ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸದಸ್ಯರಿಗೆ ತರಬೇತಿ ನೀಡಿದ ಕೇರಳ ಫೈರ್ ಫೋರ್ಸ್ !; ವಿವಾದಕ್ಕೆ ಕಾರಣವಾದ ಫೋಟೋಗಳು
ಫೋಟೋಗಳು ವೈರಲ್ ಆಗುತ್ತಿದ್ದಂತೆ ಈ ಬಗ್ಗೆ ಕೇರಳ ಸರ್ಕಾರ, ಅಗ್ನಿ ಶಾಮಕ ದಳದ ಡಿಜಿಪಿ ಬಿ.ಸಂಧ್ಯಾ ಅವರ ಬಳಿ ವರದಿ ಕೇಳಿತ್ತು. ಅಂತೆಯೇ ವರದಿ ಸಲ್ಲಿಸಿದ ಸಂಧ್ಯಾ, ಇದು ನಿಜಕ್ಕೂ ಫೈರ್ ಫೋರ್ಸ್ ಕಡೆಯಿಂದ ಆದ ಬಹುದೊಡ್ಡ ತಪ್ಪು ಎಂದಿದ್ದಾರೆ.
ಭಾರತದ ಇಸ್ಲಾಮಿಕ್ ಉಗ್ರಗಾಮಿ ಸಂಘಟನೆಯೆನಿಸಿಕೊಂಡಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಸದಸ್ಯರಿಗೆ ಕೇರಳದ ಅಗ್ನಿಶಾಮಕ ದಳದ ಸಿಬ್ಬಂದಿ ತರಬೇತಿ ನೀಡುತ್ತಿರುವ ವಿಡಿಯೋ, ಫೋಟೋಗಳು ಕಳೆದವಾರದಿಂದ ಭರ್ಜರಿ ವೈರಲ್ ಆಗುತ್ತಿದ್ದು, ವಿವಾದ ಸೃಷ್ಟಿಸಿದೆ. ಇದು ಕೋಝಿಕ್ಕೋಡ್ನಲ್ಲಿ ನಡೆದದ್ದು ಎಂದು ಹೇಳಲಾಗಿದೆ. ಸಾಮಾನ್ಯವಾಗಿ ಈ ಅಗ್ನಿಶಾಮಕದಳ ಸಿಬ್ಬಂದಿ ಶಾಲೆ ಮತ್ತಿತರ ಸಂಘ-ಸಂಸ್ಥೆಗಳಲ್ಲಿ ಈ ತರಬೇತಿ ಕಾರ್ಯ ಹಮ್ಮಿಕೊಳ್ಳುತ್ತಾರೆ. ಅಂದರೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಾಗ ಏನು ಮಾಡಬೇಕು? ಅದನ್ನು ಶಮನ ಮಾಡಲು, ಬೆಂಕಿಯಿಂದ ಪಾರಾಗಲು ಪ್ರಾಥಮಿಕವಾಗಿ ಏನೆಲ್ಲ ಕ್ರಮ ವಹಿಸಬೇಕು ಎಂಬಿತ್ಯಾದಿ ವಿಷಯಗಳ ಕುರಿತು ತರಬೇತಿಯಲ್ಲಿ ವಿವರಿಸಲಾಗುತ್ತದೆ. ಆದರೆ ಕೇರಳದಲ್ಲಿ ಪಿಎಫ್ಐ ಕಾರ್ಯಕರ್ತರಿಗೆ ಈ ತರಬೇತಿ ನೀಡಿದ್ದು ಅನೇಕರ ಕೆಂಗಣ್ಣಿಗೆ ಗುರಿಯಾಗಿದೆ. ಪಿಎಫ್ಐ ಎಂದು ಬರೆದಿರುವ ಅಂಗಿಯನ್ನು ಹಾಕಿಕೊಂಡಿರುವ ಅನೇಕರು ಕುರ್ಚಿಯ ಮೇಲೆ ಕುಳಿತಿದ್ದರೆ, ಅಗ್ನಿಶಾಮಕದಳದ ಸಿಬ್ಬಂದಿ ವೇದಿಕೆಯಲ್ಲಿ ನಿಂತು ಅವರಿಗೆ ಪರಿಹಾರ ಕ್ರಮಗಳ ಬಗ್ಗೆ ವಿವರಿಸಿ, ತರಬೇತಿ ನೀಡಿದ್ದಾರೆ.
ಈ ಬಗ್ಗೆ ಬಿಜೆಪಿ ಕೇರಳ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್ ಟ್ವೀಟ್ ಮಾಡಿ, ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪಿಎಫ್ಐ ಮತ್ತು ಎಸ್ಡಿಪಿಐ ಸಂಘಟನೆಗಳು ವಿವಿಧ ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿವೆ. ಆದರೆ ಇಂಥ ಜಿಹಾದಿ ಹೋರಾಟಗಾರರಿಗೆ ಕೇರಳ ಪಿಣರಾಯಿ ವಿಜಯನ್ ಸರ್ಕಾರ ರೆಡ್ಕಾರ್ಪೆಟ್ ಹಾಸುತ್ತಿದೆ. ಕೇರಳದ ಅಗ್ನಿಶಾಮಕ ಮತ್ತು ರಕ್ಷಣಾ ದಳಗಳಿಂದ ಪಿಎಫ್ಐ ಸಂಘಟನೆ ಕಾರ್ಯಕರ್ತರಿಗೆ ತರಬೇತಿ ನೀಡಲಾಗಿದೆ ಎಂದು ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲ, ಗೃಹ ಸಚಿವ ಅಮಿತ್ ಶಾ ಅವರನ್ನೂ ಟ್ಯಾಗ್ ಮಾಡಿದ್ದಾರೆ.
Kerala Fire & Rescue Service gave training to the members of the radical Islamic outfit Popular Front of India. PFI and SDPI are involved in several terrorist activities. The @vijayanpinarayi govt is giving a red carpet for these Jihadi forces.@AmitShah ji. pic.twitter.com/LiKxAZQNO7
— K Surendran (@surendranbjp) March 31, 2022
ಫೋಟೋಗಳು ವೈರಲ್ ಆಗುತ್ತಿದ್ದಂತೆ ಈ ಬಗ್ಗೆ ಕೇರಳ ಸರ್ಕಾರ, ಅಗ್ನಿ ಶಾಮಕ ದಳದ ಡಿಜಿಪಿ ಬಿ.ಸಂಧ್ಯಾ ಅವರ ಬಳಿ ವರದಿ ಕೇಳಿತ್ತು. ಅಂತೆಯೇ ವರದಿ ಸಲ್ಲಿಸಿದ ಸಂಧ್ಯಾ, ಇದು ನಿಜಕ್ಕೂ ಫೈರ್ ಫೋರ್ಸ್ ಕಡೆಯಿಂದ ಆದ ಬಹುದೊಡ್ಡ ತಪ್ಪು. ಇದರಲ್ಲಿ ಭಾಗಿಯಾಗಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದರು. ಹಾಗೇ, ತರಬೇತಿಯಲ್ಲಿ ಭಾಗಿಯಾದ ಅಧಿಕಾರಗಳ ಬಗ್ಗೆ ಸ್ಪಷ್ಟನೆ ಕೇಳಿದಾಗ, ಕೊಝಿಕ್ಕೊಡ್ನಲ್ಲಿ ಪಿಎಫ್ಐನಿಂದ ಒಂದು ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅದಕ್ಕೆ ನಮ್ಮನ್ನು ಆಹ್ವಾನಿಸಲಾಗಿತ್ತು. ಆ ಕಾರ್ಯಕ್ರಮಕ್ಕೆ ಹೋದಾಗ ವೇದಿಕೆ ಮೇಲೆ ಮಾತನಾಡಿದ್ದೇವೆ. ಬೆಂಕಿ ಬಿದ್ದಾಗ ತೆಗೆದುಕೊಳ್ಳಬಹುದಾದ ಕೆಲವು ಟಿಪ್ಸ್ಗಳನ್ನು ನೀಡಿದ್ದೇವೆ ಎಂದು ಹೇಳಿಕೊಂಡಿದ್ದಾರೆ.
ಪಿಎಫ್ಐ ಒಂದು ಮೂಲಭೂತವಾದಿಗಳ ಸಂಘಟನೆಯಾಗಿದ್ದು, 2006ರಲ್ಲಿ ಸ್ಥಾಪನೆಗೊಂಡಿದೆ. ಇದು ಕೇರಳ ಮತ್ತು ಹಲವು ರಾಜ್ಯಗಳಲ್ಲಿ ಸಕ್ರಿಯವಾಗಿದೆ. ಇತ್ತೀಚೆಗೆ ನಡೆಯುತ್ತಿರುವ ಹಿಜಾಬ್ ವಿವಾದ ಸೇರಿ, ಹಲವು ವಿಚಾರಗಳಲ್ಲಿ ಪಿಎಫ್ಐ ಕೈವಾಡವಿದೆ. ಇದು ಸಮಾಜದಲ್ಲಿ ಅಸ್ಥಿರತೆ ಉಂಟು ಮಾಡುವ ಸಂಘಟನೆಯಾಗಿದೆ ಎಂಬ ಆರೋಪವಿದೆ. ಸೋಶಿಯಲ್ ಡೆಮಾಕ್ರಟಿಕ್ ಫ್ರಂಟ್ ಆಫ್ ಇಂಡಿಯಾ ಎಂಬುದು ಪಿಎಫ್ಐನ ರಾಜಕೀಯ ವಿಭಾಗವಾಗಿದ್ದು, ಕಳೆದ ವಾರ ಇಡುಕ್ಕಿಯ ಪೊಲೀಸ್ ಸಿಬ್ಬಂದಿಯೊಬ್ಬ, ಪೊಲೀಸ್ ಡಾಟಾಬೇಸ್ನ ಮಹತ್ವದ ಸಂಗತಿಗಳನ್ನು ಎಸ್ಡಿಪಿಐನೊಟ್ಟಿಗೆ ಹಂಚಿಕೊಂಡಿದ್ದಕ್ಕೆ ಅವರನ್ನು ಕೆಲಸದಿಂದ ತೆಗೆದುಹಾಕಲಾಗಿತ್ತು.
ಇದನ್ನೂ ಓದಿ: ಪ್ರೀತಿಸಿ ಮದುವೆಯಾಗಿದ್ದವಳ ಮೇಲೆ ಸೀಮೆ ಎಣ್ಣೆ ಸುರಿದು ಕೊಲೆ ಯತ್ನ; 26 ದಿನಗಳ ಹೋರಾಟದ ಬಳಿಕ ಪ್ರಾಣಬಿಟ್ಟ ಮಹಿಳೆ