ಬೆಂಗಳೂರಿನ ರಸ್ತೆಗಳಿಗೆ ಕೊನೆಗೂ ಡಾಂಬರ್ ಭಾಗ್ಯ: ಡಾಂಬರೀಕರಣ ಕಾಮಗಾರಿಗೆ ಡಿಸಿಎಂ ಡಿಕೆ ಶಿವಕುಮಾರ್ ಗುದ್ದಲಿ ಪೂಜೆ
Bangalore Roads: ಅದೆಷ್ಟೋ ಡೆಡ್ಲೈನ್ ಕೊಟ್ಟಿದ್ದಾಯ್ತು. ರಾತ್ರೋ ರಾತ್ರಿ ತೇಪೆ ಹಚ್ಚುವ ಕೆಲಸ ಮಾಡಿದ್ದೂ ಆಯ್ತು. ಆದರೂ ಮುಗಿಯದ ಕತೆಯಾಗಿದ್ದ ರಾಜಧಾನಿಯ ರಸ್ತೆಗುಂಡಿಗಳನ್ನು ಮುಚ್ಚಿಸಲು ಕೊನೆಗೂ ಸರ್ಕಾರ ಅಲರ್ಟ್ ಆಗಿದೆ. ರಸ್ತೆ ಕಾಮಗಾರಿಗೆ ಸರ್ಕಾರ ಗ್ರೀನ್ ಸಿಗ್ನಲ್ ಕೊಟ್ಟಿದ್ದು, ಡಿಸಿಎಂ ಡಿ.ಕೆ.ಶಿವಕುಮಾರ್ ಸೋಮವಾರ ರಸ್ತೆಗಳ ಡಾಂಬರೀಕರಣ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿದ್ದಾರೆ.

ಬೆಂಗಳೂರು, ಏಪ್ರಿಲ್ 8: ಸಿಲಿಕಾನ್ ಸಿಟಿ ಬೆಂಗಳೂರಿಗೆ (Bengaluru) ರಸ್ತೆಗುಂಡಿಗಳ ಸಮಸ್ಯೆ ಕಪ್ಪುಚುಕ್ಕೆಯಂತೆ ಕಾಡ್ತಿತ್ತು. ಅದೆಷ್ಟೇ ಕೋಟಿ ರೂಪಾಯಿ ಹಣ ಮೀಸಲಿಟ್ಟರೂ ರಾಜಧಾನಿಯ ರಸ್ತೆಗಳನ್ನು ಸರಿಪಡಿಸಲು ಆಗದೇ ಜನರ ಕೆಂಗಣ್ಣಿಗೆ ಗುರಿಯಾಗಿದ್ದ ಸರ್ಕಾರ ಇದೀಗ ಮತ್ತೆ ರಸ್ತೆಗಳಿಗೆ ಮರುಜೀವ ಕೊಡಲು ಹೊರಟಿದೆ. ಸದ್ಯ ಬೆಂಗಳೂರಿನ 1600 ಕಿಲೋಮೀಟರ್ ರಸ್ತೆಗೆ ಬ್ಲಾಕ್ ಟಾಪಿಂಗ್ ಹಾಗೂ ವೈಟ್ ಟಾಪಿಂಗ್ ಟಚ್ ಕೊಡಲು ಸರ್ಕಾರ ಹಾಗೂ ಬಿಬಿಎಂಪಿ (BBMP) ಮುಂದಾಗಿದ್ದು, ಯಶವಂತಪುರ, ಮಲ್ಲೇಶ್ವರ, ಆರ್.ಆರ್.ನಗರ ವಿಧಾನಸಭಾಕ್ಷೇತ್ರ ವ್ಯಾಪ್ತಿಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಸೋಮವಾರ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ್ದಾರೆ.
ಬೆಂಗಳೂರಿನ 10 ಕಡೆಗಳಲ್ಲಿ ಡಿಕೆ ಶಿವಕುಮಾರ್ ಗುದ್ದಲಿಪೂಜೆ
ರಾಜಧಾನಿಯ ಹತ್ತು ಕಡೆಗಳಲ್ಲಿ ಗುದ್ದಲಿಪೂಜೆ ನೆರವೇರಿಸಿದ ಡಿಸಿಎಂ, ಬ್ರ್ಯಾಂಡ್ ಬೆಂಗಳೂರಿನ ಅಡಿಯಲ್ಲಿ ರಾಜಧಾನಿಯ ರಸ್ತೆಗಳನ್ನು ಸರಿಪಡಿಸಲು ಸಿಎಂ 6 ಸಾವಿರ ಕೋಟಿ ರೂ. ನೀಡಿದ್ದಾರೆ. ದೀರ್ಘಕಾಲ ಬಾಳಿಕೆ ಬರುವುದರಿಂದ ವೈಟ್ ಟಾಪಿಂಗ್ ಕಾಮಗಾರಿ ನಡೆಸಲಾಗುತ್ತಿದೆ ಎಂದರು. 1800 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ನಡೆಯಲಿದೆ. ಈ ಹಿಂದೆ 196 ಕಿಲೋಮೀಟರ್ ಕಾಮಗಾರಿ ಮಾಡಿದ್ದೇವೆ, ಈಗ 400 ಕಿಲೋಮೀಟರ್ ಕೆಲಸ ನಡೆಯಲಿದೆ ಎಂದರು. ಬ್ರ್ಯಾಂಡ್ ಬೆಂಗಳೂರು ಈಗಾಗಲೇ ಘೋಷಣೆಯಾಗಿದೆ, 30 ವರ್ಷ ಕೆಲಸ ಶಾಶ್ವತವಾಗಿರಲಿ ಅಂತಾ ವೈಟ್ ಟಾಪಿಂಗ್ ಕಾಮಗಾರಿ ಮಾಡಲಾಗುತ್ತಿದೆ ಎಂದರು.
ಇದನ್ನೂ ಓದಿ: ಖಾಸಗಿ ಬಸ್ ಟಿಕೆಟ್ ದರ ಹೆಚ್ಚಳ ತೀರ್ಮಾನ: ಪ್ರಯಾಣಿಕರಿಗೆ ಮತ್ತೊಂದು ಶಾಕ್
ಸದ್ಯ, ರಾಜಧಾನಿಯಲ್ಲಿ ರಸ್ತೆಗಳನ್ನ ಅಭಿವೃದ್ಧಿಪಡಿಸುವ ಕೆಲಸಕ್ಕೆ ಇದೀಗ ಪಾಲಿಕೆ ಹಾಗೂ ಸರ್ಕಾರ ಕೈಹಾಕಿದ್ದು, ರಾಜಧಾನಿಯ ಹದಗೆಟ್ಟ ರಸ್ತೆಗಳಿಗೆ ಹೊಸ ಸ್ಪರ್ಶ ಸಿಗುವ ಸೂಚನೆ ಸಿಗುತ್ತಿದೆ. ಇತ್ತ ರಾಜಧಾನಿಯ ರಸ್ತೆಗಳನ್ನು ಗುಂಡಿಮುಕ್ತ ಮಾಡುವ ಬರೀ ಮಾತಿನ ಭರವಸೆ ನೀಡಿದ್ದ ಪಾಲಿಕೆ ಇದೀಗ ರಸ್ತೆ ಕಾಮಗಾರಿಗೆ ಸರ್ಕಾರದ ಜೊತೆ ಹೆಜ್ಜೆ ಇಡೋಕೆ ಹೊರಟಿದೆ. ಸದ್ಯ ಕಿತ್ತೋದ ರಸ್ತೆ, ಹದಗೆಟ್ಟ ರಸ್ತೆಗಳಿಂದ ಕಂಗೆಟ್ಟಿರೋ ಸಿಟಿಮಂದಿಗೆ ಇನ್ನಾದ್ರೂ ಉತ್ತಮ ರಸ್ತೆ ಸಿಗುತ್ತದೆಯೇ ಎಂಬುದನ್ನು ಕಾದುನೋಡಬೇಕಿದೆ.