ಬೆಂಗಳೂರು: ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಕರ್ನಾಟಕಕ್ಕೆ (Karnataka) ಪದೇ ಪದೇ ಭೇಟಿ ನೀಡುತ್ತಿರುವ ಪ್ರಧಾನಿ ನರೇಂದ್ರ ಮೋದಿ (Narendra Modi) ಇಂದು ಮತ್ತೆ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಪ್ರಧಾನಿಯವರು ರಾಜ್ಯಕ್ಕೆ ನೀಡುತ್ತಿರುವ 7ನೇ ಭೇಟಿ ಇದಾಗಿದೆ. ವೈಟ್ಫೀಲ್ಡ್ ಮತ್ತು ಕೆ. ಆರ್ ಪುರ ನಡುವಿನ ಮೆಟ್ರೋಗೆ ಚಾಲನೆ, ಮುದ್ದೇನಹಳ್ಳಿಯಲ್ಲಿ ಖಾಸಗಿ ವೈದ್ಯಕೀಯ ಕಾಲೇಜು ಉದ್ಘಾಟನೆ ಹಾಗೂ ದಾವಣಗೆರೆಯಲ್ಲಿನ ಕಾರ್ಯಕ್ರಮಗಳಲ್ಲಿ ಮೋದಿ ಭಾಗವಹಿಸಲಿದ್ದಾರೆ. ಮೊದಲು ಚಿಕ್ಕಬಳ್ಳಾಪುರದ ಮುದ್ದೇನಹಳ್ಳಿಗೆ ತೆರಳಲಿರುವ ಪ್ರಧಾನಿ ನಂತರ ಬೆಂಗಳೂರಿನ ವೈಟ್ಫೀಲ್ಡ್ ಮತ್ತು ಕೆ. ಆರ್ ಪುರ ನಡುವಿನ ಮೆಟ್ರೋ ರೈಲಿಗೆ ಚಾಲನೆ ನೀಡಿ ಅದರಲ್ಲಿ ಸಂಚರಿಸಲಿದ್ದಾರೆ. ನಂತರ ದಾವಣಗೆರೆಗೆ ತೆರಳಿ ಬೃಹತ್ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.
ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿ ಗ್ರಾಮದ ಬಳಿ ಇರುವ ಸತ್ಯಸಾಯಿ ಸಾಯಿ ಲೋಕಸೇವಾ ಗ್ರಾಮಕ್ಕೆ ಬರಲಿರುವ ಮೋದಿ, ಸತ್ಯ ಸಾಯಿ ಗ್ರಾಮದ ಸತ್ಯ ಸಾಯಿ ಸರಳಾ ಆಸ್ಪತ್ರೆ ಬಳಿ ನಿರ್ಮಾಣವಾಗಿರುವ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಕಟ್ಟಡ ಉದ್ಘಾಟನೆ ಮಾಡಲಿದ್ದಾರೆ. ನಂತರ ಬೆಂಗಳೂರಿಗೆ ತೆರಳಲಿದ್ದಾರೆ.
ಇದನ್ನೂ ಓದಿ: ಬೆಂಗಳೂರಿಗೆ ಮೋದಿ: ಕೆಲ ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧ, ಪರ್ಯಾಯ ಮಾರ್ಗ ವಿವರ ಇಲ್ಲಿದೆ
ಬೆಂಗಳೂರಿನಲ್ಲಿ ಈಗಾಗಲೇ ಮೋದಿ ಭೇಟಿಗೆ ಸಕಲ ಸಿದ್ಧತೆಗಳು ನಡೆದಿದ್ದು, ಬಿಗಿ ಬಂದೋಬಸ್ತ್ ಕೂಡ ಮಾಡಲಾಗಿದೆ. ವೈಟ್ ಫೀಲ್ಡ್ ಮೆಟ್ರೋ ಹೊಸ ಮಾರ್ಗ ಉದ್ಘಾಟನೆಯ ನಂತರ ಪ್ರಧಾನಿ ಮೋದಿ ಅವರು ವೈಟ್ ಫೀಲ್ಡ್ನಲ್ಲಿ ಸಮೀಪ ಮಹದೇವಪುರ ಕ್ಷೇತ್ರದ ಸತ್ಯ ಸಾಯಿ ಆಶ್ರಮದಿಂದ ವೈಟ್ ಫೀಲ್ಡ್ ಮೆಟ್ರೋ ಸ್ಟೇಷನ್ ವರೆಗೂ ಸುಮಾರು 1 ಕಿ.ಮೀ. ರೋಡ್ ಶೋ ನಡೆಸಲಿದ್ದಾರೆ ಎನ್ನಲಾಗಿದೆ. ಹೀಗಾಗಿ ಮೆಟ್ರೋ ಸುತ್ತಮುತ್ತ 5 ರಸ್ತೆಗಳಲ್ಲಿ ಸಂಚಾರ ನಿರ್ಬಂಧಿಸಲಾಗಿದೆ. ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 2.30 ರವರೆಗೆ ಸಾರ್ವಜನಿಕ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ.
ಬೆಂಗಳೂರಿನ ಕಾರ್ಯಕ್ರಮದ ನಂತರ ದಾವಣಗೆರೆಗೆ ತೆರಳಲಿರುವ ಪ್ರಧಾನಿ, ಅಲ್ಲಿ ‘ಮೋದಿ ಮಹಾಸಂಗಮ ಸಮಾವೇಶ’ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಮಹಾಸಂಗಮಕ್ಕೆ ರಾಜ್ಯದ ಎಲ್ಲ ಹಾಲಿ ಶಾಸಕ, ಸಂಸದರು ಸೇರಿದಂತೆ ಮಾಜಿ ಶಾಸಕ, ಸಂಸದರು ಆಗಮಿಸಲಿದ್ದು, 420 ಅಡಿ ಅಗಲ ಹಾಗೂ ಒಂದು ಸಾವಿರ ಅಡಿ ಉದ್ದದ ಬೃಹತ್ ವೇದಿಕೆ ನಿರ್ಮಾಣ ಮಾಡಲಾಗಿದೆ. ಒಂದೂವರೆಯಿಂದ ಎರಡು ಲಕ್ಷ ಕುರ್ಚಿಗಳ ವ್ಯವಸ್ಥೆ ಮಾಡಲಾಗಿದೆ. ಪ್ರಧಾನ ವೇದಿಕೆ ಜೊತೆಗೆ ಇನ್ನೆರಡು ವೇದಿಕೆಗಳನ್ನು ನಿರ್ಮಾಣ ಮಾಡಲಾಗಿದ್ದು, ಪ್ರಧಾನ ವೇದಿಕೆಯಲ್ಲಿ ಪ್ರಧಾನಿ ಸೇರಿ ನೂರು ಜನಕ್ಕೆ ಆಸನದ ವ್ಯವಸ್ಥೆ ಮಾಡಲಾಗಿದೆ. ಎರಡನೇ ವೇದಿಕೆಯಲ್ಲಿ ಹಾಲಿ ಶಾಸಕ ಸಂಸದರಿಗೆ ಹಾಗೂ ಮೂರನೇ ವೇದಿಕೆಯಲ್ಲಿ ಮಾಜಿ ಶಾಸಕ, ಮಾಜಿ ಸಂಸದ, ಮಾಜಿ ವಿಧಾನ ಪರಿಷತ್ ಸದಸ್ಯರು ಹಾಗೂ ರಾಜ್ಯದ ಎಲ್ಲಾ ಜಿಲ್ಲಾ ಬಿಜೆಪಿ ಅಧ್ಯಕ್ಷರುಗಳಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ.
ಇದನ್ನೂ ಓದಿ: Narendra Modi: ರಾಜ್ಯಕ್ಕೆ ಮೋದಿ; ಎಷ್ಟೊತ್ತಿಗೆ ಎಲ್ಲಿ ಕಾರ್ಯಕ್ರಮ? ಇಲ್ಲಿದೆ ಸಂಪೂರ್ಣ ವಿವರ
ದಾವಣಗೆರೆ ಕಾರ್ಯಕ್ರಮದ ನಂತರ ಹೆಲಿಕಾಪ್ಟರ್ ಮೂಲಕ ಶಿವಮೊಗ್ಗಕ್ಕೆ ಪ್ರಯಾಣ ಬೆಳೆಸಲಿರುವ ಮೋದಿ, ಶಿವಮೊಗ್ಗ ವಿಮಾನ ನಿಲ್ದಾಣದಿಂದ ದೆಹಲಿಗೆ ನಿರ್ಗಮಿಸಲಿದ್ದಾರೆ. ಫೆಬ್ರವರಿ 27ರಂದು ಶಿವಮೊಗ್ಗಕ್ಕೆ ಬಂದಿದ್ದ ಮೋದಿ, ಈ ವಿಮಾನ ನಿಲ್ದಾಣವನ್ನು ಲೋಕಾರ್ಪಣೆಗೊಳಿಸಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ