ಗ್ಯಾರಂಟಿಗಳ ಬಗ್ಗೆ ಕಾಂಗ್ರೆಸ್ ಶಾಸಕ ದೇಶಪಾಂಡೆ ಲೇವಡಿ, ಸಿದ್ದರಾಮಯ್ಯ ಏನು ಮಾಡುತ್ತಿದ್ದಾರೋ ನನಗೂ ಗೊತ್ತಿಲ್ಲವೆಂದು ವ್ಯಂಗ್ಯ
ಗ್ಯಾರಂಟಿ ಯೋಜನೆಗಳ ಬಗ್ಗೆ ಈಗಾಗಲೇ ಕೆಲವು ಬಾರಿ ಆಕ್ಷೇಪದ ಧಾಟಿಯಲ್ಲಿ ಮಾತನಾಡಿದ್ದ ಉತ್ತರಕನ್ನಡ ಜಿಲ್ಲೆ ಹಳಿಯಾಳ ಶಾಸಕ ಆರ್ವಿ ದೇಶಪಾಂಡೆ, ಇದೀಗ ಮತ್ತೆ ಉಚಿತ ಯೋಜನೆಗಳ ಬಗ್ಗೆ ವ್ಯಂಗ್ಯವಾಡಿದ್ದಾರೆ. ದಾಂಡೇಲಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಏನೇನು ಮಾಡುತ್ತಾರೋ ನಮಗೂ ಗೊತ್ತಾಗುತ್ತಿಲ್ಲ ಎಂದರು.
ಕಾರವಾರ, ಅಕ್ಟೋಬರ್ 13: ಉಚಿತ ಗ್ಯಾರಂಟಿ ಯೋಜನೆಗಳ ಬಗ್ಗೆ ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕ ಆರ್ವಿ ದೇಶಪಾಂಡೆ ವ್ಯಂಗ್ಯವಾಡಿದ್ದಾರೆ. ಉತ್ತರಕನ್ನಡ ಜಿಲ್ಲೆ ದಾಂಡೇಲಿಯಲ್ಲಿ ಮಾತನಾಡಿದ ಹಳಿಯಾಳ ಶಾಸಕರು, ನಮ್ಮ ಕಾಂಗ್ರೆಸ್ ಸರ್ಕಾರ ತಂದಿರುವ ಯೋಜನೆಗಳು ಒಂದಾ ಎರಡಾ? ಸರ್ಕಾರ ಬಡವರಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ ಎಂದರು. ಮಹಿಳೆಯರಿಗೆ 2000 ರೂ. ಕೊಟ್ಟರು. ಅಲ್ಲದೆ, ಮಹಿಳೆಯರಿಗೆ ಉಚಿತ ಬಸ್ ಯೋಜನೆಯಿಂದ ಎಲ್ಲಿ ನೋಡಿದರೂ ಬಸ್ಸುಗಳಲ್ಲಿ ಮಹಿಳೆಯರೇ ಇರುತ್ತಾರೆ. ಸರ್ಕಾರಿ ಬಸ್ಗಳಲ್ಲಿನ ಪರಿಸ್ಥಿತಿ ಬಗ್ಗೆ ಹೇಳೋದು ಬೇಡ. ಬಸ್ನಲ್ಲಿ ಹೋದರೂ ಮಹಿಳೆಯರೇ, ದೇಗುಲಕ್ಕೆ ಹೋದರೂ ಮಹಿಳೆಯರೇ. ಸರ್ಕಾರಿ ಬಸ್ಸುಗಳಲ್ಲಿ ಯಾರಾದರೂ 4 ಜನ ಗಂಡಸರು ಹೋಗುವುದೇ ಕಷ್ಟ ಆಗಿದೆ. ನಾನು ಸಿಎಂ ಆಗಿದ್ದರೆ ಇವುಗಳನ್ನೆಲ್ಲ ಮಾಡುತ್ತಿರಲಿಲ್ಲ ಎಂದರು. ಇದೇ ವೇಳೆ ಸ್ಥಳದಲ್ಲಿದ್ದವರು ಜೋರಾಗಿ ನಕ್ಕರು.
‘ಇಂತಹ ಯೋಜನೆಗಳನ್ನೆಲ್ಲ ಸಿಎಂ ಸಿದ್ದರಾಮಯ್ಯ ನೀಡಿದ್ದಾರೆ. ಗೃಹ ಲಕ್ಷ್ಮೀ, ಗೃಹ ಜ್ಯೋತಿ ಯೋಜನೆ ನೀಡಿದ್ದಾರೆ. ಅನ್ನಭಾಗ್ಯ ಯೋಜನೆಯಡಿ ಉಚಿತವಾಗಿ 10 ಅಕ್ಕಿ ನೀಡಲಾಗುತ್ತಿದೆ. ಹೆಚ್ಚುವರಿ 5 ಕೆಜಿ ಅಕ್ಕಿ ಬದಲು ಇಂದಿರಾ ಆಹಾರ ಕಿಟ್ ನೀಡಲು ನಿರ್ಧಾರ ಕೈಗೊಂಡಿದ್ದಾರೆ. ತೊಗರಿ ಸೇರಿದಂತೆ ಬೇರೆ ಬೇರೆ ದಿನಸಿ ಕೊಡಲು ನಿರ್ಧಾರ ಮಾಡಿದ್ದಾರೆ ತಗೊಂಡೋಗಿ ಮಾರಾಟ ಮಾಡ್ರೀ …’ ಎಂದು ವ್ಯಂಗ್ಯವಾಗಿ ಹೇಳಿದ್ದಾರೆ. ಈ ಮಾತುಗಳನ್ನು ಕೇಳುತ್ತಿದ್ದಂತೆಯೇ ಸಭೆಯಲ್ಲಿದ್ದವರೆಲ್ಲ ಜೋರಾಗಿ ನಗುತ್ತಿರುವುದು ಕಂಡುಬಂದಿದೆ. ಮುಂದುವರಿದು, ಸಿದ್ದರಾಮಯ್ಯ ಏನೇನೇನು ಮಾಡುತ್ತಿದ್ದಾರೋ ನನಗೂ ಗೊತ್ತಿಲ್ಲ, ನಮಗೆಲ್ಲ ಗೊತ್ತಾಗುತ್ತಿಲ್ಲ. ನಾವು ಅವರಿಗೆ ಬಹಳ ಹತ್ತಿರದವರು. ಆದರೂ ಅವರೇನು ಮಾಡುತ್ತಿದ್ದಾರೆ ಎಂಬುದು ಗೊತ್ತಾಗಲ್ಲ ಎಂದು ದೇಶಪಾಂಡೆ ಹೇಳಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ
