- Kannada News Photo gallery Tomato Prices Crash in Karnataka: Gadag Farmers Express Anger at Government and APMC Officials
Tomato Price: ಏಕಾಏಕಿ ಟೊಮೆಟೊ ದರ ಕುಸಿತ: ಕಂಗಾಲಾದ ಗದಗ ರೈತರು, ಸರ್ಕಾರ, ಎಪಿಎಂಸಿ ಅಧಿಕಾರಿಗಳ ವಿರುದ್ಧ ಕಿಡಿ
ಕರ್ನಾಟಕ ಟೊಮೆಟೊ ದರ ಕುಸಿತ: ಗದಗದ ಎಪಿಎಂಸಿಯಲ್ಲಿ ಟೊಮೆಟೊ ದರ ಭಾರೀ ಕುಸಿತದಿಂದ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 25 ಕೆಜಿ ಟ್ರೇ ಕೇವಲ 50 ರೂ.ಗೆ ಮಾರಾಟವಾಗುತ್ತಿದೆ. ಬೆಳೆಗೆ ಹೆಚ್ಚಿನ ವೆಚ್ಚವಾಗಿದ್ದರೂ, ಕಡಿಮೆ ದರದಿಂದ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಬದನೆಕಾಯಿ ಮತ್ತು ನುಗ್ಗೆಕಾಯಿ ದರಗಳೂ ಕುಸಿದಿವೆ. ಸರ್ಕಾರದ ವಿರುದ್ಧ ರೈತರು ಕಿಡಿಕಾರಿದ್ದಾರೆ.
Updated on: Apr 07, 2025 | 10:42 AM

ಏಕಾಏಕಿ ಟೊಮೆಟೊ ದರ ಪಾತಾಳಕ್ಕೆ ಕುಸಿದಿದ್ದು ರೈತರು ಕಂಗಾಲಾಗಿದ್ದಾರೆ. ದರ ಕುಸಿತಕ್ಕೆ ಗದಗ ಎಪಿಎಂಸಿಯಲ್ಲಿ ಅನ್ನದಾತರು ಆಕ್ರೋಶ ಹೊರಹಾಕಿದ್ದಾರೆ. ಅಗತ್ಯ ವಸ್ತುಗಳ ದರಗಳು ಏರಿಕೆಯಾದರೂ ರೈತರು ಬೆಳೆದ ಬೆಳೆಗಳ ದರ ಏಕೆ ಏರಿಕೆಯಾಗುತ್ತಿಲ್ಲ ಅಂತ ಕಿಡಿಕಾರಿದ್ದಾರೆ.

ಮಾರುಕಟ್ಟೆಗೆ ಹೆಚ್ಚು ಫಸಲು ಬಂದಿದ್ದರಿಂದ ಟೊಮೆಟೊ ದರ ಪಾತಾಳಕ್ಕೆ ಕುಸಿದಿದೆ. 25 ಕೆಜಿ ಟ್ರೇ ಕೇವಲ 50 ರೂ. ಮಾರಾಟವಾಗುತ್ತಿದೆ. ಮಾರುಕಟ್ಟೆಯಲ್ಲಿ 20-30 ರೂ. ಕೆಜಿ ಟೊಮೆಟೊ ಮಾರಾಟವಾಗುತ್ತಿದ್ದರು, ರೈತರಿಗೆ ಕೆಜಿ ಕೇವಲ 2 ರೂ. ಸಿಗುತ್ತಿದೆ. ರೈತರಿಗಾಗುತ್ತಿರುವ ಈ ಅನ್ಯಾಯ ತಿಳಿದಿದ್ದರೂ ಎಪಿಎಂಸಿ ಅಧಿಕಾರಿಗಳು ಮೌನವಾಗಿದ್ದಾರೆ.

ಬದನೆಕಾಯಿ, ನುಗ್ಗೆಕಾಯಿ ಬೆಲೆಯೂ ಕುಸಿತವಾಗಿದೆ. ಒಂದು ಟ್ರೇ ಬದನೆಕಾಯಿಗೆ 50 ರಿಂದ 80 ರೂ ಬೆಲೆ ಇದೆ. ನುಗ್ಗೆಕಾಯಿ ಒಂದು ಕೆಜಿಗೆ 10 ರೂ ಮಾರಾಟವಾಗುತ್ತಿದೆ. ಇನ್ನು ಒಂದು ಟ್ರೇ ಟೊಮೆಟೊ ಮಾರುಕಟ್ಟೆಯಲ್ಲಿ 50 ರೂ. ಮಾರಾಟವಾಗುತ್ತಿದೆ. ರೈತರು ಎಕರೆಗೆ 30-50 ಸಾವಿರ ರೂ ಮಾಡಿರುವ ಖರ್ಚು ಕೂಡ ವಾಪಸ್ ಬರಿತ್ತಿಲ್ಲ.

ಒಂದು ಟ್ರೇ ನಲ್ಲಿ ಸುಮಾರು 20-25 ಕೆಜಿ ಟೊಮೆಟೊ ಇರುತ್ತೆ. 2 ರೂ ಕೆಜಿಯಂತೆ ಟೊಮೆಟೊ ಮಾರಾಟವಾಗುತ್ತಿದ್ದು, ಸರ್ಕಾರ ಹಾಗೂ ಎಪಿಎಂಸಿ ವರ್ತಕರ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾರುಕಟ್ಟೆಗೆ ಕ್ವಿಂಟಾಲ್ಗಟ್ಟಲೇ ಟೊಮೆಟೊ ತಂದರೂ ರೈತರ ಕೈ ಖಾಲಿ ಖಾಲಿ ಆಗಿದೆ.

ಟೊಮೆಟೊ ಕಟಾವು ಮಾಡುವ ಕಾರ್ಮಿಕರಿಗೆ 300 ರೂ ದಿನ ಕೂಲಿ ಕೊಡಬೇಕು. ಮಾರುಕಟ್ಟೆಗೆ ಒಂದು ಟ್ರೇ ಹೇರಿಕೊಂಡು ಬಂದರೆ 30 ರೂ. ವಾಹನ ಬಾಡಿಗೆ ಇದೆ. ಜೊತೆಗೆ ದಲ್ಲಾಳಿಗೆ 10 ರೂ. ಕೊಡಬೇಕು. ಹಾಗಾಗಿ ಒಂದು ಟ್ರೇ ಗೆ ರೈತರಿಗೆ 10 ರೂ ಮಾತ್ರ ಸಿಗುತ್ತದೆ ಎಂದು ಕಿಡಿಕಾರಿದ್ದಾರೆ. ಆ 10 ರೂ ಟೀ, ತಿಂಡಿ ಮಾಡಿದರೆ ಖಾಲಿ ಕೈಯಲ್ಲಿ ಮನೆಗೆ ಹೋಗಬೇಕಾಗುತ್ತೆ ಎಂದು ಗೋಳಾಡಿದರು.

ಹಗಲು ರಾತ್ರಿ ಕಷ್ಟ ಪಟ್ಟು ಟೊಮೆಟೊ ಬೆಳೆದಿದ್ದೇವೆ. ಮಾರುಕಟ್ಟೆಗೆ ತಂದರೆ ಸೂಕ್ತ ದರ ಸಿಗುತ್ತಿಲ್ಲ ಹೀಗಾದರೆ ಕುಟುಂಬ ನಿರ್ವಹಣೆಗೆ ತುಂಬಾನೆ ತೊಂದರೆ ಆಗುತ್ತದೆ. ಸರ್ಕಾರ ಟೊಮೆಟೊ ಬೆಳೆದ ರೈತರ ನೆರವಿಗೆ ಬರಬೇಕು. ಸೂಕ್ತದ ದರ ನಿಗದಿ ಮಾಡಬೇಕೆಂದು ಒತ್ತಾಯಿಸಲಾಗಿದೆ.



















