ಗೃಹ ಆರೋಗ್ಯದಡಿ ಸ್ಕ್ರೀನಿಂಗ್ ಮಾಡಿದಾಗ ಹೊರಬಿತ್ತು ಆಘಾತಕಾರಿ ಮಾಹಿತಿ: 2 ತಿಂಗಳಲ್ಲಿ 5 ಸಾವಿರಕ್ಕೂ ಹೆಚ್ಚು ಕ್ಯಾನ್ಸರ್ ಪತ್ತೆ

ಕ್ಯಾನ್ಸರ್ ಎಂಬ ಕೇಳಿದರೆ ಸಾಕು, ಒಂದು ರೀತಿಯಲ್ಲಿ ಎಲ್ಲರೂ ಬೆಚ್ಚಿ ಬೀಳುತ್ತೇವೆ. ವಯಸ್ಕರು, ವೃದ್ದರು, ಪುಟ್ಟಪುಟ್ಟ ಮಕ್ಕಳು ಎಂಬ ಭೇದಭಾವವಿಲ್ಲದೇ ಪ್ರತಿವರ್ಷವು ಸಾವಿರಾರು ಮಂದಿ ಕ್ಯಾನ್ಸರ್​‌ಗೆ ತುತ್ತಾಗುತ್ತಿದ್ದು, ಅದರಲ್ಲೂ ಬೆಂಗಳೂರಂತೂ ಕ್ಯಾನ್ಸರ್ ಹಾಟ್‌ಸ್ಪಾಟ್ ಆಗಿ ಬದಲಾಗುತಿದೆ. ‘ಗೃಹ ಆರೋಗ್ಯ’ ಯೋಜನೆ ಅಡಿ ಸ್ಕ್ರೀನಿಂಗ್ ಮಾಡಿದಾಗ ಕ್ಯಾನ್ಸರ್ ಬಗ್ಗೆ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.

ಗೃಹ ಆರೋಗ್ಯದಡಿ ಸ್ಕ್ರೀನಿಂಗ್ ಮಾಡಿದಾಗ ಹೊರಬಿತ್ತು ಆಘಾತಕಾರಿ ಮಾಹಿತಿ: 2 ತಿಂಗಳಲ್ಲಿ 5 ಸಾವಿರಕ್ಕೂ ಹೆಚ್ಚು ಕ್ಯಾನ್ಸರ್ ಪತ್ತೆ
ಸಾಂದರ್ಭಿಕ ಚಿತ್ರ
Edited By:

Updated on: Nov 13, 2025 | 8:01 AM

ಬೆಂಗಳೂರು, ನವೆಂಬರ್ 13: ಕೋವಿಡ್ ಬಳಿಕ ರಾಜಧಾನಿ ಬೆಂಗಳೂರು (Bengaluru) ಸೇರಿದಂತೆ ಕರ್ನಾಟಕದಲ್ಲಿ ಒಂದಲ್ಲ ಒಂದು ವೈರಸ್ ಹಾವಳಿ ಶುರುವಾಗಿದ್ದು ಜನರ ಜೀವ ತಗೆಯುತ್ತಿವೆ. ಅದರಲ್ಲೂ ಕೋಮಾರ್ಬಿಟಿಸ್ ರೋಗಿಗಳು ಸಾಂಕ್ರಾಮಿಕ ಖಾಯಿಲೆಗಳಿಂದ ಪರದಾಡುವಂತಾಗಿದೆ. ಹೆಚ್ಚುತ್ತಿರುವ ಖಾಯಿಲೆಗಳಿಂದ ಜನರ ಆರೋಗ್ಯದ ಸಮಸ್ಯೆಗಳು ವ್ಯಾಪಕ ಹಿನ್ನಲೆ ಬಿಪಿ, ಶುಗರ್, ಕ್ಯಾನ್ಸರ್ ಜೊತೆಗೆ ಕೋಮಾರ್ಬಿಟಿಸ್ ಹೊಂದಿರುವ ರೋಗಿಗಳ ಲಿಸ್ಟ್ ಮಾಡಲಾಗಿದ್ದು ಇವರಿಗೆಲ್ಲ ಮನೆ ಬಾಗಿಲಿನಲ್ಲಿಯೇ ಚಿಕಿತ್ಸೆ ಹಾಗೂ ಔಷಧ ನೀಡುವ ‘ಗೃಹ ಆರೋಗ್ಯ’ ಯೋಜನೆಯನ್ನು (Gruha Arogya Scheme) ಆರೋಗ್ಯ ಇಲಾಖೆ ಹಮ್ಮಿಕೊಂಡಿದೆ. ಹೃದಯ, ಕಿಡ್ನಿ, ಕ್ಯಾನ್ಸರ್, ಬಿಪಿ, ಮಧುಮೇಹ, ಇಸಿಜಿ ಸೇರಿದಂತೆ ಎಲ್ಲಾ ರೀತಿಯ ಆರೋಗ್ಯ ತಪಾಸಣೆ ನಡೆಸಿ ಆಯ್ದ ಸಮಸ್ಯೆಗಳಿಗೆ ಅಗತ್ಯವಿರುವಷ್ಟು ಔಷಧಗಳನ್ನು ಸ್ಥಳದಲ್ಲೇ ಉಚಿತವಾಗಿ ನೀಡಲಾಗುತ್ತಿದೆ. ಕಳೆದ ಎರಡು ತಿಂಗಳಲ್ಲಿ ‘ಗೃಹ ಆರೋಗ್ಯದಡಿ’ ಲಕ್ಷಾಂತರ ಜನರಿಗೆ ಆರೋಗ್ಯ ಇಲಾಖೆ ಕ್ಯಾನ್ಸರ್ ಸ್ಕ್ರಿನಿಂಗ್ ಮಾಡಿದೆ. ಈ ವೇಳೆ 5664 ಕ್ಯಾನ್ಸರ್ (Cancer) ಪೀಡಿತ ರೋಗಿಗಳು ಪತ್ತೆಯಾಗಿದ್ದಾರೆ.

ಕಳೆದ ಎರಡು ತಿಂಗಳ ‘ಗೃಹ ಆರೋಗ್ಯ’ದಲ್ಲಿ 5664 ಕ್ಯಾನ್ಸರ್ ಪೀಡಿತ ರೋಗಿಗಳು ಪತ್ತೆಯಾಗಿದ್ದು ಹೆಚ್ಚುವರಿ ಚಿಕಿತ್ಸೆಗೆ ಇಲಾಖೆ ಸೂಚಿಸಿದೆ. ಈ ಪೈಕಿ ಓರಲ್ ಕ್ಯಾನ್ಸರ್ 3403 ಜನರಲ್ಲಿ ಕಂಡು ಬಂದಿದೆ. ಆರೋಗ್ಯ ಇಲಾಖೆ ಇದೀಗ ಮತ್ತಷ್ಟು ಜನರನ್ನ ಸ್ಕ್ರೀನಿಂಗ್​ಗೆ ಒಳಪಡಿಸಲು ಮುಂದಾಗಿದೆ.

ಗೃಹ ಆರೋಗ್ಯ ಸ್ಕ್ರೀನಿಂಗ್ ವೇಳೆ ಬೆಳಕಿಗೆ ಬಂದ ಕ್ಯಾನ್ಸರ್ ಪ್ರಕರಣಗಳು

ಓರಲ್ ಕ್ಯಾನ್ಸರ್

  • ಸ್ಕ್ರಿನಿಂಗ್ – 11,92,436
  • ಕ್ಯಾನ್ಸರ್ ಪತ್ತೆ – 3403

ಬ್ರೆಸ್ಟ್ ಕ್ಯಾನ್ಸರ್

  • ಸ್ಕ್ರಿನಿಂಗ್- 5,38,688
  • ಕ್ಯಾನ್ಸರ್ ಪತ್ತೆ- 1311

ಸರ್ವೈಕಲ್ ಕ್ಯಾನ್ಸರ್

  • ಸ್ಕ್ರಿನಿಂಗ್- 3,85,714
  • ಕ್ಯಾನ್ಸರ್ ಪತ್ತೆ- 950

ಮಹಿಳೆಯರಲ್ಲೇ ಹೆಚ್ಚು ಕ್ಯಾನ್ಸರ್

ಪ್ರತಿ ವರ್ಷ ಭಾರತದಲ್ಲಿ ಸುಮಾರು 13.9 ಲಕ್ಷ ಹೊಸ ಕ್ಯಾನ್ಸರ್ ಪ್ರಕರಣಗಳು ವರದಿಯಾಗುತ್ತಿದ್ದು, ಕರ್ನಾಟಕದಲ್ಲಿ ಕಳೆದ ವರ್ಷ 87 ಸಾವಿರ ಹೊಸ ಪ್ರಕರಣಗಳು ವರದಿಯಾಗಿವೆ. ಇದರಲ್ಲಿ ಪ್ರಮುಖವಾಗಿ ಮಹಿಳೆಯರೇ ಹೆಚ್ಚಾಗಿ ಮಾರಕ‌ ಕ್ಯಾನ್ಸರ್‌ಗೆ ತುತ್ತಾಗುತ್ತಿರುವುದು ತಿಳಿದುಬಂದಿದೆ. ಕಳೆದ ವರ್ಷ ಬರೋಬ್ಬರಿ 48685 ಮಹಿಳೆಯರಲ್ಲಿ ಹಾಗೂ 39170 ಪುರುಷರಲ್ಲಿ‌ ಕ್ಯಾನ್ಸರ್ ಪತ್ತೆಯಾಗಿದೆ.

ಬೆಂಗಳೂರಿನಲ್ಲೇ ಹೆಚ್ಚು ಕ್ಯಾನ್ಸರ್ ಪ್ರಕರಣ

ಬೆಚ್ಚಿಬೀಳಿಸುವ ಸಂಗತಿಯೆಂದರೆ ನಮ್ಮ ಸಿಲಿಕಾನ್ ಸಿಟಿ ಬೆಂಗಳೂರಲ್ಲೇ ಅತಿ ಹೆಚ್ಚು ಕ್ಯಾನ್ಸರ್ ಪ್ರಕರಣಗಳು ವರದಿಯಾಗುತ್ತಿವೆ. ಒಟ್ಟಿನಲ್ಲಿ ಬದಲಾದ ಜೀವನಶೈಲಿ, ಮಾಲಿನ್ಯ ಇತರ ಕಾರಣಗಳಿಂದ ಕ್ಯಾನ್ಸರ್ ವ್ಯಾಪಕವಾಗಿ ಹರಡುತ್ತಿದ್ದು, ಜನರು ಆರೋಗ್ಯದ ಬಗ್ಗೆ ಕೊಂಚ ಹೆಚ್ಚಿನ ಎಚ್ಚರವಹಿಸಬೇಕಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ