ಕರ್ನಾಟಕದ 97 ಐಸ್ ಕ್ರೀಮ್, ತಂಪು ಪಾನೀಯ ಘಟಕಗಳಲ್ಲಿ ಡಿಟರ್ಜೆಂಟ್ ಪೌಡರ್, ಫಾಸ್ಪರಿಕ್ ಆಸಿಡ್ ಬಳಕೆ
ಐಸ್ ಕ್ರೀಮ್, ತಂಪು ಪಾನೀಯಗಳು ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ? ಆದರೆ ಈ ಕಲಬೆರಕೆ ಇವುಗಳನ್ನು ಬಿಟ್ಟಿಲ್ಲ ಎಂದರೆ ನಂಬುತ್ತೀರಾ? ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಕರವರೆಗೆ ಎಲ್ಲರಿಗೂ ಐಸ್ ಕ್ರೀಮ್, ಜ್ಯೂಸ್ ಗಳ ಸೇವನೆ ಬಹಳ ಇಷ್ಟವಾಗುತ್ತದೆ ಅದರಲ್ಲಿ ಸಂಶಯವಿಲ್ಲ. ಆದರೆ ಇವುಗಳ ತಯಾರಕರು ತಮ್ಮ ಲಾಭಕ್ಕಾಗಿ ಡಿಟರ್ಜೆಂಟ್, ಯೂರಿಯಾ ಅಥವಾ ಪಿಷ್ಟದಿಂದ ತಯಾರಿಸಿದ ಸಂಶ್ಲೇಷಿತ ಹಾಲನ್ನು ಬಳಸುತ್ತಿದ್ದು, ಸಕ್ಕರೆಯ ಬದಲು, ರುಚಿ ಮತ್ತು ಬಣ್ಣ ಹೆಚ್ಚಿಸಲು ಸ್ಯಾಕರಿನ್ ಬಳಕೆ ಮಾಡುತ್ತಿರುವುದನ್ನು ಎಫ್ ಡಿಎ ಪತ್ತೆ ಹಚ್ಚಿದೆ.

ದೆಹಲಿ, ಏ.5: ಆಹಾರಗಳಲ್ಲಿ ಕಲಬೆರಕೆ ಹೆಚ್ಚುತ್ತಿದೆ ಎಂಬ ಸುದ್ದಿಯನ್ನು ಕೇಳಿರುತ್ತೇವೆ, ಕೆಲವು ಬಾರಿ ಅವು ಅನುಭವಕ್ಕೂ ಬಂದಿರುತ್ತದೆ ಆದರೆ ಇದೀಗ ಈ ಕಲಬೆರಕೆ ಬೇಸಿಗೆಯಲ್ಲಿ ತಂಪು ತಂಪಾಗಿ ತಿಂದು, ಕುಡಿಯುವ ಐಸ್ ಕ್ರೀಮ್ (Ice Cream), ಜ್ಯೂಸ್ (Soft Drinks) ಗಳನ್ನು ಬಿಟ್ಟಿಲ್ಲ ಎಂದರೆ ನಂಬುತ್ತೀರಾ? ಹೌದು, ಇದು ನಿಜ. ಕರ್ನಾಟಕದ (Karnataka) ಸ್ಥಳೀಯ ಐಸ್ ಕ್ರೀಮ್, ಐಸ್ ಕ್ಯಾಂಡಿ ಮತ್ತು ತಂಪು ಪಾನೀಯ ಉತ್ಪಾದನಾ ಘಟಕಗಳಲ್ಲಿ ಅರ್ಧದಷ್ಟು ಕಳಪೆ ಗುಣಮಟ್ಟದ ಉತ್ಪನ್ನಗಳನ್ನು ಬೆರೆಸಿ ಮಾರಾಟ ಮಾಡುತ್ತಿದೆ ಎಂದು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ (ಎಫ್ ಡಿಎ) (FDA) ತಿಳಿಸಿದೆ. ಈ ರೀತಿ ಆಹಾರ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸುವ ತಯಾರಕರಿಗೆ ದಂಡ ಹಾಕಿ ಎಚ್ಚರಿಕೆ ನೀಡಿರುವುದು ಕೂಡ ಕಂಡುಬಂದಿದೆ.
ಡಿಟರ್ಜೆಂಟ್, ಯೂರಿಯಾ ಫಾಸ್ಪರಿಕ್ ಆಮ್ಲ ಬಳಕೆ
ಸತತ ಎರಡು ದಿನಗಳ ಕಾಲ ಎಫ್ಡಿಎ ಅಧಿಕಾರಿಗಳು ಈ ಬಗ್ಗೆ ಪರಿಶೀಲನೆ ನಡೆಸಿದ್ದು, ಐಸ್ ಕ್ರೀಮ್ ಗಳಲ್ಲಿ ಡಿಟರ್ಜೆಂಟ್ ಪುಡಿಯನ್ನು ಮತ್ತು ಮೂಳೆಗಳನ್ನು ದುರ್ಬಲಗೊಳಿಸುವ ಫಾಸ್ಪರಿಕ್ ಆಮ್ಲವನ್ನು ತಂಪು ಪಾನೀಯಗಳಲ್ಲಿ ಬಳಕೆ ಮಾಡುತ್ತಿರುವುದನ್ನು ಕಂಡು ಹಿಡಿದಿದ್ದು, ವ್ಯಾಪಾರಕರ ದುಷ್ಕೃತ್ಯವನ್ನು ಜನರ ಮುಂದಿಟ್ಟಿದೆ. ಐಸ್ ಕ್ರೀಮ್, ಮತ್ತು ತಂಪು ಪಾನೀಯಗಳ ತಯಾರಕರು ತಮ್ಮ ವೆಚ್ಚವನ್ನು ಕಡಿಮೆ ಮಾಡಿಕೊಳ್ಳಲು, ಡಿಟರ್ಜೆಂಟ್, ಯೂರಿಯಾ ಅಥವಾ ಪಿಷ್ಟದಿಂದ ತಯಾರಿಸಿದ ಸಂಶ್ಲೇಷಿತ ಹಾಲನ್ನು ಬಳಸುತ್ತಿದ್ದು, ಸಕ್ಕರೆಯ ಬದಲು, ರುಚಿ ಮತ್ತು ಬಣ್ಣ ಹೆಚ್ಚಿಸಲು ಸ್ಯಾಕರಿನ್ ಮತ್ತು ಆಹಾರಗಳಲ್ಲಿ ಬಳಕೆ ಮಾಡಲು ಅನುಮತಿ ಇರದಂತಹ ಬಣ್ಣಗಳನ್ನು ಬಳಸುತ್ತಿದ್ದಾರೆ. ಇದಲ್ಲದೆ, ಅನೇಕ ಐಸ್ ಕ್ಯಾಂಡಿ ಮತ್ತು ತಂಪು ಪಾನೀಯಗಳ ಘಟಕಗಳಲ್ಲಿ ಕಲುಷಿತವಾಗಿರುವ ಅಥವಾ ಕುಡಿಯಲು ಯೋಗ್ಯವಲ್ಲದ ನೀರನ್ನು ಬಳಸುತ್ತಿರುವುದನ್ನು ಅಧಿಕಾರಿಗಳು ಕಂಡುಹಿಡಿದಿದ್ದಾರೆ.
220 ಅಂಗಡಿಗಳಲ್ಲಿ 97 ಅಂಗಡಿಗಳಿಗೆ ನಿಯಮ ಉಲ್ಲಂಘನೆ ಮಾಡಿದ್ದಕ್ಕಾಗಿ ನೋಟಿಸ್ ನೀಡಿದ್ದು 38,000 ರೂ.ಗಳ ದಂಡವನ್ನು ವಿಧಿಸಿದೆ. ಜೊತೆಗೆ ತಕ್ಷಣ ಎಫ್ಡಿಎ ನಿಯಮಗಳನ್ನು ಅನುಸರಿಸಬೇಕು ಎಂದು ಎಚ್ಚರಿಕೆ ನೀಡಿದೆ. ಐಸ್ ಕ್ರೀಮ್ ಮತ್ತು ತಂಪು ಪಾನೀಯ ತಯಾರಕರಿಗೆ ದಂಡ ವಿಧಿಸಿ ಎಚ್ಚರಿಕೆ ನೀಡುವುದರ ಜೊತೆಗೆ ಕೆಲವು ರೆಸ್ಟೋರೆಂಟ್, ಮೆಸ್ ಮತ್ತು ಹೋಟೆಲ್ ಗಳಲ್ಲಿಯೂ ತಪಾಸಣೆ ನಡೆಸಿದ್ದು, 590 ಸಂಸ್ಥೆಗಳ ಪೈಕಿ 214 ಸಂಸ್ಥೆಗಳಿಗೆ ಹೆಚ್ಚುವರಿಯಾಗಿ 1,15,000 ರೂ.ಗಳ ದಂಡ ವಿಧಿಸಿದೆ.
ಇದನ್ನೂ ಓದಿ: ಈ ಅಭ್ಯಾಸಗಳು ನಿಮ್ಮ ಮೆದುಳಿಗೆ ಹಾನಿ ಮಾಡಬಹುದು!
ಗ್ರಾಹಕರ ಆರೋಗ್ಯಕ್ಕೆ ಕುತ್ತು:
ಸಾಮಾನ್ಯವಾಗಿ ಐಸ್ ಕ್ರೀಮ್, ಜ್ಯೂಸ್ ಗಳನ್ನು ಪ್ರತಿಯೊಬ್ಬರೂ ಇಷ್ಟಪಡುತ್ತಾರೆ. ಅದರಲ್ಲಿಯೂ ವಿಶೇಷವಾಗಿ ಮಕ್ಕಳು ವ್ಯಾಪಕವಾಗಿ ಇವುಗಳನ್ನು ಸೇವನೆ ಮಾಡುತ್ತಾರೆ. ಹಾಗಾಗಿ ಎಲ್ಲೆಂದರಲ್ಲಿ ಐಸ್ ಕ್ರೀಮ್ ಮತ್ತು ತಂಪು ಪಾನೀಯಗಳನ್ನು ಖರೀದಿಸುವ ಮೊದಲು ಗ್ರಾಹಕರು ಜಾಗರೂಕರಾಗಿರಬೇಕು ಮತ್ತು ಅವುಗಳ ಗುಣಮಟ್ಟವನ್ನು ಸರಿಯಾಗಿ ಪರಿಶೀಲಿಸಬೇಕು ಎಂದು ಎಫ್ಡಿಎ ಒತ್ತಾಯಿಸಿದೆ. ಈ ರೀತಿ ಅಪರಾಧಗಳು ಪುನರಾವರ್ತನೆ ಆಗುತ್ತಿರುವುದು ಕಂಡು ಬಂದಲ್ಲಿ ಅಂತವರಿಗೆ ದಂಡದ ಜೊತೆಗೆ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ