದಾರೆ. ಹೌದು… ಬಸ್ ಸೋರುತ್ತಿದೆ ಎನ್ನುವಂತೆ ಛತ್ರಿ ಹಿಡಿದು ಬಸ್ ಚಲಾಯಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗುತ್ತಿದ್ದಂತೆಯೇ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧಿಕಾರಿಗಳು ತನಿಖೆ ನಡೆಸಿದ್ದು, ಮನರಂಜನೆಗಾಗಿ ಚಾಲಕ ಕೊಡೆ ಹಿಡಿದು ಬಸ್ ಚಾಲನೆ ಮಾಡಿರುವುದು ಬೆಳಕಿಗೆ ಬಂದಿದೆ. ಹೀಗಾಗಿ ಹನುಮಂತಪ್ಪ ಕಿಲ್ಲೇದಾರ ಅವರನ್ನು ಸಸ್ಪೆಂಡ್ ಮಾಡಲಾಗಿದೆ.
ಬಸ್‌ನಲ್ಲಿ ಮಳೆ ನೀರು ಸೋರುತ್ತಿರಲಿಲ್ಲ. ಬಸ್ ನಲ್ಲಿ ಪ್ರಯಾಣಿಕರು ಯಾರು ಇಲ್ಲದ ವೇಳೆಯಲ್ಲಿ ಕಂಡಕ್ಟರ್ ಅನಿತಾ ಹೆಚ್ ಬಳಿಯಿದ್ದ ಛತ್ರಿ ತೆಗೆದುಕೊಂಡು ಮನರಂಜನೆಗಾಗಿ ವಿಡಿಯೋ ಮಾಡಿದ್ದಾರೆ. ಮಳೆ ನೀರು ಸೋರಿಕೆ ಬಗ್ಗೆ ಪ್ರಯಾಣಿಕರಿಂದ ಯಾವುದೇ ದೂರು ಬಂದಿಲ್ಲ ಎಂದು NWKRTC ಅಧಿಕಾರಿಗಳು ತಪಾಸಣೆ ನಡೆಸಿ ವರದಿ ಸಲ್ಲಿಸಿದ್ದಾರೆ.
ಇದನ್ನೂ ಓದಿ: ಸೋರುತಿಹುದು ಬಸ್ ಮಾಳಿಗಿ: ವಾಯುವ್ಯ ಸಾರಿಗೆ ಬಸ್ ಚಾಲಕರಿಗೆ ಛತ್ರಿ ಗ್ಯಾರಂಟಿ! ವಿಡಿಯೋ ನೋಡಿ
ವಾಯವ್ಯ ಕರ್ನಾಟಕ ಸಾರಿಗೆ (NWKRTC Bus) ಬಸ್ಸೊಂದರಲ್ಲಿ ಸೋರುತ್ತಿರುವ ಮಳೆನೀರಿನಿಂದ ರಕ್ಷಣೆ ಪಡೆಯುವ ರೀತಿ ಹನುಮಂತಪ್ಪ ಕಿಲ್ಲೇದಾರ ಒಂದು ಕೈಯಲ್ಲಿ ಛತ್ರಿ ಹಿಡಿದುಕೊಂಡು ಮತ್ತೊಂದು ಕೈಯಿಂದ ಬಸ್ ಚಲಾಯಿಸಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್ ಆಗಿದ್ದು, ಈ ಬಗ್ಗೆ ರಾಜ್ಯ ಸರ್ಕಾರದ ವಿರುದ್ಧ ಟೀಕೆಗಳು ವ್ಯಕ್ತವಾಗಿದ್ದವು.
ಧಾರವಾಡ ಘಟಕದ ಬೇಟಗೇರಿ-ಧಾರವಾಡ ಮಾರ್ಗದಲ್ಲಿ ಸಂಚರಿಸುವ ಬಸ್‌ನಲ್ಲಿ ಚಾಲಕರಾಗಿ ಹನುಮಂತಪ್ಪ ಅ ಕಿಲ್ಲೇದಾರ ಹಾಗೂ ನಿರ್ವಾಹಕರಾಗಿ ಅನಿತಾ ಅವರು ಕರ್ತವ್ಯ ನಿರ್ವಹಿಸುತ್ತಿದ್ದರು. ಮಳೆ ಬರುತ್ತಿದ್ದಾಗ ಸಂಜೆ ಬಸ್ಸಿನಲ್ಲಿ ಪ್ರಯಾಣಿಕರು ಇಲ್ಲದೇ ಇದ್ದಾಗ ಚಾಲಕರು ಮನೋರಂಜನೆಗಾಗಿ ನಿರ್ವಾಹಕರ ಬಳಿ ಇದ್ದ ಕೊಡೆಯನ್ನು ಪಡೆದು ಹಿಡಿದುಕೊಂಡು ಬಸ್ ಚಾಲನೆ ಮಾಡಿದ್ದಾರೆ. ಚಾಲನೆ ಮಾಡುತ್ತಿರುವ ದೃಶ್ಯವನ್ನು ನಿರ್ವಾಹಕಿ ಮೊಬೈಲಿನಲ್ಲಿ ಸೆರೆ ಹಿಡಿದಿದ್ದಾರೆ.
ಮಳೆ ಬರುತ್ತಿದ್ದಾಗ ಚಾಲಕರ ಮೇಲಿನ ಛಾವಣಿಯಾಗಲಿ ಪ್ರಯಾಣಿಕರು ಕುಳಿತುಕೊಳ್ಳುವ ಸ್ಥಳದ ಛಾವಣಿಯಿಂದ ಸೋರುತ್ತಿರಲಿಲ್ಲ.ವಾಹನದ ಛಾವಣಿ ಸೋರಿಕೆ ಬಗ್ಗೆ ಚಾಲಕ, ನಿರ್ವಾಹಕರ, ಪ್ರಯಾಣಿಕರ ಯಾವುದೇ ದೂರು ಸಹ ದಾಖಲಾಗಿಲ್ಲ. ವಾಹನವನ್ನು ವಿಭಾಗದ ತಾಂತ್ರಿಕ ಶಿಲ್ಪಿಗಳಿಂದ ಪರಿಶೀಲನೆ ಮಾಡಲಾಗಿದ್ದು ಮೇಲ್ಚಾವಣಿ ಸೋರುತ್ತಿಲ್ಲ ಎನ್ನುವುದನ್ನು ಖಚಿತಪಡಿಸಲಾಗಿದೆ. ಈ ವಿಡಿಯೋದ ಬಗ್ಗೆ ಸಿಬ್ಬಂದಿಯಿಂದ ಸ್ಪಷ್ಟೀಕರಣ ಪಡೆಯಲಾಗಿದ್ದು ಇದು ಕೇವಲ ಮನೋರಂಜನೆಗಾಗಿ ಮಾಡಿದ ವಿಡಿಯೋ ಚಿತ್ರೀಕರಣವಾಗಿರುತ್ತದೆ ಎಂದು ಹೇಳಿಕೆ ನೀಡಿದ್ದಾರೆ.
ಇನ್ನು ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಕರ್ನಾಟಕ ಬಿಜೆಪಿ ವ್ಯಂಗ್ಯಚಿತ್ರವನ್ನು ಹಂಚಿಕೊಂಡಿದ್ದು ಕರ್ನಾಟಕದ ಸರ್ಕಾರದಿಂದ ಛತ್ರಿ ಭಾಗ್ಯಕ್ಕೆ ಚಾಲನೆ ಎಂದು ಸರ್ಕಾರವನ್ನು ಟೀಕಿಸಿತ್ತು.
ಸನ್ಮಾನ್ಯ @RLRBTM ಅವರೇ, ಇದು ನಮ್ಮ ಸರ್ಕಾರಿ ಬಸ್ಸುಗಳ ದುಃಸ್ಥಿತಿ. ಈ ರೀತಿ ಒಂದು ಕೈಯಲ್ಲಿ ಕೊಡೆ, ಒಂದು ಕಯ್ಯಲ್ಲಿ ಸ್ಟಿಯರಿಂಗ್ ವೀಲ್ ಬ್ಯಾಲೆನ್ಸ್ ಮಾಡುತ್ತ ಓಡಿಸುವುದರಿಂದ ಚಾಲಕರು ಹಾಗೂ ಪ್ರಯಾಣಿಕರ ಜೀವಕ್ಕೆ ಕುತ್ತು. ಇದೇನಾ ಚಾಲಕರಿಗೆ ಇರುವ ಪ್ರಮಾಣಿತ ಕಾರ್ಯಾಚರಣೆ ವಿಧಾನ ? (standard operating procedure). ಚಾಲಕರ,… pic.twitter.com/zcG43pdWvf
— Basanagouda R Patil (Yatnal) (ಮೋದಿಯವರ ಕುಟುಂಬ) (@BasanagoudaBJP) May 24, 2024
ಬಿಜೆಪಿ ಹಿರಿಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ತಮ್ಮ ಎಕ್ಸ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಎಕ್ಸ್‌ನಲ್ಲಿ ವಿಡಿಯೋ ಪೋಸ್ಟ್ ಮಾಡಿರುವ ಅವರು “ಸನ್ಮಾನ್ಯ ರಾಮಲಿಂಗಾರೆಡ್ಡಿ ಅವರೇ, ಇದು ನಮ್ಮ ಸರ್ಕಾರಿ ಬಸ್ಸುಗಳ ದುಃಸ್ಥಿತಿ. ಈ ರೀತಿ ಒಂದು ಕೈಯಲ್ಲಿ ಕೊಡೆ, ಒಂದು ಕೈಯಲ್ಲಿ ಸ್ಟಿಯರಿಂಗ್ ವೀಲ್ ಬ್ಯಾಲೆನ್ಸ್ ಮಾಡುತ್ತ ಓಡಿಸುವುದರಿಂದ ಚಾಲಕರು ಹಾಗೂ ಪ್ರಯಾಣಿಕರ ಜೀವಕ್ಕೆ ಕುತ್ತು. ಇದೇನಾ ಚಾಲಕರಿಗೆ ಇರುವ ಪ್ರಮಾಣಿತ ಕಾರ್ಯಾಚರಣೆ ವಿಧಾನ ? (standard operating procedure). ಚಾಲಕರ, ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ಇರಲಿ.” ಎಂದಿದ್ದರು.