AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Deepavali Special Train: ಪ್ರಯಾಣಿಕರಿಗೆ ಸಿಹಿ ಸುದ್ದಿ; ಬೆಂಗಳೂರಿನಿಂದ ತಾಳಗುಪ್ಪ, ಬೆಳಗಾವಿಗೆ ದೀಪಾವಳಿ ವಿಶೇಷ ರೈಲು

ದೀಪಾವಳಿ ಹಿನ್ನಲೆ ಬೆಂಗಳೂರಿನಿಂದ ತಾಳಗುಪ್ಪ ಮತ್ತು ಬೆಳಗಾವಿಗೆ ವಿಶೇಷ ರೈಲುಗಳನ್ನ ಸೌತ್​ ವೆಸ್ಟರ್ನ್​ ರೈಲ್ವೇ (SWR) ಘೋಷಿಸಿದೆ. ಯಾವ ಯಾವ ದಿನ ಈ ರೈಲುಗಳು ಸಂಚರಿಸಲಿವೆ? ರೈಲು ಹೊರಡುವ ನಿಲ್ದಾಣ ಯಾವುದು? ಯಾವ ಮಾರ್ಗವಾಗಿ ಸಂಚಾರ? ಎಂಬಿತ್ಯಾದಿ ಮಾಹಿತಿಗಳು ಇಲ್ಲಿವೆ ಗಮನಿಸಿ.

Deepavali Special Train: ಪ್ರಯಾಣಿಕರಿಗೆ ಸಿಹಿ ಸುದ್ದಿ; ಬೆಂಗಳೂರಿನಿಂದ ತಾಳಗುಪ್ಪ, ಬೆಳಗಾವಿಗೆ ದೀಪಾವಳಿ ವಿಶೇಷ ರೈಲು
ವಿಶೇಷ ರೈಲು
ಪ್ರಸನ್ನ ಹೆಗಡೆ
|

Updated on:Oct 13, 2025 | 12:19 PM

Share

ಬೆಂಗಳೂರು, ಅಕ್ಟೋಬರ್​ 13: ದೀಪಾವಳಿ ಹಬ್ಬದ ಹಿನ್ನಲೆ ಪ್ರಯಾಣಿಕರ ಅನುಕೂಲಕ್ಕಾಗಿ ವಿಶೇಷ ರೈಲುಗಳನ್ನು (Train) ಸೌತ್​ ವೆಸ್ಟರ್ನ್​ ರೈಲ್ವೇ (SWR) ಘೋಷಿಸಿದೆ. ಬೆಂಗಳೂರು-ತಾಳಗುಪ್ಪ, ಬೆಂಗಳೂರು- ಬೆಳಗಾವಿ ನಡುವೆ ವಿಶೇಷ ರೈಲುಗಳು ಸಂಚರಿಸಲಿದ್ದು, ಹಬ್ಬದ ವೇಳೆ ಕರ್ನಾಟಕದ ವಿವಿಧ ಭಾಗಗಳಿಗೆ ತೆರಳಲಿರುವ ಪ್ರಯಾಣಿಕರ ಅನುಕೂಲಕ್ಕಾಗಿ ವಿಶೇಷ ರೈಲುಗಳನ್ನು ಘೋಷಿಸಿರೋದಾಗಿ ಎಸ್​ ಡಬ್ಲ್ಯೂಆರ್​ ತಿಳಿಸಿದೆ. ವಿಶೇಷ ರೈಲುಗಳ ಘೋಷಣೆಯಿಂದ ಈ ಮಾರ್ಗದಲ್ಲಿ ಪ್ರತಿನಿತ್ಯ ಸಂಚರಿಸುತ್ತಿರೋ ರೈಲುಗಳಲ್ಲಿ ಪ್ರಯಾಣಿಕರ ನೂಕುನುಗ್ಗಲು ಕೂಡ ಕಡಿಮೆಯಾಗಲಿದೆ.

ಅಕ್ಟೋಬರ್​ 17 ಮತ್ತು 24ರಂದು ರೈಲು ಸಂಖ್ಯೆ 06587 (ಯಶವಂತಪುರ-ತಾಳಗುಪ್ಪ) ಯಶವಂತಪುರ ರೈಲ್ವೇ ನಿಲ್ದಾಣದಿಂದ ರಾತ್ರಿ 10.30ಕ್ಕೆ ಹೊರಡಲಿದ್ದು, ಮರುದಿನ ಬೆಳಿಗ್ಗೆ 4.15ಕ್ಕೆ ತಾಳುಗುಪ್ಪ ತಲುಪಲಿದೆ. ಅಕ್ಟೋಬರ್​ 18 ಮತ್ತು 25ರಂದು ರೈಲು ಸಂಖ್ಯೆ 06588 (ತಾಳಗುಪ್ಪ-ಯಶವಂತಪುರ) ತಾಳಗುಪ್ಪ ರೈಲ್ವೇ ನಿಲ್ದಾಣದಿಂದ ಬೆಳಗ್ಗೆ 10 ಗಂಟೆಗೆ ಹೊರಡಲಿದ್ದು, ಅದೇ ದಿನ ಸಂಜೆ 5.15ಕ್ಕೆ ಯಶವಂತಪುರ ತಲುಪಲಿದೆ. ತುಮಕೂರು, ತಿಪಟೂರು, ಅರಸೀಕೆರೆ, ಬಿರೂರು, ತರೀಕೆರೆ, ಭದ್ರಾವತಿ, ಶಿವಮೊಗ್ಗ ನಗರ, ಆನಂದಪುರ, ಸಾಗರ, ಜಂಬಗಾರು ಮಾರ್ಗವಾಗಿ ಈ ರೈಲು ಸಂಚರಿಸಲಿದೆ.

ಇದನ್ನೂ ಓದಿ: ದೀಪಾವಳಿಯ ಮುಂದಿನ 6 ತಿಂಗಳು ಈ ರಾಶಿಯವರಿಗೆ ಅದೃಷ್ಟವೋ ಅದೃಷ್ಟ

ಬೆಂಗಳೂರಿನ ಶ್ರೀ ಎಂ. ವಿಶ್ವೇಶ್ವರಯ್ಯ ಟರ್ಮಿನಲ್​ (SMVT)ಯಿಂದ ಬೆಳಗಾವಿಗೂ ಹಬ್ಬದ ಹಿನ್ನಲೆ ವಿಶೇಷ ರೈಲು ಸಂಚರಿಸಲಿದೆ. ಅಕ್ಟೋಬರ್​ 17ರಂದು ರೈಲು ಸಂಖ್ಯೆ 06503 (SMVT ಬೆಂಗಳೂರು- ಬೆಳಗಾವಿ) ಎಸ್​ಎಂವಿಟಿಯಿಂದ ಸಂಜೆ 5.30ಕ್ಕೆ ಹೊರಡಲಿದ್ದು, ಮರುದಿನ ಬೆಳಿಗ್ಗೆ 5.30ಕ್ಕೆ ಬೆಳಗಾವಿ ತಲುಪಲಿದೆ. ಅಕ್ಟೋಬರ್​ 22ರಂದು ರೈಲು ಸಂಖ್ಯೆ 06504 (ಬೆಳಗಾವಿ-SMVT ಬೆಂಗಳೂರು) ಬೆಳಗಾವಿಯಿಂದ ಸಂಜೆ 5.30ಕ್ಕೆ ಹೊರಡಲಿದ್ದು, ಮರುದಿನ ಬೆಳಿಗ್ಗೆ 5 ಗಂಟೆಗೆ SMVT ಬೆಂಗಳೂರು ನಿಲ್ದಾಣ ತಲುಪಲಿದೆ. ಚಿಕ್ಕಬಾಣಾವರ, ತುಮಕೂರು, ಅರಸೀಕೆರೆ, ಬಿರೂರು, ದಾವಣಗೆರೆ, ಹರಿಹರ, ಹಾವೇರಿ, ಹುಬ್ಬಳ್ಳಿ, ಧಾರವಾಡ, ಅಳ್ನಾವರ, ಲೊಂಡಾ ಮಾರ್ಗವಾಗಿ ಈ ರೈಲು ಸಂಚಾರ ನಡೆಸಲಿದೆ.

ಹಬ್ಬದ ಸಂದರ್ಭ ಪ್ರಯಾಣಿಕರ ಓಡಾಟ ಹೆಚ್ಚಿರಲಿದ್ದು, ಬೇಡಿಕೆಗೆ ಅನುಗುಣವಾಗಿ ಈ ವಿಶೇಷ ರೈಲುಗಳು ಸಂಚರಿಸಲಿವೆ. ದೀಪಾವಳಿ ಸಂದರ್ಭ ಪ್ರತಿವರ್ಷ ಬೆಂಗಳೂರಿನಿಂದ ಊರುಗಳತ್ತ ತೆರಳುವವರ ಸಂಖ್ಯೆ ಹೆಚ್ಚಿರಲಿದೆ. ಹೀಗಾಗಿ ಈ ವಿಶೇಷ ರೈಲುಗಳು ಪ್ರಯಾಣಿಕರ ದಟ್ಟಣೆ ಕಡಿಮೆಗೊಳಿಸಲು ನೆರವಾಗಲಿದೆ ಎಂದು ಸೌತ್​ ವೆಸ್ಟರ್ನ್​ ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ಬೇರೆ ಮಾರ್ಗಗಳಲ್ಲಿಯೂ ವಿಶೇಷ ರೈಲುಗಳನ್ನು ಎಸ್​ ಡಬ್ಲ್ಯೂಆರ್ ಘೋಷಿಸುವ ಸಾಧ್ಯತೆ ಇದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 12:18 pm, Mon, 13 October 25