40 ಮೃತ ಸೋಂಕಿತರ ಅಂತ್ಯಸಂಸ್ಕಾರ ಮಾಡಿದ ಬಾಗಲಕೋಟೆ ಪಿಎಫ್ಐ ತಂಡ; ಸಮಾಜಮುಖಿ ಕಾರ್ಯಕ್ಕೆ ಜನರಿಂದ ಮೆಚ್ಚುಗೆ
ಬಾಗಲಕೋಟೆ ಪಿಎಫ್ಐ ಇದುವರೆಗೂ ಕೊವಿಡ್ ಎರಡನೇ ಅಲೆಯಲ್ಲಿ ಒಟ್ಟು 40ಮೃತ ಸೋಂಕಿತರ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ. ಜಿಲ್ಲಾದ್ಯಂತ ಯಾವುದೇ ಮೂಲೆಯಲ್ಲಿ ಕೊವಿಡ್ ಸೊಂಕಿತರು ಮೃತಪಟ್ಟು, ಕುಟುಂಬಸ್ಥರು ಅಂತ್ಯಸಂಸ್ಕಾರಕ್ಕೆ ಮುಂದೆ ಬಾರದೆ ಹೋದರೆ ಪಿಪಿಇ ಕಿಟ್ ಹಾಕಿಕೊಂಡು ಕೊವಿಡ್ ಮೃತರ ಶವ ಸ್ಮಶಾನಕ್ಕೆ ಸಾಗಿಸಿ ಅವರ ಅಂತಿಮ ಕಾರ್ಯವನ್ನು ಈ ತಂಡ ಮಾಡುತ್ತಿದೆ.
ಬಾಗಲಕೋಟೆ: ಕೊವಿಡ್ ಎರಡನೇ ಅಲೆ ತೀವ್ರವಾಗಿದೆ. ಸಾವು ಮತ್ತು ನೋವಿನ ಸಂಖ್ಯೆಯಲ್ಲಿ ಕೂಡ ಏರಿಕೆಯಾಗುತ್ತಿದೆ. ಕೊವಿಡ್ಗೆ ಬಲಿಯಾದವರನ್ನು ಸಂಬಂಧಿಕರೇ ದೂರ ಇಡುವ ಪರಿಸ್ಥಿತಿ ಈಗ ನಿರ್ಮಾಣವಾಗಿದೆ. ಇಂತಹ ವೇಳೆಯಲ್ಲಿ ಕೊವಿಡ್ ಸೊಂಕಿತರ ಪಾಲಿಗೆ ಬಾಗಲಕೋಟೆ ಪಾಪ್ಯುಲರ್ ಫಂಟ್ ಆಫ್ ಇಂಡಿಯಾ ಕುಟುಂಬವಾಗಿ ನಿಂತಿದೆ. ಈ ತಂಡದ ಕಾರ್ಯಕರ್ತರು ಕೊವಿಡ್ ಸೊಂಕಿನಿಂದ ಮೃತಪಟ್ಟವರ ಅಂತ್ಯಸಂಸ್ಕಾರ ಮಾಡುವ ಮೂಲಕ ಸೊಂಕಿತರಿಗೆ ಕುಟುಂಬಸ್ಥರಾಗಿದ್ದಾರೆ.
ಬಾಗಲಕೋಟೆ ಜಿಲ್ಲೆಯಲ್ಲಿ ಕೊರೊನಾ ಹೆಚ್ಚಾಗುತ್ತಿದ್ದು, ದನ ಪ್ರತಿ 300 ರಿಂದ 400 ಪಾಜಿಟಿವ್ ಕೇಸ್‌ಗಳು ಪತ್ತೆಯಾಗುತ್ತಿದೆ. ಅಲ್ಲದೆ ಜಿಲ್ಲೆಯಲ್ಲಿ ಇದುವರೆಗೂ ಒಟ್ಟು 112 ಜನರು ಕೊವಿಡ್ಗೆ ಬಲಿಯಾಗಿದ್ದಾರೆ. ಈ ಸೋಂಕಿತರು ಮೃತಪಟ್ಟಾಗ ಅವರ ಅಂತ್ಯಸಂಸ್ಕಾರಕ್ಕೆ ಧೈರ್ಯದಿಂದ ಮುಂದೆ ಬಂದಿದ್ದು ಪಿಎಫ್ಐ (ಪಾಪ್ಯುಲರ್ ಫಂಟ್ ಆಫ್ ಇಂಡಿಯಾ) ಕಾರ್ಯಕರ್ತರು. ಈ ತಂಡ ಕೊವಿಡ್ ಸೊಂಕಿತರು ಮೃತಪಟ್ಟರೆ ಮೃತನ ಧರ್ಮದಾನುಸಾರವಾಗಿ ಅಂತ್ಯಸಂಸ್ಕಾರ ಮಾಡುತ್ತಾರೆ.
ಬರೊಬ್ಬರಿ 40 ಕೊವಿಡ್ ಮೃತರ ಅಂತ್ಯಸಂಸ್ಕಾರ ಬಾಗಲಕೋಟೆ ಪಿಎಫ್ಐ ಇದುವರೆಗೂ ಕೊವಿಡ್ ಎರಡನೇ ಅಲೆಯಲ್ಲಿ ಒಟ್ಟು 40ಮೃತ ಸೋಂಕಿತರ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ. ಜಿಲ್ಲಾದ್ಯಂತ ಯಾವುದೇ ಮೂಲೆಯಲ್ಲಿ ಕೊವಿಡ್ ಸೊಂಕಿತರು ಮೃತಪಟ್ಟು, ಕುಟುಂಬಸ್ಥರು ಅಂತ್ಯಸಂಸ್ಕಾರಕ್ಕೆ ಮುಂದೆ ಬಾರದೆ ಹೋದರೆ ಪಿಪಿಇ ಕಿಟ್ ಹಾಕಿಕೊಂಡು ಕೊವಿಡ್ ಮೃತರ ಶವ ಸ್ಮಶಾನಕ್ಕೆ ಸಾಗಿಸಿ ಅವರ ಅಂತಿಮ ಕಾರ್ಯವನ್ನು ಈ ತಂಡ ಮಾಡುತ್ತಿದೆ. ಇನ್ನು ಕಳೆದ ವರ್ಷ ಕೊವಿಡ್ ಮೊದಲನೇ ಅವಧಿಯಲ್ಲೀ 50 ಮೃತ ಸೋಂಕಿತರ ಅಂತ್ಯಕ್ರಿಯೆ ಮಾಡಲಾಗಿತ್ತು. ಈ ವರ್ಷವೂ ತಮ್ಮ ಕಾರ್ಯವನ್ನು ಮುಂದುವರೆಸಿದ್ದಾರೆ.
ಪಿಎಫ್ಐ ಕಾರ್ಯಕರ್ತರು ಬಾಗಲಕೋಟೆ ಜಿಲ್ಲಾದ್ಯಂತ ಸಹಸ್ರಾರು ಸಂಖ್ಯೆಯಲ್ಲಿದ್ದಾರೆ. ಕಳೆದ ವರ್ಷ ವಿವಿಧ ಕಡೆ ಕೊವಿಡ್ ಮೃತರನ್ನು ಅತಿ ಅಮಾನವೀಯವಾಗಿ ಅಂತ್ಯಸಂಸ್ಕಾರ ಮಾಡುವುದನ್ನು ಕಂಡು ಮರುಗಿದ್ದಾರೆ. ಇಂತಹ ಪರಿಸ್ಥಿತಿ ಯಾರಿಗೂ ಬರಬಾರದು ಎಂದು ಕಳೆದ ವರ್ಷವೇ ಪಣತೊಟ್ಟ ಈ ಕಾರ್ಯಕರ್ತರು ಮೃತರ ಅಂತ್ಯಸಂಸ್ಕಾರ ಮಾಡುವುದಕ್ಕೆ ಮುಂದಾದರು. ಜಮಖಂಡಿ, ತೇರದಾಳ, ರಬಕವಿಬನಹಟ್ಟಿ ಭಾಗದಲ್ಲಿ ಮೊದಲು ಶುರುವಾದ ಇವರ ಈ ಕಾರ್ಯ ನಂತರ ಇಡೀ ಬಾಗಲಕೋಟೆ ಜಿಲ್ಲಾದ್ಯಂತ ಮುಂದುವರೆಯುತ್ತಿದೆ. ಜಾತಿ ಭೇದ ಮರೆತು ಎಲ್ಲ ಧರ್ಮ ಸಮುದಾಯದವರ ಅಂತ್ಯಕ್ರಿಯೆ ಮಾಡುತ್ತಿರುವ ಇವರು ರಾತ್ರಿ ಹಗಲು ಎನ್ನದೆ ಮೃತರ ಆತ್ಮಕ್ಕೆ ಶಾಂತಿ ದೊರಕಿಸುವ ಕಾರ್ಯಕ್ಕೆ ಮುಂದಾಗಿರುವುದು ವಿಶೇಷ.
ನಾವು ಮೊದಲು ಮಾನವರು ನಂತರ ಜಾತಿ, ಧರ್ಮ, ಸಮುದಾಯ ಎಲ್ಲ. ಕಳೆದ ವರ್ಷ ಮೃತ ಕೊವಿಡ್ ಶವಗಳನ್ನು ಮನಬಂದಂತೆ ಎಸೆಯುವ ಪದ್ಧತಿ ಇತ್ತು. ಹೀಗೆ ಅಮಾನವೀಯವಾಗಿ ನಡೆದುಕೊಂಡ ಅನೇಕ ಸನ್ನಿವೇಶಗಳನ್ನು ನಾವು ನೋಡಿದ್ದೇವೆ. ಇದು ಮನಸ್ಸಿಗೆ ಬಹಳ ನೋವುಂಟು ಮಾಡಿತು. ಅದಕ್ಕೆ ಯಾರಗೂ ಇಂತಹ ಧಾರುಣ ಅಂತ್ಯಕ್ರಿಯೆ ಪರಿಸ್ಥಿತಿ ಬರಬಾರದು ಎಂದು ನಿರ್ಧರಿಸಿ ಈ ಕಾರ್ಯ ಮಾಡಿದ್ದೇವೆ. ಇದು ನಿರಂತರವಾಗಿ ಮುಂದುವರೆಯಲಿದೆ ಎಂದು ಪಿಎಫ್ಐ ಬಾಗಲಕೋಟೆ ಜಿಲ್ಲಾಧ್ಯಕ್ಷ ಅಸ್ಗರ್ ಅಲಿಶೇಖ್ ಹೇಳಿದ್ದಾರೆ.
ಇದನ್ನೂ ಓದಿ:
ಮುಸ್ಲಿಂ ಯುವಕರ ತಂಡದಿಂದ ಕೊವಿಡ್ಗೆ ಬಲಿಯಾದವರ ಉಚಿತ ಅಂತ್ಯಸಂಸ್ಕಾರ; ತುಮಕೂರಿನಲ್ಲೊಂದು ಮಾನವೀಯ ಕಾರ್ಯ
ಕಿಲ್ಲರ್ ಕೊರೊನಾ: ಆ್ಯಂಬುಲೆನ್ಸ್ ಚಾಲಕರಿಂದಲೇ ಅಂತ್ಯಸಂಸ್ಕಾರ, ವಿಡಿಯೋ ನೋಡಿ ವಿದಾಯ ಹೇಳುತ್ತಿರುವ ಕುಟುಂಬಸ್ಥರು