
ಬೆಂಗಳೂರು, ಮೇ 26: ಕೆಎಸ್ಆರ್ಟಿಸಿ (KSRTC), ಬಿಎಂಟಿಸಿ (BMTC) ಸೇರಿದಂತೆ ನಾಲ್ಕು ನಿಗಮಳ ನೌಕರರ ಸಂಬಳದಲ್ಲಿ ಪ್ರತಿ ತಿಂಗಳು ಸಾವಿರಾರು ರೂಪಾಯಿ ಹಣವನ್ನು ಪಿಎಫ್ಗಾಗಿ ಕಡಿತ ಮಾಡಲಾಗುತ್ತದೆ. ಆ ಹಣವನ್ನು ಪಿಎಫ್ ಟ್ರಸ್ಟ್ಗೆ ಪಾವತಿ ಮಾಡಬೇಕು. ಆದರೆ ಕಳೆದ ಒಂದು ವರ್ಷದಿಂದ ಪಿಎಫ್ ಟ್ರಸ್ಟ್ಗೆ ಹಣ ಪಾವತಿ ಮಾಡಿಲ್ಲ ಎಂಬ ಆರೋಪ ಕೇಳಿಬಂದಿದೆ. ಇದರಿಂದ ಸಾರಿಗೆ ನೌಕರರು ಇದೀಗ ಕಷ್ಟದ ಸಮಯದಲ್ಲಿ ಪಿಎಫ್ ಹಣಕ್ಕಾಗಿ ಅರ್ಜಿ ಸಲ್ಲಿಸಿದರೂ ಹಣ ಸಿಗದಂತಾಗಿದೆ. ನೌಕರರ ಪಿಎಫ್ ಹಣವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಸಾರಿಗೆ ನೌಕರರ ಮುಖಂಡ ಜಗದೀಶ್ ಆರೋಪಿಸಿದ್ದಾರೆ.
ಪಿಎಫ್ ಟ್ರಸ್ಟ್ ಗೆ ಪಾವತಿಸಬೇಕಿದ್ದ 3110 ಕೋಟಿ ರುಪಾಯಿ ಹಣವನ್ನು ನಾಲ್ಕು ಸಾರಿಗೆ ನಿಗಮಗಳು ಬಾಕಿ ಉಳಿಸಿಕೊಂಡಿವೆ. ಈ ಹಿನ್ನೆಲೆಯಲ್ಲಿ, ನಾಲ್ಕು ಸಾರಿಗೆ ನಿಗಮಗಳ ಎಂಡಿಗಳಿಗೆ ಪಿಎಫ್ ಟ್ರಸ್ಟ್ಗೆ ಪಾವತಿ ಮಾಡಬೇಕಿರುವ ಸಾವಿರಾರು ಕೋಟಿ ರುಪಾಯಿ ಹಣವನ್ನು ಪಾವತಿ ಮಾಡಿ ಎಂದು ಸಾರಿಗೆ ನೌಕರರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕಳೆದ ಒಂದು ವರ್ಷದಿಂದ ಪಿಎಫ್ ಟ್ರಸ್ಟ್ ನೌಕರರ ಹಣವನ್ನು ಪಾವತಿ ಮಾಡಿಲ್ಲ. ಇದರಿಂದ ಪಿಎಫ್ ಟ್ರಸ್ಟ್ ನಾಲ್ಕು ನಿಗಮಗಳಿಗೆ ಪಾವತಿ ಮಾಡಬೇಕಿರುವ 3110 ಕೋಟಿ ರೂಪಾಯಿಗೆ ಶೇ 37 ರ ವರೆಗೆ ಬಡ್ಡಿ ವಿಧಿಸಲಿದೆ ಎನ್ನಲಾಗಿದೆ.
ಕೆಎಸ್ಆರ್ಟಿಸಿ- 891 ಕೋಟಿ ರುಪಾಯಿ, ಬಿಎಂಟಿಸಿ-958 ಕೋಟಿ ರುಪಾಯಿ, ಎನ್ಡಬ್ಲೂಕೆಆರ್ಟಿಸಿ- 1184 ಕೋಟಿ ರುಪಾಯಿ ಹಾಗೂ ಕೆಕೆಆರ್ಟಿಸಿ- 76 ಕೋಟಿ ರುಪಾಯಿ ಸೇರಿ ಒಟ್ಟು3110 ಕೋಟಿ ರುಪಾಯಿ ಬಾಕಿ ಉಳಿಸಿಕೊಳ್ಳಲಾಗಿದೆ. ಪಿಎಫ್ ಟ್ರಸ್ಟ್ಗೆ ಪಾವತಿ ಮಾಡದ ಹಿನ್ನೆಲೆಯಲ್ಲಿ ದಿನದಿಂದ ದಿನಕ್ಕೆ ಬಡ್ಡಿ ಪ್ರಮಾಣ ಹಚ್ಚಳವಾಗುತ್ತಲೇ ಇದೆ ಎನ್ನಲಾಗಿದೆ.
ಸಾರಿಗೆ ನೌಕರರ ಪಿಎಫ್ ಹಣವನ್ನು ಪಿಎಫ್ ಟ್ರಸ್ಟ್ಗೆ ಪಾವತಿ ಮಾಡಲು ರಾಜ್ಯ ಸರ್ಕಾರ ಎರಡು ಸಾವಿರ ಕೋಟಿ ಸಹಾಯಧನವನ್ನು ನೀಡಲು ಗ್ರೀನ್ ಸಿಗ್ನಲ್ ನೀಡಿದೆ. ನಾಲ್ಕು ನಿಗಮಗಳು ಸಾಲ ಪಡೆದುಕೊಂಡು ಪಿಎಫ್ ಟ್ರಸ್ಟ್ಗೆ ಹಣವನ್ನು ಪಾವತಿ ಮಾಡಲಿದೆ. ನಂತರ ಆ ಹಣವನ್ನು ಸರ್ಕಾರ ನಾಲ್ಕು ನಿಗಮಗಳಿಗೆ ನೀಡಲಿದೆ. ಹಂತ ಹಂತವಾಗಿ ಪಿಎಫ್ ಟ್ರಸ್ಟ್ಗೆ ಹಣ ಪಾವತಿ ಮಾಡಲಾಗುತ್ತದೆ ಎಂದು ಸಾರಿಗೆ ಇಲಾಖೆ ಕಾರ್ಯದರ್ಶಿ ಡಾ. ಎನ್ವಿ ಪ್ರಸಾದ್ ‘ಟಿವಿ9’ಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಕೆಎಸ್ಆರ್ಟಿಸಿ ನಿಗಮ ಸೇರಲಿವೆ 1.78 ಕೋಟಿ ರೂ ಮೌಲ್ಯದ 20 ಐರಾವತ 2.0 ಮಾದರಿಯ ಬಸ್
ಒಟ್ಟಿನಲ್ಲಿ ಸಾರಿಗೆ ನೌಕರರಿಗೆ ತಮ್ಮದೇ ಪಿಎಫ್ ಹಣ ಕಷ್ಟಕಾಲದಲ್ಲಿ ನೆರವಿಗೆ ಸಿಗದಂತಾಗಿದೆ. ಸರ್ಕಾರ ಈ ಬಗ್ಗೆ ಗಮನಹರಿಸಿ ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಸಾರಿಗೆ ಮುಖಂಡರು ಆಗ್ರಹಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ