ಮೀಸಲಾತಿ: ಮತ್ತೊಂದು ಹೋರಾಟಕ್ಕೆ ಜಯಮೃತ್ಯುಂಜಯ ಸ್ವಾಮೀಜಿ ಸಜ್ಜು
ಬೆಳಗಾವಿಯಲ್ಲಿ 2ಎ ಮೀಸಲಾತಿಗಾಗಿ ಪಂಚಮಸಾಲಿ ಸಮಾಜದ ಹೋರಾಟ ತೀವ್ರಗೊಂಡಿದೆ. ಸುವರ್ಣ ವಿಧಾನಸೌಧದ ಮುಂದೆ ನಡೆದ ಪ್ರತಿಭಟನೆಯಲ್ಲಿ ಪೊಲೀಸ್ ಲಾಠಿಚಾರ್ಜ್ ನಡೆದಿದೆ. ನಾಳೆ ಹಿರೇಬಾಗೇವಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಟೋಲ್ ಪ್ಲಾಜಾ ತಡೆದು ಪ್ರತಿಭಟನೆ ಮುಂದಾಗಿದ್ದಾರೆ. ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರು ಹೋರಾಟ ಮುಂದುವರಿಸುವುದಾಗಿ ಹೇಳಿದ್ದಾರೆ.
ಬೆಳಗಾವಿ, ಡಿಸೆಂಬರ್ 11: 2ಎ ಮೀಸಲಾತಿಗಾಗಿ ಪಂಚಮಸಾಲಿ (Panchamasali) ಸಮಾಜದಿಂದ ನಿನ್ನೆ ಬೆಳಗಾವಿಯ ಸುವರ್ಣ ವಿಧಾನಸೌಧದ ಮುಂಭಾಗದಲ್ಲಿ ನಡೆದ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಶಕ್ತಿ ಸೌಧಕ್ಕೆ ನುಗ್ಗಲು ಹೊರಟವರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿದರೆ, ಇತ್ತ ಪೊಲೀಸರ ಮೇಲೆ ಕಲ್ಲು, ಚಪ್ಪಲಿ ತೂರಿ ಉದ್ರಿಕ್ತರು ಆಕ್ರೋಶ ಹೊರ ಹಾಕಿದ್ದರು. ಇನ್ನು ನಾಳೆ ಅಧಿವೇಶನ ಆರಂಭಗೊಳ್ಳಲಿದ್ದು, ಹಾಗಾಗಿ ಎರಡನೇ ಹಂತದ ಹೋರಾಟಕ್ಕೆ ಪಂಚಮಸಾಲಿ ಮುಂದಾಗಿದೆ. ನಾಳೆ ಹಿರೇಬಾಗೇವಾಡಿ ರಾಷ್ಟ್ರೀಯ ಹೆದ್ದಾರಿ 4ರ ಟೋಲ್ ತಡೆದು ಹೋರಾಟ ಮಾಡಲಿದ್ದಾರೆ.
ರಾಷ್ಟ್ರೀಯ ಹೆದ್ದಾರೆ 4ರ ಟೋಲ್ ತಡೆದು ಹೋರಾಟ
ಈ ಬಗ್ಗೆ ನಗರದಲ್ಲಿ ಮಾಧ್ಯಮದವರೊಂದಿಗೆ ಬಸವ ಜಯಮೃತ್ಯುಂಜಯ ಸ್ವಾಮೀಜಿ ಪ್ರತಿಕ್ರಿಯಿಸಿದ್ದು, ನಾಳೆ ಹಿರೇಬಾಗೇವಾಡಿ ರಾಷ್ಟ್ರೀಯ ಹೆದ್ದಾರೆ 4ರ ಟೋಲ್ ತಡೆದು ಹೋರಾಟ ಮಾಡುತ್ತೇವೆ. ಯಾವುದೇ ಕಾರಣಕ್ಕೆ ಹೋರಾಟ ನಿಲ್ಲಿಸುವುದಿಲ್ಲ. ಸೋಮವಾರದಿಂದ ಅಧಿವೇಶನ ಮುಗಿಯುವವರೆಗೂ ಹೋರಾಟ ಮಾಡುತ್ತೇವೆ. ಸುವರ್ಣಸೌಧದ ಕೊಂಡಸಕೊಪ್ಪ ಬಳಿ ಮತ್ತೆ ಧರಣಿ ಮಾಡುತ್ತೇನೆ ಎಂದಿದ್ದಾರೆ.
ಇದನ್ನೂ ಓದಿ: ಪಂಚಮಸಾಲಿ ಪ್ರತಿಭಟನೆಯಲ್ಲಿ ಪೊಲೀಸರಿಂದಲೇ ಕಲ್ಲು ತೂರಾಟ: ಸ್ವಾಮೀಜಿ ಗಂಭೀರ ಆರೋಪ
ರಾಜ್ಯದಲ್ಲಿ ಈಗ ಇರೋದು ಲಿಂಗಾಯತರ ವಿರೋಧಿ ಸರ್ಕಾರ. ಲಾಠಿಚಾರ್ಜ್ ಮಾಡಿರುವ ಅಧಿಕಾರಿಯನ್ನು ಸಸ್ಪೆಂಡ್ ಮಾಡಬೇಕು. ಸಸ್ಪೆಂಡ್ ಮಾಡದಿದ್ದರೆ ನೀವೇ ಆದೇಶ ಮಾಡಿದ್ದೀರಿ ಅಂದುಕೊಳ್ಳುತ್ತೇವೆ. ಎಫ್‌ಐಆರ್ ರದ್ದು ಮಾಡುವಂತೆ ಒತ್ತಾಯಿಸಿ ಧರಣಿ ನಡೆಸುತ್ತೇನೆ. ನಾವು ಹೈಕೋರ್ಟ್ ಆದೇಶ ಉಲ್ಲಂಘಿಸಿಲ್ಲ. ಮುಖ್ಯಮಂತ್ರಿಗಳ ಭೇಟಿಗೆ ಹೋಗುವಾಗ ಹೆದ್ದಾರಿ ದಾಟಬೇಕಿತ್ತು. ರಸ್ತೆ ದಾಟಲು ಹಾರಿಕೊಂಡು ಹೋಗಬೇಕಿತ್ತಾ? ವಕೀಲರ ಮೂಲಕ ಎಲ್ಲವನ್ನೂ ಎದುರಿಸ್ತೇವೆ ಎಂದು ಹೇಳಿದ್ದಾರೆ.
ನಿನ್ನೆ ಸುವರ್ಣ ವಿಧಾನ ಸೌಧಕ್ಕೆ ಮುತ್ತಿಗೆ ಹಾಕುವ ಸಂದರ್ಭದಲ್ಲಿ ಬಂದ ಮೂವರು ಸಚಿವರು ಸಿಎಂ ಅವರ ಸಂದೇಶ ಹೇಳಬೇಕಿತ್ತು. ಆದರೆ ನಿಮ್ಮ ಅಭಿಪ್ರಾಯ ಕೇಳಲು ಬಂದಿದ್ದೇನೆ ಅಂತಾ ಹೇಳಿದರು. ಮಹಾದೇವಪ್ಪನವರು ಹತ್ತು ಜನ ಬನ್ನಿ ಭೇಟಿ ಮಾಡಿಸುತ್ತೇನೆ ಅನ್ನಬಹುದಿತ್ತು. ಅವರ ಬಾಯಲ್ಲಿ ಈ ಮಾತೇ ಬರಲೇ ಇಲ್ಲ. ಹೀಗಾಗಿ ಮುಖ್ಯಮಂತ್ರಿ ಸ್ಥಳಕ್ಕೆ ಬರಲೇಬೇಕು ಅಂತಾ ಜನರು ಒತ್ತಾಯಿಸಿದರು.
ಇದನ್ನೂ ಓದಿ: ಬೆಳಗಾವಿ ಪಂಚಮಸಾಲಿ ಮೀಸಲಾತಿ ಹೋರಾಟ: ಐವರ ವಿರುದ್ಧ ಎಫ್‌ಐಆರ್
ಎಡಿಜಿಪಿ ಸಿಎಂ ಅವರು ಸ್ಥಳಕ್ಕೆ ಬರಲ್ಲ ಅಂದಾಗ ನಾವೇ ಅಲ್ಲಿಗೆ ಹೋಗೋಣ ಅಂತಾ ಹೇಳಿದರು. ಪೊಲೀಸರೇ ಸಿವಿಲ್ ಡ್ರೆಸ್ ಹಾಕಿಕೊಂಡು ನಮ್ಮವರ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ. ದ್ವೇಷದಿಂದ ಹೊಡೆಯುವ ಕೆಲಸ ಪೊಲೀಸರು ಮಾಡಿದ್ದಾರೆ. ವಕೀಲರು, ಮಹಿಳಾ ಹೋರಾಟಗಾರರು, ಜನರ ಮೇಲೆ ಹಲ್ಲೆ ಮಾಡಿದ್ದಾರೆ. ನಮ್ಮ ಸಿಎಂ ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಈ ರೀತಿ ಘಟನೆ ಆಗಿದ್ದು ನೋವಾಯಿತು ಎಂದು ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:06 pm, Wed, 11 December 24