
ಹುಬ್ಬಳ್ಳಿ, ಅಕ್ಟೋಬರ್ 1: ಈರುಳ್ಳಿ ಬೆಲೆ ಸ್ವಲ್ಪ ಹೆಚ್ಚಾದರೂ ಗ್ರಾಹಕರ ಕಣ್ಣೀರಿಗೆ ಕಾರಣವಾಗುತ್ತದೆ. ಆದರೆ ಸಾವಿರಾರು ರೂಪಾಯಿ ಖರ್ಚು ಮಾಡಿ ತಿಂಗಳುಗಟ್ಟಲೆ ಶ್ರಮವಹಿಸಿ ದುಡಿದ ರೈತರಿಗೆ ಈ ಬಾರಿ ಈರುಳ್ಳಿ ಕಣ್ಣೀರು ತರಿಸುತ್ತಿದೆ. ಈರುಳ್ಳಿ ಬೆಲೆ ಮಾರುಕಟ್ಟೆಯಲ್ಲಿ ದಿಢೀರನೆ ಕುಸಿದಿದ್ದು, ಈರುಳ್ಳಿ ಬೆಳೆಗಾರರು ಕಂಗಾಲಾಗುವಂತೆ ಮಾಡಿದೆ. ಕ್ವಿಂಟಲ್ಗೆ 200 ರಿಂದ 500 ರೂಪಾಯಿಗೆ ಮಾರಾಟವಾಗುತ್ತಿದ್ದು, ಬೆಳೆ ಬೆಳೆಯಲು ಮಾಡಿದ ಖರ್ಚು ಕೂಡಾ ಬಾರದೇ ಇದ್ದಿದ್ದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಈ ಬಾರಿ ನಿರಂತರ ಮಳೆಗೆ ಈರುಳ್ಳಿ ಬೆಳೆಗಾರರು ಈಗಾಗಲೇ ದೊಡ್ಡ ಮಟ್ಟದ ತೊಂದರೆ ಅನುಭವಿಸಿದ್ದಾರೆ. ಪ್ರತಿ ಎಕರೆಗೆ ಐವತ್ತರಿಂದ ಎಪ್ಪತ್ತು ಕ್ವಿಂಟಲ್ವರಗೆ ಬರುತ್ತಿದ್ದ ಈರುಳ್ಳಿ, ಈ ಬಾರಿ ಎಕರೆಗೆ ಮೂವತ್ತರಿಂದ ನಲವತ್ತು ಕ್ವಿಂಟಲ್ಗೆ ಬಂದಿದೆ. ಮಳೆಯಿಂದಾಗಿ ಕಟಾವು ಮಾಡುವ ಮುನ್ನವೇ ಬೆಳೆ ಹಾಳಾಗಿ ಹೋಗಿದೆ. ಉಳಿದ ಅಲ್ಪ ಸ್ವಲ್ಪ ಈರುಳ್ಳಿಯನ್ನು ರೈತರು ಕಷ್ಟಪಟ್ಟು ಕಟಾವು ಮಾಡಿ ಮಾರುಕಟ್ಟೆಗೆ ತಂದರೆ, ಅಲ್ಲಿಯ ಬೆಲೆ ಕೇಳಿ ರೈತರು ಶಾಕ್ ಆಗುತ್ತಿದ್ದಾರೆ.
ಹುಬ್ಬಳ್ಳಿ ಎಪಿಎಂಸಿಗೆ ರಾಜ್ಯದ ಧಾರವಾಡ, ಗದಗ, ಬಾಗಲಕೋಟೆ, ವಿಜಯಪುರ, ಹಾವೇರಿ ಸೇರಿದಂತೆ ಅನೇಕ ಜಿಲ್ಲೆಗಳಿಂದ ರೈತರು ಈರುಳ್ಳಿ ಮಾರಾಟ ಮಾಡಲು ಬರುತ್ತಾರೆ. ಇದೀಗ ಈರುಳ್ಳಿ ಕಟಾವು ಆರಂಭವಾಗಿದ್ದರಿಂದ ಕಳೆದ ಒಂದು ವಾರದಿಂದ ಹುಬ್ಬಳ್ಳಿ ಎಪಿಎಂಸಿಗೆ ಹೆಚ್ಚಿನ ರೈತರು ಈರುಳ್ಳಿಯನ್ನು ಮಾರಾಟ ಮಾಡಲು ಬರುತ್ತಿದ್ದಾರೆ. ಆದರೆ ಪ್ರತಿ ಕ್ವಿಂಟಲ್ಗೆ 200 ರಿಂದ 1000 ರೂಪಾಯಿಗೆ ಈರುಳ್ಳಿ ಮಾರಾಟವಾಗುತ್ತಿದೆ. ಇದು ರೈತರು ಕಣ್ಣೀರು ಹಾಕುವಂತೆ ಮಾಡಿದೆ.
ಒಂದು ಕ್ವಿಂಟಲ್ ಈರುಳ್ಳಿ ಬೆಳೆದು, ಅದನ್ನು ಮಾರುಕಟ್ಟೆಗೆ ತರಬೇಕಾದರೆ ಅದಕ್ಕೆ 350 ರಿಂದ 400 ರೂ.ಗಳಷ್ಟು ಖರ್ಚಾಗುತ್ತದೆ. ಆದರೆ ಇದೀಗ ಮಾರ್ಕೇಟ್ನಲ್ಲಿ ಪ್ರತಿ ಕ್ವಿಂಟಲ್ ಈರುಳ್ಳಿ 200 ರಿಂದ 250 ರೂಪಾಯಿಗೆ ಮಾರಾಟವಾಗುತ್ತಿದೆ. ಅನೇಕ ತಿಂಗಳ ಕಾಲ ಶ್ರಮವಹಿಸಿ ದುಡಿದ ರೈತರಿಗೆ ಲಾಭ ಸಿಗುವ ಬದಲು, ತಾವೇ ಸಾಲ ಮಾಡಿ ಖರ್ಚುವೆಚ್ಚ ಸರಿದೂಗಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಈರುಳ್ಳಿ ಬೆಳೆದ ರೈತರಿಗೆ ಮಾಡಿದ ಖರ್ಚೂ ಬಾರದಂತಾಗಿರೋದರಿಂದ, ಸಾಲ ತೀರಿಸುವುದು ಹೇಗೆ ಎನ್ನುವ ಚಿಂತೆಗೆ ಬಿದ್ದಿದ್ದಾರೆ.
ಇದನ್ನೂ ಓದಿ Onion Price: ಈರುಳ್ಳಿಗೆ ಬೆಲೆ ಗಣನೀಯ ಕುಸಿತ, ಕ್ವಿಂಟಲ್ಗೆ 1500 ರೂ.ಗೆ ಇಳಿಕೆ
ಪ್ರತಿ ಕ್ವಿಂಟಲ್ ಈರುಳ್ಳಿ ನಾಲ್ಕು ಸಾವಿರಕ್ಕೂ ಹೆಚ್ಚಿನ ಬೆಲೆಗೆ ಮಾರಾಟವಾದರೆ ಮಾತ್ರ ರೈತರಿಗೆ ಲಾಭವಾಗುತ್ತದೆ. ಇದೀಗ ಮಾರಾಟವಾಗುತ್ತಿರುವ ಬೆಲೆ, ಅದರ ಸಾಗಾಟದ ವೆಚ್ಚಕ್ಕೂ ಸಾಲುವುದಿಲ್ಲ. ರಾಜ್ಯದಲ್ಲಿ ಈ ಬಾರಿ ಈರುಳ್ಳಿ ಉತ್ಪಾದನೆ ಕಡಿಮೆಯಿದ್ದರೂ ಸಹ ನೆರೆಯ ಮಹರಾಷ್ಟ್ರ ಸೇರಿದಂತೆ ಬೇರೆ ಬೇರೆ ರಾಜ್ಯಗಳಲ್ಲಿ ಹೆಚ್ಚಿನ ಈರುಳ್ಳಿ ಮಾರುಕಟ್ಟೆಗೆ ಬರುತ್ತಿರುವುದೇ ಬೆಲೆ ಇಳಿಕೆಗೆ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ. ಆದರೆ ಇದೇ ರೀತಿ ಬೆಲೆ ಕಡಿಮೆಯಾದರೆ ಈರುಳ್ಳಿ ಬೆಳೆಗಾರರು ಬೀದಿಗೆ ಬೀಳುತ್ತಾರೆ. ಕೂಡಲೇ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ರೈತರಿಗೆ ಉತ್ತಮ ಬೆಲೆ ಸಿಗುವಂತಹ ವ್ಯವಸ್ಥೆ ಮಾಡಬೇಕು ಎಂದು ರೈತರು ಆಗ್ರಹಿಸುತ್ತಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ