ಡಿಕೆಶಿನ ಸಿಎಂ ಮಾಡಿ: ಮತ್ತೆ ಮೌನ ಮುರಿದ ಡಿಸಿಎಂ ಬೆಂಬಲಿಗರು
ಕರ್ನಾಟಕದಲ್ಲಿ 140 ಸ್ಥಾನ ಗೆದ್ದು ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರುವಲ್ಲಿ ಡಿ.ಕೆ. ಶಿವಕುಮಾರ್ ಅವರ ಶ್ರಮವಿದೆ. ಹೀಗಾಗಿ ಕಾರ್ಯಕರ್ತರು ಡಿಕೆಶಿ ಮುಖ್ಯಮಂತ್ರಿ ಆಗಬೇಕೆಂದು ಅಪೇಕ್ಷೆ ಪಡುತ್ತಿದ್ದು, ಸ್ಥಾನಮಾನ ಕೊಡುವ ಬಗ್ಗೆ ಹೈಕಮಾಂಡ್ ಚಿಂತನೆ ಮಾಡಬೇಕು ಎಂದು ಕುಣಿಗಲ್ ಕ್ಷೇತ್ರದ ಶಾಸಕ ಡಾ.ರಂಗನಾಥ್ ಆಗ್ರಹಿಸಿದ್ದಾರೆ.

ಬೆಂಗಳೂರು, ಅಕ್ಟೋಬರ್ 01: ಕಳೆದ ಕೆಲ ದಿನಗಳಿಂದ ಸ್ವಲ್ಪ ಸೈಲೆಂಟ್ ಆಗಿದ್ದ ಡಿಸಿಎಂ ಡಿ.ಕೆ. ಶಿವಕುಮಾರ್ (D.K. Shivakumar) ಬೆಂಬಲಿಗ ಶಾಸಕರು ಮತ್ತೆ ಮೌನ ಮುರಿಯಲು ಆರಂಭಿಸಿದ್ದಾರೆ. ಕಳೆದ ವಿಧಾನಸಭಾ ಚುನಾವಣೆ ವೇಳೆ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ 140 ಸ್ಥಾನ ಗೆಲ್ಲುವಲ್ಲಿ ಡಿಕೆಶಿ ಶ್ರಮವಿದೆ ಎಂದು ಕುಣಿಗಲ್ ಕ್ಷೇತ್ರದ ಶಾಸಕ ಡಾ.ರಂಗನಾಥ್ ಹೇಳಿದ್ದಾರೆ. ಡಿ.ಕೆ.ಶಿವಕುಮಾರ್ ಒಂದಲ್ಲ ಒಂದು ದಿನ ಮುಖ್ಯಮಂತ್ರಿ ಆಗುತ್ತಾರೆಂಬ ಭವಿಷ್ಯವನ್ನೂ ನುಡಿದ್ದಾರೆ.
‘ಡಿಸಿಎಂ ಡಿಕೆಶಿ ನನ್ನ ರಾಜಕೀಯ ಗುರು’
ಕಾರ್ಯಕರ್ತರು ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಬೇಕೆಂದು ಅಪೇಕ್ಷೆ ಪಡುತ್ತಿದ್ದಾರೆ. ಹೀಗಾಗಿ ಡಿಕೆಶಿಗೆ ಸ್ಥಾನಮಾನ ಕೊಡುವ ಬಗ್ಗೆ ಹೈಕಮಾಂಡ್ ಚಿಂತನೆ ಮಾಡಬೇಕು. ಹೈಕಮಾಂಡ್ ನಿರ್ಧಾರಕ್ಕಾಗಿ ಪಕ್ಷದ ಕಾರ್ಯಕರ್ತರು ಕಾಯುತ್ತಿದ್ದಾರೆ. ರಾಜಕೀಯ ಅನ್ನೋದು ಕೃಷಿ ಇದ್ದ ಹಾಗೆ. ಕೃಷಿಯಲ್ಲಿ ಶ್ರಮ ಹಾಕಿದಂತೆ ರಾಜಕೀಯದಲ್ಲಿ ಸಮಸ್ಯೆ ಬಗೆಹರಿಸಬೇಕು ಎಂದು ರಂಗನಾಥ್ ಆಗ್ರಹಿಸಿದ್ದಾರೆ. ಡಿ.ಕೆ.ಶಿವಕುಮಾರ್ ಹಾರ್ಡ್ಶಿಪ್ ನಂಬಿ ಕೆಲಸ ಮಾಡುವವರಾಗಿದ್ದು, ಬೆಳಗ್ಗೆ 8 ಗಂಟೆಯಿಂದ ಮಧ್ಯರಾತ್ರಿವರೆಗೂ ದುಡಿಯುತ್ತಾರೆ. ಅವರಿಗೆ ಭಗವಂತನ ಆಶೀರ್ವಾದ ಇರುವುದರಿಂದ ಸಿಎಂ ಆಗ್ತಾರೆ. ಡಿಸಿಎಂ ಡಿ.ಕೆ.ಶಿವಕುಮಾರ್ ನಮಗೆ ರಾಜಕೀಯ ಗುರುಗಳು. ಸದ್ಯ ಮುಖ್ಯಮಂತ್ರಿ ಕುರ್ಚಿಯಲ್ಲಿ ಇರುವ ಸಿದ್ದರಾಮಯ್ಯನವರು ದೇಶಕ್ಕೆ ಮಾದರಿಯಾಗುವ ಕೆಲಸ ಮಾಡ್ತಿದ್ದಾರೆ ಎಂದು ಬೆಂಗಳೂರಿನಲ್ಲಿ ಕುಣಿಗಲ್ ಕ್ಷೇತ್ರದ ಶಾಸಕ ಡಾ.ರಂಗನಾಥ್ ಹೇಳಿದ್ದಾರೆ.
ಶಾಸಕ ಡಾ.ರಂಗನಾಥ್ ಹೇಳಿದ್ದೇನು?
‘ನವೆಂಬರ್ ನಲ್ಲಿ ಡಿಕೆಶಿ ಸಿಎಂ’
ನಮಗೆ ಸಿಕ್ಕಿರುವ ಮಾಹಿತಿ ಪ್ರಕಾರ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನವೆಂಬರ್ ನಲ್ಲಿ ಸಿಎಂ ಆಗುತ್ತಾರೆ ಎಂದು ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ ಹೇಳಿದ್ದಾರೆ. ಡಿಕೆಶಿ ಮುಖ್ಯಮಂತ್ರಿ ಅಗಬೇಕು ಎಂಬುದು ಹಳೆಮೈಸೂರು ಭಾಗದವರಾದ ನಮ್ಮೆಲ್ಲರ ಇಚ್ಛೆ.ಆದರೆ ಅಂತಿಮ ನಿರ್ಧಾರವನ್ನು ಹೈಕಮಾಂಡ್ ಕೈಗೊಳ್ಳುತ್ತದೆ ಎಂದು ಅವರು ತಿಳಿಸಿದ್ದಾರೆ.
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




