ಬೆಂಗಳೂರಲ್ಲಿ ಹೆಚ್ಚಾಯ್ತು ಕಾಮುಕರ ಹಾವಳಿ; ಕೆಎಸ್ಆರ್ಟಿಸಿ ಬಸ್ನಲ್ಲಿ ವೈದ್ಯೆಗೆ ಕಿರುಕುಳ ನೀಡಿದವನ ಬಂಧನ
ಬೆಂಗಳೂರಿನಲ್ಲಿ ಅತ್ಯಾಚಾರ , ಅನಾಚಾರಗಳು ದಿನೇ ದಿನೇ ಹೆಚ್ಚುತ್ತಿದ್ದು, ಹೆಣ್ಣು ಮಕ್ಕಳು ನೆಮ್ಮದಿಯಿಂದ ಓಡಾಡದಂತಾಗಿದೆ. ಇದೀಗ ನಗರದಲ್ಲಿ ಕೆಎಸ್ಆರ್ಟಿಸಿ ಬಸ್ನಲ್ಲಿ ಪ್ರಯಾಣ ಮಾಡುತ್ತಿದ್ದ ವೈದ್ಯೆಯೊಬ್ಬರಿಗೆ ಕಾಮುಕನೊಬ್ಬ ಲೈಂಗಿಕ ಕಿರುಕುಳ ಕೊಟ್ಟಿರುವ ಘಟನೆ ವರದಿಯಾಗಿದೆ. ಕಾಮುಕನ್ನು ಪ್ರಯಾಣಿಕರು ಮತ್ತು ಕಂಡಕ್ಟರ್ ಇಬ್ಬರೂ ಸೇರಿ ಪೊಲೀಸರಿಗೆ ಒಪ್ಪಿಸಿದ್ದು, ಆತನ ವಿರುದ್ಧ ಪ್ರಕರಣ ದಾಖಲಾಗಿದೆ.

ಬೆಂಗಳೂರು, ಅಕ್ಟೋಬರ್ 13: ಬೆಂಗಳೂರಿನಲ್ಲಿ (Bengaluru) ದಿನೇ ದಿನೇ ಕೊಲೆ, ಸುಲಿಗೆ ಮತ್ತು ಅತ್ಯಾಚಾರದಂತಹ ಪ್ರಕರಣಗಳು ಹೆಚ್ಚುತ್ತಲೇ ಇವೆ. ಯುವತಿಯರಂತೂ ರಾತ್ರಿ ಮಾತ್ರವಲ್ಲದೇ ಹಗಲಿನಲ್ಲೂ ಮನೆಯಿಂದ ಹೊರ ಬೀಳಲು 100 ಬಾರಿ ಯೋಚಿಸಬೇಕು ಎಂಬಂತಾಗಿದೆ. ಇದೀಗ ನಗರದಲ್ಲಿ ಕೆಎಸ್ಆರ್ಟಿಸಿ ಬಸ್ನಲ್ಲಿ ಪ್ರಯಾಣ ಮಾಡುತ್ತಿದ್ದ ವೈದ್ಯೆಯೊಬ್ಬರಿಗೆ ಕಾಮುಕನೊಬ್ಬ ಲೈಂಗಿಕ ಕಿರುಕುಳ ಕೊಟ್ಟಿರುವ ಘಟನೆ ವರದಿಯಾಗಿದೆ. ಬಸ್ನಲ್ಲಿ ಪಕ್ಕದಲ್ಲಿ ಕುಳಿತು ಅಸಭ್ಯ ವರ್ತನೆ ಮಾಡಿದ ವ್ಯಕ್ತಿಯನ್ನು ಪ್ರಯಾಣಿಕರೆಲ್ಲರೂ ಸೇರಿ ಪೊಲೀಸ್ ಕೈಗೊಪ್ಪಿಸಿದ್ದಾರೆ.
ಕಾಮುಕನನ್ನು ಪೊಲೀಸರ ಕೈಗೊಪ್ಪಿಸಿದ ಪ್ರಯಾಣಿಕರು
ದೊಡ್ಡಬಳ್ಳಾಪುರದಿಂದ ಬೆಂಗಳೂರಿಗೆ ಕೆಎಸ್ಆರ್ಟಿಸಿ ಬಸ್ ನಲ್ಲಿ ಬರುತ್ತಿದ್ದ ವೈದ್ಯೆಗೆ ಕಾಮುಕನೊಬ್ಬ ಕಿರುಕುಳ ನೀಡಿದ್ದಾನೆ. ದೊಡ್ಡಬಳ್ಳಾಪುರದಿಂದ ವೈದ್ಯೆಯಿದ್ದ ಕೆಎ -04-ಎಫ್ -1543 ಬಸ್ ಹತ್ತಿದ್ದ ಫಿರೋಝ್ ಖಾನ್ ಎಂಬಾತ, ಅವರನ್ನು ಕಂಡು ಪಕ್ಕದಲ್ಲಿಯೇ ಬಂದು ಕುಳಿತಿದ್ದ. ನಂತರ ಖಾಸಗಿ ಭಾಗಕ್ಕೆ ಸ್ಪರ್ಶಿಸಿ ಕಾಮುಕತೆ ಮೆರೆದಿದ್ದ. ವೈದ್ಯೆ ಎಷ್ಟೇ ಅವಾಯ್ಡ್ ಮಾಡಿದರೂ ಮತ್ತೆ ಮತ್ತೆ ಕಿರುಕುಳ ಕೊಡುತ್ತಿದ್ದ. ಅವನ ಕಾಟದಿಂದ ಬೇಸತ್ತ ಮಹಿಳೆ ತನ್ನ ಸಹೋದರನಿಗೆ ಮತ್ತು ಬಸ್ ಡ್ರೈವರ್ ಗೆ ಮಾಹಿತಿ ನೀಡಿದ್ದಾರೆ.
ಇದನ್ನು ತಿಳಿದ ವೈದ್ಯೆಯ ಸಹೋದರ ಪೊಲೀಸರಿಗೆ ಕರೆ ಮಾಡಿ ವಿಷಯ ಮುಟ್ಟಿಸಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ತಪ್ಪಿಸಿಕೊಳ್ಳಲು ಪ್ರಯತ್ನ ಪಟ್ಟ ಕಾಮುಕನನ್ನು ಪ್ರಯಾಣಿಕರು ಮತ್ತು ಕಂಡಕ್ಟರ್ ಸೇರಿ ಹಿಡಿದಿದ್ದು, ಸಂಜಯ್ ನಗರದ ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿಯ ವಿರುದ್ಧ ಕಿರುಕುಳಕ್ಕೊಳಗಾದ ವೈದ್ಯೆ ದೂರು ನೀಡಿದ್ದು, ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:57 am, Mon, 13 October 25



