Murugha Mutt: ಇಂದು ಜಾಮೀನು ಕೋರಿ ಅರ್ಜಿ ಸಲ್ಲಿಸಲಿರುವ ಮುರುಘಾ ಶ್ರೀ
ಪೋಕ್ಸೋ ಕಾಯ್ದೆಯಡಿ ಬಂಧಿತರಾಗಿರುವ ಆರೋಪಿ ಮುರುಘಾ ಮಠದ ಡಾ.ಶಿವಮೂರ್ತಿ ಸ್ವಾಮೀಜಿ ಇಂದು ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಿದ್ದಾರೆ.
ಚಿತ್ರದುರ್ಗ: ಪೋಕ್ಸೋ ಕಾಯ್ದೆಯಡಿ ಬಂಧಿತರಾಗಿರುವ ಆರೋಪಿ ಮುರುಘಾ ಮಠದ ಡಾ.ಶಿವಮೂರ್ತಿ ಸ್ವಾಮೀಜಿ ಇಂದು ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಿದ್ದಾರೆ. ಶ್ರೀಗಳನ್ನು ನ್ಯಾಯಾಲಯವು 3 ದಿನ ಕಸ್ಟಡಿಗೆ ಒಪ್ಪಿಸಿದ ನಂತರ ಅವರನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಯಿತು. ಈ ವೇಳೆ ಶ್ರೀಗಳ ಪರ ವಕೀಲರು ಕೂಡ ಆಸ್ಪತ್ರೆಗೆ ಆಗಮಿಸಿದ್ದರು. ಈ ವೇಳೆ ಟಿವಿ9 ಜೊತೆ ಮಾತನಾಡಿದ ವಕೀಲ ಉಮೇಶ್, ಶನಿವಾರ (ಸೆ.3) ಜಾಮೀನು ಕೋರಿ ಕೋರ್ಟ್ಗೆ ಅರ್ಜಿ ಸಲ್ಲಿಸುವುದಾಗಿ ಹೇಳಿದರು.
ಪೊಲೀಸರು ಕಸ್ಟಡಿಗೆ ಪಡೆದುಕೊಂಡ ಹಿನ್ನೆಲೆ ಇಂದು ಶ್ರೀಗಳನ್ನು ವಿಚಾರಣೆ ನಡೆಸಲಿದ್ದಾರೆ. ಪೋಕ್ಸೋ ಕೇಸ್ ಮತ್ತು ಅಟ್ರಾಸಿಟಿ ಪ್ರಕರಣದ ಬಗ್ಗೆ ವಿಚಾರಣೆ ನಡೆಸಲಿದ್ದು, ಚಿತ್ರದುರ್ಗ ಡಿವೈಎಸ್ಪಿ ಕಚೇರಿಯಲ್ಲಿಯೇ ವಿಚಾರಣೆ ನಡೆಯಲಿದೆ. ನಿನ್ನೆ ನಿರಂತರ ಎರಡು ಗಂಟೆಗಳ ಕಾಲ ಡಿವೈಎಸ್ಪಿ ನೇತೃತ್ವದಲ್ಲಿ ವಿಚಾರಣೆ ನಡೆದಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶ್ರೀಗಳನ್ನು ನಿನ್ನೆ ರಾತ್ರಿ 8 ಗಂಟೆಗೆ ಡಿವೈಎಸ್ಪಿ ಕಚೇರಿಗೆ ಕರೆದೊಯ್ದು ವಿಚಾರಣೆ ಆರಂಭಿಸಲಾಗಿದೆ.
ಮಠದ ಹಾಸ್ಟೆಲ್ನಲ್ಲಿರುವ ವಿದ್ಯಾರ್ಥಿನಿಯರಿಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಸಂಬಂಧ ಶ್ರೀಗಳ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ಇದರಲ್ಲಿ ಶ್ರೀಗಳು ಎ1 ಆರೋಪಿಯಾಗಿದ್ದಾರೆ. ಪ್ರಕರಣ ದಾಖಲಾಗುತ್ತಿದ್ದಂತೆ ನಿರೀಕ್ಷಣ ಜಾಮೀನು ಕೋರಿ ಅರ್ಜಿಯನ್ನೂ ಸಲ್ಲಿಸಿದ್ದರು. ಆದರೆ ಗುರುವಾರ ರಾತ್ರಿ ಪೊಲೀಸರು ಶ್ರೀಗಳನ್ನು ಬಂಧಿಸಿದ್ದು, ನ್ಯಾಯಾಲಯವು ಒಂದು ದಿನದ ಮಟ್ಟಿಗೆ ನ್ಯಾಯಾಂಗ ಬಂಧನ ವಿಧಿಸಿತ್ತು. ಆದರೆ ಶುಕ್ರವಾರ ಎದೆನೋವು ಕಂಡುಬಂದ ಹಿನ್ನೆಲೆ ಶ್ರೀಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಇನ್ನೊಂದೆಡೆ ಒಂದು ದಿನದ ನ್ಯಾಯಾಂಗ ಬಂಧನ ಅವಧಿ ಮುಕ್ತಾಯವಾದ ಹಿನ್ನೆಲೆ ಶ್ರೀಗಳನ್ನು ಕೋರ್ಟ್ಗೆ ಹಾಜರುಪಡಿಸಬೇಕಿತ್ತು. ಆದರೆ ಅವರು ಆಸ್ಪತ್ರೆಗೆ ದಾಖಲಾದ ಹಿನ್ನೆಲೆ ಪೊಲೀಸರೇ ಶುಕ್ರವಾರ ಕೋರ್ಟ್ಗೆ ತೆರಳಿ ಆರೋಪಿಯನ್ನು ಐದು ದಿನ ಕಸ್ಟಡಿಗೆ ನೀಡುವಂತೆ ಮನವಿ ಮಾಡಿಕೊಂಡರು. ಈ ವೇಳೆ ಆರೋಪಿಯನ್ನು ತಮ್ಮ ಗಮನಕ್ಕೆ ತರದೆ ಆಸ್ಪತ್ರೆಗೆ ಹೇಗೆ ದಾಖಲಿಸಿದ್ದೀರಿ ಎಂದು ಪ್ರಶ್ನಿಸಿದ ಕೋರ್ಟ್, ಕೂಡಲೇ ಆರೋಪಿಯನ್ನು ಕೋರ್ಟ್ಗೆ ಹಾಜರುಪಡಿಸಿ ಎಂದು ಸೂಚಿಸಿತ್ತು.
ಅದರಂತೆ ಪೊಲೀಸರು ಆರೋಪಿ ಶ್ರೀಗಳನ್ನು ಕೋರ್ಟ್ಗೆ ಹಾಜರುಪಡಿಸಿದ್ದು, ನ್ಯಾಯಾಲಯವು 3 ದಿನಗಳ ಕಾಲ ಕಸ್ಟಡಿಗೆ ಒಪ್ಪಿಸಿ ಸೆ.5ಕ್ಕೆ ವಿಚಾರಣೆಯನ್ನು ಮುಂದೂಡಿತು. ಇದರ ಬೆನ್ನಲ್ಲೆ ಟಿವಿ9ಗೆ ಹೇಳಿಕೆ ನೀಡಿದ ಶ್ರೀಗಳ ಪರ ವಕೀಲರು ಶನಿವಾರ ಜಾಮೀನು ಕೋರಿ ಅರ್ಜಿ ಸಲ್ಲಿಸುವುದಾಗಿ ಹೇಳಿದರು.
ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:43 am, Sat, 3 September 22