ಗದಗ: ಕೊರೊನಾ 2 ನೇ ಅಲೆ ಅಬ್ಬರ ಸದ್ಯ ಕೊಂಚ ತಣ್ಣಗಾಗಿದೆ. ಆದ್ರೆ ಕೊರೊನಾ ಸಂಪೂರ್ಣ ನಾಶವಾಗಿಲ್ಲ. ಆದ್ರೆ ಇದರ ನಡುವೆ ಗದಗ ಜಿಲ್ಲೆಯಲ್ಲಿ ಜನರ ನಿರ್ಲಕ್ಷ್ಯ ಹೆಚ್ಚಾಗಿದೆ. ಕೊರೊನಾ ಎರಡನೇ ಅಲೆಯಲ್ಲಿ ಉಂಟಾಗಿದ್ದ ಸಾವು-ನೋವು ಮರೆಯಾಗುವ ಮುನ್ನವೇ ಕೊವಿಡ್ ನಿಯಮ ಉಲ್ಲಂಘನೆಯಾಗುತ್ತಿದೆ. ಕೊರೊನಾ ಮೂರನೇ ಅಲೆಯಲ್ಲಿ ಮಕ್ಕಳಿಗೆ ಅಪಾಯ ಹೆಚ್ಚು ಎಂಬ ಬಗ್ಗೆಯೂ ಚಿಂತಿಸದೆ ಮಕ್ಕಳು, ಯುವತಿಯರು ಸೇರಿದಂತೆ ಅನೇಕ ಮಂದಿ ಡಿಜೆ ಸೌಂಡ್ಗೆ ಭರ್ಜರಿ ಲಂಬಾಣಿ ಸಂಪ್ರದಾಯಿಕ ಡ್ಯಾನ್ಸ್ ಮಾಡಿದ್ದಾರೆ.
ಗದಗ ಜಿಲ್ಲೆ ಗಜೇಂದ್ರಗಡ ಪಟ್ಟಣದ ಸೇವಾಲಾಲ್ ನಗರದಲ್ಲಿ ಕಳೆದ ಎರಡು ದಿನಗಳಿಂದ ರಾತ್ರಿ ವೇಳೆ ಡಿಜೆ ಸಾಂಗ್ಸ್ ಸದ್ದು ಮಾಡುತ್ತಿದೆ. ಯಾವುದೇ ಅದ್ಧೂರಿ ಕಾರ್ಯಕ್ರಮಗಳನ್ನು ಮಾಡಬಾರದೆಂದು ಸರ್ಕಾರ ಕಟ್ಟುನಿಟ್ಟಿನ ನಿಯಮವನ್ನು ಜಾರಿ ಮಾಡಿದೆ. ಶುಭ ಕಾರ್ಯಕ್ರಮಗಳಿಗೆ ಇಷ್ಟೇ ಜನ ಇರಬೇಕು ಎಂದು ಮಾರ್ಗಸೂಚಿಗಳನ್ನು ಹೊರಡಿಸಿದೆ. ಆದ್ರೆ ಕೊರೊನಾ ನಿಯಮ ಗಾಳಿಗೆ ತೂರಿ ಮದುವೆ ಸಮಾರಂಭ ನಡೆಯುತ್ತಿದ್ದು ಜೋರಾಗಿ ಡ್ಯಾನ್ಸ್ ಮಾಡುತ್ತ ಕೊರೊನಾವನ್ನು ಮರೆತು ಎಂಜಾಯ್ ಮಾಡ್ತಿದ್ದಾರೆ.
ಜುಲೈ 3 ರಂದು ಮದುವೆ ಕಾರ್ಯಕ್ರಮವಿರುವ ಹಿನ್ನೆಲೆಯಲ್ಲಿ ಕೊರೊನಾದ ನಡುವೆಯೂ ಡ್ಯಾನ್ಸ್ ಮಾಡಿ ಸಂಭ್ರಮಿಸಿದ್ದಾರೆ. ಸರ್ಕಾರದ ನಿಯಮಕ್ಕೂ ನಮಗೂ ಯಾವುದೇ ಸಂಬಂಧವಿಲ್ಲವಂತೆ ಕುಣಿದು ಕುಪ್ಪಳಿಸಿದ್ದಾರೆ. ಪಕ್ಕದಲ್ಲಿಯೇ ಪೊಲೀಸ್ ಠಾಣೆ ಇದ್ದರೂ ಅಧಿಕಾರಿಗಳು ಗಪ್ ಚುಪ್ ಆಗಿದ್ದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಗುಂಪು ಗುಂಪಾಗಿ ಸೇರಿ ಹುಡಗಿಯರು, ಯುವಕರು, ಮಕ್ಕಳು ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಪಾಡಿಕೊಳ್ಳದೆ ಮಸ್ತ್ ಡ್ಯಾನ್ಸ್ ಮಾಡಿದ್ದಾರೆ. ಪೊಲೀಸರ ನಿರ್ಲಕ್ಷ್ಯಕ್ಕೆ ಸುತ್ತಮುತ್ತಲಿನ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಕೊರೊನಾ ಎರಡನೇ ಅಲೆಯ ನಡುವೆ ಕರಗ ಆಚರಣೆ; ಕೊವಿಡ್ ನಿಯಮ ಉಲ್ಲಂಘಿಸಿದವರ ವಿರುದ್ಧ ಎಪ್ಐಆರ್