Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೈದ್ಯರ ನಿರ್ಲಕ್ಷಕ್ಕೆ ಬಾಣಂತಿ ಸಾವು: 40 ದಿನದ ಕಂದಮ್ಮನನ್ನು ಅಗಲಿದ ತಾಯಿ

ಚಿತ್ರದುರ್ಗದ ಜಿಲ್ಲಾಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷದಿಂದಾಗಿ ಬಾಣಂತಿಯೊಬ್ಬರು ಮೃತಪಟ್ಟಿರುವ ಆರೋಪ ಕೇಳಿಬಂದಿದೆ. ಮಹಿಳೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ನಂತರ ಹೊಟ್ಟೆ ನೋವು ಮತ್ತು ವಾಂತಿಯಿಂದ ಬಳಲಿದ್ದು, ಪುನಃ ಆಸ್ಪತ್ರೆಗೆ ದಾಖಲಾದಾಗ ಸಕಾಲದಲ್ಲಿ ಚಿಕಿತ್ಸೆ ದೊರೆಯದೆ ಸಾವನ್ನಪ್ಪಿದ್ದಾರೆ. ಈ ಘಟನೆಯಿಂದ ಸಂಬಂಧಿಕರು ಮತ್ತು ಕನ್ನಡಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ಮಾಡಿದ್ದಾರೆ.

ವೈದ್ಯರ ನಿರ್ಲಕ್ಷಕ್ಕೆ ಬಾಣಂತಿ ಸಾವು: 40 ದಿನದ ಕಂದಮ್ಮನನ್ನು ಅಗಲಿದ ತಾಯಿ
ವೈದ್ಯರ ನಿರ್ಲಕ್ಷಕ್ಕೆ ಬಾಣಂತಿ ಸಾವು: 40 ದಿನದ ಕಂದಮ್ಮನನ್ನು ಅಗಲಿದ ತಾಯಿ
Follow us
ಬಸವರಾಜ ಮುದನೂರ್, ಚಿತ್ರದುರ್ಗ
| Updated By: ಗಂಗಾಧರ​ ಬ. ಸಾಬೋಜಿ

Updated on: Dec 11, 2024 | 6:03 PM

ಚಿತ್ರದುರ್ಗ, ಡಿಸೆಂಬರ್​ 11: ಬಳ್ಳಾರಿಯಲ್ಲಿ ಬಾಣಂತಿಯರ ಸಾವು ಪ್ರಕರಣ ಕರ್ನಾಟಕವನ್ನೇ ಬೆಚ್ಚಿ ಬೀಳಿಸಿದೆ. ಇದೇ ಸಂದರ್ಭದಲ್ಲಿ ಕೋಟೆನಾಡು ಚಿತ್ರದುರ್ಗದಲ್ಲೂ ಬಾಣಂತಿಯ ಸಾವು (death) ಸಂಭವಿಸಿದೆ. ವೈದ್ಯರ ನಿರ್ಲಕ್ಷದಿಂದಾಗಿ ಬಾಣಂತಿ 40 ದಿನದ ಕಂದಮ್ಮನನ್ನು ಅಗಲಿದ್ದು, ಸಂಬಂಧಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಸಕಾಲಕ್ಕೆ ಸೂಕ್ತ ಚಿಕಿತ್ಸೆ ಸಿಗದೆ ಬಾಣಂತಿ ಸಾವು

ಜಿಲ್ಲೆಯ ಚಳ್ಳಕೆರೆ ತಾಲೂಕಿನ ಜಾಗನೂರುಹಟ್ಟಿ ಗ್ರಾಮದ ಗರ್ಭಿಣಿ ರೋಜಮ್ಮ(25) ಅಕ್ಟೋಬರ್ 31ರಂದು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ವೈದ್ಯೆ ಡಾ.ರೂಪಶ್ರೀ ಸೀಜರಿನ್ ಆಪರೇಷನ್ ಮಾಡಿದ್ದು, ಗಂಡು ಮಗುವಿಗೆ ಜನ್ಮ ನೀಡಿದ್ದರು. ಐದು ದಿನಗಳ ಬಳಿಕ ಜಿಲ್ಲಾಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು. ಆದರೆ ಆಗಾಗ ಹೊಟ್ಟೆನೋವು ಕಾಣಿಸಿಕೊಳ್ಳುತ್ತಿತ್ತು. ನಿನ್ನೆ ಬೆಳಗ್ಗೆಯಿಂದ ವಾಂತಿ ಶುರುವಾಗಿದೆ. ಹೀಗಾಗಿ, ನಾಯಕನಹಟ್ಟಿ ಸರ್ಕಾರಿ ಆಸ್ಪತ್ರೆ ತೆರಳಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕತ್ಸೆಗೆಂದು ಜಿಲ್ಲಾಸ್ಪತ್ರೆಗೆ ಬಂದಿದ್ದಾರೆ. ಆದರೆ ಜಿಲ್ಲಾಸ್ಪತ್ರೆಯಲ್ಲಿ ಸಕಾಲಕ್ಕೆ ಸೂಕ್ತ ಚಿಕಿತ್ಸೆ ಸಿಗದೆ ರೋಜಮ್ಮ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: ಬಾಣಂತಿಯರ ಸಾವು ಪ್ರಕರಣ: ಐವಿ ಫ್ಲೂಯಿಡ್ ಕಂಪನಿ ವಿರುದ್ಧ 4 ಕ್ರಿಮಿನಲ್ ಕೇಸ್ ದಾಖಲಿಸಲು ಶಿಫಾರಸು

ಸೀಜರಿನ್ ಆಪರೇಷನ್ ಸಮರ್ಪಕವಾಗಿ ಆಗದ ಕಾರಣ ಇನ್ಫೆಕ್ಷನ್ ಆಗಿದೆ. ಹೊಲಿಗೆ ಹಾಕಿದ ಜಾಗದಲ್ಲಿ ಕೀವು ತುಂಬಿಕೊಂಡಿತ್ತು. ಹೀಗಾಗಿ ರೋಜಮ್ಮಳ ಸಾವಿಗೆ ವೈದ್ಯರ ನಿರ್ಲಕ್ಷವೇ ಕಾರಣವಾಗಿದೆ. ಆಸ್ಪತ್ರೆಗೆ ಬಂದಾಗ ದುಡ್ಡು ಕೊಡದೆಯೇ ಕೆಲಸವೇ ಮಾಡಲ್ಲ. ಮಾಡುವ ಕೆಲಸದಲ್ಲೂ ನಿರ್ಲಕ್ಷ ತೋರಿದ್ದಾರೆ. ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಮೃತ ರೋಜಮ್ಮಗೆ 40ದಿನದ ಪುಟ್ಟ ಮಗು ಸೇರಿ ಮೂವರು ಮಕ್ಕಳಿದ್ದು, ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ. ಸೂಕ್ತ ಪರಿಹಾರ ನೀಡಬೇಕೆಂಬುದು ಸಂಬಂಧಿಕರು ಆಗ್ರಹಿಸಿದ್ದಾರೆ.

ಇನ್ನು ಕನ್ನಡಪರ ಸಂಘಟನೆ ಕಾರ್ಯಕರ್ತರು ಜಿಲ್ಲಾಸ್ಪತ್ರೆ ಆವರಣದಲ್ಲಿ ಜಮಾಯಿಸಿ ವೈದ್ಯಕೀಯ ಸಿಬ್ಬಂದಿ ವಿರುದ್ಧ ಪ್ರತಿಭಟನೆ ನಡೆಸಿದರು. ಜಿಲ್ಲಾಸ್ಪತ್ರೆಯ ಜಿಲ್ಲಾ ಸರ್ಜನ್ ಹಾಗೂ ಡಿಹೆಚ್​ಓ ಕಚೇರಿಗೆ ತೆರಳಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಿದ್ದಾರೆ. ಈ ವೇಳೆ ಜಿಲ್ಲಾಸ್ಪತ್ರೆಯ ಆರ್​ಎಂಓ ಡಾ. ಆನಂದ ಪ್ರಕಾಶ್ ಪ್ರತಿಕ್ರಿಯಿಸಿದ್ದು, ಪೋಸ್ಟ್ ಮಾರ್ಟ್ಂ ಬಳಿಕ ಸಾವಿಗೆ ನಿಖರ ಕಾರಣ ತಿಳಿಯಲಿದೆ. ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಬಳ್ಳಾರಿ ಬಾಣಂತಿಯರ ಸಾವು ಕೇಸ್​: ಐಎಎಸ್ ಅಧಿಕಾರಿ ನೇತೃತ್ವದಲ್ಲಿ ಪರಿಶೀಲನಾ ತಂಡ ರಚನೆ

ಒಟ್ಟಾರೆಯಾಗಿ ಕೋಟೆನಾಡು ಚಿತ್ರದುರ್ಗ ನಗರದಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷದಿಂದ ಬಾಣಂತಿ ಸಾವನ್ನಪ್ಪಿರುವ ಗಂಭೀರ ಆರೋಪ ಕೇಳಿ ಬಂದಿದೆ. ಮೃತರ ಕುಟುಂಬಸ್ಥರು ಮತ್ತು ಕನ್ನಡಪರ ಸಂಘಟನೆ ಕಾರ್ಯಕರ್ತರು ಈ ಬಗ್ಗೆ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಹೀಗಾಗಿ, ಆರೋಗ್ಯ ಇಲಾಖೆ, ಜಿಲ್ಲಾಡಳಿತ ಮತ್ತು ಸರ್ಕಾರ ಈ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಜರುಗಿಸಬೇಕಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.