ವಾಟರ್ ಬಾಟಲ್ ನೀರು ಅಸುರಕ್ಷಿತ: ಆಹಾರ ಇಲಾಖೆಯ ವರದಿಯಲ್ಲಿ ಆಘಾತಕಾರಿ ಅಂಶ
ಕಳಪೆ ಹಾಗೂ ಕಲಬೆರಕೆಯುಕ್ತ ಆಹಾರದ ಮಾರಾಟದ ವಿರುದ್ಧ ಕರ್ನಾಟಕ ರಾಜ್ಯ ಆಹಾರ ಇಲಾಖೆಯ ಕಾರ್ಯಾಚರಣೆ ಮುಂದುವರಿದಿದೆ. ಇದೀಗ, ಹಲವು ಕಂಪನಿಗಳು ಮಾರಾಟ ಮಾಡುತ್ತಿರುವ ವಾಟರ್ ಬಾಟಲ್ನಲ್ಲಿರುವ ನೀರು ಕೂಡ ಕಳಪೆ ಗುಣಮಟ್ಟದಿಂದ ಕೂಡಿದೆ ಎಂಬುದು ಆಹಾರ ಇಲಾಖೆ ಪ್ರಯೋಗಾಲಯ ಪರೀಕ್ಷೆಯಿಂದ ತಿಳಿದು ಬಂದಿದೆ.

ಬೆಂಗಳೂರು, ಏಪ್ರಿಲ್ 8: ನಾವು ಪ್ರತಿನಿತ್ಯ ಸೇವಿಸುವ ಆಹಾರಗಳಲ್ಲಿ ಕಲಬೆರಕೆ, ವಿಷಾಂಶ ಹಾಗೂ ಕ್ಯಾನ್ಸರ್ ಕಾರಕ ಅಂಶಗಳಿರುವ ಬಗ್ಗೆ ಆಹಾರ ಇಲಾಖೆಯ (Karnataka Food Department) ಪ್ರಯೋಗಾಲಯ ವರದಿಯಲ್ಲಿ ಪ್ರತಿನಿತ್ಯ ಒಂದಿಲ್ಲೊಂದು ಆಘಾತಕಾರಿ ವಿಚಾರಗಳು ಬಹಿರಂಗವಾಗುತ್ತಲೇ ಇವೆ. ಇದೀಗ ವಾಟರ್ ಬಾಟಲ್ (Water Bottle) ನೀರಿನ ಸರದಿ. ಬಾಟಲ್ ಮೂಲಕ ಪೂರೈಕೆ ಆಗುವ ಕುಡಿಯುವ ನೀರು ಶೇಕಡ 50ರಷ್ಟು ಕಳಪೆ ಎಂದು ಆಹಾರ ಇಲಾಖೆಯ ವರದಿ ತಿಳಿಸಿದೆ. ಬಾಟಲ್ ನೀರಿನಲ್ಲಿ ಮಿನರಲ್ (Mineral Water) ಕೂಡ ಇರುವುದಿಲ್ಲ. ಸಾಕಷ್ಟು ಕಂಪನಿಗಳ ವಾಟರ್ ಬಾಟಲ್ ಅಸುರಕ್ಷಿತ ಎಂದು ವರದಿ ತಿಳಿಸಿದೆ. ಜತೆಗೆ, ಕೋವಾ (Cova) ಕೂಡ ಕಲಬೆರಕೆಯುಕ್ತ ಎಂದು ತಿಳಿಸಿದೆ.
ನಕಲಿ ವಾಟರ್ ಬಾಟಲ್ ಮಾರಾಟ ಮಾಡುವ ಕಂಪನಿಗಳ ವಿರುದ್ಧ ಆಹಾರ ಇಲಾಖೆ ಸಮರ ಮುಂದುವರಿಸಿದೆ. ವಿವಿಧೆಡೆ ದಾಳಿ ನಡೆಸಿ ವಾಟರ್ ಬಾಟಲ್ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗಿತ್ತು.
ಕೋವಾದಲ್ಲೂ ಕಲಬೆರಕೆ ಪತ್ತೆ
ಸಿಹಿ ತಿಂಡಿಗಳಿಗೆ ಬಳಸುವ ಕೋವಾದಲ್ಲಿ ಕೂಡ ಕಲಬೆರಕೆ ಪತ್ತೆಯಾಗಿರುವುದಾಗಿ ಆಹಾರ ಇಲಾಖೆಯ ಪರೀಕ್ಷೆಯ ವರದಿ ತಿಳಿಸಿದೆ. ಇದರೊಂದಿಗೆ ಪನೀರ್ ನಂತರ ಇದೀಗ ಕೋವಾ ಕೂಡ ಆರೋಗ್ಯಕ್ಕೆ ಮಾರಕ ಎಂಬುದು ಬೆಳಕಿಗೆ ಬಂದಂತಾಗಿದೆ.
ಮತ್ತೊಂದೆಡೆ, ಈಗಾಗಲೇ ಪನೀರ್ ಮತ್ತು ಐಸ್ ಕ್ರೀಮ್ ಮಾದರಿಗಳನ್ನು ಪ್ರಯೋಗಾಲಯ ಪರೀಕ್ಷೆಗೆ ಒಳಪಡಿಸಿರುವ ಆಹಾರ ಇಲಾಖೆ ಇದೀಗ ಮತ್ತೊಂದು ಸುತ್ತಿನ ಕಾರ್ಯಾಚರಣೆ ಮುಂದುವರಿಸಿದೆ. ಬೆಂಗಳೂರಿನ ವಿವಿಧ ಕಡೆಗಳಿಂದ ಮಾದರಿಗಳನ್ನು ಸಂಗ್ರಹಿಸಲಾಗಿದ್ದು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಪನೀರ್ ಹಾಗೂ ಐಸ್ ಕ್ರೀಮ್ ಗಳಲ್ಲಿ ರಾಸಾಯನಿಕ ಬಳಕೆ ಆರೋಪದ ಹಿನ್ನೆಲೆಯಲ್ಲಿ ಇಲಾಖೆ ಈ ಕ್ರಮ ಕೈಗೊಂಡಿದೆ.
ಇದನ್ನೂ ಓದಿ: ಕರ್ನಾಟಕದ 97 ಐಸ್ ಕ್ರೀಮ್, ತಂಪು ಪಾನೀಯ ಘಟಕಗಳಲ್ಲಿ ಡಿಟರ್ಜೆಂಟ್ ಪೌಡರ್, ಫಾಸ್ಪರಿಕ್ ಆಸಿಡ್ ಬಳಕೆ
ಇಡ್ಲಿ, ಗೋಬಿ ಸೇರಿದಂತೆ ಅನೇಕ ಆಹಾರಗಳಲ್ಲಿ ಆರೋಗ್ಯಕ್ಕೆ ಹಾನಿಕಾರಕ ಅಂಶ ಪತ್ತೆಯಾದ ಬೆನ್ನಲ್ಲೇ ಆಹಾರ ಇಲಾಖೆ ಕಠಿಣ ಕ್ರಮಕ್ಕೆ ಮುಂದಾಗಿತ್ತು. ಜತೆಗೆ, ಆಹಾರಗಳ ತಯಾರಿ ಹಾಗೂ ಮಾರಾಟ ಸಂಬಂಧ ಕೆಲವೊಂದು ಕಠಿಣ ನಿಯಮಗಳನ್ನು ಜಾರಿ ಮಾಡಿತ್ತು. ಆ ನಂತರ ಕುಡಿಯುವ ನೀರು ಸುರಕ್ಷಿತವೇ ಎಂಬ ಬಗ್ಗೆ ಪರಿಶೀಲನೆಗೆ ಮುಂದಾಗಿತ್ತು. ಇದೀಗ ಪರೀಕ್ಷಾ ವರದಿ ಬಂದಿದ್ದು, ಆಘಾತಕಾರಿ ವಿಚಾರ ಬಯಲಾಗಿದೆ. ಈ ಬಗ್ಗೆ ಸರ್ಕಾರ ಇನ್ನೇನು ಕ್ರಮ ಕೈಗೊಳ್ಳಲಿದೆ ಎಂಬುದನ್ನು ಕಾದುನೋಡಬೇಕಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:49 am, Tue, 8 April 25