
ಬೆಂಗಳೂರು, ಏಪ್ರಿಲ್ 23: ಕಾಶ್ಮೀರ ಪ್ರವಾಸದಲ್ಲಿರುವ ಉಡುಪಿಯ (Udupi) 20 ಮಂದಿಯ ತಂಡ ಸದ್ಯ ಶ್ರೀನಗರದಲ್ಲಿ (Srinagar) ಸುರಕ್ಷಿತವಾಗಿ ಇರುವ ಮಾಹಿತಿ ದೊರೆತಿದೆ. ಕುಂದಾಪುರದ ಬ್ರಹ್ಮಾವರ ಭಾಗದಿಂದ ತೆರಳಿರುವ ಪ್ರವಾಸಿಗರು ಇಂದು ಪೆಹಲ್ಗಾಮ್ಗೆ ತೆರಳಬೇಕಿತ್ತು. ಅದೃಷ್ಟವಶಾತ್ ಎಲ್ಲರೂ ಸುರಕ್ಷಿತರಾಗಿದ್ದಾರೆ. ಸದ್ಯ ಈ ತಂಡದವರು ಶ್ರೀನಗರದ ಆಸು ಪಾಸು ಸುತ್ತಾಟ ನಡೆಸುತ್ತಿದ್ದಾರೆ. ಅಲ್ಲಿನ ಸ್ಥಿತಿಗತಿ ಬಗ್ಗೆ ಭಿರ್ತಿ ರಾಜೇಶ ಶೆಟ್ಟಿ ಎಂಬವರು ಮಾತನಾಡಿದ್ದು, ಎಲ್ಲಿ ನೋಡಿದರೂ ಬಿಗಿ ಭದ್ರತೆ ಇದೆ. ಸುರಕ್ಷಿತ ಅನಿಸುವ ಜಾಗದಲ್ಲಿ ಪ್ರವಾಸ ನಡೆಸುತ್ತೇವೆ. ಪ್ರತಿ ಹೆಜ್ಜೆ ಹೆಜ್ಜೆಗೂ ಸೈನಿಕರನ್ನು ನಿಯೋಜಿಸಲಾಗಿದೆ. ಕುಂದಾಪುರ, ಬ್ರಹ್ಮಾವರ ಭಾಗದಿಂದ ಪ್ಯಾಕೇಜ್ ಟೂರ್ನಲ್ಲಿ ಬಂದಿದ್ದೇವೆ. ಪಹಲ್ಗಾಮ್ನಿಂದ (Pahalgam Terror Attack) ನಾವು ಸಾಕಷ್ಟು ದೂರ ಇದ್ದೇವೆ. ನಮ್ಮ ಪ್ರವಾಸೋದ್ಯಮ ಎಲ್ಲ ನಷ್ಟವಾಯ್ತು ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಬಂದ್ ವಾತಾವರಣ ಇದೆ, ಕೆಲವೆಡೆ ಪ್ರತಿಭಟನೆಗಳು ನಡೆಯುತ್ತಿವೆ ಎಂದು ತಿಳಿಸಿದ್ದಾರೆ.
ಪ್ರವಾಸ ಯಾವ ರೀತಿ ಮುಂದುವರಿಯುತ್ತೆದೆ ಎಂಬುದು ಗೊತ್ತಿಲ್ಲ. ಶನಿವಾರದವರೆಗೂ ಇಲ್ಲೇ ಇರಲು ಉದ್ದೇಶಿಸಿದ್ದೆವು ಎಂದು ಭಿರ್ತಿ ರಾಜೇಶ ಶೆಟ್ಟಿ ತಿಳಿಸಿದ್ದಾರೆ. ಏಪ್ರಿಲ್ 21ರಂದು ನಾವು ಕಾಶ್ಮೀರಕ್ಕೆ ಬಂದಿದ್ದೇವೆ. ನಮ್ಮದು 20 ಜನರ ತಂಡ. ನಿನ್ನೆ ಕಾಶ್ಮೀರ ಶ್ರೀನಗರದಲ್ಲಿ ವಿವಿಧ ಕಡೆ ತಿರುಗಾಟ ನಡೆಸಿದ್ದೇವೆ. ಇವತ್ತು ನಾವು ಪಹಲ್ಗಾಮ್ಗೆ ಹೋಗಬೇಕಿತ್ತು. ಈ ದುರ್ಘಟನೆ ನಡೆದ ಕಾರಣ ಪ್ರವಾಸ ರದ್ದಾಗಿದೆ. ಈಗ ನಾವು ಸೋನಾ ಮಾರ್ಗ್ಗೆ ಹೋಗುತ್ತಿದ್ದೇವೆ. ಸೋನಾ ಮಾರ್ಗಮ, ಗುಲ್ ಮಾರ್ಗ್ಗೆ ನಮ್ಮ ಪ್ರವಾಸ ಇದೆ. ಶನಿವಾರ ಶ್ರೀನಗರಕ್ಕೆ ವಾಪಸ್ ಬಂದು ಉಡುಪಿಗೆ ವಾಪಸ್ ಆಗುತ್ತೇವೆ. ನಾವು ಓಡಾಡಿದ ಸ್ಥಳದಲ್ಲೆಲ್ಲಾ ಭದ್ರತೆ ಕಾಣುತ್ತಿದ್ದೇವೆ. ನಾವು 20 ಮಂದಿ ಅತ್ಯಂತ ಸುರಕ್ಷಿತವಾಗಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ಮೂಲದ ಮಾರುತಿ ಹಾಗೂ ಪ್ರಶಾಂತ ಎಂಬ ಇಬ್ಬರು ಪ್ರವಾಸಿಗರು ಶ್ರೀನಗರದಲ್ಲಿ ಸುರಕ್ಷಿತವಾಗಿದ್ದಾರೆ. ಇವರು ಸೋಮವಾರ ಬೆಂಗಳೂರಿನಿಂದ ವಿಮಾನದ ಮೂಲಕ ಶ್ರೀನಗರಕ್ಕೆ ತೆರಳಿದ್ದರು. ಇವರು ಸೋಮವಾರ ಪಹಲ್ಗಾಮ್ ನೋಡಲು ಹೊರಟಿದ್ದರು. ಬಳಿಕ ಉಗ್ರರ ದಾಳಿ ವಿಚಾರ ತಿಳಿದು ಶ್ರೀನಗರದಲ್ಲೇ ಉಳಿದಿದ್ದರು.
ವಿಜಯಪುರದ ರೂಪಸಿಂಗ್ ಲೋನಾರಿ ಹಾಗೂ ಶಂಕರಗೌಡ ಹೊಸಮನಿ, ಸೈಯ್ಯದ್ ಜಮಖಂಡಿ ಕುಟುಂಬಸ್ಥರು ಸೇರಿ 11 ಜನ ಜಮ್ಮು ಮತ್ತು ಕಾಶ್ಮೀರ ಪ್ರವಾಸ ಕೈಗೊಂಡಿದ್ದು, ಇದೀಗ ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿದ್ದಾರೆ. ಘಟನೆ ಕುರಿತು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಪಹಲ್ಗಾಮ್ ಉಗ್ರ ದಾಳಿ: ಕನ್ನಡಿಗರ ರಕ್ಷಣೆಗಾಗಿ ಕರ್ನಾಟಕದಿಂದ ಸಹಾಯವಾಣಿ ಆರಂಭ, ಇಲ್ಲಿದೆ ವಿವರ
ಜಮ್ಮು ಕಾಶ್ಮೀರ ಒಳ್ಳೆಯ ಪ್ರವಾಸಿ ತಾಣ. ಅಲ್ಲಿನ ಜನ ನಮ್ಮನ್ನು ಒಳ್ಳೆ ರೀತಿಯಲ್ಲಿ ನೋಡಿಕೊಂಡು, ಪ್ರವಾಸಿ ತಾಣಗಳನ್ನು ತೋರಿಸಿದರು. ಕುದುರೆ ಮೇಲೆ ಹೋಗಿ ಪಹಲ್ಗಾಮ್ ನೋಡಿಕೊಂಡು ಬಂದೆವು. ಆರು ದಿನಗಳ ಕಾಲ ಜಮ್ಮು ಕಾಶ್ಮೀರದಲ್ಲಿ ಪ್ರವಾಸ ಮಾಡಿದ್ದೇವೆ. ಸೋಮವಾರ ಬೆಳಗ್ಗೆ ವಿಜಯಪುರಕ್ಕೆ ಬಂದಿದ್ದೇವೆ ಎಂದು ರೂಪಸಿಂಗ್ ಲೋನಾರಿ ತಿಳಿಸಿದ್ದಾರೆ.