ಮಂಡ್ಯ: ಜಿಲ್ಲೆಯ ಪಾಂಡವಪುರ ತಾಲೂಕಿನ ಬೇವಿನಕುಪ್ಪೆ ಗ್ರಾಮದ ಅಕ್ಷಯ್ ಕುಮಾರ್ ಎಂಬ ಬಾಲಕ ಎರಡನೇ ತರಗತಿ ಓದುತ್ತಿದ್ದ. 8 ವರ್ಷದ ಬಾಲಕ ಈ ವರ್ಷ ಕೊರೊನಾ ಹಾವಳಿ ಇಲ್ಲದಿದ್ದರೆ ಶಾಲೆಗೆ ಹೋಗಿಬರುವುದು ಮಾಡುತ್ತಿದ್ದ. ಆದರೆ ಮಹಾಮಾರಿ ಕೊರೊನಾದಿಂದ ಮನೆಯಲ್ಲಿಯೇ ಓದುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಅಕ್ಷಯ್ ಕುಮಾರ್ ಮನೆಯಲ್ಲಿಯೇ ಓದಿಕೊಂಡು, ಆಟವಾಡಿಕೊಂಡಿದ್ದ. ಹೀಗಿರುವಾಗ ಆತನ ಹೆತ್ತವರು ಮನೆ ಕಟ್ಟುವ ಕೆಲಸ ಆರಂಭಿಸಿದ್ದರು. ಆದರೆ, ಮನೆಗೆ ಆರ್ಸಿಸಿ ಹಾಕಿದ ನಂತರ ಮನೆಯ ಮೇಲೆ ಆಟವಾಡಲು ಹೋದ ಬಾಲಕ ಮನೆಗೆ ಹೊಂದಿಕೊಂಡಂತೆ ಇದ್ದ ವಿದ್ಯುತ್ ತಂತಿಯನ್ನು ಮುಟ್ಟಿ ತನ್ನ ಬಲಗೈಯನ್ನು ಕಳೆದುಕೊಂಡಿದ್ದಾನೆ.
ಬೇವಿನಕುಪ್ಪೆ ಗ್ರಾಮದ ರಾಮಚಂದ್ರು ಮತ್ತು ರಕ್ಷಿತಾ ಎಂಬ ದಂಪತಿಗಳ ಮಗನಾದ ಅಕ್ಷಯ್ ಕುಮಾರ್ ಖಾಸಗಿ ಅನುದಾನಿತ ಶಾಲೆಯೊಂದರಲ್ಲಿ 2ನೇ ತರಗತಿ ಓದುತ್ತಿದ್ದಾನೆ. ವೃತ್ತಿಯಲ್ಲಿ ಮರಗೆಲಸ ಮಾಡುವ ರಾಮಚಂದ್ರು ಬಡತನದ ನಡುವೆಯೂ ಊರಿನಲ್ಲೇ ಒಂದು ಮನೆಯನ್ನ ಕಟ್ಟಿಸಬೇಕೆಂಬ ಉದ್ದೇಶದಿಂದ ಮೂರ್ನಾಲ್ಕು ತಿಂಗಳ ಹಿಂದೆ ಮನೆ ಕೆಲಸ ಆರಂಭಿಸಿದ್ದರು. ರಾಮಚಂದ್ರು ಅವರ ಮನೆ ನಿರ್ಮಿಸುವ ಕಡೆಯಲ್ಲೇ ಹೈ ಹೋಲ್ಟೇಜ್ನ ವಿದ್ಯುತ್ ತಂತಿಯನ್ನ ಎಳೆಯಲಾಗಿತ್ತು. ಮನೆ ಕಟ್ಟಲು ಆರಂಭಿಸಿದಾಗ ಪಾಂಡವಪುರ ಪಟ್ಟಣದಲ್ಲಿರುವ ಚೆಸ್ಕಾಂ ಅಧಿಕಾರಿಗಳಿಗೆ ವಿದ್ಯುತ್ ಸ್ಥಳಾಂತರಿಸುವಂತೆ ರಾಮಚಂದ್ರು ಮನವಿ ಮಾಡಿದ್ದರು. ಈ ಸಂಬಂಧ ತಮ್ಮ ಊರಿನ ಲೈನ್ಮೆನ್ಗೂ ವಿಚಾರ ತಿಳಿಸಿ ಆತನಿಗೆ ವಿದ್ಯುತ್ ಕಂಬ ಸ್ಥಳಾಂತರಿಸುವಂತೆ 2,500 ರೂ ಹಣವನ್ನೂ ನೀಡಿದ್ದರಂತೆ. ಹೀಗೆ ಹಣ ಪಡೆದಿದ್ದ ಲೈನ್ಮೆನ್ ಕೆಲವು ವಸ್ತುಗಳನ್ನ ತಂದು ರಾಮಚಂದ್ರು ಮನೆಯಲ್ಲಿಟ್ಟಿದ್ದು ಬಿಟ್ಟರೆ ವಿದ್ಯುತ್ ಕಂಬ ಸ್ಥಳಾಂತರ ಮಾಡಲೇ ಇಲ್ಲ. ಫೆಬ್ರವರಿ 24 ರಂದು ಬುಧವಾರ ಮಧ್ಯಾಹ್ನದ ವೇಳೆಗೆ ನಿರ್ಮಾಣ ಹಂತದಲ್ಲಿದ್ದ ತಮ್ಮದೇ ಮನೆಯ ಮೇಲ್ಭಾಗದಲ್ಲಿ ಆಟವಾಡಲು ಹೋಗಿದ್ದ ಬಾಲಕ ಅಲ್ಲಿಯೇ ಇದ್ದ ವಿದ್ಯುತ್ ತಂತಿಯನ್ನ ಮುಟ್ಟಿದ ಪರಿಣಾಮ ಬಾರೀ ಪ್ರಮಾಣದ ಶಾಕ್ನಿಂದಾಗಿ ಮನೆಯ ಮೇಲಿಂದ ಕೆಳಗೆ ಬಿದ್ದಿದ್ದ.
ಅಂದಿನ ಘಟನೆಯಿಂದಾಗಿ ಬಾಲಕನ ಬಲಗೈ ಮತ್ತು ಬೆನ್ನು ಸುಟ್ಟು ಹೋಗಿತ್ತು. ಕೂಡಲೇ ಆತನನ್ನ ಪಾಂಡವಪುರದ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ ಆರ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಸದ್ಯ ಬಾಲಕ ಚೇತರಿಸಿಕೊಳ್ಳುತ್ತಿದ್ದಾನೆ ಎನ್ನುವಾಗಲೇ ಸುಟ್ಟಗಾಯವಾಗಿದ್ದ ಆತನ ಬಲಗೈ ಸ್ವಾಧೀನ ಕಳೆದುಕೊಂಡಿದ್ದನ್ನ ಗಮನಿಸಿರುವ ವೈದ್ಯರು ಆತನ ಮುಂಗೈ ತೆಗೆದು ಹಾಕಿದ್ದಾರೆ. ಅಲ್ಲದೆ ಬಾಲಕನ ಜೀವದ ಬಗ್ಗೆ 15 ದಿನಗಳವರೆಗೆ ಏನೂ ಹೇಳಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದಾರಂತೆ.
ಚೆಸ್ಕಾಂ ಕಚೇರಿ ಮುಂದೆ ಪ್ರತಿಭಟನೆ
ತಾವು ಮನೆ ಕಟ್ಟುವುದಕ್ಕೂ ಮೊದಲೇ ವಿದ್ಯುತ್ ಕಂಬವನ್ನ ಸ್ಥಳಾಂತರಿಸುವಂತೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಅಂದು ಕೇಳಲಿಲ್ಲ. ಆದರೆ ತಮ್ಮ ಮಗನ ಘಟನೆ ನಡೆದ ಮಾರನೇ ದಿನವೇ ಬಂದು ವಿದ್ಯುತ್ ಕಂಬವನ್ನ ಸ್ಥಳಾಂತರಿಸಿದ್ದಾರೆ. ಈ ಕೆಲಸ ಮೊದಲೇ ಮಾಡಿದ್ದರೆ ನಮ್ಮ ಮಗನ ಕೈ ಉಳಿಯುತ್ತಿತ್ತು. ಹೀಗಾಗಿ ಘಟನೆಗೆ ಸಂಬಂಧಿಸಿದಂತೆ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿ ರೈತರು ಸಂಘಟನೆಯವರ ಜೊತೆ ಕುಟುಂಬಸ್ಥರು ಸೇರಿ ಪಾಂಡವಪುರ ಪಟ್ಟಣದ ಚೆಸ್ಕಾಂ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಇವರ ಮನವಿ ಸ್ವೀಕರಿಸಿ ಮಾತನಾಡಿದ ಚೆಸ್ಕಾಂನ ಪಾಂಡವಪುರ ವಿಭಾಗದ ಎಇಇ ಪುಟ್ಟಸ್ವಾಮಿ ಘಟನೆ ಸಂಬಂಧ ನಾವು ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಿ ಪರಿಹಾರ ಕೊಡಿಸುವ ಬಗ್ಗೆ ನಿರ್ಧಾರ ಕೈಗೊಳ್ಳುತ್ತೀವಿ ಎಂದು ಭರವಸೆ ನೀಡಿದ್ದಾರೆ.
ಇದನ್ನೂ ಓದಿ
ಕೊಡಗು ಜಿಲ್ಲೆಯಲ್ಲಿ ಹುಲಿ ದಾಳಿಗೆ ಬಾಲಕ ಬಲಿ: ಅರಣ್ಯ ಅಧಿಕಾರಿಗಳ ವಿರುದ್ಧ ಜನರ ಆಕ್ರೋಶ
ಅನ್ನದಾತನ ಬದುಕಿಗೆ ಕೊಳ್ಳಿ ಇಟ್ಟ ವಿದ್ಯುತ್ ತಂತಿಗಳು : ಬೆಳೆದು ನಿಂತಿದ್ದ ಅಡಿಕೆ, ಬಾಳೆ ಬೆಳೆ ಬೆಂಕಿಗಾಹುತಿ!