OSAAT: ತನ್ನ 100ನೇ ಅಭಿವೃದ್ಧಿ ಕಾರ್ಯಕ್ಕೆ ಕೋಲಾರದ ಮಾಸ್ತಿ ಗ್ರಾಮದ ಸರ್ಕಾರಿ ಶಾಲೆ ಆಯ್ಕೆ ಮಾಡಿಕೊಂಡ ಓಸಾಟ್
One School At A Time: ಓಸಾಟ್ ಸಂಸ್ಥೆ ತಮ್ಮ 100ನೇ ಸರ್ಕಾರಿ ಶಾಲೆಯ ಅಭಿವೃದ್ಧಿಗೆ ಮುಂದಾಗಿದೆ. ಅದರಲ್ಲಿಯೂ ಓಸಾಟ್ ಸಂಸ್ಥೆ ತನ್ನ 100ನೇ ಕಾರ್ಯಕ್ಕೆ ಕನ್ನಡದ ಶ್ರೇಷ್ಠ ಸಾಹಿತಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಮಾಸ್ತಿ ಗ್ರಾಮದ ಕರ್ನಾಟಕ ಸಾರ್ವಜನಿಕ (ಹಿರಿಯ ಪ್ರಾಥಮಿಕ) ಶಾಲೆಯನ್ನು ಆಯ್ಕೆ ಮಾಡಿಕೊಂಡಿದೆ. ಸುಮಾರು 5 ಕೋಟಿ ರೂ. ವೆಚ್ಚದಲ್ಲಿ ಶಾಲೆ ನಿರ್ಮಾಣವಾಗುತ್ತಿದೆ.
ಕೋಲಾರ, ಮಾರ್ಚ್ 3: ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಓಸಾಟ್ ‘ಒನ್ ಸ್ಕೂಲ್ ಅಟ್ ಆ ಟೈಮ್’ (OSAAT) ಎನ್ನುವ ಸಮಾಜಮುಖಿ ಸಂಸ್ಥೆ ಸತತವಾಗಿ ಪ್ರಯತ್ನಿಸುತ್ತಿದೆ. ತನ್ನ 20 ವರ್ಷದ ಈ ಪ್ರಯಾಣದಲ್ಲಿ ಕರ್ನಾಟಕದ ಬೇರೆ ಬೇರೆ ಪ್ರದೇಶಗಳಲ್ಲಿನ ಸರ್ಕಾರಿ ಶಾಲೆಗಳನ್ನು ಹೈಟೆಕ್ ಶಾಲೆಗಳನ್ನಾಗಿ ಪರಿವರ್ತಿಸಿದೆ. ಇದೀಗ ಓಸಾಟ್ ಸಂಸ್ಥೆ ತಮ್ಮ 100ನೇ ಸರ್ಕಾರಿ ಶಾಲೆಯ ಅಭಿವೃದ್ಧಿಗೆ ಮುಂದಾಗಿದೆ. ಅದರಲ್ಲಿಯೂ ಓಸಾಟ್ ಸಂಸ್ಥೆ ತನ್ನ 100ನೇ ಕಾರ್ಯಕ್ಕೆ ಕನ್ನಡದ ಶ್ರೇಷ್ಠ ಸಾಹಿತಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಮಾಸ್ತಿ ಗ್ರಾಮದ ಕರ್ನಾಟಕ ಸಾರ್ವಜನಿಕ (ಹಿರಿಯ ಪ್ರಾಥಮಿಕ) ಶಾಲೆಯನ್ನು ಆಯ್ಕೆ ಮಾಡಿಕೊಂಡಿದೆ. ಇದು ಜಿಲ್ಲೆಯ ಮಾಲೂರು ತಾಲ್ಲೂಕಿನಲ್ಲಿದ್ದು, ಮಾರ್ಚ್ 6ರಂದು ಭೂಮಿ ಪೂಜೆ ನಡೆಯಲಿದೆ. ಸುಮಾರು 5 ಕೋಟಿ ರೂ. ವೆಚ್ಚದಲ್ಲಿ ಶಾಲೆ ನಿರ್ಮಾಣವಾಗುತ್ತಿದೆ.
ಮಾಸ್ತಿಯಲ್ಲಿರುವ ಈ ಶಾಲೆಯು ಪ್ರಸ್ತುತ ಎಲ್ಕೆಜಿನಿಂದ 8 ನೇ ತರಗತಿವರೆಗಿದ್ದು ಸುಮಾರು 800 ಮಕ್ಕಳು ಓದುತ್ತಿದ್ದಾರೆ. ನಿರ್ಮಾಣವಾಗಲಿರುವ 2 ಮಹಡಿಗಳ ಹೊಸ ಕಟ್ಟಡದಲ್ಲಿ ತರಗತಿ ಕೊಠಡಿಗಳು, ಕಂಪ್ಯೂಟರ್ ಲ್ಯಾಬ್, ಸೈನ್ಸ್ ಲ್ಯಾಬ್, ಗ್ರಂಥಾಲಯ ಸೇರಿದಂತೆ 20 ಕೊಠಡಿಗಳನ್ನು ಹೊಂದಿರುತ್ತದೆ. ಜೊತೆಗೆ 4 ಟಾಯ್ಲೆಟ್ಗಳನ್ನು ಸಹ ಹೊಂದಿರುತ್ತದೆ. ಎರಡು ಹಂತಗಳಲ್ಲಿ ನಿರ್ಮಾಣ ಕಾರ್ಯ ನಡೆಯಲಿದೆ. ಈ ಶಾಲೆಯನ್ನು ಮಾದರಿ ಕೆಪಿಎಸ್ ಶಾಲೆಯಾಗಿ ಅಭಿವೃದ್ಧಿಪಡಿಸಲು ಕರ್ನಾಟಕ ಸರ್ಕಾರ ಎಂಒಯುಗೆ ಸಹಿ ಮಾಡಿದೆ.
ಮೊದಲನೇ ಹಂತ
- ಮಾರ್ಚ್ 6 ರಂದು ಭೂಮಿ ಪೂಜೆ
- 2 ಮಹಡಿಗಳಲ್ಲಿ 12 ಹೊಸ ತರಗತಿ ಕೊಠಡಿಗಳು
- 2 ಶೌಚಾಲಯಗಳು
- ಸ್ಟೋರ್ ರೂಂ ಮತ್ತು ವಾಶ್ / ಯುಟಿಲಿಟಿ ಪ್ರದೇಶ, ಅಡುಗೆ ಕೋಣೆ
- ಊಟದ ಕೋಣೆ
- ಜೂನ್ 2025 ರೊಳಗೆ ಪೂರ್ಣಗೊಳ್ಳಲಿದೆ
ಎರಡನೇ ಹಂತ
- 8 ಹೆಚ್ಚುವರಿ ಕೊಠಡಿಗಳು (4 ತರಗತಿ ಕೊಠಡಿಗಳು, ಕಂಪ್ಯೂಟರ್ ಲ್ಯಾಬ್, ವಿಜ್ಞಾನ ಪ್ರಯೋಗಾಲಯ, ಸಿಬ್ಬಂದಿ ಕೊಠಡಿ ಮತ್ತು ಗ್ರಂಥಾಲಯ)
- ಎರಡು ಶೌಚಾಲಯಗಳು
- ಜೂನ್ 2026ರಂದು ಪೂರ್ಣಗೊಳ್ಳುವುದು.
ಅಮೆರಿಕಾ ಮೂಲದ ದಾನಿಗಳಾದ ಶ್ರೀಮತಿ ಲಿಂಡಾ ಮತ್ತು ಜನಾರ್ದನ್ ಠಕ್ಕರ್ ಎಂಬುವವರಿಂದ ಧನಸಹಾಯ ಪಡೆದ ಓಸಾಟ್ ತನ್ನ 100ನೇ ಶಾಲೆಯ ನಿರ್ಮಾಣ ಕಾರ್ಯಕ್ಕೆ ಮುಂದಾಗಿದ್ದು, ಮಾಸ್ತಿ ಶಾಲೆಯ ಸಮಗ್ರ ಅಭಿವೃದ್ಧಿಯ ಗುರಿಯನ್ನು ಹೊಂದಿದೆ.
ಓಸಾಟ್ ಬಗ್ಗೆ ತಿಳಿಯಿರಿ
‘ಒನ್ ಸ್ಕೂಲ್ ಅಟ್ ಆ ಟೈಮ್’ ಓಸಾಟ್ ಸಂಸ್ಥೆ ಮೂಲತಃ ಅಮೆರಿಕಾದ್ದಾಗಿದ್ದು, 2003 ರಲ್ಲಿ ಸ್ಥಾಪಿಸಲಾಗಿದೆ. 2011 ರಲ್ಲಿ ಭಾರತದ ಬೆಂಗಳೂರಿನಲ್ಲಿ ಕೂಡ ಸ್ಥಾಪಿಸಲಾಯಿತು. ಯಾವುದೇ ಲಾಭೋದ್ದೇಶಕ್ಕಾಗಿ ಹುಟ್ಟಿಕೊಂಡ ಸಂಸ್ಥೆಯಿದಲ್ಲ. ಮೂಲಸೌಕರ್ಯದ ಅಗತ್ಯವಿರುವ ಭಾರತದ ಗ್ರಾಮೀಣ ಶಾಲೆಗಳಿಗೆ ಒಂದು ಕಾಯಕಲ್ಪ ನಿರ್ಮಿಸುವ ನಿಟ್ಟಿನಲ್ಲಿ ಹುಟ್ಟಿಕೊಂಡ ಸಂಸ್ಥೆಯೆಂದರೆ ಅದು ಓಸಾಟ್.
ಓಸಾಟ್ ಪ್ರಾರಂಭವಾಗಿನಿಂದಲೂ ಅನೇಕ ಶಾಲೆಗಳನ್ನು ಪುನರ್ ನಿರ್ಮಾಣ ಮತ್ತು ಹೈಟೆಕ್ ಆಗಿ ಪರಿವರ್ತಿಸಿದೆ. ಆ ಮೂಲಕ ಬಡ ಗ್ರಾಮೀಣ ಪ್ರದೇಶಗಳ ಸಾವಿರಾರು ಮಕ್ಕಳ ಶಿಕ್ಷಣಕ್ಕೆ ನೆರವಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:53 pm, Sun, 3 March 24