ಈ ಅಭ್ಯಾಸಗಳು ನಿಮ್ಮ ಮೆದುಳಿಗೆ ಹಾನಿ ಮಾಡಬಹುದು!
ನಾವು ದಿನನಿತ್ಯ ಮಾಡುವಂತಹ ಕೆಲವು ಕೆಲಸಗಳು ಅಥವಾ ಹವ್ಯಾಸಗಳು ನಮ್ಮ ಮೆದುಳಿಗೆ ಹಾನಿ ಮಾಡಬಹುದು. ಇದು ನಮ್ಮ ಗಮನಕ್ಕೆ ಬರುವುದಿಲ್ಲ, ಆದರೆ ದಿನಕಳೆದಂತೆ ನಮ್ಮ ಮೆದುಳಿನ ಕಾರ್ಯಕ್ಷಮತೆ ಕಡಿಮೆಯಾಗುತ್ತಾ ಬರುತ್ತದೆ. ಜೊತೆಗೆ ಬರುಬರುತ್ತಾ ನೆನಪಿನ ಶಕ್ತಿಯೂ ಕಡಿಮೆಯಾಗುತ್ತದೆ. ಹಾಗಾಗಿ ಎಷ್ಟೇ ವಯಸ್ಸಾದರೂ ಮೆದುಳು ಚೆನ್ನಾಗಿರಬೇಕು ಎಂದರೆ ನಾವು ರೂಢಿಸಿಕೊಂಡಿರುವಂತಹ ಕೆಲವು ಅಭ್ಯಾಸಗಳನ್ನು ತ್ಯಜಿಸಬೇಕು ಆಗ ಮಾತ್ರ ನಮ್ಮ ಮೆದುಳು ಆರೋಗ್ಯವಾಗಿರಲು ಸಾಧ್ಯವಾಗುತ್ತದೆ. ಹಾಗಾದರೆ ನಮ್ಮ ಯಾವ ರೀತಿಯ ಹವ್ಯಾಸಗಳು ಮೆದುಳಿಗೆ ಹಾನಿ ಮಾಡುತ್ತದೆ ಎಂಬುದನ್ನು ತಿಳಿದುಕೊಳ್ಳಿ.

ದೇಹದ ಪ್ರತಿಯೊಂದು ಭಾಗವೂ ಕೂಡ ಬಹಳ ಮುಖ್ಯ. ಅವುಗಳನ್ನು ಆರೋಗ್ಯವಾಗಿ ನೋಡಿಕೊಳ್ಳಲು ನಮ್ಮ ಜೀವನಶೈಲಿ ಚೆನ್ನಾಗಿ ಇರಬೇಕಾಗುತ್ತದೆ. ಅದರಲ್ಲಿಯೂ ಮೆದುಳಿನ (Brain) ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಇದರ ಕಾರ್ಯ ತೀಕ್ಷಣವಾಗಿದ್ದರೆ ಮಾತ್ರ ನೆನಪಿನ ಶಕ್ತಿ ಚೆನ್ನಾಗಿ ಇರುವುದಕ್ಕೆ ಸಾಧ್ಯವಾಗುತ್ತದೆ. ಚಟುವಟಿಕೆಗಳಿಂದ ಕೂಡಿದ ಜೀವನ ಶೈಲಿ ನಮ್ಮದಾಗಿದ್ದರೂ ಕೂಡ ಆಹಾರಕ್ರಮ, ಮಾನಸಿಕ ವ್ಯಾಯಾಮ ಇದ್ದಾಗ ಮಾತ್ರ ಮೆದುಳಿನ ಆರೋಗ್ಯ ಚೆನ್ನಾಗಿರಲು ಸಾಧ್ಯ. ಇನ್ನು ನಮಗರಿವಿಲ್ಲದಂತೆ ಮಾಡುವ ಕೆಲವು ತಪ್ಪುಗಳು ಸಹ ನಮ್ಮ ಮೆದುಳಿಗೆ ಹಾನಿ ಮಾಡಬಹುದು. ಇದು ಕೆಲವು ಬಾರಿ ನಮ್ಮ ಗಮನಕ್ಕೆ ಬರುವುದಿಲ್ಲ. ಆದರೆ ಇಂತಹ ಅನಗತ್ಯ ಅಭ್ಯಾಸಗಳು ನಮ್ಮ ಮೆದುಳಿಗೆ ಹಾನಿ ಮಾಡುವ ಮೂಲಕ ಆರೋಗ್ಯವನ್ನು ಹದಗೆಡಿಸಬಹುದು. ಇದಕ್ಕೆ ಪೂರಕವೆಂಬಂತೆ positive_kannada ಎಂಬ ಇನ್ಸ್ಟಾ ಖಾತೆಯಲ್ಲಿ, ಯಾವ ಅಭ್ಯಾಸ (Habits) ನಮ್ಮ ಮೆದುಳಿಗೆ ಒಳ್ಳೆಯದಲ್ಲ ಎಂಬ ಬಗ್ಗೆ ಕೆಲವು ವಿಚಾರಗಳನ್ನು ಹಂಚಿಕೊಳ್ಳಲಾಗಿದ್ದು ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಮೆದುಳಿಗೆ ಹಾನಿ ಮಾಡುವ ಎಂಟು ಅಂಶಗಳು;
- ತುಂಬಾ ಹೊತ್ತು ಕತ್ತಲಲ್ಲಿ ಕುಳಿತುಕೊಳ್ಳುವುದು: ಸಾಮಾನ್ಯವಾಗಿ ಕೆಲವರು ಬೆಳಕಿಗಿಂತ ಕತ್ತಲೆಯನ್ನು ಹೆಚ್ಚು ಇಷ್ಟ ಪಡುತ್ತಾರೆ. ಮನಸ್ಸಿಗೆ ಬೇಸರವಾದಾಗಲೂ ಕೂಡ ಬೆಳಕು ಬರದಂತಹ ಜಾಗದಲ್ಲಿ ಹೋಗಿ ಸುಮ್ಮನೆ ಕುಳಿತುಕೊಳ್ಳುತ್ತಾರೆ. ಇನ್ನು ಕೆಲವರು ಕತ್ತಲಲ್ಲಿ ಕುಳಿತು ಮೊಬೈಲ್ ಅಥವಾ ಟಿವಿ ನೋಡುತ್ತಾರೆ ಇವೆಲ್ಲವೂ ನಮಗರಿವಿಲ್ಲದಂತೆ ನಮ್ಮ ಮೆದುಳಿಗೆ ಹಾನಿ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ.
- ಅತಿಯಾಗಿ ಋಣಾತ್ಮಕ ಅಥವಾ ಕೆಟ್ಟ ಸುದ್ದಿಗಳನ್ನು ನೋಡುವುದು: ಸಾಮಾನ್ಯವಾಗಿ ಕೆಲವರಿಗೆ ಕ್ರೈಂ ಸುದ್ದಿಗಳನ್ನು ಓದುವುದಕ್ಕೆ ತುಂಬಾ ಉತ್ಸಾಹವಿರುತ್ತದೆ. ಇನ್ನು ಕೆಲವರಿಗೆ ಒಳ್ಳೆಯದಲ್ಲದ ಸುದ್ದಿಗಳನ್ನು ಕೇಳುವುದಕ್ಕೆ, ನೋಡುವುದಕ್ಕೆ ಇಷ್ಟವಿರುತ್ತದೆ ಅಂತವರ ಮೆದುಳು ಬೇರೆಯವರಿಗೆ ಹೊಲಿಸಿದರೆ ಬೇಗ ಹಾನಿಗೊಳಗಾಗುತ್ತದೆ ಎಂದು ತಜ್ಞರು ಹೇಳುತ್ತಾರೆ.
- ಹೆಡ್ ಫೋನ್ ಗಳಲ್ಲಿ ಜಾಸ್ತಿ ಸೌಂಡ್ ಇಡುವಂತಹ ಅಭ್ಯಾಸ: ಎಲ್ಲಾದರೂ ಪ್ರಯಾಣ ಮಾಡುವಾಗ ಅಥವಾ ಕೆಲಸ ಮಾಡುವಾಗ ಹಾಡುಗಳನ್ನು ಅಥವಾ ವಿಡಿಯೋಗಳನ್ನು ನೋಡುವ ಹವ್ಯಾಸವಿರುತ್ತದೆ. ಅದು ತಪ್ಪಲ್ಲ. ಆದರೆ ಕೆಲವರು ಅಗತ್ಯಕ್ಕಿಂತ ಹೆಚ್ಚು ಸೌಂಡ್ ಇಟ್ಟುಕೊಂಡು ಕೇಳುತ್ತಾರೆ. ಇಂತಹ ಅಭ್ಯಾಸ ಕೆಲವರಿಗೆ ಬಹಳ ಖುಷಿ ನೀಡುತ್ತದೆ ಆದರೆ ಇದು ನಮ್ಮ ಮೆದುಳಿಗೆ ಹಾನಿ ಮಾಡುತ್ತದೆ ಎಂಬುದನ್ನು ನಾವು ಮರೆಯಬಾರದು.
- ಜನರಿಂದ ದೂರ ಇರುವುದು: ಯಾವಾಗಲೂ ಮೊಬೈಲ್ ಅಥವಾ ಟಿವಿ ನೋಡುವುದು ಅಥವಾ ಒಬ್ಬರೇ ಕುಳಿತುಕೊಳ್ಳುವುದು ಕೆಲವರಿಗೆ ರೂಢಿ. ಅವರಿಗೆ ಬೇರೆಯವರೊಂದಿಗೆ ಬೆರೆಯುವ ಮನಸ್ಸು ಇರುವುದಿಲ್ಲ. ಇಂತಹ ಹವ್ಯಾಸವಿರುವ ಜನರ ಮೆದುಳು ಬೇಗ ಹಾನಿಗೊಳಗಾಗುತ್ತದೆ.
- ಅತಿಯಾಗಿ ಮೊಬೈಲ್ ಅಥವಾ ಟಿವಿ ನೋಡುವುದು: ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಕರ ವರೆಗೆ ಎಲ್ಲರೂ ಮೊಬೈಲ್ ಮತ್ತು ಟಿವಿ ಗೀಳಿಗೆ ಬಿದ್ದಿದ್ದಾರೆ. ಯಾವಾಗಲೂ, ಎಲ್ಲಿ ನೋಡಿದರೂ ಮೊಬೈಲ್, ಟಿವಿ ನೋಡುತ್ತಾ ಕಾಲ ಹರಣ ಮಾಡುವವರೇ ಹೆಚ್ಚಾಗಿದ್ದಾರೆ. ಇಂತಹ ಅಭ್ಯಾಸ ನಮಗೆ ತಿಳಿಯದಂತೆ ನಮ್ಮ ಮೆದುಳಿಗೆ ಹಾನಿ ಮಾಡುತ್ತದೆ.
- ಜಾಸ್ತಿ ಸಕ್ಕರೆ ತಿನ್ನುವುದು: ಕೆಲವರು ಯಾವುದೇ ರೀತಿಯ ಆಹಾರವಾದರೂ ಅದಕ್ಕೆ ಸಕ್ಕರೆ ಸೇರಿಸಿ ತಿನ್ನುತ್ತಾರೆ ಅಥವಾ ಯಾವುದೇ ಪದಾರ್ಥ ಮಾಡಿದರೆ ಉಪ್ಪು, ಹುಳಿ, ಖಾರದ ಜೊತೆಗೆ ಸಕ್ಕರೆಯನ್ನು ಸೇರಿಸಿಕೊಳ್ಳುತ್ತಾರೆ. ಈ ರೀತಿ ಅತಿಯಾಗಿ ಸಕ್ಕರೆ ಸೇವನೆ ಮಾಡಿದಾಗ ನಮ್ಮ ಮೆದುಳು ಹಾಳಾಗುತ್ತದೆ.
- ದಿನವಿಡೀ ಚಲನೆಯಿಲ್ಲದೆ ಕೂರುವುದು: ಕೆಲಸದಲ್ಲಿ ಬಿಡುವಿಲ್ಲದೆ ಒಂದೇ ಕಡೆ ಕುಳಿತುಕೊಳ್ಳುವುದು ಕೂಡ ಮೆದುಳಿನ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ತಜ್ಞರು ಹೇಳುತ್ತಾರೆ.
- ಸರಿಯಾಗಿ ನಿದ್ರೆ ಮಾಡದೆಯೇ ಇರುವುದು: ರಾತ್ರಿ ಸಮಯದಲ್ಲಿ ಸರಿಯಾಗಿ ನಿದ್ರೆ ಮಾಡದೆಯೇ ಇರುವುದು ಕೂಡ ಒಳ್ಳೆಯದಲ್ಲ. ಕೆಲವರು ರಾತ್ರಿ ಸಮಯದಲ್ಲಿ ಮೊಬೈಲ್ ನೋಡುತ್ತಾ ನಿದ್ರೆ ಮಾಡುವದನ್ನೇ ಮರೆಯುತ್ತಾರೆ ಅಂತವರ ಮೆದುಳು ಆರೋಗ್ಯವಾಗಿ ಇರುವುದಿಲ್ಲ.
ಹಾಗಾಗಿ ಮೆದುಳು ಯಾವಾಗಲೂ ಚುರುಕಾಗಿ ಕೆಲಸ ಮಾಡಲು ಆರೋಗ್ಯಕಾರಿ ಜೀವನಶೈಲಿ ರೂಢಿಸಿಕೊಳ್ಳುವುದರ ಜೊತೆಗೆ ಕೆಲವು ಕೆಟ್ಟ ಅಭ್ಯಾಸಗಳನ್ನು ಕೂಡ ಬಿಡಬೇಕಾಗುತ್ತದೆ. ಇಲ್ಲವಾದಲ್ಲಿ ನಮ್ಮ ಮೆದುಳನ್ನು ನಾವೇ ಹಾಳು ಮಾಡಿಕೊಂಡಂತೆ ಆಗುತ್ತದೆ. ಹಾಗಾಗಿ ಇಂದೇ ಇಂತಹ ಕೆಟ್ಟ ಅಭ್ಯಾಸಗಳನ್ನು ಬಿಟ್ಟು ಬಿಡಿ.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ