
ಮಂಡ್ಯ, ಏಪ್ರಿಲ್ 15: ರಾಗಿ ಮುದ್ದೆ ಕೇವಲ ಆಹಾರವಲ್ಲ ಅದೊಂದು ಶಕ್ತಿ, ಮಂಡ್ಯದಲ್ಲಿ ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡರು ಅದನ್ನು ಫೇಮಸ್ ಮಾಡಿದ್ದಾರೆ, ಯುವಕರು ರಾಗಿ ಮುದ್ದೆ ಹಾಗೂ ನವಧಾನ್ಯಗಳನ್ನು ಹೆಚ್ಚು ಸೇವಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಹೇಳಿದ್ದಾರೆ. ಮಂಡ್ಯದ ಆದಿಚುಂಚನಗಿರಿ ಮಠದಲ್ಲಿ ಶ್ರೀ ಗುರು ಭೈರವೈಕ್ಯ ಮಂದಿರವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಕರ್ನಾಟಕದ ಸಂಸ್ಕೃತಿ ಮತ್ತು ಮಠದ ಸೇವೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು.
ಕರ್ನಾಟಕಕ್ಕೆ ಬರುವುದೆಂದರೆ ನನಗೆ ಖುಷಿಯ ವಿಷಯ. ಇಲ್ಲಿಗೆ ಬಂದಾಗಲೆಲ್ಲಾ ಹೊಸ ಪ್ರೇರಣೆ ಸಿಗುತ್ತದೆ. ಅದರಲ್ಲೂ ಸಕ್ಕರೆ ನಾಡು ಮಂಡ್ಯಕ್ಕೆ ಬಂದಿರುವುದು ಈ ಭೇಟಿಯನ್ನು ಇನ್ನಷ್ಟು ಮಹತ್ವಪೂರ್ಣವಾಗಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ನುಡಿದರು.
ತತ್ವಜ್ಞಾನ ಮತ್ತು ತಂತ್ರಜ್ಞಾನದ ಸಮೃದ್ಧಿ
ಕರ್ನಾಟಕದ ಮಣ್ಣಿನ ಗುಣವನ್ನು ಬಣ್ಣಿಸಿದ ಪ್ರಧಾನಿ, ಈ ಮಣ್ಣು ತತ್ವಜ್ಞಾನ ಮತ್ತು ತಂತ್ರಜ್ಞಾನ ಎರಡರಲ್ಲೂ ಸಮೃದ್ಧವಾಗಿದೆ. ಇಲ್ಲಿ ದರ್ಶನದ ಆಳವೂ ಇದೆ, ಟೆಕ್ನಾಲಜಿಯ ಶಕ್ತಿಯೂ ಇದೆ. ಆದಿಚುಂಚನಗಿರಿ ಮಠವು ಕಳೆದ ಎರಡು ಸಾವಿರ ವರ್ಷಗಳಿಂದ ಭಾರತದ ನೈತಿಕ ಮತ್ತು ಆಧ್ಯಾತ್ಮಿಕ ಮೌಲ್ಯಗಳನ್ನು ಜೀವಂತವಾಗಿರಿಸಿರುವ ಸಾಕ್ಷಾತ್ ರೂಪ ಎಂದರು.
ಬಾಲಗಂಗಾಧರನಾಥ ಶ್ರೀಗಳು: ಕೇವಲ ಸಂತರಲ್ಲ, ಸಮಾಜದ ಬಂಧು
ಪೂಜ್ಯ ಬಾಲಗಂಗಾಧರನಾಥ ಸ್ವಾಮೀಜಿಯವರನ್ನು ಸ್ಮರಿಸಿದ ಮೋದಿ, ಅವರು ಕೇವಲ ಆಧ್ಯಾತ್ಮಿಕ ಮಾರ್ಗದರ್ಶನಕ್ಕೆ ಸೀಮಿತವಾಗಿರಲಿಲ್ಲ. ಗ್ರಾಮೀಣ ಭಾಗದಿಂದ ಬಂದಿದ್ದರಿಂದ ಅವರಿಗೆ ಹಳ್ಳಿಯ ಯುವಕರ ಆಕಾಂಕ್ಷೆ ಮತ್ತು ಸವಾಲುಗಳ ಅರಿವಿತ್ತು. ಭಕ್ತಿ ಎಂದರೆ ಸಮಾಜದಿಂದ ದೂರ ಹೋಗುವುದಲ್ಲ, ಸಮಾಜದ ಜವಾಬ್ದಾರಿ ತೆಗೆದುಕೊಳ್ಳುವುದು ಎಂದು ಅವರು ತೋರಿಸಿಕೊಟ್ಟರು. ಬಡ ಮಕ್ಕಳಿಗೆ ಎಂಜಿನಿಯರಿಂಗ್, ಮೆಡಿಕಲ್ ಶಿಕ್ಷಣ ನೀಡುವ ಮೂಲಕ ಅವರು ಶೈಕ್ಷಣಿಕ ಕ್ರಾಂತಿ ಮಾಡಿದ್ದಾರೆ ಎಂದು ಗುಣಗಾನ ಮಾಡಿದರು.
ಮನುಷ್ಯರಷ್ಟೇ ಅಲ್ಲ, ಜೀವಿಗಳ ಮೇಲೂ ಕರುಣೆ
ಸ್ವಾಮೀಜಿಯವರ ಪರಿಸರ ಪ್ರೇಮವನ್ನು ಮೆಚ್ಚಿದ ಪ್ರಧಾನಿ, ಅವರ ಕರುಣೆ ಕೇವಲ ಮನುಷ್ಯರಿಗೆ ಸೀಮಿತವಾಗಿರಲಿಲ್ಲ. ರಾಷ್ಟ್ರಪಕ್ಷಿ ನವಿಲುಗಳ ಸಂರಕ್ಷಣೆಗಾಗಿ ಅವರು ನಡೆಸಿದ ಸಾಮಾಜಿಕ ಆಂದೋಲನವು ಇಂದಿಗೂ ನಮಗೆ ಮಾದರಿ. ಪರಿಸರ ಸಂರಕ್ಷಣೆ ನಮ್ಮ ಸಾಂಸ್ಕೃತಿಕ ಚೇತನದ ಭಾಗ ಎಂಬುದನ್ನು ಅವರು ಸಾಬೀತುಪಡಿಸಿದರು ಎಂದರು.
#WATCH | Mandya, Karnataka: Prime Minister Narendra Modi says, “In our society, from time to time, such great personalities have continued to emerge who were not limited merely to spiritual guidance. They lived among the people. They understood the joys and sorrows of the people.… pic.twitter.com/O44YkgdRkv
— ANI (@ANI) April 15, 2026
ಅನ್ನ, ಅಕ್ಷರ, ಆರೋಗ್ಯ ಮತ್ತು ಅಧ್ಯಾತ್ಮ, ಆಶ್ರಯ, ಅರಣ್ಯ ಮತ್ತು ಅನುಕಂಪ. ಆಕಳು (ಗೋರಕ್ಷಣೆ), ಅನುಬಂಧ ಮತ್ತು ಸ್ವಚ್ಛತೆ ಈ ಸೇವೆಯನ್ನು ಮೋದಿ ಶ್ಲಾಘಿಸಿದರು. ಈ ಮಠವು ಸ್ವದೇಶಿ ಮತ್ತು ಆತ್ಮನಿರ್ಭರತೆಯ ಸಂಕೇತವಾಗಿದೆ. ನಮ್ಮ ಸರ್ಕಾರ ಕೂಡ ಆಯುಷ್ಮಾನ್ ಭಾರತ್ ಅಡಿಯಲ್ಲಿ ಉಚಿತ ಚಿಕಿತ್ಸೆ ನೀಡುವ ಮೂಲಕ ಮಠದ ಆಶಯದಂತೆಯೇ ಆರೋಗ್ಯ ಸೇವೆಯನ್ನು ಬಡವರಿಗೆ ತಲುಪಿಸುತ್ತಿದೆ ಎಂದು ಮೋದಿ ಅವರು ಸರ್ಕಾರದ ಯೋಜನೆಗಳನ್ನು ಮಠದ ಸೇವೆಯೊಂದಿಗೆ ಸಮೀಕರಿಸಿದರು.
ಭೈರವೈಕ್ಯ ಮಂದಿರದಲ್ಲಿ ಬಾಲಗಂಗಾಧರನಾಥ ಶ್ರೀಗಳ ಆಶೀರ್ವಾದ ಪಡೆದಿದ್ದು ನನ್ನ ಭಾಗ್ಯ. ಅವರ ಪರಂಪರೆ ನಮ್ಮೆಲ್ಲರಿಗೂ ಕರ್ತವ್ಯದ ಹಾದಿಯಲ್ಲಿ ನಡೆಯಲು ಸ್ಫೂರ್ತಿ ನೀಡಲಿ ಎಂದು ಹಾರೈಸಿದರು.
ಪ್ರಧಾನಿ ನರೇಂದ್ರ ಮೋದಿ ಬೊಜ್ಜಿನ ಕುರಿತು ಮತ್ತೊಮ್ಮೆ ಮಾತನಾಡಿದ್ದು, ನಮ್ಮ ದೈನಂದಿನ ಜೀವನದಲ್ಲಿ ಉತ್ತಮ ಆಹಾರ, ಯೋಗವನ್ನು ಅಳವಡಿಸಿಕೊಳ್ಳಬೇಕು, ಜತೆಗೆ ಊಟದಲ್ಲಿ ಬಳಸುವ ಎಣ್ಣೆಯನ್ನು ಶೇ.10ರಷ್ಟು ಕಡಿಮೆ ಮಾಡಬೇಕೆಂದು ಸಲಹೆ ನೀಡಿದರು. ಇದರ ಜತೆ ಡೊಮೆಸ್ಟಿಕ್ ಟೂರಿಸಂ, ಸ್ವಚ್ಛತೆ, ಆತ್ಮನಿರ್ಭರ ಭಾರತದ ಬಗ್ಗೆಯೂ ಮಾತನಾಡಿದರು.
ಕರ್ನಾಟಕದ ಆಧ್ಯಾತ್ಮಿಕ ಭೂಪಟದಲ್ಲಿ ಮಂಡ್ಯದ ಆದಿಚುಂಚನಗಿರಿ ಮಠಕ್ಕೆ ವಿಶಿಷ್ಟ ಸ್ಥಾನವಿದೆ. ಇಂದು ಈ ಪುಣ್ಯಕ್ಷೇತ್ರ ಮತ್ತೊಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು. ಪ್ರಧಾನಿ ನರೆಂದ್ರ ಮೋದಿಯವರು ಅವರು ಇಂದು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿ, ನೂತನವಾಗಿ ನಿರ್ಮಿಸಲಾದ ಶ್ರೀ ಗುರು ಭೈರವೈಕ್ಯ ಮಂದಿರವನ್ನು ಉದ್ಘಾಟಿಸಿದರು. ಕರ್ನಾಟಕದ ಪ್ರಮುಖ ಆಧ್ಯಾತ್ಮಿಕ ಕೇಂದ್ರಗಳಲ್ಲಿ ಒಂದಾದ ಆದಿಚುಂಚನಗಿರಿಯಲ್ಲಿ ಇಂದು ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.
ಮತ್ತಷ್ಟು ಓದಿ: “ಮೋದಿ ನಾಯಕತ್ವ ಭಾರತೀಯರ ಹೃದಯದಲ್ಲಿ ಬೇರೂರಿದೆ”: ಪ್ರಧಾನಿ ಗುಣಗಾನ ಮಾಡಿದ ಹೆಚ್.ಡಿ. ಕುಮಾರಸ್ವಾಮಿ!
ನೂತನವಾಗಿ ಉದ್ಘಾಟನೆಗೊಂಡ ಮಂದಿರವು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ 71ನೇ ಮಠಾಧೀಶರಾಗಿದ್ದ, ಪೂಜ್ಯ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ಸ್ಮರಣಾರ್ಥ ನಿರ್ಮಿಸಲಾದ ಭವ್ಯ ಸ್ಮಾರಕವಾಗಿದೆ. ಮಂದಿರವನ್ನು ಉದ್ಘಾಟಿಸಿದ ನಂತರ ಪ್ರಧಾನಿ ಮೋದಿ ಅವರು ದೇವಾಲಯದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ, ಶ್ರೀಗಳ ಪವಿತ್ರ ಪಾದಗಳಿಗೆ ನಮಸ್ಕರಿಸಿದರು.
ಸಾಂಪ್ರದಾಯಿಕ ದ್ರಾವಿಡ ವಾಸ್ತುಶಿಲ್ಪ ಶೈಲಿಯಲ್ಲಿ ಈ ಮಂದಿರವನ್ನು ಅತ್ಯಂತ ಆಕರ್ಷಕವಾಗಿ ನಿರ್ಮಿಸಲಾಗಿದೆ. ಈ ಬಗ್ಗೆ ಪ್ರಧಾನಿ ಕಚೇರಿ (PMO) ಮಾಹಿತಿ ನೀಡಿದ್ದು, ಈ ಮಂದಿರವು ಕೇವಲ ಒಂದು ಪೂಜಾ ಸ್ಥಳವಲ್ಲ, ಬದಲಾಗಿ ದಿವಂಗತ ಶ್ರೀಗಳ ಜೀವನ ಸಂದೇಶ ಮತ್ತು ಅವರ ಪರಂಪರೆಯನ್ನು ಭವಿಷ್ಯದ ಪೀಳಿಗೆಗೆ ತಲುಪಿಸುವ ಸ್ಫೂರ್ತಿಯ ಸೆಲೆಯಾಗಿದೆ ಎಂದು ಬಣ್ಣಿಸಿದೆ.
ಮತ್ತೊಂದು ವಿಶೇಷವೆಂದರೆ, ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರ ಉಪಸ್ಥಿತಿ. ಪ್ರಧಾನಿ ಮೋದಿ ಮತ್ತು ದೇವೇಗೌಡರು ಜಂಟಿಯಾಗಿ ಸೌಂದರ್ಯ ಲಹರಿ ಮತ್ತು ಶಿವ ಮಹಿಮ್ನ ಸ್ತೋತ್ರಂ ಎಂಬ ಧಾರ್ಮಿಕ ಗ್ರಂಥವನ್ನು ಲೋಕಾರ್ಪಣೆ ಮಾಡಿದರು.
ಆದಿಚುಂಚನಗಿರಿ ಮಠವು ಕೇವಲ ಧಾರ್ಮಿಕ ಕೇಂದ್ರವಾಗಿರದೆ, ಶಿಕ್ಷಣ ಮತ್ತು ಸಮಾಜ ಸೇವೆಯಲ್ಲಿ ದೇಶದಾದ್ಯಂತ ಗುರುತಿಸಿಕೊಂಡಿದೆ. ಪ್ರಧಾನಿಗಳ ಈ ಭೇಟಿಯು ಮಠದ ಸಾಮಾಜಿಕ ಮತ್ತು ಆಧ್ಯಾತ್ಮಿಕ ಕಾರ್ಯಗಳಿಗೆ ಮತ್ತಷ್ಟು ಬಲ ನೀಡಿದಂತಾಗಿದೆ. ಪ್ರಸ್ತುತ ಪೀಠಾಧ್ಯಕ್ಷರಾದ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಯವರು ಈ ಸಮಾರಂಭದ ನೇತೃತ್ವ ವಹಿಸಿದ್ದರು.
ಕರ್ನಾಟಕದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:46 pm, Wed, 15 April 26