ಬರದನಾಡಿನಲ್ಲಿ ಹೊಸ ಮೀನು ಕೃಷಿ ಪ್ರಯೋಗ, ವರ್ಷಕ್ಕೆ ಲಕ್ಷಾಂತರ ರೂಪಾಯಿ ಆದಾಯ ಗಳಿಸುತ್ತಿರುವ ರೈತ ಈತನೇ!

pisciculture: ಅದು ಸಮುದ್ರ ತೀರದ ಜನರೇ ಹೆಚ್ಚಾಗಿ ಮಾಡುವ ಕೃಷಿ ಆದರೆ ಇಲ್ಲೊಬ್ಬ ರೈತ ರಾಜ್ಯದಲ್ಲೇ ಮೊದಲ ಬಾರಿಗೆ ಎನ್ನುವಂತೆ ಬರದ ನಾಡಿನಲ್ಲಿ ಅಂಥಾದೊಂದು ಸಮುದ್ರ ತೀರದ ಕೃಷಿಯನ್ನು ಮಾಡಲು ಆರಂಭಿಸಿದ್ದಾರೆ.

ಬರದನಾಡಿನಲ್ಲಿ  ಹೊಸ  ಮೀನು ಕೃಷಿ ಪ್ರಯೋಗ, ವರ್ಷಕ್ಕೆ ಲಕ್ಷಾಂತರ ರೂಪಾಯಿ ಆದಾಯ ಗಳಿಸುತ್ತಿರುವ ರೈತ ಈತನೇ!
ಬರದ ನಾಡಲ್ಲಿ ಹೊಸ ಮೀನು ಕೃಷಿ ಪ್ರಯೋಗ, ವರ್ಷಕ್ಕೆ ಲಕ್ಷಾಂತರ ರೂಪಾಯಿ ಆದಾಯ ಗಳಿಸುತ್ತಿರುವ ರೈತ ಈತನೇ!
Follow us
TV9 Web
| Updated By: ಸಾಧು ಶ್ರೀನಾಥ್​

Updated on: Sep 02, 2022 | 8:47 PM

ಅದು ಸಮುದ್ರ ತೀರದ ಜನರೇ ಹೆಚ್ಚಾಗಿ ಮಾಡುವ ಕೃಷಿ ಆದರೆ ಇಲ್ಲೊಬ್ಬ ರೈತ ರಾಜ್ಯದಲ್ಲೇ ಮೊದಲ ಬಾರಿಗೆ ಎನ್ನುವಂತೆ ಬರದ ನಾಡಿನಲ್ಲಿ ಅಂಥಾದೊಂದು ಸಮುದ್ರ ತೀರದ ಕೃಷಿಯನ್ನು ಮಾಡಲು ಆರಂಭಿಸಿದ್ದಾರೆ. ಬರದ ನಾಡಿನಲ್ಲಿ ಸವಾಲಿನ ಕೃಷಿ ಮೂಲಕ ಲಕ್ಷ ಲಕ್ಷ ಆದಾಯ ಗಳಿಸಿ ಸೈ ಎನಿಸಿಕೊಳ್ಳುತ್ತಿರುವ ರೈತನೊಬ್ಬನ ಕುರಿತ ಸ್ಟೋರಿ ಇಲ್ಲಿದೆ..

ಬರದನಾಡಲ್ಲಿ ಹೊಸ ಮೀನು ಕೃಷಿ ಪದ್ದತಿ..! ಬೃಹತ್ತಾದ ಶೆಡ್​ನಲ್ಲಿ ಕಂಡು ಬರುವ ನೀರಿನ ಟ್ಯಾಂಕ್​ ಗಳು, ಟ್ಯಾಂಕ್​ಗಳಲ್ಲಿ ಕಂಡು ಬರುವ ಸಾವಿರಾರು ಮೀನುಗಳು ಅವುಗಳನ್ನು ಪಾಲನೆ ಪೋಷಣೆ ಮಾಡುತ್ತಿರುವ ಕೆಲಸಗಾರರು, ಇಂಥಾದೊಂದು ದೃಷ್ಯಗಳು ನಮಗೆ ಕಂಡು ಬಂದಿದ್ದು ಕೋಲಾರ ಜಿಲ್ಲೆ ಮುಳಬಾಗಿಲು ತಾಲ್ಲೂಕಿನ ಗಂಜಿಗುಂಟೆ ಗ್ರಾಮದ ಬಳಿ. ಹೌದು ಕೋಲಾರ ಅಂದರೆ ಇದು ಬರದ ನಾಡು, ಇಲ್ಲಿನ ರೈತರು ಸವಾಲಿನ ಹಾಗೂ ಕೃಷಿಯಲ್ಲಿ ಹೊಸ ಹೊಸ ಪ್ರಯೋಗ ಮಾಡುತ್ತಾರೆ ಅನ್ನೋ ಕೀರ್ತಿ ಜಿಲ್ಲೆಯ ರೈತರಿಗಿದೆ. ಇದಕ್ಕೆ ಪೂರಕ ಎಂಬಂತೆ ಕೋಲಾರ ಜಿಲ್ಲೆಯಲ್ಲಿನ ರೈತರೊಬ್ಬರು ಸಮುದ್ರ ತೀರದಲ್ಲಿ ಜನರು ಮಾಡುವ ಮೀನು ಕೃಷಿಯನ್ನು ಬರದ ನಾಡಿನಲ್ಲಿ ಮಾಡುವ ಮೂಲಕ ಯಶಸ್ವಿಯಾಗಿದ್ದಾರೆ.

ಕುರಿ ಕೋಳಿಗಳನ್ನಷ್ಟೇ ಅಲ್ಲಾ ಮೀನುಗಳನ್ನು ಶೆಡ್​ನಲ್ಲೇ ಸಾಕಾಣಿಕೆ..! ಕುರಿ ಕೋಳಿಗಳನ್ನು ಒಳಾಂಗಣದಲ್ಲಿ ಅಂದರೆ ಶೆಡ್​ಗಳಲ್ಲಿ ಸಾಕುವ ವಿಧಾನ ನೋಡಿದ್ದೇವೆ ಆದರೆ ಇವರು ಮೀನುಗಳನ್ನು ಹೀಗೆ ಶೆಡ್​ಗಳಲ್ಲಿ ಸಾಕುವ ಮೂಲಕ ಹೊಸ ವಿಧಾನವನ್ನು ಜಿಲ್ಲೆಗೆ ಪರಿಚಯಿಸಿದ್ದಾರೆ. ಹೌದು ಮುಳಬಾಗಿಲು ತಾಲ್ಲೂಕು ಆವಣಿ ಗ್ರಾಮ ಬಾಬು ಎಂಬುವರು ಕಳೆದ ಒಂದುವರೆ ವರ್ಷದ ಹಿಂದೆ ಸಿಹಿ ನೀರಿನ ಮೀನು ಕೃಷಿ ಅಥವಾ ಆರ್​.ಎ.ಎಸ್​ ವಿಧಾನದ ಮೂಲಕ ಮೀನು ಕೃಷಿ ಮಾಡಲು ನಿರ್ಧರಿಸಿ ಹರಿಯಾಣ, ದೆಹಲಿ, ಹೈದರಾಬಾದ್​, ಸೇರಿದಂತೆ ಹಲವೆಡೆ ಓಡಾಡಿ ಅಲ್ಲಿ ಮಾಡುತ್ತಿದ್ದ ಈರೀತಿಯ ಕೃಷಿ ವಿಧಾನವನ್ನು ನೋಡಿ ಸುಮಾರು 80 ಲಕ್ಷ ರೂಪಾಯಿ ವ್ಯಚ್ಚದಲ್ಲಿ ಸರ್ಕಾರದ ನೆರವಿನೊಂದಿಗೆ ಈಹೊಸ ವಿಧಾನದ ಮೀನು ಕೃಷಿ ಆರಂಭಿಸಿದ್ದಾರೆ.

ಭರ್ಜರಿ ಬೇಡಿಕೆ ಇರುವ ಮೀನು ಮರಿ ಸಾಕಾಣಿಕೆ ಒಳ್ಳೆಯ ಆದಾಯ..! ಬಾಬು ಅವರು ತಮ್ಮ 30 ಗುಂಟೆ ಭೂಮಿಯಲ್ಲಿ ಶೆಡ್​ ನಿರ್ಮಾಣ ಮಾಡಿ ದೊಡ್ಡ ದೊಡ್ಡ 17 ಟ್ಯಾಂಕ್​ಗನ್ನು ಹಾಕಿ ಅದಕ್ಕೆ ಶುದ್ದವಾದ ನೀರನ್ನು ಹಾಕಿ ಅದರಲ್ಲಿ ಆಂದ್ರದ ಭೀಮಾವರಂನಿಂದ ಸುಮಾರು 25000 ಮೀನು ಮರಿಗಳನ್ನು ತಂದು ಸಾಕಾಣಿಕೆ ಮಾಡುತ್ತಿದ್ದಾರೆ. ಒಂದು ಮೀನು ಮರಿಗೆ 12 ರೂಪಾಯಿಯಂತೆ ಹಣ ಕೊಟ್ಟು ತಂದು ಹತ್ತು ತಿಂಗಳ ಕಾಲ ಸಾಕಾಣಿಕೆ ಮಾಡಿದರೆ ಇವರಿಗೆ ಒಂದು ಮೀನು ಮರಿ ಹತ್ತು ತಿಂಗಳಲ್ಲಿ ಒಂದರಿಂದ ಒಂದುವರೆ ಕೆಜಿ ತೂಗುತ್ತದೆ. ಮಾರುಕಟ್ಟೆಯಲ್ಲಿ ಬಹಳ ಬೇಡಿಕೆ ಇರುವ ಮರಲ್ ಎಂಬ​ ತಳಿಯ ಮೀನು ಸಾಕಾಣಿಕೆ ಮಾಡಿದ್ದು ಈ ತಳಿಯ ಮೀನು ಮಾರುಕಟ್ಟೆಯಲ್ಲಿ ಕೆಜಿಗೆ 300-350 ರೂಪಾಯಿ ಬೆಲೆ ಇದೆ. ಹಾಗಾಗಿ ಹತ್ತು ತಿಂಗಳಲ್ಲಿ ಸುಮಾರು 20 ರಿಂದ 25 ಲಕ್ಷ ರೂಪಾಯಿ ಆದಾಯ ಮಾಡಬಹುದು ಅನ್ನೋದು ಬಾಬು ಅವರ ಮಾತು.

ಮೀನುಗಾರಿಕಾ ಸಚಿವ ಅಂಗಾರ ಅವರಿಂದ ಉದ್ಘಾಟನೆಯಾಗಿತ್ತು..! 2021 ರ ಮಾರ್ಚ್​ನಲ್ಲಿ ಮೀನುಗಾರಿಕೆ ಸಚಿವ ಅಂಗಾರ ಅವರಿಂದ ಈ ಮೀನು ಕೃಷಿಯನ್ನು ಅರಂಭ ಮಾಡಲಾಯಿತು ಅದಾದ ನಂತರ ಮೊದಲ ಬೆಳೆಯಲ್ಲಿ ಇವರು ನಿರೀಕ್ಷಿಸಿಷ್ಟು ಹಣ ಬಂದಿಲ್ಲ ಅದರಲ್ಲಿ ನಷ್ಟ ಅನುಭವಿಸಿದ್ದಾರೆ. ನಂತರ ಇವರು ಮೀನುಗಾರಿಕೆ ಇಲಾಖೆಯ ಕೆಲವು ಅಧಿಕಾರಿಗಳೊಂದಿಗೆ ಮಾತನಾಡಿ ಅವರಿಂದ ಮಾಹಿತಿ ಪಡೆದ ನಂತರ ಯಾವ ತಳಿಯ ಮೀನು ಸಾಕಾಣಿಕೆ ಮಾಡಿದರೆ ಲಾಭದಾಯಕ ಅನ್ನೋದನ್ನು ತಿಳಿದು ನಂತರದಲ್ಲಿ ಇವರು ಮರಲ್​ ತಳಿಯ ಮೀನು ಸಾಕಾಣೆ ಮಾಡಲು ಶುರುಮಾಡಿದ ನಂತರ ಇವರಿಗೆ ಒಳ್ಳೆಯ ಆದಾಯ ಬರುತ್ತಿದೆ.

ಇನ್ನು ಈ ಮೀನು ಕೃಷಿ ಮಾಡಲು ಆರಂಭದಲ್ಲಿ ಹೆಚ್ಚಿನ ಬಂಡವಾಳ ಬೇಕು, ಜೊತೆಗೆ ಹತ್ತು ತಿಂಗಳ ಕಾಲ ಮೀನು ಸಾಕಾಣಿಕೆ ಮಾಡಬೇಕು, ಇನ್ನು ಸಾಕಾಣಿಕೆಯ ವೆಚ್ಚವೂ ಸ್ವಲ್ಪ ದುಬಾರಿ ಆದರೆ ಹೆಚ್ಚು ಕಾರ್ಮಿಕರ ಅವಶ್ಯಕತೆ ಇರೋದಿಲ್ಲ ಕೇವಲ ಇಬ್ಬರಿಂದ ಮೂರು ಜನ ಎಲ್ಲವನ್ನು ನೋಡಿಕೊಳ್ಳುತ್ತಾರೆ. ಇನ್ನು ಒಂದು ಮೀನು ಮರಿಗೆ ಹತ್ತು ತಿಂಗಳ ಅವದಿಯಲ್ಲಿ 110 ರೂಪಾಯಿಯ ಪೀಡ್ಸ್​ ಹಾಕಲಾಗುತ್ತದೆ. ಸುಮಾರು 40 ಪ್ರೋಟೀನ್​ ಇರುವ ಪೀಡ್ಸ್​ ಕೊಟ್ಟು ಸಾಕಾಣಿಕೆ ಮಾಡುವುದರಿಂದ ಇದಕ್ಕೆ ಮಾರುಕಟ್ಟೆಯಲ್ಲೂ ಒಳ್ಳೆಯ ಬೇಡಿಕೆ ಇರುತ್ತದೆ ಕಲ್ಕತ್ತಾ, ಚೆನೈ, ಬೆಂಗಳೂರು, ಮದುರೈ ನಿಂದ ಹೆಚ್ಚಿನ ಬೇಡಿಕೆ ಇದ್ದು ಅಲ್ಲಿಗೆ ಕಳಿಸಲಾಗುತ್ತಿದೆ.

ಒಟ್ಟಾರೆ ಬರದ ನಾಡು ಕೋಲಾರದಲ್ಲಿ ಇತ್ತೀಚೆಗೆ ಕೆಸಿ ವ್ಯಾಲಿ ನೀರು ಹಾಗೂ ಉತ್ತಮ ಮಳೆಯಿಂದ ಕೆರೆಗಳು ತುಂಬಿದ್ದು ಕೆರೆಗಳಲ್ಲಿ ಮೀನು ಸಾಕಾಣಿಕೆ ಜೊತೆಗೆ ಈ ಹೊಸ ರೀತಿಯ ಮೀನು ಕೃಷಿ ಆರಂಭವಾಗಿದೆ. ಸದ್ಯ ಇದು ಕೋಲಾರದ ರೈತರಿಗೆ ಹೊಸದೊಂದು ಪ್ರಯೋಗಕ್ಕೆ ನಾಂದಿಹಾಡಿದೆ ಅಂದರೆ ತಪ್ಪಾಗೋದಿಲ್ಲ. ವರದಿ : ರಾಜೇಂದ್ರ ಸಿಂಹ