ಪಂಚಮಸಾಲಿ ಪ್ರತಿಭಟನೆಯಲ್ಲಿ ಪೊಲೀಸರಿಂದಲೇ ಕಲ್ಲು ತೂರಾಟ: ಸ್ವಾಮೀಜಿ ಗಂಭೀರ ಆರೋಪ
ಬೆಳಗಾವಿಯಲ್ಲಿ 2ಎ ಮೀಸಲಾತಿಗಾಗಿ ನಡೆದ ಪಂಚಮಸಾಲಿ ಸಮುದಾಯದ ಪ್ರತಿಭಟನೆ ವೇಳೆ ಪೊಲೀಸರು ಲಾಠಿಚಾರ್ಜ್ ಮಾಡಿದ್ದಾರೆ. ಇದು ಚರ್ಚೆಗೆ ಗ್ರಾಸವಾಗಿದೆ. ಬಸವ ಜಯಮೃತ್ಯುಂಜಯ ಸ್ವಾಮೀಜಿ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ ಮತ್ತು ರಾಜ್ಯ ಸರ್ಕಾರ ಕ್ಷಮೆ ಕೋರಬೇಕೆಂದು ಒತ್ತಾಯಿಸಿದ್ದಾರೆ. ಡಿಸೆಂಬರ್ 12 ರಂದು ರಾಜ್ಯಾದ್ಯಂತ ರಸ್ತೆ ತಡೆ ಹೋರಾಟ ನಡೆಸಲು ಕರೆ ನೀಡಿದ್ದಾರೆ.
ಬೆಳಗಾವಿ, ಡಿಸೆಂಬರ್ 11: ನಿನ್ನೆ 2A ಮೀಸಲಾತಿಗಾಗಿ ಪಂಚಮಸಾಲಿ (panchamasali reservation) ಸಮುದಾಯ ನಡೆಸಿದ ಹೋರಾಟ ಹಿಂಸಾರೂಪಕ್ಕೆ ತಿರುಗಿತ್ತು. ಬೆಳಗಾವಿಯ ಸುವರ್ಣಸೌಧದ ಬಳಿ ಹೈಡ್ರಾಮಾ ಸೃಷ್ಟಿಯಾಗಿತ್ತು. ಈ ವೇಳೆ ಹೋರಾಟಗಾರರ ಮೇಲೆ ಲಾಠಿಚಾರ್ಜ್ ಕೂಡ ಮಾಡಲಾಗಿತ್ತು. ನಮ್ಮವರ ಮೇಲೆ ಪೊಲೀಸರೇ ಕಲ್ಲುತೂರಾಟ ಮಾಡಿದ್ದಾರೆ ಎಂದು ಬಸವ ಜಯಮೃತ್ಯುಂಜಯ ಸ್ವಾಮೀಜಿ ಗಂಭೀರ ಆರೋಪ ಮಾಡಿದ್ದಾರೆ.
ರಾಜ್ಯ ಸರ್ಕಾರ ಕೂಡಲೇ ಕ್ಷಮೆ ಕೇಳಬೇಕು
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪೊಲೀಸರೇ ಸಿವಿಲ್ ಡ್ರೆಸ್ ಧರಿಸಿ ಬಂದು ಹಲ್ಲೆ ಮಾಡಿದ್ದರು. ದ್ವೇಷದಿಂದ ಕಲ್ಲು ಹೊಡೆಯುವ ಕೆಲಸವನ್ನು ಮಾಡಿದ್ದಾರೆ. ಲಿಂಗಾಯತ ಸಮಾಜದ ಕೋಟ್ಯಂತರ ಜನ ಕಣ್ಣೀರಿಡುತ್ತಿದ್ದಾರೆ. ರಾಜ್ಯ ಸರ್ಕಾರ ಕೂಡಲೇ ಕ್ಷಮೆ ಕೇಳಬೇಕು. ಹಲ್ಲೆ ಮಾಡಿದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು. ಅವರನ್ನ ಅಮಾನತು ಮಾಡಬೇಕೆಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಬೆಳಗಾವಿಯಲ್ಲಿ ಹಿಂಸಾರೂಪಕ್ಕೆ ತಿರುಗಿದ ಪಂಚಮಸಾಲಿ ಹೋರಾಟ, ಲಾಠಿ ಚಾರ್ಜ್, ಕಲ್ಲು ತೂರಾಟ
ವಕೀಲರು, ಮಹಿಳಾ ಹೋರಾಟಗಾರರ ಮೇಲೂ ಹಲ್ಲೆಯಾಗಿದೆ. ಸಿದ್ದರಾಮಯ್ಯ ಸರ್ಕಾರದಲ್ಲಿ ಹೀಗಾಗಿದ್ದಕ್ಕೆ ಬಹಳ ನೋವಾಯ್ತು. ದೊಡ್ಡ ಲಿಂಗಾಯತ ಸಮುದಾಯದ ಮೇಲೆ ದೌರ್ಜನ್ಯವಾಗಿದೆ. ದೌರ್ಜನ್ಯ ಮಾಡಿದ್ರೂ 2ಎ ಮೀಸಲಾತಿ ನಿಮಗೆ ಕೊಡಲು ಆಗಲ್ಲ ಅಂತಾ ಸಿಎಂ ಹೇಳಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಡಿಸೆಂಬರ್ 12ರಂದು ರಸ್ತೆ ತಡೆದು ಹೋರಾಟ ಮಾಡಲು ಕರೆ
ಇನ್ನು ಡಿಸೆಂಬರ್ 12ರಂದು ರಸ್ತೆ ತಡೆದು ಹೋರಾಟ ಮಾಡುವಂತೆ ರಾಜ್ಯಾದ್ಯಂತ ಪಂಚಮಸಾಲಿಗರಿಗೆ ಜಯಮೃತ್ಯುಂಜಯಶ್ರೀ ಕರೆ ನೀಡಿದ್ದಾರೆ. ನಿಮ್ಮ ಊರಲ್ಲಿ ರಸ್ತೆ ತಡದು ಹೋರಾಟ ಮಾಡಿ. ನಾಳೆ ಹಿರೇಬಾಗೇವಾಡಿ ಟೋಲ್ ನಾಕಾ ಬಂದ್ ಮಾಡುತ್ತೇವೆ. ಯಾವುದೇ ಕಾರಣಕ್ಕೆ ಹೋರಾಟ ನಿಲ್ಲಿಸುವುದಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಪಂಚಮಸಾಲಿ ಹೋರಾಟಗಾರರ ಮೇಲೆ ಲಾಠಿಚಾರ್ಜ್: ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ
ಇನ್ಮುಂದೆ ಚೆನ್ನಮ್ಮನಂತೆ ಕ್ರಾಂತಿ ಹೋರಾಟ ಮಾಡುತ್ತೇವೆ. ಈವರೆಗೂ ಲಿಂಗಾಯತ ವಿರೋಧಿ ಮುಖ್ಯಮಂತ್ರಿ ಅಂತಿದ್ರು. ನಾವು ಹಾಗೆ ಅಂದುಕೊಂಡಿರಲಿಲ್ಲ ಆದ್ರೀಗ ಹಾಗೆ ಅನಿಸ್ತಿದೆ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ಲಿಂಗಾಯತ ವಿರೋಧಿ ಎಂದು ವಾಗ್ದಾಳಿ ಮಾಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:36 pm, Wed, 11 December 24