ಪಹಲ್ಗಾಮ್ ಉಗ್ರ ದಾಳಿ: ಕರ್ನಾಟಕದ ಪ್ರವಾಸಿಗರ ಬಗ್ಗೆ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಿಷ್ಟು
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದ ದಾಳಿ ದೇಶವನ್ನೇ ಬೆಚ್ಚಿ ಬೀಳಿಸಿದ್ದು, ಕರ್ನಾಟಕದ ಅನೇಕ ಪ್ರವಾಸಿಗರ ಸ್ಥಿತಿ ಅತಂತ್ರವಾಗಿದೆ. ರಾಜ್ಯದ ಇಬ್ಬರು ದಾಳಿಯಲ್ಲಿ ಮೃತಪಟ್ಟಿದ್ದಾರೆ. ಈ ಮಧ್ಯೆ, ಉಗ್ರ ದಾಳಿಯಲ್ಲಿ ಹತರಾದ ಶಿವಮೊಗ್ಗದ ಮಂಜುನಾಥ್ ಅವರ ಕುಟುಂಬದವರ ಜತೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಾತನಾಡಿ, ಧೈರ್ಯ ತುಂಬಿದ್ದಾರೆ.

ಬೆಂಗಳೂರು, ಏಪ್ರಿಲ್ 23: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ (Pahalgam Terror Attack) ಮೃತಪಟ್ಟ ಶಿವಮೊಗ್ಗದ ಮಂಜುನಾಥ ಶರ್ಮ ಅವರ ಕುಟುಂಬಸ್ಥರ ಬಳಿ ಮಾತನಾಡಿದ್ದು, ಪಾರ್ಥಿವ ಶರೀರವನ್ನು ಕರೆತರಲು ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi)ತಿಳಿಸಿದರು. ಮಂಜುನಾಥ ಶರ್ಮರ ಪತ್ನಿ ಪಲ್ಲವಿ ಹಾಗೂ ಅವರ ಪುತ್ರನನ್ನು ತವರಿಗೆ ಕರೆತರಲು ವ್ಯವಸ್ಥೆ ಮಾಡಿರುವುದಾಗಿ ಅವರು ತಿಳಿಸಿದ್ದಾರೆ.
‘‘ಈ ಸಮಯದಲ್ಲಿ ಶ್ರೀಮತಿ ಪಲ್ಲವಿ ಅವರೊಂದಿಗೆ ಹಾಗೂ ಶಿವಮೊಗ್ಗದಲ್ಲಿರುವ ಅವರ ತಾಯಿಯವರ ಜೊತೆ ಮಾತನಾಡಿದ್ದೇನೆ. ಕಾಶ್ಮೀರದ ಪಹಲ್ಗಾಮ್ನಲ್ಲಿ ಉಗ್ರದಾಳಿಯಲ್ಲಿ ಅಸುನೀಗಿರುವ ಪಲ್ಲವಿ ಅವರ ಪತಿ ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಮಂಜುನಾಥ ಶರ್ಮರವರ ಆತ್ಮಕ್ಕೆ ಶಾಂತಿ ಕೋರಿ, ಸಾಂತ್ವನ ಹೇಳಿದ್ದೇನೆ. ಪಲ್ಲವಿ ಮತ್ತು ಅವರ ಮಗ ಅನಂತ್ ನಾಗ್ ನಲ್ಲಿದ್ದು, ಸುರಕ್ಷಿತರಾಗಿದ್ದಾರೆ. ಮೃತರ ಪಾರ್ಥಿವ ಶರೀರವನ್ನು ಕುಟುಂಬಕ್ಕೆ ಹಸ್ತಾಂತರಿಸಲು ಶೀಘ್ರ ಕ್ರಮ ಕೈಗೊಳ್ಳುವಂತೆ ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಕಚೇರಿಗೂ ಸಂಪರ್ಕಿಸಿ ಸೂಚಿಸಿದ್ದೇನೆ’’ ಎಂದು ಜೋಶಿ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಶ್ರೀಮತಿ ಪಲ್ಲವಿ ಮತ್ತು ಅವರ ಮಗನನ್ನು ರಾಜ್ಯಕ್ಕೆ ಸುರಕ್ಷಿತವಾಗಿ ಶೀಘ್ರಗತಿಯಲ್ಲಿ ಮರಳಲು ಅಗತ್ಯ ಕ್ರಮ ವಹಿಸಲು ಸೂಚಿಸಿದ್ದೇನೆ. ಎಂದೂ ಅವರು ತಿಳಿಸಿದ್ದಾರೆ.
ಪ್ರಹ್ಲಾದ್ ಜೋಶಿ ಟ್ವೀಟ್
ಈ ಸಮಯದಲ್ಲಿ ಶ್ರೀಮತಿ ಪಲ್ಲವಿ ಅವರೊಂದಿಗೆ ಹಾಗೂ ಶಿವಮೊಗ್ಗದಲ್ಲಿರುವ ಅವರ ತಾಯಿಯವರ ಜೊತೆ ಮಾತನಾಡಿ, ಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರದಾಳಿಯಲ್ಲಿ ಅಸುನೀಗಿರುವ ಅವರ ಪತಿ ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಮಂಜುನಾಥ ಶರ್ಮರವರ ಆತ್ಮಕ್ಕೆ ಶಾಂತಿ ಕೋರಿ, ಸಾಂತ್ವನ ಹೇಳಿದ್ದೇನೆ.
ಶ್ರೀಮತಿ ಪಲ್ಲವಿ ಮತ್ತು ಅವರ ಮಗ ಅನಂತ್ ನಾಗ್ ನಲ್ಲಿದ್ದು,…
— Pralhad Joshi (@JoshiPralhad) April 22, 2025
ಪಹಲ್ಗಾಮ್ನಲ್ಲಿ ಮಂಗಳವಾರ ನಡೆದ ಭಯೋತ್ಪಾದಕ ದಾಳಿಯಲ್ಲಿ ಸುಮಾರು 27 ಜನ ಮೃತಪಟ್ಟಿದ್ದು, ಅನೇಕ ಮಂದಿ ಗಾಯಗೊಂಡಿದ್ದಾರೆ. ಕರ್ನಾಟಕದ ಇಬ್ಬರು ಮೃತಪಟ್ಟಿದ್ದು, ಅನೇಕ ಪ್ರವಾಸಿಗರು ಕಾಶ್ಮೀರದಲ್ಲಿ ಸಿಲುಕಿದ್ದಾರೆ.
ಇದನ್ನೂ ಓದಿ: ಕಾಶ್ಮೀರದಲ್ಲಿ ಉಗ್ರರ ಗುಂಡಿನ ದಾಳಿಗೆ ಶಿವಮೊಗ್ಗ ಉದ್ಯಮಿ ಬಲಿ
ಮತ್ತೊಂದೆಡೆ, ರಾಜ್ಯದ ಪ್ರವಾಸಿಗರನ್ನು ಸುರಕ್ಷಿತವಾಗಿ ವಾಪಸ್ ಕರೆತರಲು ಕರ್ನಾಟಕ ಸರ್ಕಾರ ಎರಡು ತಂಡಗಳನ್ನು ಕಾಶ್ಮೀರಕ್ಕೆ ಕಳುಹಿಸಿದೆ.