ಆನ್​ಲೈನ್ ಯಕ್ಷಗಾನ; ಉಡುಪಿಯಿಂದಲೇ ಬ್ರಿಟನ್‌ ಮತ್ತು ಜರ್ಮನ್​ನಲ್ಲಿರುವವರಿಗೆ ತರಬೇತಿ

ವಿದೇಶದಲ್ಲಿ ಇರುವ ಕರಾವಳಿ ಮೂಲದವರಿಗೆ ಯಕ್ಷಗಾನ ಹೇಳಿಕೊಟ್ಟು, ಅವರನ್ನು ಯಕ್ಷಗಾನ ಹವ್ಯಾಸಿ ಮತ್ತು ಯಕ್ಷಗಾನ ಕಲಾವಿದರನ್ನಾಗಿ ಮಾಡಬೇಕು ಎನ್ನುವ ಒಳ್ಳೆಯ ಉದ್ದೇಶ ಇಟ್ಟುಕೊಂಡು, ಪ್ರಸಿದ್ಧ ಯಕ್ಷಗಾನ ಕಲಾವಿದ ಶ್ರೀಧರ್ ಗಾಣಿಗ ಅವರು ಉಡುಪಿಯ ಉಪ್ಪುಂದದಿಂದ ಆನ್​ಲೈನ್ ಮೂಲಕ ಬ್ರಿಟನ್‌ ಮತ್ತು ಜರ್ಮನ್​ನಲ್ಲಿ ಇರುವ ಯಕ್ಷಗಾನ ಆಸಕ್ತರಿಗೆ ಯಕ್ಷಗಾನದ ನಾಟ್ಯ ಹೇಳಿಕೊಡುತ್ತಿದ್ದಾರೆ.

ಆನ್​ಲೈನ್ ಯಕ್ಷಗಾನ; ಉಡುಪಿಯಿಂದಲೇ ಬ್ರಿಟನ್‌ ಮತ್ತು ಜರ್ಮನ್​ನಲ್ಲಿರುವವರಿಗೆ ತರಬೇತಿ
ಆನ್​ಲೈನ್ ಯಕ್ಷಗಾನ
Follow us
| Updated By: preethi shettigar

Updated on:Jun 05, 2021 | 10:39 AM

ಉಡುಪಿ: ಕೊರೊನಾ ಎರಡನೇ ಅಲೆಯ ತೀವ್ರತೆಯಿಂದಾಗಿ ಲಾಕ್​ಡೌನ್ ಜಾರಿಗೆ ತಂದಿದ್ದು, ಯಾವುದೇ ಸಭೆ, ಸಮಾರಂಭ ಮತ್ತು ಇನ್ನಿತರ ಕಾರ್ಯಕ್ರಮಗಳು ನಡೆಸದಂತೆ ಸೂಚನೆ ನೀಡಲಾಗಿದೆ. ಅದರಂತೆ ಕೊರೊನಾ ಕಾರಣದಿಂದ ಸದ್ಯ ಕರಾವಳಿಯಲ್ಲಿ ಯಕ್ಷಗಾನ ಪ್ರದರ್ಶನವಾಗುತ್ತಿಲ್ಲ. ಯಕ್ಷಗಾನ ತರಬೇತಿಗಳು ಕೂಡ ನಡೆಯುತ್ತಿಲ್ಲ. ಹೀಗಾಗಿ ಮನೆಯಲ್ಲಿ ಇರುವ ಪ್ರಸಿದ್ಧ ಯಕ್ಷಗಾನ ಕಲಾವಿದರೊಬ್ಬರು ಉಡುಪಿಯಿಂದ ಬ್ರಿಟನ್‌, ಜರ್ಮನ್​ನಲ್ಲಿ ಇರುವ ಯಕ್ಷಗಾನ ಪ್ರೀಯರಿಗೆ ತರಬೇತಿ ನೀಡುತ್ತಿದ್ದಾರೆ. ಯಕ್ಷಗಾನವನ್ನು ವಿಶ್ವಗಾನವಾಗಿಸಲು ಶ್ರಮಿಸುತ್ತಿದ್ದಾರೆ.

ಯಕ್ಷಗಾನ ಕರಾವಳಿಯ ಗಂಡು ಕಲೆ. ಚೆಂಡೆ ಮದ್ದಳೆ ಸದ್ದಿನೊಂದಿಗೆ ಭಾಗವತರ ಇಂಪಾದ ಸ್ವರಕ್ಕೆ ಹೆಜ್ಜೆ ಹಾಕುವ ಕಲಾವಿದರನ್ನು ರಂಗದಲ್ಲಿ ನೋಡುವುದೇ ಚಂದ. ಹಿಂದೆ ಕರಾವಳಿಯಿಂದ ಮಲೆನಾಡಿನವರೆಗೆ ಮಾತ್ರ ಸೀಮಿತವಾಗಿದ್ದ ಈ ಶ್ರೀಮಂತ ಕಲೆ ಈಗ ವಿದೇಶದಲ್ಲೂ ಪ್ರದರ್ಶನಗೊಳ್ಳತ್ತಿದೆ. ಯಕ್ಷಗಾನ ವಿಶ್ವಗಾನವಾಗಿ ಪ್ರದೇಶ ವಿಸ್ತರಣೆಯಾಗುತ್ತಿದೆ. ಸದ್ಯ ಕೊರೊನಾ ಕಾರಣದಿಂದ ಯಕ್ಷಗಾನ ನಡೆಯುತ್ತಿಲ್ಲ.

ಇದರಿಂದಾಗಿ ಕಲಾವಿದರು ಯಕ್ಷಗಾನ ಇಲ್ಲದೇ ಮನೆಯಲ್ಲೇ ಇದ್ದಾರೆ. ಹೀಗಾಗಿ ವಿದೇಶದಲ್ಲಿ ಇರುವ ಕರಾವಳಿ ಮೂಲದವರಿಗೆ ಯಕ್ಷಗಾನ ಹೇಳಿಕೊಟ್ಟು, ಅವರನ್ನು ಯಕ್ಷಗಾನ ಹವ್ಯಾಸಿ ಮತ್ತು ಯಕ್ಷಗಾನ ಕಲಾವಿದರನ್ನಾಗಿ ಮಾಡಬೇಕು ಎನ್ನುವ ಒಳ್ಳೆಯ ಉದ್ದೇಶ ಇಟ್ಟುಕೊಂಡು, ಪ್ರಸಿದ್ಧ ಯಕ್ಷಗಾನ ಕಲಾವಿದ ಶ್ರೀಧರ್ ಗಾಣಿಗ ಅವರು ಉಡುಪಿಯ ಉಪ್ಪುಂದದಿಂದ ಆನ್​ಲೈನ್ ಮೂಲಕ ಬ್ರಿಟನ್‌ ಮತ್ತು ಜರ್ಮನ್​ನಲ್ಲಿ ಇರುವ ಯಕ್ಷಗಾನ ಆಸಕ್ತರಿಗೆ ಯಕ್ಷಗಾನದ ನಾಟ್ಯ ಹೇಳಿಕೊಡುತ್ತಿದ್ದಾರೆ.

ಯು.ಕೆ ಯಕ್ಷಗಾನ ಸಂಘ ಎನ್ನುವ ಸಂಘಟನೆ ಮಾಡಿಕೊಂಡು ಅದರ ಮೂಲಕವಾಗಿ, ಯಕ್ಷಗಾನ ಆಸಕ್ತಿ ಇರುವವರಿಗೆ ಅವರ ವಯಸ್ಸಿನ ಆಧಾರದ ಮೇಲೆ ಬೇರೆ ಬೇರೆ ಬ್ಯಾಚ್ ಮಾಡಿಕೊಂಡು ಆ್ಯಫ್ ಮೂಲಕ ಯಕ್ಷಗಾನ ಹೇಳಿಕೊಡಲಾಗುತ್ತಿದೆ.‌ ಶ್ರೀಧರ್ ಗಾಣಿಗ ಅವರು ಉಪ್ಪುಂದದಿಂದ ಕಲಿಸಿಕೊಡುವ ಯಕ್ಷಗಾನವನ್ನು ಕಲಿಯುತ್ತಿರುವ ವಿದೇಶದಲ್ಲಿ ಇರುವ ಯಕ್ಷಪ್ರೀಯರು ಈಗ ಯಕ್ಷಗಾನದ ಪೂರ್ವರಂಗ, ಒಡ್ಡೋಲಗವನ್ನು ಕಲಿಯುತ್ತಿದ್ದಾರೆ. ಮಕ್ಕಳು ಮಹಿಳೆಯರು ಕೂಡ ಶೃದ್ಧೆಯಿಂದ ರಂಗದ ನಡೆಯನ್ನು ಅಭ್ಯಾಸ ಮಾಡುತ್ತಿದ್ದಾರೆ ಎಂದು ಯಕ್ಷಗಾನ ಸಂಘಟಕ ಗುರುಪ್ರಸಾದ್ ತಿಳಿಸಿದ್ದಾರೆ.

ಒಟ್ಟಿನಲ್ಲಿ ಲಾಕ್​ಡೌನ್ ಎಂದು ಮನೆಯಲ್ಲಿ ಸುಮ್ಮನೆ ಕಾಲಹರಣ ಮಾಡದೇ, ವಿದೇಶದಲ್ಲಿ ಇರುವವರಿಗೆ ಯಕ್ಷಗಾನ ತರಬೇತಿ ನೀಡುವ ಮೂಲಕ, ಯಕ್ಷಗಾನಕ್ಕೆ ವಿದೇಶದಲ್ಲೂ ಮಾನ್ಯತೆ ಸಿಗುವಂತೆ ಮಾಡುತ್ತಿರುವ ಯಕ್ಷಗಾನ ಕಲಾವಿದ ಶ್ರೀಧರ್ ಗಾಣಿಗ ಅವರ ಈ ಸೇವೆ ಶ್ಲಾಘನೀಯವಾದದ್ದು.

ಇದನ್ನೂ ಓದಿ:

ಕಲಾವಿದರಿಗೆ ಲಾಕ್​ಡೌನ್ ಪ್ಯಾಕೇಜ್: ಯಕ್ಷಗಾನದ ಯುವ ಕಲಾವಿದರಿಗೆ ಅನ್ಯಾಯ ತಪ್ಪಿಸಲು ವಯೋಮಿತಿಯನ್ನು 25ಕ್ಕೆ ಇಳಿಸಲು ಮನವಿ

ಮದುವೆ ಮನೆಯಲ್ಲಿ ಹಣ್ಣುಗಳ ಸಂಭ್ರಮ! ಹಾಡು ಹೇಳುತ್ತಲೇ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸುತ್ತಿದ್ದಾರೆ ವಂದನಾ ಟೀಚರ್

Published On - 10:38 am, Sat, 5 June 21