PFI Ban: ಪಿಎಫ್ಐ ಸಂಘಟನೆ ನಿಷೇಧಕ್ಕೆ ಕರ್ನಾಟಕ ಕಾಂಗ್ರೆಸ್ ನಾಯಕರ ಪ್ರತಿಕ್ರಿಯೆ ಏನು?
ಜಾಗತಿಕ ಉಗ್ರ ಸಂಘಟನೆಗಳ ಜೊತೆ ಸಂಬಂಧ ಹಿನ್ನೆಲೆ ನಿಷೇಧ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(PFI) ನಿಷೇಧ ಮಾಡಿ ಕೇಂದ್ರ ಸರ್ಕಾರ ಮಹತ್ವದ ಆದೇಶ ಹೊರಡಿಸಿದ್ದು, ಕಾಂಗ್ರೆಸ್ ಇದಕ್ಕೆ ಪ್ರತಿಕ್ರಿಯೆ ನೀಡಿದೆ.
ಜಾಗತಿಕ ಉಗ್ರ ಸಂಘಟನೆಗಳ ಜೊತೆ ಸಂಬಂಧ ಹಿನ್ನೆಲೆ ನಿಷೇಧ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(PFI) ನಿಷೇಧ ಮಾಡಿ ಕೇಂದ್ರ ಸರ್ಕಾರ ಮಹತ್ವದ ಆದೇಶ ಹೊರಡಿಸಿದ್ದು, ಕಾಂಗ್ರೆಸ್ ಇದಕ್ಕೆ ಪ್ರತಿಕ್ರಿಯೆ ನೀಡಿದೆ. ಚುನಾವಣೆ ಗಿಮಿಕ್ಗಾಗಿ ಪಿಎಫ್ಐ ನಿಷೇಧ ಮಾಡಿದ್ದಾರೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಆರೋಪಿಸಿದ್ದಾರೆ.
ಪಿಎಫ್ಐ ನಿಷೇಧ ಮಾಡೋದಕ್ಕೆ ಕಾರಣಗಳನ್ನ ಕೊಟ್ಟಿದ್ದಾರೆ, ಪ್ರಧಾನಿ ಮೋದಿಗೆ ಬೆದರಿಕೆ ಇದೆ ಎಂದು ಹೇಳಿದ್ದಾರೆ, ಯಾವಾಗ? ಗುಜರಾತ್ ಚುನಾವಣೆ ಬಂದಾಗ ಮೋದಿಗೆ ಕೊಲೆ ಬೆದರಿಕೆ ಬರುತ್ತದೆ, ಅಧಿಕಾರಕ್ಕೆ ಬಂದು 8 ವರ್ಷ ಆಗಿದೆ ಏನು ಮಾಡುತ್ತಿದ್ದರು ಎಂದು ಪ್ರಶ್ನಿಸಿದ್ದಾರೆ.
ಇಷ್ಟು ವರ್ಷ ಕೈಗೆ ಗೋರಂಟಿ ಹಾಕಿಕೊಂಡಿದ್ದರೇ?, ಇದು ಚುನಾವಣೆಯ ಸ್ಟಂಟ್ ಅಷ್ಟೇ ಎಂದು ಹರಿಪ್ರಸಾದ್ ಗುಡುಗಿದ್ದಾರೆ. ಅನುಕಂಪ ಗಿಟ್ಟಿಸಿಕೊಳ್ಳಲು ಪಿಎಫ್ಐ ಬ್ಯಾನ್ ಮಾಡಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.
ಚುನಾವಣೆ ಬಂದಾಗ ಬಯೋತ್ಪಾದನೆ ಶುರುವಾಗುತ್ತದೆ, ಅದನ್ನ ನಿಗ್ರಹಿಸುವವರು ನಾವೂ ಅಂತಾ ಸಿಂಪಥಿ ಗಿಟ್ಟಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಸಾರ್ವಜನಿಕರಿಗಾಗಿ ಇವರು ಏನನ್ನೂ ಮಾಡುವುದಿಲ್ಲ, ಪಿಎಫ್ಐನ ನಿಷೇಧ ಮಾಡಿರುವುದು ಸರಿಯೋ ಅಥವಾ ತಪ್ಪೋ ಎನ್ನುವುದಕ್ಕಿಂತ ಈ ಸಂದರ್ಭದಲ್ಲಿ ಯಾಕೆ ನಿಷೇಧ ಮಾಡಿದರು ಎಂಬುದನ್ನು ಕೇಳಬೇಕಿದೆ ಎಂದಿದ್ದಾರೆ.
ತಾರತಮ್ಯ, ದ್ವೇಷ ಇಲ್ಲದೇ ಕ್ರಮಕೈಗೊಂಡಿದ್ದರೆ ತುಂಬಾ ಒಳ್ಳೆಯದು ಶಾಸಕ ಯು.ಟಿ.ಖಾದರ್ ಪ್ರತಿಕ್ರಿಯೆ ಕೇವಲ ಕ್ರಮ ತೆಗೆದುಕೊಳ್ಳುವುದು ಮುಖ್ಯವಲ್ಲ, ಸಮಾಜದಲ್ಲಿ ಶಾಂತಿ ಕದಡದಂತೆ ನೋಡಿಕೊಳ್ಳಬೇಕಾಗಿರುವುದು ಸರ್ಕಾರದ ಕರ್ತವ್ಯ ಎಂದು ಶಾಸಕ ಯುಟಿ ಖಾದರ್ ಹೇಳಿದ್ದಾರೆ.
ಇದನ್ನು ಯಾವ ರೀತಿ ಬಿಂಬಿಸುತ್ತಾರೆ ಎಂಬುದು ನನಗೆ ತಿಳಿದಿಲ್ಲ, ಸಮಾಜದಲ್ಲಿ ಶಾಂತಿ ಕದಡುವವರ ವಿರುದ್ಧ ಕ್ರಮಕೈಗೊಳ್ಳಲಿ, ಸಂಘಟನೆ ನಿಷೇಧ ವಿಚಾರದಲ್ಲಿ ಕಾನೂನು, ನ್ಯಾಯಾಲವು ಸೂಕ್ತ ತೀರ್ಮಾನ ತೆಗೆದುಕೊಳ್ಳಲಿದೆ ಎಂದರು.
ಇದು ಸರ್ಕಾರದ ಜವಾಬ್ದಾರಿ, ಹಾಗಾಗಿ ಎಲ್ಲಾ ಸಂಘ ಸಂಸ್ಥೆಗಳ ಮೇಲೆ ಕ್ರಮ ಜರುಗಿಸಲಿ, ಹಲ್ಲೆ, ಅಶಾಂತಿ, ಕೋಮುದ್ವೇಷದ ಸಂಘಟನೆ ವಿರುದ್ದ ಕ್ರಮ ತೆಗೆದುಕೊಳ್ಳಬೇಕು, ತಾರತಮ್ಯ ಮಾಡದೇ ಸದುದ್ದೇಶದಿಂದ ಕ್ರಮ ತೆಗೆದುಕೊಳ್ಳಬೇಕು, ಒಂದು ಕ್ರಮದ ಮೂಲಕ ಭವಿಷ್ಯದಲ್ಲಿ ಸಮಾಜದಲ್ಲಿ ಅಶಾಂತಿ ಕಡಿಮೆಯಾಗಬೇಕು.
ಉತ್ತಮ ಸಮಾಜ ನಿರ್ಮಾಣ ಮಾಡಲು ಕ್ರಮಗಳು ಅಗತ್ಯವಾಗಿ ತೆಗೆದುಕೊಳ್ಳಬೇಕು, ಯಾವುದೇ ಸಂಘಟನೆಗಳನ್ನು ಸಮಾಜದಲ್ಲಿ ಹೇಗೆ ಬಿಂಬಿಸುತ್ತಾರೆ ಎಂಬುದು ಗೊತ್ತಿಲ್ಲ, ಸಮಾಜದ ಬಹುತೇಕ ಜನರಿಗೆ ಪ್ರೀತಿ, ಸೌಹಾರ್ದತೆ ಬೇಕು. ರಾಜಕೀಯವಾಗಿ ಯಾವ ಪರಿಣಾಮ ಅಗುತ್ತೆ ಎಂಬುದು ನನಗೆ ಗೊತ್ತಿಲ್ಲ.
ಸಾಕ್ಷ್ಯಧಾರ ಇದ್ದಲ್ಲಿ ತಾರತಮ್ಯ ಮಾಡದೇ ಕ್ರಮ ತೆಗೆದುಕೊಳ್ಳಬೇಕು. ಕೋಮುದ್ವೇಷದ ಆಧಾರದಲ್ಲಿ ಸಮಾಜದಲ್ಲಿ ಕೊಲೆಗಳು ಸಂಭವಿಸುತ್ತಿವೆ. ಸತ್ತಾಗಲೂ ಪರಿಹಾರ ಕೊಡುವುದರಲ್ಲಿ ತಾರತಮ್ಯ ನಡೆಯುತ್ತಿದೆ ಎಂದು ಯುಟಿ ಖಾದರ್ ಅಸಮಾಧಾನ ವ್ಯಕ್ತಪಡಿಸಿದರು.
ಯಾರು ಕಾನೂನು ವಿರುದ್ಧವಾಗಿ ಇರುತ್ತಾರೆ, ಯಾರು ಸಮಾಜದಲ್ಲಿ ಅಶಾಂತಿ ಉಂಟುಮಾಡುತ್ತಾರೆ, ಅವರ ವಿರುದ್ಧ ಕ್ರಮ ಕೈಗೊಂಡರೆ ನಮ್ಮ ವಿರೋಧ ಇಲ್ಲ ಎಂದು ಮಾಜಿ ಮೂಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಅದೇ ರೀತಿ RSS ಅವರು ಸಮಾಜದ ಶಾಂತಿ ಹಾಳು ಮಾಡುತ್ತಿದ್ದಾರೆ, ಅವರ ಮೇಲೂ ಕ್ರಮ ತೆಗೆದುಕೊಳ್ಳಬೇಕು. ಯಾವುದೇ ಸಂಘಟನೆ ಆದರೂ ನಿಷೇಧ ಮಾಡಬೇಕು ಎಂದರು.
ನಾವು ನುಡಿದಂತೆ ನಡೆದಿದ್ದೇವೆ ಎಂಬ ಬಿಜೆಪಿ ಟ್ವೀಟ್ ಗೆ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ, ಇಷ್ಟು ದಿನ ಯಾಕೆ ಮಾಡಿರಲಿಲ್ಲ, ಇಷ್ಟು ದಿನ ಏನು ಮಾಡ್ತಿದ್ದರು ಎಂದು ಪ್ರಶ್ನಿಸಿದ್ದಾರೆ.
ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:07 pm, Wed, 28 September 22